ಮಹಾನಗರ ಬೆಂಗಳೂರಿನಲ್ಲಿ ಬುಧವಾರ ಹಾಡಹಗಲೇ ಭಯಾನಕ ದರೋಡೆ ನಡೆದಿದೆ. ಜನನಿಬಿಡ ಪ್ರದೇಶವಾಗಿರುವ, ಸದಾ ಟ್ರಾಫಿಕ್ ನಿಂದ ರಶ್ ಆಗಿರೋ ಜಯನಗರದ ಅಶೋಕ ಪಿಲ್ಲರ್ ಬಳಿ ಈ ದರೋಡೆ ನಡೆದಿದೆ.
ಎಟಿಎಂಗೆ ಹಣ ತುಂಬಲು ತೆಗೆದುಕೊಂಡು ಬರುತ್ತಿದ್ದ ಬರೋಬ್ಬರಿ 7 ಕೋಟಿ 14 ಲಕ್ಷ ರೂಪಾಯಿ ಹಣವನ್ನು ದರೋಡೆಕೋರರು ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ.

ಬುಧವಾರ ಮಧ್ಯಾಹ್ನ ಸರಿ ಸುಮಾರು 12 ಗಂಟೆ ಹೊತ್ತಿಗೆ ಜೆಪಿನಗರದ ಹೆಚ್ಡಿಎಫ್ಸಿ ಬ್ಯಾಂಕ್ ನಿಂದ ಸುಮಾರು 23 ಸಿಎಂಎಸ್ ಸೆಕ್ಯೂರಿಟೀಸ್ ವಾಹನಗಳು ಬೇರೆ ಬೇರೆ ಏರಿಯಾದ ಎಟಿಎಂಗಳಿಗೆ ಹಣ ತುಂಬಲು ಹಣ ತುಂಬಿಸಿಕೊಂಡು ಹೊರಟಿದ್ದವು. ಅವುಗಳ ಪೈಕಿ 23ನೇ ವಾಹನ ಜಯನಗರದ ಕಡೆ ಬರುತ್ತಿತ್ತು. ಈ ಮಾಹಿತಿಯನ್ನ ಮೊದಲೇ ತಿಳಿದಿದ್ದ ದರೋಡೆಕೋರರ ಗ್ಯಾಂಗ್ ಜೆಪಿನಗರದಿಂದಲೇ ಆ ವಾಹನವನ್ನು ಚೇಸ್ ಮಾಡಿಕೊಂಡು ಬಂದಿದೆ.
ಬಳಿಕ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಅಶೋಕ ಪಿಲ್ಲರ್ ಬಳಿ ಆ ವಾಹನವನ್ನು ಅಡ್ಡ ಹಾಕಿದೆ. ಇನ್ನೋವಾ ಕಾರಿನಲ್ಲಿ ಚೇಸ್ ಮಾಡಿ ಬಂದಿದ್ದ ಏಳೆಂಟು ಜನ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡಿದ್ದರು. ಜೊತೆಗೆ ಕಾರಿನ ಹಿಂಭಾಗಕ್ಕೆ ಗವರ್ನ್ ಮೆಂಟ್ ಆಫ್ ಇಂಡಿಯಾ ಅಂತಾ ಬೋರ್ಡ್ ಹಾಕಿಕೊಂಡಿದ್ದರು. ಕೂಡಲೇ ಕೆಳಗಿಳಿದ ಅಷ್ಟೂ ಜನ ಹಣವಿದ್ದ ಸಿಎಂಎಸ್ ವಾಹನದ ಬಳಿ ಬಂದು ನಾವು ರಿಸರ್ವ್ ಬ್ಯಾಂಕ್ ಇಂಡಿಯಾದವರು, ಇನ್ ವಾಯ್ಸ್ ಕೊಡಿ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲ, ಅಷ್ಟೂ ಹಣವನ್ನು ಟ್ಯಾಲಿ ಮಾಡುವ ಅಗತ್ಯತೆ ಇದೆ..

ಹೀಗಾಗಿ ಇನ್ನೋವಾ ಕಾರಿಗೆ ಕೂಡಲೇ ತುಂಬಿ ಅಂತಾ ಸಲಹೆ ಕೊಟ್ಟಿದ್ದಾರೆ. ಸಿಎಂಎಸ್ ವಾಹನದಲ್ಲಿದ್ದ ಇಬ್ಬರು ಗನ್ ಮ್ಯಾನ್ ಮತ್ತು ಇನ್ನಿಬ್ಬರು ಸಿಬ್ಬಂದಿ ಇದನ್ನು ನಂಬಿದ್ದಾರೆ. ಅದರಂತೆ ಇನ್ನೋವಾ ಕಾರಿಗೆ ಹಣ ಶಿಫ್ಟ್ ಮಾಡಿದ್ದಾರೆ. ಬಳಿಕ ಸಿಎಂಎಸ್ ವಾಹನದ ಡ್ರೈವರ್ ನ್ನ ಬಿಟ್ಟು ಉಳಿದವರನ್ನು ಇನ್ನೋವಾ ಕಾರಿಗೆ ಕೂರಿಸಿಕೊಂಡು ನೇರವಾಗಿ ಡೈರಿ ಸರ್ಕಲ್ ಮಾರ್ಗವಾಗಿ ಹೋಗಿದ್ದಾರೆ. ಡೈರಿ ಸರ್ಕಲ್ ನ ಫ್ಲೈಓವರ್ ಬಳಿ ಕಾರು ನಿಲ್ಲಿಸಿ ತಮ್ಮಲ್ಲಿದ್ದ ಗನ್ ನ್ನು ಸಿಎಂಎಸ್ ಸಿಬ್ಬಂದಿ ಹಣೆಗಿಟ್ಟು ಬೆದರಿಸಿ ಎಲ್ಲರನ್ನೂ ಕೆಳಗಿಳಿಸಿ ಪರಾರಿಯಾಗಿದ್ದಾರೆ. ಇದೆಲ್ಲವೂ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿರೋದ್ರಿಂದ ಇಡೀ ಬೆಂಗಳೂರಿನ ಜನ ಬೆಚ್ಚಿಬಿದ್ದಿದ್ದಾರೆ. ಸದ್ಯ ಸಿಎಂಎಸ್ ಸಿಬ್ಬಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿರುವ ಸಿದ್ದಾಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇನ್ನೋವಾ ಕಾರು ಯಾವ ಕಡೆ ಹೋಗಿದೆ ಅನ್ನೋದರ ಕುರಿತು ಹುಡುಕಾಟ ನಡೆಸುತ್ತಿದ್ದಾರೆ.





