ಇರಾನ್ ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಮೆರಿಕದ ಇಂಧನ ತುಂಬುವ ವಿಮಾನ ಇರಾಕ್‌ನಲ್ಲಿ ಪತನಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಮೆರಿಕಾದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಪತನಗೊಂಡ ವಿಮಾನವು KC-135 ಟ್ಯಾಂಕರ್ ಆಗಿದ್ದು, ಅದರಲ್ಲಿ ಐದು ಸಿಬ್ಬಂದಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಸಂಭವಿಸಿರುವ ಸಾವು-ನೋವುಗಳ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಸೆಂಟ್ರಲ್ ಕಮಾಂಡ್ ಮಾಹಿತಿ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಎರಡು ವಿಮಾನಗಳು ಭಾಗಿಯಾಗಿದ್ದು, ಒಂದು ವಿಮಾನ ಸುರಕ್ಷಿತವಾಗಿ ಇಳಿದಿದ್ದರೆ ಮತ್ತೊಂದು ಪಶ್ಚಿಮ ಇರಾಕ್‌ನಲ್ಲಿ ಪತನಗೊಂಡಿದೆ ಎಂದು ತಿಳಿಸಿದೆ. ಇದೇ ವೇಳೆ ಶತ್ರುಗಳ ದಾಳಿಯಿಂದ ವಿಮಾನ ಪತನವಾಗಿಲ್ಲ ಎಂದೂ ಸೇನೆ ಸ್ಪಷ್ಟಪಡಿಸಿದೆ.
ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧ ಕಾರ್ಯಾಚರಣೆಗಳ ನಡುವೆ ಅಮೆರಿಕದ ನಾಲ್ಕನೇ ವಿಮಾನ ಪತನ ಘಟನೆ ಇದಾಗಿದೆ. ಕಳೆದ ವಾರ ಅಮೆರಿಕದ ಮೂರು ಯುದ್ಧವಿಮಾನಗಳು ತಪ್ಪಾಗಿ ಅರ್ಥೈಸಿ ಮಿತ್ರ ರಾಷ್ಟ್ರ ಕುವೈತ್ ಪಡೆಗಳು ನಡೆಸಿದ ಗುಂಡಿನ ದಾಳಿಯಿಂದ ಹಾನಿಗೊಳಗಾಗಿದ್ದವು.
ಈ ನಡುವೆ ಇರಾನ್ ಯುದ್ಧದಲ್ಲಿ ಇದುವರೆಗೆ ಏಳು ಅಮೆರಿಕನ್ ಸೈನಿಕರು ಮೃತಪಟ್ಟಿದ್ದು, ಸುಮಾರು 140 ಮಂದಿ ಗಾಯಗೊಂಡಿದ್ದಾರೆ ಎಂದು ಪೆಂಟಗನ್ ಮಾಹಿತಿ ನೀಡಿದೆ.





