ಉದ್ಯೋಗ ಇಲ್ಲವೆಂಬ ಕಾರಣ ನೀಡಿ ಪತ್ನಿ ಮತ್ತು ಮಗುವಿನ ನಿರ್ವಹಣೆಗೆ ಜೀವನಾಂಶ ನೀಡುವ ಜವಾಬ್ದಾರಿಯಿಂದ ಪತಿ ನುಣುಚಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದ್ದು, ಮಾಸಿಕ 16 ಸಾವಿರ ರೂ. ಜೀವನಾಂಶ ನೀಡುವ ಕೆಳ ಹಂತದ ಕೋರ್ಟ್‌ನ ಆದೇಶವನ್ನು ಎತ್ತಿ ಹಿಡಿದಿದೆ.

ಅಲ್ಲದೆ, ''ಉದ್ಯೋಗವಿಲ್ಲದಿದ್ದರೆ ಕೆಲಸ ಹುಡುಕಿಕೊಳ್ಳಬೇಕು. ಆದಾಯ ಕಡಿಮೆಯಿದ್ದರೆ ಹೆಚ್ಚಿನ ವೇತನ ಬರುವ ಕೆಲಸ ಹುಡುಕಿಯಾದರೂ ಪತ್ನಿ ಮತ್ತು ಮಗು ಸಾಕುವುದು ಪತಿಯ ಕರ್ತವ್ಯ. ಆದ್ದರಿಂದ ಪತಿ ಮತ್ತು ಪತ್ನಿಯನ್ನು ಅತಂತ್ರ ಸ್ಥಿತಿಯಲ್ಲಿಡಲು ಬಿಡಲಾಗುವುದಿಲ್ಲ,'' ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಜೀವನಾಂಶ ನೀಡಲಾಗದೆಂದು ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಕೌಟುಂಬಿಕ ನ್ಯಾಯಾಲಯ ವಿಧಿಸಿದ್ದ ಜೀವನಾಂಶ ಆದೇಶ ಪ್ರಶ್ನಿಸಿ ಮೈಸೂರು ತಾಲೂಕಿನ ಹಳೆ ಉಂಡವಾಡಿ ಆರ್‌. ಹರೀಶ್‌ ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಸುಪ್ರೀಂಕೋರ್ಟ್‌ನ 'ಅಂಜು ಗರ್ಗ್‌' ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ''ಸಿಆರ್‌ಪಿಸಿ ಸೆಕ್ಷನ್‌ 125 ಸಾಮಾಜಿಕ ನ್ಯಾಯದ ಭಾಗವಾಗಿದ್ದು, ಪತ್ನಿ ಹಾಗೂ ಮಕ್ಕಳನ್ನು ಅನಾಥರನ್ನಾಗಿ ಬಿಡಬಾರದು. ಉದ್ಯೋಗವಿಲ್ಲಎಂದ ಮಾತ್ರಕ್ಕೆ ಜೀವನಾಂಶದಿಂದ ವಿನಾಯಿತಿ ಸಿಗುವುದಿಲ್ಲ. ಅಗತ್ಯ ಬಿದ್ದರೆ ದೈಹಿಕ ಶ್ರಮ ವಹಿಸಿಯಾದರೂ ಹಣ ಗಳಿಸಿ ಪತ್ನಿ-ಮಕ್ಕಳನ್ನು ನಿರ್ವಹಣೆ ಮಾಡಬೇಕು,'' ಎಂದು ಪ್ರತಿಪಾದಿಸಿದೆ.

''ಪತಿಯು ಜೀವನಾಂಶದ ಬಾಕಿ ಹಣ ಪಾವತಿಸದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದರಿಂದ ಅವರ ಅರ್ಜಿಯಲ್ಲಿ ಯಾವುದೇ ಅರ್ಹತೆಯಿಲ್ಲ,'' ಎಂದು ಹೇಳಿರುವ ನ್ಯಾಯಪೀಠ ಪತಿಯ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯವು ಮಾಸಿಕ 16 ಸಾವಿರ ರೂ. ಜೀವನಾಂಶ ನೀಡಬೇಕೆಂದು ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಅರ್ಜಿದಾರರ ವಕೀಲರ ವಾದ

''ಅರ್ಜಿದಾರರು ಸದ್ಯ ಯಾವುದೇ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. 16 ಸಾವಿರ ರೂ. ಜೀವನಾಂಶ ನೀಡುವ ಸ್ಥಿತಿಯಲ್ಲಿ ಪತಿ ಇಲ್ಲ. ಪತ್ನಿಯು ಕಾನೂನು ಪದವೀಧರೆಯಾಗಿದ್ದು (ವಕೀಲೆ), ಪತಿಗಿಂತ ಹೆಚ್ಚು ಸಂಪಾದನೆ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ ಜೀವನಾಂಶ ನೀಡಬೇಕು ಎಂದು ಸೂಚನೆ ನೀಡಿರುವ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು,'' ಎಂದು ಪತಿಯ ಪರ ವಕೀಲರು ಕೋರಿದ್ದರು.

ಅದಕ್ಕೆ ಆಕ್ಷೇಪಿಸಿದ ಪತ್ನಿ ಪರ ವಕೀಲರು, ''ಅನಾರೋಗ್ಯದ ಕಾರಣದಿಂದ ಪ್ರತಿವಾದಿ ಪತ್ನಿ ವೃತ್ತಿ ಮುಂದುವರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ವಿಚಾರಣಾ ನ್ಯಾಯಾಲಯದ ಆದೇಶ ನ್ಯಾಯಬದ್ಧವಾಗಿದ್ದು, ಜೀವನಾಂಶ ಪ್ರಶ್ನಿಸಿರುವ ಅವರ ಅರ್ಜಿ ವಜಾಗೊಳಿಸಬೇಕು,'' ಎಂದು ಕೋರಿದ್ದರು.

ಮಗನ ಪರ ವಕೀಲರು, ''ಪತ್ನಿ ಮತ್ತು ಮಗನಿಗೆ ಜೀವನಾಂಶ ನೀಡುವಂತೆ 2022 ರ ಫೆ.3ರಂದು ಕೋರ್ಟ್‌ ಆದೇಶ ಹೊರಡಿಸಿತ್ತು. ಆದರೆ, ಈವರೆಗೂ ಯಾವುದೇ ಜೀವನಾಂಶ ಪಾವತಿಸಿಲ್ಲ. ಸುಮಾರು 21 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಆದ್ದರಿಂದ ಬಾಕಿ ಹಣ ನೀಡಲು ಸೂಚನೆ ನೀಡಬೇಕು,'' ಎಂದು ನ್ಯಾಯಪೀಠಕ್ಕೆ ಕೋರಿದ್ದರು.

ಪ್ರಕರಣದ ಹಿನ್ನೆಲೆ

ಅರ್ಜಿದಾರ ಹರೀಶ್‌ 2003ರ ಜೂ.16 ರಂದು ಸೌಮ್ಯಾ ಅವರನ್ನು ವಿವಾಹವಾಗಿದ್ದು, ನಂತರ ಉಂಟಾದ ವೈಮನಸ್ಸಿನಿಂದ ಇಬ್ಬರೂ ಪ್ರತ್ಯೇಕವಾಗಿದ್ದರು. ಬಳಿಕ ಇಬ್ಬರ ವಿರುದ್ಧ ದೂರು ಪ್ರತಿದೂರು ದಾಖಲಾಗಿದ್ದವು. ಬಳಿಕ ಪಾಂಡವಪುರ ಹೆಚ್ಚುವರಿ ಸಿವಿಲ್‌ ನ್ಯಾಯಾಲಯವು 2022ರಲ್ಲಿ ಪತ್ನಿ ಸೌಮ್ಯಾ ಹಾಗೂ ಅವರ ಮಗ ಮನಮೋಹನ್‌ ಅವರಿಗೆ ತಲಾ 8 ಸಾವಿರದಂತೆ ಒಟ್ಟು 16,000 ರೂ. ಮಾಸಿಕ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಅದನ್ನು ಮಂಡ್ಯದ ಸೆಷನ್ಸ್‌ ನ್ಯಾಯಾಲಯವೂ ಎತ್ತಿ ಹಿಡಿದಿತ್ತು. ಈ ಆದೇಶಗಳನ್ನು ರದ್ದುಗೊಳಿಸುವಂತೆ ಕೋರಿ ಪತಿ ಹೈಕೋರ್ಟ್‌ನ ಮೊರೆ ಹೋಗಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ