ಟರ್ಕಿಯಲ್ಲಿ ರೊಮಾನ್ಸ್
ಸಾಕಷ್ಟು ವಿವಾದಕ್ಕೊಳಗಾಗಿದ್ದ ಟೈಟಲ್ `ಬಸವಣ್ಣ.’ ಈ ಚಿತ್ರದಲ್ಲಿ ಉಪೇಂದ್ರ, ಸೋನಿ, ರಾಗಿಣಿ ದ್ವಿವೇದಿ ನಟಿಸುತ್ತಿದ್ದಾರೆ. `ದಂಡುಪಾಳ್ಯ’ ಚಿತ್ರದ ಖ್ಯಾತಿಯ ಶ್ರೀನಿವಾಸ್ ರಾಜು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮನೋಹರ್ ಅವರ ನಿರ್ಮಾಣದ ಈ ಚಿತ್ರದ ಹಾಡನ್ನು ಟರ್ಕಿಯಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲಿಯ ವಾತಾವರಣ, ಆ ಕೊರೆಯುವ ಚಳಿಯಲ್ಲೂ ಇಡೀ ತಂಡ ಚಿತ್ರೀಕರಣ ಮುಗಿಸಿಬಂದಿದೆ. ಭಾರೀ ತಾರಾಗಣವಿರುವ ಈ ಚಿತ್ರದಲ್ಲಿ ಉಪೇಂದ್ರ ಸೋನಿ ಜೋಡಿ `ಬುದ್ಧಿವಂತ’ ನಂತರ ಕಾಣಿಸಿಕೊಳ್ಳುತ್ತಿದೆ. ಉಪೇಂದ್ರ ಟರ್ಕಿಯ ಮಹಾರಾಜರಂತೆ ಪೋಷಾಕುಗಳನ್ನು ಧರಿಸಿದರೆ ಸೋನಿ ಲಂಗದಾವಣಿಯಲ್ಲಿ ಮಿಂಚುತ್ತಿದ್ದಳಂತೆ. ರಾಗಿಣಿ ಉಪೇಂದ್ರ ಜೋಡಿಯ ಹಾಡನ್ನು ಸಹ ಚಿತ್ರೀಕರಿಸಲಾಯಿತು. ಉಪೇಂದ್ರ ಅವರು ತುಂಬಾನೆ ಇಷ್ಟಪಟ್ಟಿರುವಂಥ ಸಬ್ಜೆಕ್ಟ್ ಇದಾಗಿದೆ. ಇವರ ಗೆಟಪ್ ಕೂಡಾ ಸಾಕಷ್ಟು ವಿಭಿನ್ನವಾಗಿರುತ್ತದಂತೆ. ಉಪೇಂದ್ರ ಒಂದು ಚಿತ್ರವನ್ನು ಒಪ್ಪಿಕೊಂಡರೆ ಸಾಕು, ಸಾಕಷ್ಟು ಆಸಕ್ತಿ ವಹಿಸಿ ವರ್ಕ್ ಔಟ್ ಮಾಡುತ್ತಾರೆ.
ಕ್ರೇಜಿ ಹೋಲಿಕೆ
ಈಗಾಗಲೇ ಹಾಡುಗಳ ಮೂಲಕವೇ ಸಾಕಷ್ಟು ಪ್ರಚಾರ ಗಿಟ್ಟಿಸಿರುವ ಚಿತ್ರ `ಎಂದೆಂದೂ ನಿನಗಾಗಿ.’ ಹೊಸ ನಾಯಕ ವಿವೇಕ್, ದೀಪಾ ಸನ್ನಿಧಿ ನಟಿಸಿರುವ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿವೇಕ್ ರವಿಚಂದ್ರನ್ ಅವರ ಖಾಸಾ ಅಕ್ಕನ ಮಗ. ಸಿನಿಮಾದಲ್ಲಿ ಆಸಕ್ತಿ ವಹಿಸಿದ್ದು ಸಹಜವಾಗಿತ್ತು. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ರವಿಚಂದ್ರನ್ ಅವರ ಇಡೀ ಕುಟುಂಬ ಸಡಗರದಲ್ಲಿ ಪಾಲ್ಗೊಂಡಿತ್ತು. ವಿವೇಕ್ ರವಿಮಾಮನನ್ನೇ ಹೋಲುತ್ತಾರೆ. ಅವರಂತೆ ಗುಂಗುರು ಕೂದಲು, ಅದೇ ಹೇರ್ ಸ್ಟೈಲ್. ನೋಡುವುದಕ್ಕೂ ಹಾಗೆಯೇ ಕಾಣುತ್ತಾರೆ. “ನನ್ನ ಅಕ್ಕನ ಮಗ ನನ್ನಂತೆ ಕಾಣುತ್ತಾನೆ. `ನಾನೇ ರಾಜ’ ಚಿತ್ರದಲ್ಲಿ ನಟಿಸುವಾಗ ನಾನು ಕೂಡಾ ಹಾಗೆಯೇ ಇದ್ದೆ. ನನಗಂತೂ ಅದೇ ನೆನಪಾಗುತ್ತದೆ. ನಾನು ಅವನನ್ನು ಯಾವುದೇ ರೀತಿ ತಯಾರು ಮಾಡದಿದ್ದರೂ 200% ಅಭಿನಯ ಕೊಡುವ, ಆಗಲೇ ತೆರೆ ಮೇಲೆ ಪರ್ಫೆಕ್ಟ್ ಆಗಿ ಮೂಡಿಬರುತ್ತೆ ಎಂದು ಸಲಹೆಗಳನ್ನು ಕೊಡುತ್ತಿದ್ದೆ. ಹಾಡುಗಳ್ನು ನೋಡಿದಾಗ ಅದು ಅವನ ಮೊದಲ ಚಿತ್ರ ಅಂತ ಅನಿಸುವುದಿಲ್ಲ. ಲೀಲಾಜಾಲವಾಗಿ ನಟಿಸಿದ್ದಾನೆ ಅನಿಸುತ್ತೆ,” ಎಂದು ರವಿಮಾಮ ಅಕ್ಕನ ಮಗನನ್ನು ಪ್ರಶಂಸಿಸುತ್ತಾರೆ. ಕ್ರೇಜಿಸ್ಟಾರ್ ಸರ್ಟಿಫಿಕೇಟ್ ಕೊಟ್ಟ ಮೇಲೆ ಇನ್ನೇನು ತಾನೇ ಬೇಕು?
ಪರವಶನಾದೆನು…..
ಹೌದು, ಈ ಶೀರ್ಷಿಕೆ ಹೊಸ ಚಿತ್ರದ್ದಾಗಿದೆ. ಸಂಜನಾ ತಂಗಿ ನಿಕ್ಕಿ ನಾಯಕಿಯಾಗಿ ನಟಿಸುತ್ತಿರುವ ಚಿತ್ರವಿದು. ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಮನೋಜ್ ಎನ್ನುವ ತರುಣ ಆರು ವರ್ಷಗಳಿಂದ ಹೀರೋ ಆಗಬೇಕೆಂದು ಕನಸು ಕಂಡಂಥ ಆಶಾವಾದಿ. ಗಾಂಧಿನಗರದಲ್ಲಿ ಅಕಾಶ ಗಿಟ್ಟಿಸಬೇಕೆಂದರೆ ಅದೆಷ್ಟು ಸೈಕ್ ಹೊಡೆಯಬೇಕಾಗುತ್ತೆ ಎಂಬುದು ಗೊತ್ತಿರುವ ಸಂಗತಿ. ಮನೋಜ್ ಆರು ವರ್ಷಗಳ ಹಿಂದೆ `ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದರಷ್ಟೆ. ನಾಯಕನಾಗಿಯೇ ಕಾಣಿಸಿಕೊಳ್ಳಬೇಕೆಂಬ ಹಟವಿತ್ತು. ಆರು ವರ್ಷಗಳ ನಂತರ ಪ್ರಯತ್ನ ಫಲ ಕೊಟ್ಟಿದೆ. `ಪರವಶನಾದೆನು’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ನಿಕ್ಕಿ ಕೂಡಾ ಸಂಜನಾಳಂತೆ ಬ್ಯೂಟಿಫುಲ್ ಬೆಡಗಿ. ಮನೋಜ್ ನಿಕ್ಕಿ ಜೋಡಿ ತೆರೆ ಮೇಲೆ ಮೂಡಿಬರಲಿದೆ. `ಪರಮಾತ್ಮ’ ಚಿತ್ರದ ಹಾಡನ್ನು ನೆನಪಿಸುವ `ಪರವಶನಾದೆನು ಅರಿಯುವು ಮುನ್ನವೇ….’ ಎಂಬಂತೆ ಈ ಚಿತ್ರ ಆ ಹಾಡಿನಷ್ಟೆ ಜನಪ್ರಿಯತೆ ಕಾಣಲಿ.
ಆರ್ಯನ್ ತೆರೆಗೆ ಸಿದ್ಧ
ಬಹು ನಿರೀಕ್ಷಿತ ಚಿತ್ರ `ಆರ್ಯನ್’ ತೆರೆಗೆ ಬರಲು ಸಿದ್ಧವಾಗಿದೆ. ಡಿ. ರಾಜೇಂದ್ರಬಾಬು ಅವರ ಕಡೆಯ ಚಿತ್ರ ಇದಾಗಿದ್ದರೂ ಅದನ್ನು ಪೂರ್ಣಗೊಳಿಸಿದ್ದು ಚಿ. ಗುರುದತ್. ಶಿವರಾಜ್ ಕುಮಾರ್ ರಮ್ಯಾ ಜೋಡಿಯ ಈ ಚಿತ್ರ ಅವರಿಬ್ಬರೂ ಪಾಲ್ಗೊಂಡಿದ್ದ ಹಾಡಿನ ಚಿತ್ರೀಕರಣದೊಂದಿಗೆ ಪೂರ್ಣಗೊಂಡಿದೆ. ರಮ್ಯಾ ಇದೀಗ ರಾಜಕೀಯ ರಂಗದಲ್ಲಿ ಬಿಜಿಯಾಗಿರೋದ್ರಿಂದ ಬಹುಶಃ ಇದೇ ಆಕೆಯ ಕಡೆಯ ಚಿತ್ರವಾಗಬಹುದು. ಶಿವರಾಜ್ ಕುಮಾರ್ ಕೋಚ್ ಆಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲಿನಿಂದಲೂ ಇಂಥಿಂಥದು ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯೂ ಅವರಿಗಿತ್ತು. ಶಿವಣ್ಣ ಉತ್ತಮ ಕ್ರಿಕೆಟ್ ಪಟು ಆಗಿರೋದ್ರಿಂದ ಅವರಿಗೆ ಸ್ಪೋರ್ಟ್ಸ್ ನಲ್ಲಿ ತುಂಬಾನೆ ಆಸಕ್ತಿ. ಚುನಾವಣೆಯಿಂದಾಗಿ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿರೋದ್ರಿಂದ, ಶಿವಣ್ಣ ಪತ್ನಿ ಪರ ಪ್ರಚಾರ ಕಾರ್ಯ ನಿರ್ವಹಿಸಿದ್ದರು.
ಪುನೀತ್ ಈಗ ಧೀರ ರಣವಿಕ್ರಮ
ಪುನೀತ್ ರಾಜ್‌ಕುಮಾರ್ ಅವರ ಹೊಸ ಚಿತ್ರ `ರಣವಿಕ್ರಮ.’ ನಿರ್ಮಾಪಕ ಜಯಣ್ಣ ಅವರು ನಿರ್ಮಿಸುತ್ತಿರುವ ಈ ಅದ್ಧೂರಿ ಚಿತ್ರವನ್ನು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ಪವನ್ ಒಡೆಯರ್. ಪುನೀತ್ ಈ ಚಿತ್ರಕ್ಕಾಗಿ ಸಾಕಷ್ಟು ವರ್ಕ್ ಔಟ್ ಕೂಡಾ ಮಾಡಿದ್ದಾರೆ. ಆ್ಯಕ್ಷನ್ ಭರಿತ ಚಿತ್ರವಾಗಿರೋದ್ರಿಂದ ಪುನೀತ್ ಅವರ ಭರ್ಜರಿ ಸಾಹಸಗಳನ್ನು ಈ ಚಿತ್ರದಲ್ಲಿ ಅಭಿಮಾನಿಗಳು ನೋಡಬಹುದಾಗಿದೆ. ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದಾಳೆ. ಮೊದಲ ಬಾರಿಗೆ ಪುನೀತ್ ಪೊಲೀಸ್ ಅಧಿಕಾರಿಯಾಗಿ ತೆರೆ ಮೇಲೆ ಖಾಕಿ ಖದರ್ ತೋರಿಸಲಿದ್ದಾರೆ. ಜಯಣ್ಣ, ಭೋಗೇಂದ್ರ ನಿರ್ಮಾಣದ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಪುನೀತ್ ಅವರ ಹುಟ್ಟುಹಬ್ಬದಂದು `ರಣವಿಕ್ರಮ’ ಅದ್ಧೂರಿಯಾಗಿ ಸೆಟ್ಟೇರಿದೆ. ಮುಹೂರ್ತ ಸಮಾರಂಭದಲ್ಲಿ ಇಡೀ ಚಿತ್ರರಂಗವೇ ಆಗಮಿಸಿ ಶುಭಕೋರಿತು. ಪುನೀತ್‌ರಚಿತಾ ಜೋಡಿ ಕೂಡಾ ಪ್ರಮುಖ ಆಕರ್ಷಣೆಯಾಗಲಿದೆ.
ಮಾಣಿಕ್ಯ ಡಿಮ್ಯಾಂಡ್
ಒಂದು ಕಡೆ ಚುನಾವಣೆ ಮತ್ತೊಂದು ಕಡೆ ಐ.ಪಿ.ಎಲ್ ಕ್ರಿಕೆಟ್…. ಹಾಗಾಗಿ ಚಿತ್ರಗಳ ಬಿಡುಗಡೆ ದಿನಾಂಕಗಳು ಏರುಪೇರಾಗುತ್ತಿವೆ. ಆದರೆ `ಮಾಣಿಕ್ಯ’ ಚಿತ್ರದ ತಂಡ ಮಾತ್ರ ತಮ್ಮ ಚಿತ್ರ ಬರುವ ಸಮಯಕ್ಕೆ ಬಂದೇ ಬರುತ್ತದೆಂದು ಹೇಳುತ್ತದೆ. ಭಾರೀ ತಾರಾಗಣವಿರುವ `ಮಾಣಿಕ್ಯ’ ಚಿತ್ರದ ಮೇಲೆ ಎಲ್ಲರ ಕಣ್ಣಿದೆ. ಕಿಚ್ಚ ಸುದೀಪ್ ನಟಿಸಿ ನಿರ್ದೇಶಿಸುತ್ತಿರುವ `ಮಾಣಿಕ್ಯ’ ಚಿತ್ರದಲ್ಲಿ ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸುತ್ತಿರೋದು ಈ ಚಿತ್ರದ ವಿಶೇಷ. ನಾಯಕರಾಗಿಯೇ ವೃತ್ತಿಯಲ್ಲಿ ಮುಂದುವರಿದಿರುವ ರವಿಚಂದ್ರನ್ ಅವರಿಗೆ ಸುದೀಪ್ ಕಥೆ ಹೇಳಿದಾಗ, ಸುದೀಪ್ ಮೇಲಿರುವ ಪ್ರೀತಿಗಾಗಿ ಈ ಪಾತ್ರವನ್ನು ಒಪ್ಪಿಕೊಂಡರಂತೆ. ರವಿಚಂದ್ರನ್ ಕಂಡರೆ ಸುದೀಪ್ ಅವರಿಗೂ ಅಪಾರವಾದ ಗೌರವ, ಪ್ರೀತಿ ಇದೆ. ಕನ್ನಡ ಚಿತ್ರರಂಗದ ಮಾಣಿಕ್ಯಗಳಾಗಿರುವ ಇವರಿಬ್ಬರನ್ನು ಒಟ್ಟಿಗೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಪ್ರೀತಿ ಗೀತಿ……
ಪವನ್ ಭಟ್ಟರ ಶಿಷ್ಯರು ಒಂದಲ್ಲ ಒಂದು ರೀತಿ ಪ್ರತಿಭಾವಂತರಾಗಿರುತ್ತಾರೆ. ಪವನ್ ಒಡೆಯರ್ ಎನ್ನುವ ಯುವ ನಿರ್ದೇಶಕ `ಗೋವಿಂದಾಯ ನಮಃ’ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ಸಾಕಷ್ಟು ಗಮನಸೆಳೆದಂಥ ಪ್ರತಿಭಾವಂತ. ಪವನ್‌ನಲ್ಲಿ ನಟನಾಗುವ ಲಕ್ಷಣಗಳೂ ಇವೆ ಎಂಬುದನ್ನು ಭಟ್ಟರು ಬಹಳ ಹಿಂದೆಯೇ ಹೇಳಿದ್ದರು. `ಗೋವಿಂದಾಯ ನಮಃ’ ನಂತರ `ಗೂಗ್ಲಿ’ ಚಿತ್ರವನ್ನು ನಿರ್ದೇಶಿಸಿ ಸಾಕಷ್ಟು ಯಶಸ್ವಿಯಾದ ಪವನ್ ಒಡೆಯರ್ ಈಗ ಹೀರೋ ಆಗಿದ್ದಾರೆ. `ಪ್ರೀತಿ ಗೀತಿ ಇತ್ಯಾದಿ’ ಚಿತ್ರದ ಸಂಗೀತಾ ಭಟ್‌ಳೊಂದಿಗೆ ಡ್ಯುಯೆಟ್ ಹಾಡುತ್ತಾ ರೊಮಾನ್ಸ್ ಮಾಡುತ್ತಿರುವ ಪವನ್‌ಗೆ ಈ ಚಿತ್ರ ಅವರಲ್ಲಿರುವ ನಟನನ್ನು ಪ್ರದರ್ಶಿಸಬಹುದೇ ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಚಿತ್ರದ ಬಗ್ಗೆ ಒಳ್ಳೆ ಮಾತುಗಳು ಕೇಳಿಬರುತ್ತಿವೆ. `ಗೂಗ್ಲಿ’ ಚಿತ್ರದಲ್ಲಿ ಒಂದೇ ಸೀನ್‌ನಲ್ಲಿ ಬಂದು ಹೋಗಿದ್ದಾಗ ಎಲ್ಲರ ಗಮನ ಸೆಳೆದಿದ್ದರು ಈ ಪವನ್. ಯಾವುದೇ ಹೀರೋಗೇನೂ ಕಡಿಮೆ ಇಲ್ಲ ಎಂಬಂತೆ ಹಾಡಿ, ಕುಣಿದು, ತೆರೆಮೇಲೆ ಮಿಂಚಲು ಬರುತ್ತಿರುವ ಪವನ್ ನಿರ್ದೇಶನದ ಜೊತೆಯಲ್ಲೇ ಉತ್ತಮ ನಟರಾಗಿ ಮಿಂಚಬಲ್ಲರೇ….. ಕಾದು ನೋಡೋಣ.
ಆಜಾರೇ….ಆಜಾರೇ….
ಪುಂಗಿದಾಸ ಕೋಮಲ್ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ವರ್ಷದಲ್ಲಿ ಅವರು ಸಾಕಷ್ಟು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಕೋಮಲ್ `ಗೋವಿಂದಾಯ ನಮಃ’ ಚಿತ್ರದ ನಂತರ ಅಭಿಮಾನಿಗಳ ಪಾಲಿಗೆ ಎಂಟರ್ ಟೇನ್‌ಮೆಂಟ್ ಗ್ಯಾರಂಟಿ ಎನ್ನುವಷ್ಟು ಯಶಸ್ವಿಯಾಗಿಬಿಟ್ಟಿದ್ದಾರೆ. ಇತ್ತೀಚೆಗೆ ಕೋಮಲ್ ಸ್ವಲ್ಪ ಸಣ್ಣಗಾಗಿ ಕಾಣುತ್ತಿದ್ದಾರೆ. ಅವರು ತಮ್ಮ ತೂಕದ ಅಭಿನಯ ನೀಡುವುದರಿಂದ ದಪ್ಪ ಸಣ್ಣ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. `ಪುಂಗಿದಾಸ’ ಚಿತ್ರದ ಹಾಡುಗಳನ್ನು ನೋಡಿದಾಗ ಕೋಮಲ್ ಸಖತ್ ಸ್ಮಾರ್ಟಾಗಿ ಕೊಂಚ ಸ್ಲಿಮ್ಮಾಗಿ ಕಂಡರು. ಈ ಚಿತ್ರದಲ್ಲಿನ ಹಾಡುಗಳು ವಿಭಿನ್ನವಾಗಿದ್ದು ಗುನುಗುವಂತಿದೆ. ಕೈಲಾಶ್ ಖೇರ್ ಹಾಡಿರುವ `ಆಜಾರೇ….ಆಜಾರೇ….’ ಹಾಡು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. `ಪುಂಗಿದಾಸ’ ಚಿತ್ರದಲ್ಲಿ ಕೋಮಲ್ ಕಥಕ್ಕಳಿ ನೃತ್ಯ ಕೂಡಾ ಮಾಡಿದ್ದಾರೆ. ಪ್ಯಾರ್‌ಗೇ ಆಗ್ಬುಟ್ಟೈತೆ ಶೈಲಿಯಲ್ಲೇ ಹಾಡು ಸಾಗುವುದರಿಂದ ಅಭಿಮಾನಿಗಳನ್ನು ಆಕರ್ಷಿಸುವ ಎಲ್ಲ ಗುಣಗಳೂ ಚಿತ್ರದಲ್ಲಿ ಎದ್ದುಕಾಣುತ್ತವೆ.