ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದವರೆಲ್ಲರೂ ಜನಪ್ರಿಯರಾಗುತ್ತಾರೆಂಬ ಮಾತು ಸುಳ್ಳು. ಆದರೆ ಪ್ರತಿಭೆ ಇರುವವರು ಯಾವುದೇ ತೆರೆ ಇರಲಿ, ಜನ ಅವರನ್ನು ಬಹಳ ಬೇಗ ಗುರುತಿಸಿಬಿಡುತ್ತಾರೆ. ಹಿಂದಿಯಲ್ಲಿ ಶಾರೂಖ್‌ ಖಾನ್‌ ಕಿರುತೆರೆ ನಟನಾಗಿದ್ದಾಗಲೇ ಅವನನ್ನು ನಿರ್ದೇಶಕರು ಗುರುತಿಸಿ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದರು. ಇಂದು ಶಾರೂಖ್‌ನನ್ನು ಇಡೀ ಪ್ರಪಂಚ ಗುರುತಿಸುತ್ತದೆ.

ಕನ್ನಡದಲ್ಲಿ ಈಗಿರುವ ಗೋಲ್ಡನ್‌ ಸ್ಟಾರ್‌ ಗಣೇಶ್‌ ಕೂಡಾ ಟಿವಿ ಲೋಕದಿಂದ ಬಂದವರು. ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಗಣೇಶ್‌ ಯಾವಾಗ `ಕಾಮಿಡಿ ಟೈಮ್’ ಆ್ಯಂಕರ್‌ ಆದರೋ ಅಂದಿನಿಂದ ಅವರು ತಮ್ಮದೇ ಆದ ಸ್ಟೈಲಲ್ಲಿ ಮಿಂಚತೊಡಗಿದರು. ಸಿನಿಮಾಗಳಲ್ಲಿಯೂ ಕೂಡ ಗಣೇಶ್‌ ಸಣ್ಣಪುಟ್ಟ ಪಾತ್ರ ಮಾಡಿದ್ದರು. `ಚೆಲ್ಲಾಟ’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡ ಗಣೇಶ್‌ಗೆ ತಾರಾಪಟ್ಟ ತಂದುಕೊಟ್ಟಿದ್ದು ‘ಮುಂಗಾರು ಮಳೆ’ ಚಿತ್ರ.

ಈಗ ರಚಿತಾ ರಾಮ್ ಎನ್ನುವ ಡಿಂಪಲ್ ಬ್ಯೂಟಿ ಕನ್ನಡ ಚಿತ್ರರಂಗದಲ್ಲಿ ಕನ್ನಡದ ಹುಡುಗಿಯಾಗಿ ಸಾಕಷ್ಟು ಜನಪ್ರಿಯಳಾಗುತ್ತಿದ್ದಾಳೆ. ರಚಿತಾ ಕೂಡ ಕಿರುತೆರೆಯಿಂದ ಬಂದಂಥ ಪ್ರತಿಭೆ. `ಅರಸಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಳು.

IMG 1134

ದರ್ಶನ್‌ ಅಭಿನಯದ ದೊಡ್ಡ ಚಿತ್ರ `ಬುಲ್ ಬುಲ್‌’ಗಾಗಿ ನಾಯಕಿಯ ತಲಾಷೆ ನಡೆದಿದ್ದಾಗ, ಟಾಲಿವುಡ್‌ನ ದೊಡ್ಡ ದೊಡ್ಡ  ನಾಯಕಿಯರ ಹೆಸರು ಪ್ರಸ್ತಾಪವಾಗಿತ್ತು. ಅನುಷ್ಕಾ ಶೆಟ್ಟಿ ಬರುತ್ತಾಳೆಂಬ ಸುದ್ದಿ ಕೂಡಾ ಇತ್ತು. ಆದರೆ ಚಿತ್ರದ ನಿರ್ಮಾಪಕರಾದ ದಿನಕರ್‌ ತೂಗುದೀಪ ಮತ್ತು ನಿರ್ದೇಶಕ ಎಂ.ಡಿ. ಶ್ರೀಧರ್‌ ಕನ್ನಡದಲ್ಲೇ ಯಾರನ್ನಾದರೂ ಹುಡುಕೋಣ, ಕನ್ನಡ ಹುಡುಗಿಗೆ ಅವಕಾಶ ಕೊಡೋಣವೆಂದು ಹುಡುಕಾಟಕ್ಕೆ ನಿಂತಾಗ `ಅರಸಿ’ಯ ರಚಿತಾಳ (ಆಗ ಅವಳ ಹೆಸರು ಬಿಂದಿಯಾ ರಾಮ್ ಎಂದಿತ್ತು) ಫೋಟೋ ನೋಡಿದ ಕೂಡಲೇ ಈ ಹುಡುಗಿಯಲ್ಲಿ ನಾಯಕಿಗಿರಬೇಕಾದ ಎಲ್ಲ ಕ್ವಾಲಿಟೀಸ್‌ ಇದೆ ಅನಿಸಿತು. ಆಡಿಶನ್‌ಗೆ ಕರೆಸಿದರು. ನಿರ್ದೇಶಕರು ಕೊಟ್ಟ ಸೀನ್‌ನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ತೋರಿಸಿದಾಗ ಅಲ್ಲಿದ್ದವರಿಗೆಲ್ಲ ಆಶ್ಚರ್ಯವಾಗಿತ್ತು.

ಕನ್ನಡದ ಹುಡುಗಿಯರಿಗೆ ಗ್ಲಾಮರ್‌ ಇರೋದಿಲ್ಲ, ಪ್ರತಿಭೆ ಇರೋದಿಲ್ಲ, ಅವರಿಗೆ ನಾಯಕಿ ಪಾತ್ರವನ್ನು ಹೊತ್ತುಕೊಳ್ಳುವಷ್ಟು ತಾಕತ್ತು ಇರೋದಿಲ್ಲ ಎಂಬೆಲ್ಲ ಮಾತುಗಳನ್ನು ಸುಳ್ಳು ಮಾಡಿದ್ದಳು ರಚಿತಾ. ಬಿಂದಿಯಾ ಆಗಿದ್ದವಳು ಸಿನಿಮಾರಂಗಕ್ಕೆ ಬಂದ ನಂತರ ರಚಿತಾ ಎಂದು ಮರುನಾಮಕರಣ ಮಾಡಲಾಯಿತು.

ದರ್ಶನ್‌ಗೆ ಎಲ್ಲ ರೀತಿಯಲ್ಲೂ ಒಪ್ಪುವಂಥ ನಾಯಕಿಯಾದ ರಚಿತಾ ಒಳ್ಳೆಯ ಭರತನಾಟ್ಯ ನೃತ್ಯಪಟು. ತಂದೆ ಕೂಡ ನೃತ್ಯಪಟುವಾಗಿದ್ದು, ಅನೇಕ ಪ್ರದರ್ಶನಗಳನ್ನು ನೀಡಿದ್ದಾರೆ.

ರಚಿತಾ ಎತ್ತರ ನಿಲುವಿನ ನಟಿಯಾಗಿದ್ದರಿಂದ ದರ್ಶನ್‌ಗೆ ಸೂಟ್‌ ಆಗುವಂತಿದ್ದಳು. `ಸಾರಥಿ’ ಯಶಸ್ವಿಯಾದ ಹೊಸತರಲ್ಲಿ ದರ್ಶನ್‌ `ಬುಲ್ ‌ಬುಲ್‌’ ಚಿತ್ರಕ್ಕೆ ಕನ್ನಡದ ಹುಡುಗಿಗೆ ಅವಕಾಶ ಕೊಡಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಸಿನಿಮಾಗೆ, ಪಾತ್ರಕ್ಕೆ ಒಪ್ಪುವಂಥ ನಟಿಯಾದರೆ ಓ.ಕೆ. ಎಂದಷ್ಟೇ ಹೇಳುವ ದರ್ಶನ್‌ ಯಾವತ್ತೂ ನಾಯಕಿ ಆಯ್ಕೆ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. `ಬುಲ್ ‌ಬುಲ್‌’ ನಿರ್ಮಾಪಕರ ತಂಡ ರಚಿತಾಳನ್ನು ಆಯ್ಕೆ ಮಾಡಿದಾಗಲೂ ಸಹ ದರ್ಶನ್‌ ಕನ್ನಡದ ಹುಡುಗಿಗೊಂದು ಒಳ್ಳೆಯ ಅವಕಾಶ ಸಿಕ್ಕಿತು ಎಂದು ಖುಷಿಪಟ್ಟಿದ್ದರು. ಅಂದವಾದ ಮುಖ, ಎತ್ತರದ ನಿಲುವು ಎಲ್ಲ ತರಹದ ಉಡುಗೆ ತೊಡುಗೆಗೆ ಸೂಟ್‌ ಆಗುವಂಥ ಗ್ಲಾಮರಸ್‌ ಲುಕ್ಸ್. ಇವೆಲ್ಲದರ ಜೊತೆಗೆ ರಚಿತಾಳಿಗಿದ್ದ ಆಕರ್ಷಕ ಡಿಂಪಲ್ ಕೆನ್ನೆಗಳು.

ಹಾಗಾಗಿ ಡಿಂಪಲ್ ಬ್ಯೂಟಿಯೊಬ್ಬಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹಾಗಾಗಿತ್ತು.`ಬುಲ್ ‌ಬುಲ್‌` ಚಿತ್ರ ಸೂಪರ್‌ ಹಿಟ್ ಆಯಿತು. ತೆರೆ ಮೇಲೆ ದರ್ಶನ್‌ ಜೊತೆ ಮಿಂಚಿದ ರಚಿತಾ ಯಾವುದೇ ಆಮದು ಬ್ಯೂಟಿಗಿಂತ ಕಡಿಮೆ ಇರಲಿಲ್ಲ. ಪ್ರೇಕ್ಷಕರಿಗೂ ರಚಿತಾ ಹಿಡಿಸಿದಳು. ಅಷ್ಟೇ ಅಲ್ಲ… ಲಕ್ಕಿ ಲೇಡಿ ಎಂದು ಸಾಬೀತಾದಳು. ದರ್ಶನ್‌ ಜೋಡಿಯಾಗಿ ಆಗಷ್ಟೇ `ಸಾರಥಿ’ಯಲ್ಲಿ ದೀಪಾ ಸನ್ನಿಧಿ ನಟಿಸಿದ್ದಳು. ದೀಪಾ ಕೂಡ ಕನ್ನಡದ ಹುಡುಗಿ, `ಬುಲ್ ‌ಬುಲ್‌’ನಲ್ಲಂತೂ ಕನ್ನಡದ ರಚಿತಾ ಮಿಂಚಿದ್ದಳು. ದರ್ಶನ್‌ಗೆ ಕನ್ನಡದ ಹುಡುಗಿಯರು ಅದೃಷ್ಟ ತಂದುಕೊಟ್ಟರು. ಹಾಗೆಯೇ ಅವರುಗಳಿಗೂ ದರ್ಶನ್‌ನಂಥ ಜನಪ್ರಿಯ ನಾಯಕನ ಜೊತೆ ನಟಿಸಿ ಯಶಸ್ಸಿನೆತ್ತರಕ್ಕೆ ಏರುವಂತಾಯ್ತು. ಈಗ ರಚಿತಾ ಕನ್ನಡದಲ್ಲಿನ ಬೇಡಿಕೆಯ ತಾರೆ. ಹಾಗಂತ ಸಿಕ್ಕಿದ್ದನ್ನೆಲ್ಲ ಒಪ್ಪಿಕೊಳ್ಳುತ್ತಿಲ್ಲ. `ದಿಲ್ ರಂಗೀಲಾ `ಚಿತ್ರದಲ್ಲಿ ಗಣೇಶನ ಜೊತೆ ನಟಿಸಿದ್ದಾಳೆ. ಚಿತ್ರ ಬಿಡುಗಡೆಯಾಗಿದೆ. ಚಿತ್ರದ ಹಾಡುಗಳು ಜನಪ್ರಿಯಾಗಿವೆ. ರಚಿತಾ ಪ್ರತಿಯೊಂದು ಫ್ರೇಮ್ನಲ್ಲೂ ಆಕರ್ಷಕವಾಗಿ ಕಾಣುತ್ತಾಳೆ.

IMG-3167 (2)

`ದಿಲ್ ‌ರಂಗೀಲಾ’ ಚಿತ್ರದಲ್ಲಿ ಬಿಕಿನಿ ಧರಿಸಿ ಮಿಂಚಿರುವ ರಚಿತಾ ಈ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾಳೆ. ನಾನು ಯಾರಿಗೇನೂ ಕಡಿಮೆ ಇಲ್ಲ ಎಂಬಂತೆ ಎಂಥದ್ದೇ ಪಾತ್ರ ಕೊಟ್ಟರೂ ನಿರ್ವಹಿಸುತ್ತೇನೆ, ಅಷ್ಟೇ ಗ್ಲಾಮರಸ್ಸಾಗಿಯೂ ಕಾಣುತ್ತೇನೆ ಎಂಬಂತಿರುವ ರಚಿತಾಳ ತಾರಾವೃತ್ತಿ ದಿನೇ ದಿನೇ ಏಳಿಗೆ ಕಾಣುತ್ತಲಿದೆ. ದರ್ಶನ್‌ ಅಭಿನಯದ `ಅಂಬರೀಷ’ ಚಿತ್ರ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಮಹೇಂದ್ರ ಸುಖಧರೆ ನಿರ್ದೇಶನದ ಭಾರಿ ವೆಚ್ಚದ ಈ ಚಿತ್ರಕ್ಕೆ ಇಬ್ಬರು ನಾಯಕಿಯರಿದ್ದು ಪ್ರಿಯಾಮಣಿ, ನಿಶಾ ಯೋಗೀಶ್ವರ್‌ ಎಂದು ಫಿಕ್ಸ್ ಆಗಿತ್ತು. ಆದರೆ ನಿಶಾ ಯೋಗೀಶ್ವರ್‌ ಕಾರಣಾಂತರದಿಂದ ಚಿತ್ರದಿಂದ ಹೊರಬರುವಂತಾಯ್ತು. ಈಗ ನಿಶಾ ಸ್ಥಾನಕ್ಕೆ ರಚಿತಾಳನ್ನು ತೆಗೆದುಕೊಳ್ಳಲಾಗಿದೆ. ಇದು ದರ್ಶನ್‌ ಜೊತೆಯಲ್ಲಿ ರಚಿತಾಳ ಎರಡನೇ ಚಿತ್ರ.

ಕನ್ನಡದ ಎಲ್ಲ ಜನಪ್ರಿಯ ನಾಯಕರೊಂದಿಗೆ ನಟಿಸುವ ಆಸೆ ಇಟ್ಟುಕೊಂಡಿರು ರಚಿತಾ ನಿಜಕ್ಕೂ ಅದೃಷ್ಟವಂತೆ ಎನ್ನಬಹುದು. ಕನ್ನಡ ಹುಡುಗಿಯೊಬ್ಬಳು ಕನ್ನಡದ ಚಿತ್ರರಂಗದಲ್ಲಿ ಜನಪ್ರಿಯವಾಗಿ ಯಶಸ್ಸು ಕಂಡಾಗ ಎಲ್ಲರಿಗೂ ಸಂತೋಷವೇ! ರಮ್ಯಾ, ರಕ್ಷಿತಾ, ರಾಧಿಕಾ ನಂತರ ರಚಿತಾ ಕೂಡಾ ಅದೇ ಹಾದಿಯಲ್ಲಿ ಸಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಯಶಸ್ಸಿನ ಗುಂಗಿನಲ್ಲಿ ಒಳ್ಳೆಯ ಪಾತ್ರಗಳತ್ತ ಗಮನಹರಿಸುವುದನ್ನು ಮರೆಯಬಾರದು. ರಚಿತಾ ಒಳ್ಳೆ ಕಲಾವಿದೆಯಾಗಿ ಉಳಿಯಲಿ, ಉನ್ನತ ಪಾತ್ರಗಳಿಂದ ಬೆಳಗಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.

– ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ