ದಂತ ವೈದ್ಯೆ, ಲಂಡನ್‌ನಲ್ಲಿ ಪ್ರಾಕ್ಟೀಸ್ ಮಾಡಿದ ಅನುಭವ, ವೈದ್ಯಕೀಯ ಕ್ಷೇತ್ರಕ್ಕೂ ಸಿನಿಮಾರಂಗಕ್ಕೂ ಅಜಗಜಾಂತರ. ಆದರೆ ಸಿನಿಮಾರಂಗ ಬಿಡಬೇಕಲ್ಲ.... ಹೇಗಾದರೂ ಆಕರ್ಷಿಸಿ ಕರೆತರುತ್ತದೆ. ಹಾಗೆ ಬಂದವರೇ ಶಿಲ್ಪಾ ರಮೇಶ್ ರಮಣಿ, `ಫೇರ್ ಅಂಡ್ ಲವ್ಲಿ' ಚಿತ್ರದ ನಿರ್ಮಾಪಕಿ. ತೆರೆಗೆ ಬರಲು ರೆಡಿಯಾಗಿರುವ ಈ ಚಿತ್ರವನ್ನು ರಘುರಾಮ್ ನಿರ್ದೇಶಿಸಿದ್ದಾರೆ. ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಲು ಭೇಟಿಯಾದ ಶಿಲ್ಪಾ ನಿರ್ಮಾಪಕಿಯಾದ ಅನುಭವವನ್ನು ಹಾಗೂ `ಫೇರ್ ಅಂಡ್ ಲವ್ಲಿ' ಚಿತ್ರದ ಬಗ್ಗೆ ಗೃಹಶೋಭಾಳಿಗಾಗಿ ಮಾತನಾಡಿದ್ದಾರೆ :
ಹೇಗಿದೆ ನಿರ್ಮಾಪಕಿಯಾಗಿದ್ದು?
ನನಗಿದು ಮೊದಲ ಚಿತ್ರವಲ್ಲ. `ದೇವ್ S/O ಮುದ್ದೇಗೌಡ' ಚಿತ್ರಕ್ಕೆ ನಾವು ಹಣ ಹಾಕಿದ್ವಿ ಹಾಗಾಗಿ ನಾವು ಈ ಚಿತ್ರದ ನಿರ್ಮಾಪಕರಾದೆವು. ಇಂದ್ರಜಿತ್ ಲಂಕೇಶ್ ಅವರು ನಿರ್ದೇಶನ ಮಾಡಿದ್ರು. ಈ ಚಿತ್ರ ತೆಲುಗಿಗೆ ಡಬ್ ಆಗುವುದಕ್ಕೆ ಎಲ್ಲ ರೀತಿ ಸಹಕಾರ ನೀಡಿದ್ದು ರಘುರಾಮ್ ಅವರು. ಹಾಗಾಗಿ ಅವರ ಪರಿಚಯವಾಯಿತು. ಆಗಷ್ಟೇ `ಚೆಲುವೆಯೇ ನಿನ್ನ ನೋಡಲು' ಚಿತ್ರ ಮಾಡಿದ್ದರು. ಪ್ರಮೋಶನ್‌ಗಾಗಿ ನಮ್ಮಲ್ಲಿ ಬಂದಿದ್ದರು. ರಘು ತುಂಬಾನೆ ಕ್ಲೋಸ್ ಆದರು. ಮೂರ್ನಾಲ್ಕು ಕಥೆ ತಂದು ಸಿನಿಮಾ ಮಾಡಬೇಕೆಂದು ತಿಳಿಸಿದಾಗ ನಾವು ಆ ಕ್ಷಣದಲ್ಲಿ ಸಿನಿಮಾ ನಿರ್ಮಾಣವೇ ಬೇಡವೆಂದು ನಿರ್ಧರಿಸಿ ಬಿಟ್ಟಿದ್ದೆವು. ಆದರೆ ರಘುರಾಮ್ ಅವರ ಕಾಂಟ್ಯಾಕ್ಟ್ ಮಾತ್ರ ಹಾಗೆಯೇ ಇತ್ತು. ಇದೇ ಮುಂದಕ್ಕೆ `ಫೇರ್ ಅಂಡ್ ಲವ್ಲಿ' ಚಿತ್ರ ನಿರ್ಮಾಣಕ್ಕೆ ನಾಂದಿಯಾಯಿತು.
`ಫೇರ್ ಅಂಡ್ ಲವ್ಲಿ' ಚಿತ್ರ ನಿರ್ಮಿಸಲು ಕಾರಣ?
ರಘುರಾಮ್ ಅವರು ಪತ್ರಕರ್ತರು ಹಾಗೂ ಕಥೆಗಾರರೂ ಆಗಿದ್ದ ಯತಿರಾಜ್ ಅವರನ್ನು ಕರ್ಕೊಂಡು ಬಂದರು. ಯತಿರಾಜ್ ತಮ್ಮ ಬಳಿ ಇದ್ದ ಕಥೆಯನ್ನು ಹೇಳಿದರು. ಐದು ನಿಮಿಷದಲ್ಲಿ ಕಥೆ ಓ.ಕೆ. ಮಾಡಿದೆ. ರಿಸ್ಕ್ ತಗೊಂಡು ಈ ಸಿನಿಮಾ ಮಾಡೇ ಮಾಡ್ತೀನಿ ಅಂತ ನಿರ್ಧರಿಸಿದೆ. ರಘು ಅವರೇ ಉಳಿದೆಲ್ಲ ತಯಾರಿ ಮಾಡಿಕೊಂಡರು. ಬಹಳ ಯೋಚಿಸಿ ಹಣ ಖರ್ಚು ಮಾಡಿದ್ದೇವೆ. ಕಷ್ಟಪಟ್ಟು ಸಂಪಾದಿಸಿದ ಹಣವಿದು. ಕಥೆಯ ಒಂದು ಲೈನ್ ಕೇಳಿದ್ದ ನನಗೆ ರಘು ಮತ್ತು ಆನಂದ್ ಚಿತ್ರಕಥೆ, ಜೊತೆಗೆ ಕಂಪ್ಲೀಟ್ ಸ್ಕ್ರಿಪ್ಟ್ ತಗೊಂಡು ಬಂದಾಗ ನನಗಂತೂ ಆಶ್ಚರ್ಯವಾಗಿತ್ತು. ಕಥೆಗೆ ಒಳ್ಳೆ ಶೇಪ್ ಕೊಟ್ಟಿದ್ದರು. ಬ್ಯೂಟಿಫುಲ್ ಕಥೆ, ಅಷ್ಟೇ ಚೆನ್ನಾಗಿ ನಿರೂಪಣೆ ನೀಡಿದ್ದಾರೆ ರಘು ಆನಂದ್. ಇಡೀ ಚಿತ್ರದ ಜವಾಬ್ದಾರಿ ರಘು ಹೊತ್ತುಕೊಂಡು ಬಹಳ ಶ್ರಮಹಿಸಿ ಸಿನಿಮಾ ಮಾಡಿದ್ದಾರೆ. ನನಗಂತೂ ರಘು ಅವರ ಜೊತೆ ಕೆಲಸ ಮಾಡಿದ್ದೇ ಒಂದು ಒಳ್ಳೆಯ ಅನುಭವ.
`ಫೇರ್ ಅಂಡ್ ಲವ್ಲಿ' ಚಿತ್ರಕ್ಕಾಗಿ ನಿರ್ಮಾಪಕಿಯಾಗಿ ನಿಮ್ಮ ಕಾಂಟ್ರಿಬ್ಯೂಷನ್?
ರಘು ಅವರು ಎಲ್ಲಾ ಜವಾಬ್ದಾರಿ ತೆಗೆದುಕೊಂಡಿದ್ದರು. ಅವರಿಂದಲೇ ನಾವು ಅನೇಕ ಜನರ ಕಾಂಟ್ಯಾಕ್ಟ್ಸ್ ಬೆಳೆಸಿಕೊಂಡೆ. ರಘುಗೆ ತುಂಬಾ ಒಳ್ಳೆ ಕಾಂಟ್ಯಾಕ್ಟ್ಸ್ ಇದೆ. ನಾನು ನಿರ್ಮಾಪಕಿಯಾಗಿ ಹಣ ಹೂಡಿ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಸಿನಿಮಾದ ಪ್ರತಿಯೊಂದು ಕೆಲಸದಲ್ಲೂ ಇನ್‌ವಾಲ್ವ್ ಆಗುತ್ತಿದ್ದೆ. ಚಿತ್ರೀಕರಣವಿರಲಿ, ಹಾಡಿನ ಧ್ವನಿಮುದ್ರಣ, ಕಾಸ್ಟ್ಯೂಮ್, ಲೊಕೇಶನ್‌ಎಲ್ಲದರಲ್ಲೂ ಆಸಕ್ತಿ ವಹಿಸುತ್ತಿದ್ದೆ. ನನಗೆ ಕೆಲಸ ಗೊತ್ತಿಲ್ಲದಿದ್ದರೂ ನೋಡಿ ಕಲಿತುಕೊಳ್ಳುತ್ತಿದ್ದೆ. ನನಗೇನಾದರೂ ಅನುಮಾನವಿದ್ದರೆ ಕೂಡಲೇ ಕೇಳುತ್ತಿದ್ದೆ. ಯಾವುದಾದರೂ ಸೀನ್ ಚೆನ್ನಾಗಿ ಬಾರದೇ ಹೋದಾಗ ಡಿಸ್ಕಸ್ ಮಾಡ್ತಿದ್ದೆ. ಪ್ರೇಮ್ ಅವರನ್ನೇ ಹೀರೋ ಆಗಿ ತೆಗೆದುಕೊಳ್ಳಬೇಕೆಂಬುದು ನನ್ನ ಸಜೆಷನ್. ಶ್ವೇತಾ ಶ್ರೀವಾತ್ಸವ್ ನನಗಿಂತ ಮೊದಲೇ ಈ ಕಥೆಯನ್ನು ಕೇಳಿ ಓ.ಕೆ ಮಾಡಿದ್ದರಂತೆ. ಹಾಗಾಗಿ ಆಕೆ ಡೇಟ್ಸ್ ಮೊದಲೇ ರಘು ಬಳಿ ಇತ್ತು. ನನಗೂ ಆಕೆ ತುಂಬಾ ಇಷ್ಟವಾದ್ರು. ಪ್ರೇಮ್ ಶ್ವೇತಾ ಜೋಡಿ ಬ್ಯೂಟಿಫುಲ್ ಆಗಿ ಕಾಣುತ್ತೆ.