ಪೆಟ್ರೋಲ್ ರೇಟ್ ಎಷ್ಟಾದರೇನಂತೆ, ನಾವಂತೂ ಹಂಡ್ರೆಡ್‌ಗೆ ಹಾಕಿಸೋವ್ರು ಅಂತ ಮೊದಲೆಲ್ಲ ಬಹಳ ಹಗುರವಾಗಿ ತೆಗೆದುಕೊಳ್ಳುತ್ತಿದ್ದೆವು. ಪೆಟ್ರೋಲ್ ಡೀಸೆಲ್ ಬೆಲೆ ಮಧ್ಯರಾತ್ರಿಯಿಂದಲೇ ಒಂದು ರುಪಾಯಿ ಏರಿಕೆ ಎಂಬ ಸುದ್ದಿ ಬಂದಕೂಡಲೇ ಪೆಟ್ರೋಲ್ ಬಂಕ್ ಮುಂದೆ ಕ್ಯೂ ನಿಲ್ಲುತ್ತಿದ್ದ ಗಾಡಿಗಳನ್ನು ನೋಡಿ ವಿಚಿತ್ರ ಅನಿಸುತ್ತಿತ್ತು. ಇವರೆಲ್ಲರೂ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದರೂ ಉಳಿಸೋದು ಅಬ್ಬಬ್ಬಾ ಅಂದರೆ ಮೂವತ್ತೋ ನಲವತ್ತೋ ರುಪಾಯಿ. ಕಾರುಗಳಾದರೆ ನೂರು ನೂರೈವತ್ತು ರುಪಾಯಿ. ಇದು ನಿಜಕ್ಕೂ ಸನ್ನಿಯಲ್ಲವಾ ಅಥವಾ ಮೂರ್ಖತನವಲ್ಲವಾ ಅಂದುಕೊಳ್ಳುತ್ತಿದ್ದೆ. ಕೆಲವರಂತೂ ಅದೇ ನೂರು ರುಪಾಯಿ ಪೆಟ್ರೋಲ್ ಹಾಕಿಸೋದಕ್ಕೂ ಕ್ಯೂ ನಿಂತುಬಿಡುತ್ತಿದ್ದರು. ಒಂದು ಎರಡು ರುಪಾಯಿ ಉಳಿಸಿ ಜಯಿಸೋದಾದ್ರೂ ಏನು ಅಂತೆಲ್ಲ ಅನಿಸುತ್ತಿತ್ತು. ಆದರೆ ಒಂದೊಂದು ರುಪಾಯಿ ಉಳಿತಾಯವೂ ಎಷ್ಟು ಮುಖ್ಯ ಎಂಬುದನ್ನು ಕಾಲ ಅರ್ಥ ಮಾಡಿಸುತ್ತದೆ. ಹಣದ ಬೆಲೆ ಏನು ಎಂಬುದನ್ನು ಜೀವನದ ಏರುಪೇರುಗಳು ತಿಳಿಸಿಕೊಡುತ್ತವೆ.

ಇಪ್ಪತ್ತೊಂದನೆಯ ಶತಮಾನದ ಆದಿಯಲ್ಲಿ ಮೊದಲ ಬೈಕ್ ಖರೀದಿಸಿದ್ದೆ.  ನೂರು ರುಪಾಯಿಯಲ್ಲಿ ಮೂರೂಮುಕ್ಕಾಲು ಲೀಟರ್ ಪೆಟ್ರೋಲ್ ಹಾಕಿಸಬಹುದಿತ್ತು. ಅಷ್ಟು ಪೆಟ್ರೋಲಿನಲ್ಲಿ ಸುಮಾರು ಇನ್ನೂರು ಕಿಲೋಮೀಟರ್ ಓಡಾಡಬಹುದಿತ್ತು. ಆದರೆ ಅಂದಿಗೆ ನೂರು ರುಪಾಯಿಯೇ ಅತಿದೊಡ್ಡ ದುಡ್ಡು. ರಿಸರ್ವ್‌ಗಿಂತ ಕೊಂಚ ಮೇಲಿದ್ದರೆ ಸಾಕು ಎಂಬಂತೆ ಐವತ್ತು ರುಪಾಯಿಗೆ ಪೆಟ್ರೋಲ್ ಹಾಕಿಸಿ ಹಣ ಉಳಿಸುತ್ತಿದ್ದೆವು. ಪೆಟ್ರೋಲ್ ಉಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದೆವು. ಆದರೆ ಜೀವನ ಶೈಲಿ ಬದಲಾಗುತ್ತಾ ಹೋದಂತೆ ಮಿತವ್ಯಯ ಎಂಬುದು ಅರ್ಥ ಕಳೆದುಕೊಂಡಿತು. ದುಡಿಯೋದೇ ಖರ್ಚು ಮಾಡೋಕೆ ಎಂಬ ಮನಸ್ಥಿತಿ ರೂಪುಗೊಂಡಿತು. ನಮ್ಮ ದುಡ್ಡು ನಮ್ಮಿಷ್ಟ ಎಂಬ ಉಡಾಫೆ ಮೈಗೂಡಿತು. ಇಂದು ಪ್ರಧಾನಿ  ಮೋದಿಯೇ ಹೇಳಿದರೂ ನಾವು ಕಡಿಮೆ ಖರ್ಚು ಮಾಡಲು ಸಿದ್ಧರಿಲ್ಲ. ನಮಗೆ ಹೇಳಲು ನೀವ್ಯಾರು ಎಂದು ಪ್ರಶ್ನಿಸುತ್ತಿದ್ದೇವೆ. ದೇಶದ ಆರ್ಥಿಕತೆ ಎಂಬುದು ನಾವು ದುಡಿಯುವ ಹಣದ ಮೇಲೆ ಮಾತ್ರವೇ ಅಲ್ಲ, ನಾವು ಮಾಡುವ ಖರ್ಚಿನ ಮೇಲೆಯೂ ಅವಲಂಬಿಸಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಬೆಲೆ ಏರಿಕೆಯನ್ನು ಖಂಡಿಸುತ್ತಲೇ ನಮ್ಮ ದುಂದುವೆಚ್ಚವನ್ನೂ ಹೆಚ್ಚಿಸುತ್ತಿದ್ದೇವೆ. ನಾವು ಬದಲಾಗುವುದಿಲ್ಲ. ಆದರೆ ದೇಶ ಬದಲಾಗಬೇಕು. ನಾವು ಯಾವ ರೀತಿಯಲ್ಲೂ ದೇಶದ ಉದ್ಧಾರಕ್ಕಾಗಿ ಕೈಜೋಡಿಸುವುದಿಲ್ಲ. ಆದರೆ ದೇಶ ಉದ್ಧಾರವಾಗಬೇಕು. ಇದು ನಮ್ಮ ಧೋರಣೆಯಾಗಿದೆ.

ಏಪ್ರಿಲ್ ಮೊದಲ ವಾರದಲ್ಲಿ ಶ್ರೀಲಂಕಾಗೆ ಹೋಗಿದ್ದೆ. ಜಗತ್ತು ಆ ಸಮಯಕ್ಕಾಗಲೇ ಮಧ್ಯಪ್ರಾಚ್ಯ ಯುದ್ಧದ ಪರಿಣಾಮವನ್ನು ಕಾಣಲಾರಂಭಿಸಿತ್ತು. ನಾವು ಶ್ರೀಲಂಕಾವನ್ನು ಸುತ್ತಲು ಬಾಡಿಗೆ ಕಾರ್ ಬಳಸಲು ನಿರ್ಧರಿಸಿದ್ದೆವು. ಆಗ ಅಲ್ಲಿನ ಪೆಟ್ರೋಲ್ ದರ ಮತ್ತು ನಿರ್ಬಂಧಗಳ ಬಗ್ಗೆ ತಿಳಿದು ಅಚ್ಚರಿಯಾಯಿತು. ಇರಾನ್-ಇಸ್ರೇಲ್-ಅಮೆರಿಕ ಯುದ್ಧ ಶುರುವಾಗಿ ತೈಲಬಿಕ್ಕಟ್ಟು ಶುರುವಾಗುತ್ತಿದ್ದಂತೆಯೇ ಶ್ರೀಲಂಕಾ ಪೆಟ್ರೋಲ್ ಮಿತವ್ಯಯಕ್ಕೆ ಮುಂದಾಗಿಬಿಟ್ಟಿತು. ಸರಿ-ಬೆಸ( ಈವನ್-ಆಡ್) ನಿಯಮ ಜಾರಿಗೆ ತರಲಾಗಿತ್ತು. ಅಂದರೆ ವಾಹನಗಳ ನೋಂದಣಿ ಸಂಖ್ಯೆ ಈವನ್ ಇದ್ದವರು ಮಾತ್ರ ಪೆಟ್ರೋಲ್ ಕೊಳ್ಳಲು ಒಂದು ದಿನ, ಆಡ್ ಇದ್ದವರು ಕೊಳ್ಳಲು ಒಂದು ದಿನ ಎಂದು ನಿಗದಿಪಡಿಸಲಾಗಿತ್ತು. ಅದರ ಜತೆಗೆ ಕ್ಯೂ ಆರ್ ಕೋಡ್ ಸಿಸ್ಟಮ್ ಜಾರಿಗೆ ತರಲಾಗಿ, ಪ್ರತಿ ಕ್ಯೂ ಆರ್ ಕೋಡ್‌ಗೆ ವಾರಕ್ಕೆ ಇಪ್ಪತ್ತು ಲೀಟರ್ ಪೆಟ್ರೋಲ್ ಮಾತ್ರ ಎಂಬ ನಿರ್ಬಂಧ ಹಾಕಲಾಯಿತು. ಶ್ರೀಲಂಕಾದ ಯಾವ ನಾಗರಿಕರಿಗೂ ಅದಕ್ಕಿಂತ ಹೆಚ್ಚಿನ ಪೆಟ್ರೋಲ್ ಕೊಡುವುದಿಲ್ಲ. ಕಾಳಸಂತೆಯಲ್ಲಿ ಮಾರಲು ಸ್ಟೋರೇಜ್ ಕೂಡ ಮಾಡುವಂತಿಲ್ಲ. ಅದಕ್ಕೆ ಅವಕಾಶವೇ ಇಲ್ಲ. ಎಮರ್ಜೆನ್ಸಿ ಸರ್ವಿಸ್‌ಗಳ ಹೊರತಾಗಿ ಬೇರೆ ಯಾರಿಗೂ ಈ ರಿಯಾಯಿತಿ ಇಲ್ಲವೇ ಇಲ್ಲ. ಪ್ರವಾಸೋದ್ಯಮ ಶ್ರೀಲಂಕಾದ ಪ್ರಮುಖ ಆರ್ಥಿಕತೆಯ ಮಾರ್ಗವಾಗಿರುವುದರಿಂದ ಪ್ರವಾಸಿಗರಿಗೆ ಈ ನಿಯಮಾವಳಿ ಅನ್ವಯವಾಗುವುದಿಲ್ಲ. ಇದರಿಂದಾಗಿ ಪೆಟ್ರೋಲ್ ಬಳಕೆಗೆ ಕಡಿವಾಣ ಬಿದ್ದಂತಾಯಿತು. ಇದರ ಹೊರತಾಗಿ ಶ್ರೀಲಂಕಾ ಸರಕಾರ ಯಾವುದೇ ಹಿಂಜರಿಕೆ ಇಲ್ಲದೆ ಪೆಟ್ರೋಲ್ ಬೆಲೆಯನ್ನು ಏರಿಸಿಬಿಟ್ಟಿತು. ಮಾರ್ಚ್ ಹೊತ್ತಿಗೆ ಲೀಟರ್ ಗೆ 293 ರುಪಾಯಿ ಇದ್ದ ಪೆಟ್ರೋಲ್ ದರ, ಮಾರ್ಚ್ 10ಕ್ಕೆ  317ಕ್ಕೇರಿತು. ಮತ್ತೆ ಹದಿನೈದು ದಿನದಲ್ಲಿ 398ಕ್ಕೆ ಏರಿತು. ಪ್ರಸ್ತುತ ಶ್ರೀಲಂಕಾದಲ್ಲಿ ಪೆಟ್ರೋಲ್ ದರ 417 ಲಂಕನ್ ರುಪೀ ಆಗಿದೆ. ಎರಡು ತಿಂಗಳಲ್ಲಿ ಏರಿದ್ದು ಸುಮಾರು 117 ಲಂಕನ್ ರುಪೀ. ಭಾರತದ ರುಪಾಯಿ ಲೆಕ್ಕದಲ್ಲಿ ನೋಡಿದರೆ ಸುಮಾರು 35 ರುಪಾಯಿಗಳಷ್ಟು ಏರಿಕೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ