ಹುಟ್ಟುವ ಮುನ್ನವೇ ಇಲ್ಲವಾಗಬೇಕಿದ್ದ ಜೀವ, ತಂದೆಯ ನೆರಳು ಕಾಣದ ಬಾಲ್ಯ, ತನ್ನ ಹುಡುಗಾಟಿಕೆಯಿಂದ ಬೆಂಕಿಗೆ ಆಹುತಿಯಾದ ಮನೆ, ಕಾಲೇಜು ಶಿಕ್ಷಣ ವಂಚಿತೆ ಹಾಗೂ ನೈಟ್‌ಕ್ಲಬ್‌ನ ಬಾರ್ಟೆಂಡರ್ ಕೆಲಸ—ಹೀಗೆ ಸಾಲು ಸಾಲು ಹಿನ್ನಡೆಗಳನ್ನೇ ಮೆಟ್ಟಿಲು ಮಾಡಿಕೊಂಡು ಇಟಲಿಯ ಪ್ರಧಾನಿ ಪೀಠದವರೆಗೆ ಬೆಳೆದು ನಿಂತವರು ಜಾರ್ಜಿಯಾ ಮೆಲೋನಿ. ಕೇವಲ ಮೋದಿಯಲ್ಲ, ವಿಶ್ವದ ಯಾವುದೇ ನಾಯಕ ಬಂದರೂ ಅವರ ರಾಜತಾಂತ್ರಿಕ ಮಾತುಕತೆಗಿಂತ ಹೆಚ್ಚಾಗಿ ತನ್ನ ಆಕರ್ಷಕ ವ್ಯಕ್ತಿತ್ವದಿಂದಲೇ ಸುದ್ದಿಯಾಗುವ ನಾಯಕಿ‌.

ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ವೇಳೆ ಮೆಲೋನಿ ಮೂಡಿಸಿದ ರಂಗು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ #Melodi ಟ್ರೆಂಡ್ ಜಗತ್ತಿನ ಗಮನ ಸೆಳೆದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲವೊಮ್ಮೆ ತಮ್ಮ ಭಾಷಣದ ಮಧ್ಯದಲ್ಲೇ ಇವರ ಸೌಂದರ್ಯವನ್ನು ಹೊಗಳಿದರೆ, ಇನ್ನು ಕೆಲವೊಮ್ಮೆ ಅಲ್ಬೇನಿಯನ್ ಪ್ರಧಾನಿ ಮಂಡಿಯೂರಿ ಇವರನ್ನು ಸ್ವಾಗತಿಸುತ್ತಾರೆ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅಂತೂ ಮುತ್ತಿಕ್ಕಿ ತುಂಟನಗು ಬೀರುತ್ತಾನೆ.

ಮೆಲೋನಿ ಜನನವೇ ಒಂದು ಪವಾಡ. ತಮಗಿದ್ದ ಕಷ್ಟಗಳ ಕಾರಣದಿಂದಾಗಿ ತಾಯಿ ಅನ್ನಾ ಅವರು ಗರ್ಭಪಾತ ಮಾಡಿಸಿಕೊಳ್ಳಲು ಕ್ಲಿನಿಕ್ ಮೆಟ್ಟಿಲೇರಿದ್ದರಂತೆ. ಆದರೆ ಕೊನೆಯ ಕ್ಷಣದಲ್ಲಿ ಗಟ್ಟಿ ಧೈರ್ಯ ಮಾಡಿ ಮನೆಗೆ ಮರಳಿದರಂತೆ. ಅಂದೇನಾದರೂ ಈ ಜೀವದ ಕುಡಿ ಚಿವುಟಿ ಹೋಗಿರುತ್ತಿದ್ದರೆ, ಇಟಲಿ ಇಂದು ಪ್ರಧಾನಿ ಮೆಲೋನಿಯನ್ನೇ ಕಾಣುತ್ತಿರಲಿಲ್ಲವೇನೋ. ಇದನ್ನೆಲ್ಲ ಮೆಲೋನಿ ತಮ್ಮ ಆತ್ಮಚರಿತ್ರೆ “ಐಯೋ ಸೋನೋ ಜಾರ್ಜಿಯಾ”ದಲ್ಲಿ (ನಾನು ಜಾರ್ಜಿಯಾ) ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಮೆಲೋನಿಗೆ ಕೇವಲ ಒಂದು ವರ್ಷ ಆಗಿದ್ದಾಗ ತಂದೆ ಇಡೀ ಕುಟುಂಬವನ್ನು ಕೈಬಿಟ್ಟು ಸ್ಪೇನ್‌ಗೆ ಓಡಿಹೋಗಿ ಮರುಮದುವೆಯಾಗಿದ್ದ.

lhyxxm6g5cbsqwcdjmtg

ವಿಧಿಯ ಆಟ ಅಲ್ಲಿಗೇ ನಿಲ್ಲಲಿಲ್ಲ. 1980ರಲ್ಲಿ, ಮೂರು ವರ್ಷದ ಮೆಲೋನಿ ಮತ್ತು ಆಕೆಯ ಅಕ್ಕ ಅರಿಯಾನಾ ಆಟವಾಡುತ್ತಿದ್ದಾಗ ಸಂಭವಿಸಿದ ಭೀಕರ ಅಗ್ನಿ ಅಪಘಾತದಲ್ಲಿ ಅವರ ಇಡೀ ಮನೆ ಭಸ್ಮವಾಯಿತು. ವಾಸಿಸಲು ಸೂರಿಲ್ಲದೆ, ಅಜ್ಜಿಯ ಮನೆಯ ನೆಲದ ಮೇಲೆ ಮಲಗುತ್ತಿದ್ದ ಕಡುಬಡತನದ ದಿನಗಳನ್ನೂ ಕಂಡರು ಮೆಲೋನಿ.

ಬಡತನದ ಬೇಗೆಯಿಂದಾಗಿ ಮೆಲೋನಿಗೆ ಕಾಲೇಜು ಮೆಟ್ಟಿಲೇರಲು ಸಾಧ್ಯವಾಗಲಿಲ್ಲ. ತಾಯಿಯ ಸಾಹಿತ್ಯ ಕೃಷಿಯಿಂದ ಬರುತ್ತಿದ್ದ ಅಲ್ಪ ಆದಾಯ ಸಂಸಾರ ನಿಭಾಯಿಸಲು ಸಾಲುತ್ತಿರಲಿಲ್ಲ. ಹೀಗಾಗಿ ಜಾರ್ಜಿಯಾ ತಂಗಿ, ಅಕ್ಕ ಇಬ್ಬರೂ ಸಿಡಿಗಳನ್ನು ಮಾರಾಟ ಮಾಡಿದರು, ಮಕ್ಕಳನ್ನು ನೋಡಿಕೊಳ್ಳುವ ಶಿಶುಪಾಲನಾ ಕೇಂದ್ರಗಳಲ್ಲಿ ಕೆಲಸ ಮಾಡಿದರು. ಅಷ್ಟೇ ಅಲ್ಲದೆ, ರೋಮ್‌ನ ಪ್ರಸಿದ್ಧ ‘ಪೈಪರ್ ಕ್ಲಬ್’ ನೈಟ್‌ಕ್ಲಬ್‌ನಲ್ಲಿ ಮೆಲೋನಿ ಬಾರ್ಟೆಂಡರ್ ಆಗಿಯೂ ದುಡಿದರು. ಈ ಕಠಿಣ ದಿನಗಳೇ ತಮಗೆ ಬದುಕಿನ ದೊಡ್ಡ ಪಾಠ ಕಲಿಸಿದವು ಎಂದು ಮೆಲೋನಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. “ನಾನು ವಾಸ್ತವದ ಬಗ್ಗೆ ಕಂಡಿದ್ದು, ಕಲಿತಿದ್ದು ಸಂಸತ್ತಿನಲ್ಲಿ ಕೆಲಸ ಮಾಡುವುದರಿಂದಲ್ಲ, ಬದಲಿಗೆ ಆ ದಿನಗಳಲ್ಲಿ ನೈಟ್ ಕ್ಲಬ್ಬಿನ ಬದುಕಿನಿಂದ!” ಎಂದಿದ್ದರು ಒಮ್ಮೆ ಮೆಲೋನಿ.

ಈಕೆಗೆ ಆಗ 15. ನ್ಯಾಯಾಧೀಶ ಪಾವೊಲೊ ಬೊರ್ಸೆಲಿನೊ ಅವರ ಹತ್ಯೆಯಾದಾಗ ದೇಶದ ಪರಿಸ್ಥಿತಿಗೆ ಮರುಗಿ ಮೆಲೋನಿ ರಾಜಕೀಯಕ್ಕೆ ಧುಮುಕುವ ನಿರ್ಧಾರ ಕೈಗೊಂಡರು. ಅದೇ ಟರ್ನಿಂಗ್ ಪಾಯಿಂಟ್. ಅನ್ಯಾಯದ ವಿರುದ್ಧ ಧ್ವನಿ ಎತ್ತುವುದನ್ನೇ ರೂಢಿಸಿಕೊಂಡು, ಕೇವಲ 20ನೇ ವಯಸ್ಸಿಗೆ ‘ನ್ಯಾಷನಲ್ ಅಲೈಯನ್ಸ್’ ಪಕ್ಷದ ಯುವ ವಿಭಾಗದ ರೋಮ್ ಮುಖ್ಯಸ್ಥರಾಗಿ ಬೆಳೆದರು ಮೆಲೋನಿ.

ರಾಜಕೀಯದ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಲೆ

ಮುಂದೆ ಮೆಲೋನಿ ಇಟಾಲಿಯನ್ ರಾಷ್ಟ್ರಗೀತೆಯ ಮೊದಲ ಸಾಲಿನಿಂದ ಪ್ರೇರಿತಗೊಂಡು ‘ಫ್ರಾಟೆಲ್ಲಿ ಡಿ’ಇಟಾಲಿಯಾ’ (ಇಟಲಿಯ ಸಹೋದರರು) ಎಂಬ ಸ್ವಂತ ರಾಜಕೀಯ ಪಕ್ಷ ಕಟ್ಟಿದರು. ಆರಂಭದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಈ ಪಕ್ಷ, 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಗಳಿಸಿದ್ದು ಕೇವಲ ಶೇ. 4.4 ಮತಗಳನ್ನಷ್ಟೇ. ಆದರೆ, ಮೆಲೋನಿ ಧೃತಿಗೆಡಲಿಲ್ಲ. ಅವರ ಕಠಿಣ ಪರಿಶ್ರಮ ಮತ್ತು ಪ್ರಖರ ರಾಷ್ಟ್ರೀಯತಾವಾದಿ ಭಾಷಣಗಳು ಇಟಲಿಯ ಜನರನ್ನು ಸೆಳೆದವು. ಇದರ ಫಲವಾಗಿ, ಕೇವಲ ನಾಲ್ಕೇ ವರ್ಷಗಳಲ್ಲಿ ಅಂದರೆ 2022ರ ಚುನಾವಣೆಯಲ್ಲಿ ಈ ಪಕ್ಷವು ಶೇ.26ರಷ್ಟು ಭಾರಿ ಮತಗಳನ್ನು ಗಳಿಸಿ ದೇಶದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಕ್ಟೋಬರ್ 22, 2022 ರಂದು ಜಾರ್ಜಿಯಾ ಮೆಲೋನಿ ಇಟಲಿಯ ಇತಿಹಾಸದಲ್ಲೇ ಮೊದಲ ಮಹಿಳಾ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಮೆಲೋನಿ ವೈಯಕ್ತಿಕ ಜೀವನವೂ ಅನೇಕ ಏರುಪೇರುಗಳಿಂದ ಕೂಡಿತ್ತು. ಟಿವಿ ಪತ್ರಕರ್ತ ಆಂಡ್ರಿಯಾ ಜತೆ 2015ರಿಂದ ಲಿವ್-ಇನ್ ಸಂಬಂಧದಲ್ಲಿದ್ದ ಅವರಿಗೆ ಗಿನೆವ್ರಾ ಎಂಬ ಮಗಳಿದ್ದಾಳೆ. ಆದರೆ 2023ರಲ್ಲಿ ಅವರು ಈ ಸುದೀರ್ಘ ಸಂಬಂಧದ ಪರಿಧಿಯಿಂದ ಗೌರವಯುತವಾಗಿಯೇ ಹೊರಬಂದರು. *ಪ್ರಧಾನಿಯಾಗುವ ಹೊತ್ತಲ್ಲೂ ಮೆಲೋನಿ ಮೇಲೆ ಡೀಪ್ ಫೇಕ್ ಮೂಲಕ ಅಪಪ್ರಚಾರ ಮಾಡುವ ಕುತಂತ್ರಗಳು ನಡೆದವು.*

*ಇವರ ನಕಲಿ ಮುಖ ಹೊತ್ತ ವಿಡಿಯೊಗಳು ಪೋರ್ನ್ ವೆಬ್ ಸೈಟ್ ಸೇರಿ ಆಘಾತ ಹುಟ್ಡಿಸಿದವು. ಆಗಲೂ ಮೆಲೋನಿ ಕಾನೂನು ಹೋರಾಟ ನಡೆಸಿ, ತಪ್ಪಿತಸ್ಥರಿಗೆ ಬುದ್ದಿ ಕಲಿಸಿದರು.*

*ಸೌಂದರ್ಯ ಎನ್ನುವುದು ಹೊರಜಗತ್ತಿಗೆ ಸೆಳೆತವೇ. ಆದರೆ, ಅನೇಕ ಸಲ ಹೆಣ್ಣಿಗದು ಸೆರಗಿನ ಕೆಂಡ. ಮೆಲೋನಿ‌ ಕೂಡ ಅಂಥ ಕೆಂಡಸಂಪಿಗೆಯಷ್ಟೇ.*

*ಸಂಗ್ರಹ:- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ ತಾ. ಜೇವರ್ಗಿ ಜಿ. ಕಲಬುರಗಿ*

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ