ಸಮಾಜಕ್ಕೆ ಏನಾದರೊಂದು ಸದುಪಕಾರ ಮಾಡಬೇಕೆಂಬ ಉದ್ದೇಶ ಹೊಂದಿದ್ದು, ಸ್ವಾರ್ಥರಹಿತ ಮನೋಭಾವನೆಯಿಂದ ಸೇವಾ ತತ್ಪರರಾದ ಗೀತಕ್ಕನವರ ಬಗ್ಗೆ ವಿವರವಾಗಿ ತಿಳಿಯೋಣವೇ......?
ನವೆಂಬರ್ 9 ಮತ್ತು 10ಕ್ಕೆ ನಮ್ಮ ಸಂಸ್ಥೆಯಲ್ಲಿ ರಾಜ್ಯೋತ್ಸವ ಮತ್ತು ನನ್ನ ಕವನ ಸಂಕಲನದ ಬಿಡುಗಡೆ ಸಮಾರಂಭವಿದೆ ಬನ್ನಿ ಎಂದು ಗೀತಕ್ಕ ಆಹ್ವಾನ ಕೊಟ್ಟಾಗ ಸಂತಸದಿಂದ ಹೋದೆ. ಸುಂದರವಾಗಿ ಅಲಂಕೃತಗೊಂಡ ವಿಶಾಲವಾದ ಜಾಗದಲ್ಲಿ ಸಾಲಾಗಿ ಜೋಡಿಸಿದ್ದ ಕುರ್ಚಿಯ ಮೇಲೆ ಕುಳಿತು ಸುತ್ತಲೂ ಕಣ್ಣಾಡಿಸಿದಾಗ, ಟೇಬಲ್ ಮೇಲೆ ಶ್ರೀಪಾದ ಸ್ವಾಮಿಗಳ ಫೋಟೋ ಇಟ್ಟಿದ್ದರು.
ಸೊರಬದ ತವರು
ಗೀತಾ ನಾಡೀಗೆರ್ ಹುಟ್ಟಿದ್ದು ಸೊರಬ ತಾಲ್ಲೂಕು ಆನವಟ್ಟಿಯಲ್ಲಿ. ಉತ್ತಮ ವಿದ್ಯಾಭ್ಯಾಸ ಪಡೆದು ಬೆಂಗಳೂರಿನಲ್ಲಿ ಉಪನ್ಯಾಸಕಿಯಾಗಿ ಕೆಲವು ಕಾಲ ಸೇವೆ ನಿರ್ವಹಿಸಿದ್ದರು. ಶಾಲಾ ಕಾಲೇಜು ದಿನದಲ್ಲಿ ಕವನ ಬರೆಯುವ ಹವ್ಯಾಸವಿತ್ತು.
ವಿವಾಹದ ನಂತರ
ಶ್ರೀಪಾದರಾವ್ ರೊಡನೆ ವಿವಾಹವಾದ ಮೇಲೆ ಪತಿ ಉಪನ್ಯಾಸಕರಾಗಿದ್ದರಿಂದ ಅವರಿದ್ದ ಸ್ಥಳದಲ್ಲಿಯೇ ಬದುಕು ಕಳೆದು ಪ್ರಾಚಾರ್ಯರಾಗಿ ನಿವೃತ್ತಿ ಬದುಕು ಕಳೆಯಲು ಅವರು ಆರಿಸಿಕೊಂಡಿದ್ದು ಬೆಂಗಳೂರಿನ ತ್ಯಾಗರಾಜ ನಗರವನ್ನು.
ಯೋಗದ ಬಗ್ಗೆ ಅಪಾರ ಅಭಿಮಾನಿಯಾದ ಶ್ರೀಪಾದರಾವ್ ಸಮಾಜಕ್ಕೆ ಏನಾದರೂ ಕೊಡಬೇಕೆಂಬ ಉದ್ದೇಶದಿಂದ ಯೋಗ ತರಬೇತಿ ತೆರೆಯಲು ಪ್ರಯತ್ನಪಟ್ಟರು. ಸ್ಥಳ ಸಿಗದೆ ನಿರಾಶರಾದರು. ಪ್ರವಾಸ, ಸಾಹಿತ್ಯ, ಪ್ರವಚನ ಎಂದು ಹತ್ತಾರು ವಿಷಯದಲ್ಲಿ ದಂಪತಿ ತಮ್ಮನ್ನು ತೊಡಗಿಸಿಕೊಂಡರು.
ಪತಿಯ ಮರಣಾನಂತರ
ಅನಾರೋಗ್ಯದಿಂದ ಶ್ರೀಪಾದ ರಾವ್ ಇಹಲೋಕ ತ್ಯಜಿಸಿದಾಗ ನೋಡಲು ಹೋಗಿದ್ದೆ. ಇನ್ನು ತನಗೇನು ಇಲ್ಲ ಎಂದು ಕುಳಿತಿದ್ದ ಗೀತಕ್ಕನನ್ನು ನೋಡಿ ಬೇಸರವಾಗಿತ್ತು. ಇಬ್ಬರೂ ಎಲ್ಲಾ ಕಡೆ ಒಟ್ಟಿಗೆ ಹೋಗುತ್ತಿದ್ದರು. ಎಲ್ಲದಕ್ಕೂ ಒಬ್ಬರ ಮೇಲೊಬ್ಬರು ಅವಲಂಬಿತರಾಗಿದ್ದರು ವಯಸ್ಸಾದಾಗ ಹೀಗೆ ಆಗಿಬಿಟ್ಟರೆ ಅದು ತುಂಬಾ ನೋವು ಕೊಡುತ್ತದೆ. ಗೀತಕ್ಕ ನಿಮ್ಮ ಪತಿಯ ಕನಸು ನನಸು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಅದನ್ನು ಮಾಡಿ ಎಂದು ಹೇಳಿ ಬಂದಿದ್ದೆ.
ಯೋಗ ತರಗತಿಗಳು ಆರಂಭ
ಸ್ವಲ್ಪ ದಿನದಲ್ಲಿಯೇ ಯೋಗ ತರಗತಿ ಅವರ ಮನೆ ರಸ್ತೆಯಲ್ಲಿಯೇ ಶುರು ಮಾಡಿದ್ದಾರೆ ಎಂದು ಗೊತ್ತಾಗಿತ್ತು. ಕನ್ನಡ ರಾಜ್ಯೋತ್ಸದಂದು `ಜ್ಞಾನದೀಪ' ಎಂಬ ಸಂಸ್ಥೆ ಹುಟ್ಟುಹಾಕಿ ಇಂದಿಗೆ ಆರು ವರ್ಷ. ಸಂಘರ್ಷದ ಹಾದಿಯಲ್ಲಿ ಒಂದು ಶಾಲೆ ಶುರು ಮಾಡುವುದು ಸುಲಭವಲ್ಲ. ಬೆಂಗಳೂರಿನಂಥ ಮಹಾ ನಗರದಲ್ಲಿ ಶಿಕ್ಷಣ ಎನ್ನುವುದು ಬಲು ದುಬಾರಿ, ಎಲ್ಲವೂ ದುಡ್ಡಿಗಾಗಿಯೇ ಇವೆ. ಅಂತಹದರಲ್ಲಿ ಪುಕ್ಕಟೆಯಾಗಿ ಯೋಗ ಹೇಳಿಕೊಟ್ಟರು ಗೀತಕ್ಕ ಒಬ್ಬರೆ ಇರಬೇಕು. ಪ್ರತಿ ದಿನ ನಾಲ್ಕು ಬ್ಯಾಚ್ ಗಳಲ್ಲಿ ಅರವತ್ತು ಜನ ಇಲ್ಲಿ ಯೋಗ ಕಲಿಯುತ್ತಾರೆ. ಸಣ್ಣ ಮಕ್ಕಳಿಗೆ ಶನಿವಾರ ಭಾನುವಾರ ಸಂಸ್ಕೃತ, ಸುಭಾಷಿತ, ಭಗವದ್ಗೀತೆ ಶ್ಲೋಕ ಇತ್ಯಾದಿ ಹೇಳಿ ಕೊಡುತ್ತಾರೆ.
ಉತ್ತಮ ಸಮಾಜ ಸೇವೆ
ಈ ರೀತಿ ಸಮಾಜಕ್ಕೆ ಭವಿಷ್ಯದ ಉತ್ತಮ ಸತ್ಪ್ರಜೆಗಳನ್ನು ತಯಾರು ಮಾಡುತ್ತಿರುವ ಯಾವುದೇ ಪ್ರತಿಫಲವಿಲ್ಲದೆ ಕೆಲಸ ಮಾಡುತ್ತಿರುವ ಯೋಗ ಗುರುಗಳು ಶ್ಲಾಘನೀಯರು ಎಂದರೆ ತಪ್ಪಾಗದು.
ವೈವಿಧ್ಯಮಯ ಕಾರ್ಯಕ್ರಮಗಳು
ಪ್ರತಿ ವರ್ಷ ಯೋಗ ದಿನದಂದು ಒಂದಲ್ಲ, ಒಂದು ಸ್ಥಳದಲ್ಲಿ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ ನಡೆಸಿ ಕೊಡುತ್ತಾರೆ. ಈ ವರ್ಷ ದಾಬಸ್ ಪೇಟೆಯ ಬುದ್ಧಿಮಾಂಧ್ಯ ಶಾಲೆಯ ಮಕ್ಕಳ ಜೊತೆ ಸಂಭ್ರಮಪಟ್ಟು ಬರುವಾಗ, ಜೈನ ಮಂದಿರವನ್ನು ನೋಡಿ ಅಲ್ಲಿಯ ಪ್ರಕೃತಿ ಸೌಂದರ್ಯದ ಮನಮೋಹಕ ನೋಟದಿಂದ ಪಿಕ್ನಿಕ್ ನ ಸಂತಸವನ್ನು ಅನುಭವಿಸಿದ್ದಾಗಿ ಹೇಳಿದರು.





