ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಮಂಗಳವಾರ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಇಡೀ ಸಭೆಯ ಗಮನ ಸೆಳೆದರು. ಅವರು ಮಾಡಿದ ಭಾಷಣ ಸಹ ಎಲ್ಲೆಡೆ ವೈರಲ್ ಆಗಿದೆ.
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹೈದರಾಬಾದ್ ಗೆ ಆಗಮಿಸಿದ್ದ ಪ್ರಧಾನಿ ಮೋದಿಯವರು ಸತ್ಯಸಾಯಿ ಬಾಬಾ ಅವರ ಪವಿತ್ರ ದೇಗುಲ ಮತ್ತು ‘ಮಹಾಸಮಾಧಿ’ಗೆ ನಮನ ಸಲ್ಲಿಸಲು ಪುಟ್ಟಪರ್ತಿಗೆ ಆಗಮಿಸಿದ್ದರು. ಪ್ರಧಾನಿಯೊಂದಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ , ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಕೇಂದ್ರ ಸಚಿವರಾದ ರಾಮ್ ಮೋಹನ್ ನಾಯ್ಡು ಕಿಂಜರಪು ಮತ್ತು ಜಿ ಕಿಶನ್ ರೆಡ್ಡಿ ಕೂಡ ಉಪಸ್ಥಿತರಿದ್ದರು.
ಗಮನ ಸೆಳೆದ ಐಶ್ವರ್ಯಾ ರೈ: ಈ ಸಂದರ್ಭ ಮಾತನಾಡಿದ ಐಶ್ವರ್ಯಾ ರೈ ಬಚ್ಚನ್, ಏಕತೆ ಮತ್ತು ಹಂಚಿಕೆಯ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಮೂಲಕ ತಮ್ಮ ಸಂದೇಶವನ್ನು ಪರಿಚಯಿಸಿದರು.
ಇರುವುದು ಒಂದೇ ಜಾತಿ, ಅದು ಮಾನವೀಯತೆಯ ಜಾತಿ. ಇರುವುದು ಒಂದೇ ಧರ್ಮ, ಅದು ಪ್ರೀತಿಯ ಧರ್ಮ. ಇರುವುದು ಒಂದೇ ಭಾಷೆ, ಹೃದಯದ ಭಾಷೆ, ಇರುವುದು ಒಂದೇ ದೇವರು, ಅವರು ಸರ್ವವ್ಯಾಪಿ ಎಂದು ಹೇಳಿದರು.
ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ ಐಶ್ವರ್ಯಾ ರೈ, ಇಂದು ನಮ್ಮೊಂದಿಗೆ ಇಲ್ಲಿ ಇದ್ದಕ್ಕಾಗಿ ಮತ್ತು ಈ ವಿಶೇಷ ಸಂದರ್ಭವನ್ನು ಗೌರವಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದು ನಿಮ್ಮ ಬುದ್ಧಿವಂತ ಮಾತುಗಳನ್ನು ಕೇಳಲು ನಾನು ಎದುರು ನೋಡುತ್ತಿದ್ದೇನೆ. ಇಲ್ಲಿ ನಿಮ್ಮ ಉಪಸ್ಥಿತಿಯು ಈ ಶತಮಾನೋತ್ಸವ ಆಚರಣೆಗೆ ಪವಿತ್ರತೆ ಮತ್ತು ಸ್ಫೂರ್ತಿಯನ್ನು ಹೆಚ್ಚಿಸುತ್ತದೆ. ನಿಜವಾದ ನಾಯಕತ್ವವು ಸೇವೆ ಮತ್ತು ಮನುಷ್ಯನಿಗೆ ಸೇವೆಯು ದೇವರಿಗೆ ಸೇವೆ ಎಂಬ ಸ್ವಾಮಿಯ ಸಂದೇಶವನ್ನು ನಮಗೆ ನೆನಪಿಸುತ್ತದೆ ಎಂದು ಹೇಳಿದರು.
ಸಾಯಿಬಾಬಾ ಅವರು ತಮ್ಮ ಆಧ್ಯಾತ್ಮಿಕ ತತ್ವಶಾಸ್ತ್ರದ ಮೂಲಕ ಆಗಾಗ್ಗೆ ಹಂಚಿಕೊಂಡ ಮಾರ್ಗದರ್ಶಿ ತತ್ವಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಪ್ರದಾನಿ ಮೋದಿ ಮತ್ತು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಸತ್ಯ ಸಾಯಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಗೌರವಿಸುವ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು.





