ಅಂಕಿ ಅಂಶಗಳನ್ನು ನೋಡಿದರೆ ಸಾಂಕ್ರಾಮಿಕ ರೋಗಗಳು ಇಡೀ ಪ್ರಪಂಚದಲ್ಲಿ ಅಸ್ವಸ್ಥತೆಗೆ ಪ್ರಮುಖ ಕಾರಣವಾಗಿವೆ. ನಿಶ್ಚಿತವಾಗಿಯೂ ನಮ್ಮ ವಾಸಸ್ಥಾನ, ಅದರ ಸುತ್ತಮುತ್ತಲಿನ ಮಾಲಿನ್ಯತೆ ಮತ್ತು ನಮ್ಮ ದೈನಿಕ ಆಚರಣೆ ಅಭ್ಯಾಸಗಳು, ರೀತಿ ನೀತಿ ನಮ್ಮ ಆರೋಗ್ಯವನ್ನು ಪ್ರಭಾವಿತಗೊಳಿಸುತ್ತದೆ.

ಹೋಮ್ ಹೈಜೀನ್‌ ಪ್ರ್ಯಾಕ್ಟೀಸ್‌ ಎಂದರೇನು?

ಹೋಮ್ ಹೈಜೀನ್‌ನ ಅರ್ಥ ಈ ಕೆಳಗಿನ ಸಣ್ಣಪುಟ್ಟ ಆದರೆ ಅತ್ಯಂತ ಮಹತ್ವಪೂರ್ಣ ಅಭ್ಯಾಸಗಳು. ಉದಾಹರಣೆಗೆ ಆಹಾರ ಮತ್ತು ಕುಡಿಯುವ ನೀರನ್ನು ಸರಿಯಾಗಿ ಮುಚ್ಚಿಡುವುದು, ಊಟಕ್ಕೆ ಮೊದಲು ಮತ್ತು ಶೌಚಾಲಯದ ಉಪಯೋಗದ ನಂತರ ಕೈಗಳನ್ನು ತೊಳೆದುಕೊಳ್ಳುವುದು, ಅಡುಗೆಮನೆ ಮತ್ತು  ಬಾಥ್‌ ರೂಮನ್ನು ಸ್ವಚ್ಛವಾಗಿಡುವುದು, ಮನೆಯಲ್ಲಿರುವ ಕೆಲಸಕ್ಕೆ ಬಾರದ ವಸ್ತುಗಳನ್ನು ಅಥವಾ ಕಸವನ್ನು ಹೊರಹಾಕುವುದು ಇತ್ಯಾದಿ ನಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಕೀಟಾಣುಗಳು ಮನೆಯಲ್ಲಿ ಬರದಂತೆ ತಡೆಗಟ್ಟಬಹುದು.

ನ್ಯಾಷನಲ್ ಹೈಜಿನ್‌ ಕೌನ್ಸಿಲ್ ನ ಸಮೀಕ್ಷಾ ವರದಿಯಂತೆ ವಿದ್ಯಾವಂತರೂ ಸಹ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಅಗತ್ಯದ ಶಿಷ್ಟಾಚಾರದ ಬಗ್ಗೆ ತಿಳಿದಿಲ್ಲ.

ವಿದ್ಯಾವಂತರೊಂದಿಗೆ ನಡೆಸಿದ ಈ ಸಮೀಕ್ಷೆಯಲ್ಲಿ ಶೇ.60 ರಷ್ಟು ಜನರು ಕೈ ತೊಳೆಯುವ ಸರಿಯಾದ ಸಮಯ ಮತ್ತು ವಿಧಾನದ ಬಗ್ಗೆ ತಿಳಿದಿರಲಿಲ್ಲ ಎಂದು ತಿಳಿದುಬಂತು. ಶೇ.70ರಷ್ಟು ಶಾಲಾ ಮಕ್ಕಳೂ ಇದರ ಬಗ್ಗೆ ಗಮನಕೊಡುತ್ತಿಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.58ರಷ್ಟು ಜನ ತಾವು ಮತ್ತು ತಮ್ಮ ಮಕ್ಕಳು ತಿಂಡಿ ತಿನ್ನುವ ಮೊದಲು ಮತ್ತು ನಂತರ ಕೈಗಳನ್ನು ತೊಳೆಯುವುದಿಲ್ಲ ಎಂದು ಒಪ್ಪಿಕೊಂಡರು. ಏಕೆಂದರೆ ಅವರು ಊಟ ಮಾಡು ಮೊದಲು ಮತ್ತು ನಂತರ ಮಾತ್ರ ಕೈಗಳನ್ನು ತೊಳೆಯಬೇಕಾದ ಅಗತ್ಯವಿದೆ ಎಂದುಕೊಂಡಿದ್ದರು. ಇಷ್ಟೇ ಅಲ್ಲ, ಶೇ.48ರಷ್ಟು ಜನರಿಗೆ ಲ್ಯಾಂಡ್‌ ಲೈನ್‌ ಫೋನ್‌ ರಿಸೀವರ್‌, ಮೊಬೈಲ್ ಫೋನ್‌, ಕಂಪ್ಯೂಟರ್‌ನ ಕೀಬೋರ್ಡ್‌ ಅಥವಾ ಬಾಗಿಲುಗಳ ಹ್ಯಾಂಡ್‌ಗಳ ಮೂಲಕ ಕೀಟಾಣುಗಳು ಪರಸ್ಪರ ಹರಡುತ್ತವೆ ಎಂಬುದು ತಿಳಿದಿಲ್ಲ.

ಶೇ.58ರಷ್ಟು ಜನ ತಾವು ಕೆಮ್ಮಿದ ಅಥವಾ ಸೀನಿದ ನಂತರ ಕೈಗಳನ್ನು ತೊಳೆಯುವುದಿಲ್ಲ ಎಂದು ಒಪ್ಪಿಕೊಂಡರು. ಮನೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದ  ಸಂಗತಿಯೆಂದರೆ ಅತ್ಯಂತ ಹೆಚ್ಚು ಕೀಟಾಣುಗಳು ಅಡುಗೆಮನೆಯಲ್ಲೇ ಇರುತ್ತವೆ. ಶೇ.80ರಷ್ಟು ಅಡುಗೆಮನೆಯಲ್ಲಿ ಉಪಯೋಗಿಸುವ ಬಟ್ಟೆ ಮತ್ತು ಶೇ.70ರಷ್ಟು ಅಡುಗೆಮನೆಯ ನಲ್ಲಿ ಮತ್ತು ಸಿಂಕ್‌ನಲ್ಲಿ ಕೀಟಾಣುಗಳು ಇರುತ್ತವೆ. ಇಲ್ಲಿ ಮನೆಯ ಸದಸ್ಯರೆಲ್ಲರೂ ಕೀಟಾಣುಗಳ ಹಿಡಿತಕ್ಕೆ ಸಿಕ್ಕಿಕೊಳ್ಳುವ ಅಪಾಯವಿದೆ.

ಕೌನ್ಸಿಲ್‌‌ನ ಸದಸ್ಯ ಡಾ. ಸೈನಿ, ಕೈ ತೊಳೆಯಲು ಸಾಧ್ಯವಾದಷ್ಟೂ ಲಿಕ್ವಿಡ್‌ ಸೋಪ್‌ ಉಪಯೋಗಿಸಿ ಮತ್ತು ಅದನ್ನು ಕೈಗಳ ಎಲ್ಲ ಭಾಗಗಳಲ್ಲೂ ಕನಿಷ್ಠ 20 ಸೆಕೆಂಡ್‌ವರೆಗೆ ಉಜ್ಜಿದ ನಂತರ ಚೆನ್ನಾಗಿ ತೊಳೆಯಿರಿ ಎನ್ನುತ್ತಾರೆ.

ಮನೆಗಳಲ್ಲಿರುವ ಜರ್ಮ್ಸ್

ಮನೆಯೂ ಕೂಡ ಸಾಂಕ್ರಾಮಿಕ ರೋಗಗಳ ಉತ್ಪತ್ತಿ ಸ್ಥಾನವಾಗುತ್ತದೆಂದು ಹೈಜೀನ್‌ ಕೌನ್ಸಿಲ್‌‌ನ ಅಧ್ಯಕ್ಷ ವೈರಾಲಜಿಸ್ಟ್ ಜಾನ್ ಆಕ್ಸ್ ಫರ್ಡ್‌ ಹೇಳುತ್ತಾರೆ.

ಎಂಆರ್‌ಎಸ್‌ಎ : ಇವುಗಳ ಮೂಲಕ ಹರಡಿದ ಸೋಂಕಿನ ಚಿಕಿತ್ಸೆಯಲ್ಲಿ ಆ್ಯಂಟಿಬಯಾಟಿಕ್ಸ್ ನಿಂದ ಉಪಯೋಗವಿಲ್ಲ. ಕೈಗಳನ್ನು ಸೋಪ್‌ ಮತ್ತು ಬಿಸಿನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿದರೆ ಈ ಕೀಟಾಣುಗಳು ಹರಡುವುದನ್ನು ತಡೆಯಬಹುದು.

ನೋರೋವೈರಸ್‌ : ಊಟ ಮಾಡುವ ಮೊದಲು, ಅಡುಗೆಗೆ ಮೊದಲು ಮತ್ತು ಶೌಚಾಲಯವನ್ನು ಬಳಸಿದ ನಂತರ ಕೈಗಳನ್ನು ಸ್ವಚ್ಛಗೊಳಿಸಿದರೆ ಸೋಂಕನ್ನು ತಡೆಯಬಹುದು.

ಹೈಜೀನ್‌ ಪ್ರ್ಯಾಕ್ಟೀಸ್‌ ಮೇಲೆ ಹೇಳಿದಂತೆ ಕೆಲವು ಕೊಳಕು ಅಭ್ಯಾಸಗಳು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ. ಜೊತೆಗೆ ಮನೆಯಲ್ಲಿ ಉಪಯೋಗಿಸುವ ಕೆಲವು ವಸ್ತುಗಳಲ್ಲಿ ಧೂಳು ಮತ್ತು ಕೊಳಕಿನ ರಾಶಿ ತುಂಬಿರುತ್ತವೆ. ಅವನ್ನು ಕಾಲಕಾಲಕ್ಕೆ ಬದಲಿಸುವುದು ಬಹಳ ಅಗತ್ಯ.

ಅಡುಗೆಮನೆ

ಅಡುಗೆಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ.

ಅಡುಗೆಮನೆಯಲ್ಲಿ ಕಸ ಸೇರಿಕೊಳ್ಳಲು ಬಿಡಬೇಡಿ, ಕೊಳೆಯಲು ಬಿಡಬೇಡಿ.

ಅಡುಗೆಮನೆಯಲ್ಲಿ ವಾಯಮಾಲಿನ್ಯ ಕಡಿಮೆ ಮಾಡಲು ಅದಕ್ಕೆ ಗವಾಕ್ಷಿ, ಎಕ್ಸಾಸ್ಟ್ ಫ್ಯಾನ್‌ ಅಳವಡಿಸಿದರೆ ಒಳಗಿನ ಗಾಳಿ ಹೊರಗೆ ಹೋಗಲು ಸಹಾಯವಾಗುತ್ತದೆ. ಅಡುಗೆ ಮಾಡುವ ಮೊದಲು ಸ್ಲ್ಯಾಬ್‌ ಸ್ವಚ್ಛಗೊಳಿಸಿ. ಕೆಳಗೆ ಬಿದ್ದಿರುವ ಆಹಾರ ಪದಾರ್ಥಗಳನ್ನು ಕೂಡೀ ತೆಗೆದುಹಾಕಿ. ಹಸಿವಮಾಂಸ ಅಥವಾ ಮೊಟ್ಟೆ ಇಟ್ಟ ನಂತರ ಕೂಡಲೇ ಸ್ವಚ್ಛಗೊಳಿಸಿ.

ಅಡುಗೆಮನೆಯಲ್ಲಿ ಉಪಯೋಗಿಸುವ ಮಿಕ್ಸ್ ಚರ್‌, ಗ್ರೈಂಡರ್‌, ಮೈಕ್ರೋವೇವ್ ‌ಮತ್ತು ಸ್ವಿಚ್‌ ಬೋರ್ಡ್‌ನಂತಹ ಉಪಕರಣಗಳನ್ನು ಸ್ವಚ್ಛಗೊಳಿಸಲು 2 ಚಮಚ ಲಿಕ್ವಿಡ್‌ ಬ್ಲೀಚ್‌ ಬೆರೆಸಿ ಸ್ವಚ್ಛವಾದ, ಮೃದುವಾದ ಒದ್ದೆ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ.

ಚಾಕು, ಚಮಚ ಮತ್ತು ಪಾತ್ರೆಗಳು

ಇನ್ನು ಸದಾ ಸ್ವಚ್ಛವಾಗಿಡಿ. ಉಪಯೋಗಿಸಿದ ನಂತರ ತೊಳೆಯಿರಿ. ಡಿಶ್‌ ವಾಶರ್‌ನಲ್ಲಿ ತೊಳೆಯುವುದು ಹೆಚ್ಚು ಸುರಕ್ಷಿತ.

ಚಾಪಿಂಗ್‌ ಬೋರ್ಡ್‌: ಸೋಪ್‌ ನೀರಿನಿಂದ ಮಾಡಿದ ಸ್ವಚ್ಛತೆ ಬೋರ್ಡ್‌ನ ಮೇಲೆ ಸಕ್ರಿಯವಾಗಿರುವ ಬ್ಯಾಕ್ಟೀರಿಯಾಗಳನ್ನು ಕೊನೆಗಾಣಿಸುತ್ತದೆ. ಬಿರುಕುಗಳನ್ನು ಸ್ಕ್ರಬ್‌ನಿಂದ ಸ್ವಚ್ಛಗೊಳಿಸಿ. ತರಕಾರಿಗಳು ಮತ್ತು ಮಾಂಸವನ್ನು ಕತ್ತರಿಸಲು ಬೇರೆ ಬೇರೆ ಬೋರ್ಡ್‌ ಇಟ್ಟುಕೊಳ್ಳಿ.

– ರಶ್ಮಿ  ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ