ಐಷಾರಾಮಿ ಜೀವನ ಮತ್ತು ಆತ್ಮಹತ್ಯೆ
ಇತ್ತೀಚೆಗೆ ಪತ್ನಿ ಪೀಡಿತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಅಸಲಿಗೆ ಇಲ್ಲಿ ಪತ್ನಿ ಪೀಡಿತರಿಗಿಂತ ಸಾಲ ಪೀಡಿತರು ಆತ್ಮಹತ್ಯೆಗೆ ಶರಣಾಗುವುದು ಹಿಂದಿನಿಂದಲೂ ನಡೆದು ಬಂದಿದೆ. ಉತ್ತಮ ಲೈಫ್ ಸ್ಟೈಲ್, ಅನುಕೂಲಸ್ಥ ಮನೆತನದವರಿಂದ ಹಿಡಿದು ಬಡ ರೈತ, ಕೂಲಿ ಕಾರ್ಮಿಕರವರೆಗೂ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಮೊರೆಹೋಗುತ್ತಾರೆ.
ಇತ್ತೀಚೆಗೆ ದೆಹಲಿಯಲ್ಲಿ 12 ವರ್ಷದ ಒಬ್ಬ ಹುಡುಗನ ತಾಯಿತಂದೆ ಒಟ್ಟಾಗಿ ಆತ್ಮಹತ್ಯೆ ಮಾಡಿಕೊಂಡರು. ಏಕೆಂದರೆ ಇಲ್ಲಿ ಪತಿ ಕೊರೋನಾ ದೆಸೆಯಿಂದ ಅತಿ ಸಾಲ ಮಾಡಿ, ತೀರಿಸಲಾಗದೆ ಈ ದಾರಿ ಹಿಡಿದರೆ, ಪತ್ನಿಯೂ ಜೊತೆಗೂಡಿದಳು.
ಸಾಮಾನ್ಯವಾಗಿ ಈ ಸಾಲವನ್ನು ಬ್ಯಾಂಕು, ಕ್ರೆಡಿಟ್ ಕಾರ್ಡ್ ಕಂಪನಿಗಳಿಂದ ಪಡೆಯುತ್ತಾರೆ, ನಂತರ ಅವರು ಜೀವನವಿಡೀ ವಸೂಲಾತಿಗೆ ನಿಲ್ಲುತ್ತಾರೆ. ಬಹುತೇಕ ಸಾಲವನ್ನು ಪರಿಚಯದವರಿಂದಲೇ ಪಡೆಯುತ್ತಾರೆ. ಕೆಲವರು ಬಡ್ಡಿಯ ದುರಾಸೆಗೆ ಬಿದ್ದು ಸಾಲ ನೀಡುತ್ತಾರೆ, ಕೆಲವರು ಸಹಾಯ ಮಾಡುವ ನಿಯತ್ತಿಗಾಗಿ.
ಸಾಮಾನ್ಯವಾಗಿ ಸಾಲ ಪಡೆದವರು ತಮ್ಮ ವೈಯಕ್ತಿಕ ಖರ್ಚನ್ನು ಕಂಟ್ರೋಲ್ ಮಾಡಲಾರರು, ಆಗ ಸಾಲ ದೊಡ್ಡ ಹೊರೆ ಆಗಿಬಿಡುತ್ತದೆ. ಎಷ್ಟೇ ಸಾಲ ಪಡೆದಿರಲಿ, ಎಷ್ಟೇ ಲಾಸ್ ಆಗಿರಲಿ, ಇಂಥವರು ಸಣ್ಣ, ಮಧ್ಯಮ, ಭಾರೀ ಸಾಲಗಳನ್ನು, ತಮ್ಮ ಪರ್ಸನ್ ಖರ್ಚು ಕಂಟ್ರೋಲ್ ಮಾಡುತ್ತಾ ತೀರಿಸಬಹುದು, ಅದು ಬಿಟ್ಟು ನೇರ ಆತ್ಮಹತ್ಯೆ ಯತ್ನ ಸಲ್ಲದು.
ದೆಹಲಿಯ ಮತ್ತೊಂದು ಜೋಡಿ ಉತ್ತಮ ಫ್ಲಾಟ್ ನಲ್ಲಿ ವಾಸಿಸುತ್ತಲೇ ಈ ಕೃತ್ಯಕ್ಕೆ ಕೈಹಾಕಿದರು. 20 ದಿನಗಳ ಹಿಂದೆ ಅವರ ಬಳಿ ಲಗ್ಶುರಿ ಜೀವನಕ್ಕಾಗಿ ಕಾರ್ ಇತ್ತು. ಕೆಲವು ದಿನಗಳ ಹಿಂದೆ ತನ್ನ ಮೈದುನನ ಮದುವೆಯಲ್ಲಿ ಪತಿರಾಯ ಜೋರಾಗಿ ಡ್ಯಾನ್ಸ್ ಮಾಡಿದ್ದೂ ಉಂಟು. ಆ ಜೋಡಿ, ಕೊರೋನಾಗೂ ಮೊದಲೇ ಒಂದು ಮಾಲ್ ನಲ್ಲಿ 4 ಲಕ್ಷ ಸಾಲ ಮಾಡಿ ಕ್ಲಬ್/ರೆಸ್ಟೋರೆಂಟ್ ಆರಂಭಿಸಿತ್ತು. ಏನೋ ಕಾರಣಕ್ಕೆ ಅದನ್ನು ಮುಚ್ಚಬೇಕಾಯಿತು.
ಆ ಧಂಧೆ ಐಷಾರಾಮಿಗಳಿಗೆಂದೇ ಮೀಸಲಾಗಿತ್ತು. ದುಂದು ಉಡಾಯಿಸುವ ಪ್ರವೃತ್ತಿಯವರು ಅಲ್ಲಿಗೆ ಬರುತ್ತಿದ್ದರು, ಈ ಜೋಡಿಯೂ ಅಂಥದ್ದೇ ಆಗಿತ್ತು. ಯಾವ ವ್ಯಕ್ತಿ ಕೆಲವು ದಿನಗಳ ಹಿಂದಷ್ಟೇ, ಮದುವೆಯಲ್ಲಿ ಎಲ್ಲರ ಮುಂದೆ ಡೌಲು ತೋರಿ ಕುಣಿದಿದ್ದನೋ, ಜೀವನವನ್ನು ಗಂಭೀರವಾಗಿ ಪರಿಗಣಿಸದೆ ಆತ್ಮಹತ್ಯೆಗೆ ಶರಣಾಗಿದ್ದು ವಿಡಂಬನೆಯೇ ಸರಿ.
ಭಾರಿ ಸಾಲಕ್ಕೆ ಸಿಲುಕಲು ಅನೇಕ ಕಾರಣಗಳಿರುತ್ತವೆ. ಒಮ್ಮೆ ವ್ಯಾಪಾರದಲ್ಲಿ ಆಗುವ ಲಾಸ್, ಭಾರಿ ದೊಡ್ಡ ಯೋಜನೆಗಳಿಂದ ರಾತ್ರೋ ರಾತ್ರಿ ಬೆಳೆದುಬಿಡಬೇಕು ಎನ್ನುವ ಹುನ್ನಾರ, ಎಲ್ಲಕ್ಕೂ ಮೀರಿದ ದುರಾಸೆಯೇ ಸಾಲಕ್ಕೆ ಸಿಲುಕಿಸುತ್ತದೆ. ವಿಜಯ್ ಮಲ್ಯಾ ಇನ್ನಷ್ಟು ಮತ್ತಷ್ಟು ಗಳಿಸುವ ದುರಾಸೆಯಲ್ಲಿ ಮುಳುಗಿಹೋದ, ಈಗ ಅಳಿದುಳಿದ ಹಣದಲ್ಲಿ ವಿದೇಶಗಳಲ್ಲಿ ಮೋಜು ಮಾಡುತ್ತಿದ್ದಾನೆ. ಲಲಿತ್ ಮೋದಿ ಕೋಟ್ಯಂತರ ಹಣ ಸಾಲ ಮಾಡಿ, ಲಂಡನ್ ಗೆ ಓಡಿಹೋಗಿ ಅಲ್ಲಿ ಮೋಜು ಮಾಡುತ್ತಿದ್ದಾನೆ.
ಇಂಥ ಸೆಲೆಬ್ ಗಳನ್ನೇ ಮಾಮೂಲಿ ತಮ್ಮ ಜನ ರೋಲ್ ಮಾಡೆಲ್ ಆಗಿಸಿಕೊಳ್ಳುತ್ತಾರೆ. ಸಾಲ ಮಾಡಿ ದೊಡ್ಡ ವ್ಯಾಪಾರ ಶುರು ಮಾಡೋದು, ಅದರಿಂದ ಸಾಲ ತೀರಿಸೋದು ಅವರ ಕನಸು. ಕೈಗೆ ಆ ಹಣ ಬರುತ್ತಲೇ ತಮ್ಮದೇ ಐಷಾರಾಮಿ ಖರ್ಚನ್ನು ಹೆಚ್ಚಿಸಿಕೊಳ್ಳುತ್ತಾರೆ. ಬಹು ದೊಡ್ಡ ಮನೆ, ದೊಡ್ಡ ಕಾರು, ದೇಶವಿದೇಶಗಳ ಟೂರ್, ಹಲವು ಬಗೆಯ ಕ್ರೆಡಿಟ್ ಕಾರ್ಡ್ಸ್, ದುಬಾರಿ ಕ್ಲಬ್ಬುಗಳ ಸದಸ್ಯತ್ವ, ಇದೇ ಲೈಫ್ ಸ್ಟೈಲ್ ಆಗಿಬಿಡುತ್ತದೆ. ಗ್ರಾಂಡ್ ಪಾರ್ಟಿಗಳಲ್ಲಿ ದೊಡ್ಡ ಮೊತ್ತದ ಖರ್ಚು, ಮನೆ ಊಟ ಬೇಕಾಗೇ ಇಲ್ಲ.





