ಬಟಾಣಿ ಟಿಕ್ಕಿ
ಸಾಮಗ್ರಿ : 1 ಕಪ್ ಬೆಂದ ಹಸಿ ಬಟಾಣಿ, 4 ಮಧ್ಯಮ ಗಾತ್ರದ ಬೇಯಿಸಿ ಮಸೆದ ಆಲೂ, 1 ಕಪ್ ಮೈದಾ, ಸಣ್ಣಗೆ ಹೆಚ್ಚಿದ 1 ಈರುಳ್ಳಿ, ತುಸು ಬೆಳ್ಳುಳ್ಳಿ ಎಸಳು, ಹಸಿ ಶುಂಠಿ, ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಚಾಟ್ ಮಸಾಲ, ನಿಂಬೆರಸ, ಅರ್ಧ ಸೌಟು ಎಣ್ಣೆ, ಸಾಸುವೆ, ಜೀರಿಗೆ.
ವಿಧಾನ : ಒಂದು ಬೇಸನ್ನಿಗೆ ಮಸೆದ ಆಲೂ, ಮೈದಾ, ಚಿಟಕಿ ಉಪ್ಪು ಖಾರ ಸೇರಿಸಿ ಪೂರಿ ಹಿಟ್ಟಿನಂತೆ ಮೃದುವಾಗಿ ಕಲಸಿ ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಒಂದೊಂದಾಗಿ ಹೆಚ್ಚಿದ ಪದಾರ್ಥ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕಬೇಕು. ಆಮೇಲೆ ಬೆಂದ ಬಟಾಣಿ ಸೇರಿಸಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಕೆಳಗಿಳಿಸಿ. ಅಗತ್ಯ ಎನಿಸಿದರೆ ನಿಂಬೆಹಣ್ಣು ಹಿಂಡಿಕೊಳ್ಳಿ. ನೆನೆದ ಮೈದಾ ಮಿಶ್ರಣಕ್ಕೆ ತುಸು ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿ ಮಾಡಿ ಲಟ್ಟಿಸಿಕೊಂಡು, ನಡುವೆ 1-2 ಚಮಚ ಬಟಾಣಿ ಹೂರಣ ತುಂಬಿಸಿ, ಎಲ್ಲಾ ಕಡೆಯಿಂದ ಕ್ಲೋಸ್ ಮಾಡಿ, ಅಳ್ಳಕವಾದ ಬಾಣಲೆಯಲ್ಲಿ ಧಾರಾಳ ಎಣ್ಣೆ ಬಿಟ್ಟು ಶ್ಯಾಲೋ ಫ್ರೈ ಮಾಡಿ. ಇದನ್ನು ಮಂದ ಉರಿಯಲ್ಲಿ ತಿರುವಿ ಹಾಕುತ್ತಾ, ಎರಡೂ ಬದಿ ಬೇಯಿಸಿ. ಹೊಂಬಣ್ಣ ಬಂದ ನಂತರ ಹೊರತೆಗೆದು, ಚಿತ್ರದಲ್ಲಿರುವಂತೆ ಪುದೀನಾ ಚಟ್ನಿ, ಹುಳಿ ಸಿಹಿ ಚಟ್ನಿ, ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಟೇಸ್ಟಿ ಕ್ಯಾಪ್ಸಿಕಂ ಲಾಲಿಪಾಪ್
ಸಾಮಗ್ರಿ : 1 ಕಪ್ ರವೆ, ಅರ್ಧ ಕಪ್ ಮೈದಾ, ಒಂದಿಷ್ಟು ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ಅರ್ಧ ಕಪ್ ಬೇಯಿಸಿ ಮಸೆದ ಆಲೂ, ಹೆಚ್ಚಿದ 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಕರಿಯಲು ಎಣ್ಣೆ, ಒಂದಿಷ್ಟು ಐಸ್ ಕ್ರೀಂ ಕಡ್ಡಿ.
ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಹಾಕಿ ಪಕೋಡ ಮಿಶ್ರಣದ ಹದಕ್ಕೆ ಕಲಸಿಡಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಹಿಡಿದು, ತುಸು ಚಪ್ಪಟೆ ಮಾಡಿ, ಚಿತ್ರದಲ್ಲಿರುವಂತೆ ಐಸ್ ಕ್ರೀಂ ಕಡ್ಡಿ ಸಿಗಿಸಿಡಿ. ಲಾಲಿಪಾಪ್ ನಂತಾದ ಇವನ್ನು ಕಾದ ಎಣ್ಣೆಯಲ್ಲಿ (ಮಂದ ಉರಿ ಇರಲಿ) ಹೊಂಬಣ್ಣ ಬರುವಂತೆ ಕರಿದು, ಪುದೀನಾ ಚಟ್ನಿ, ಸಲಾಡ್ ಜೊತೆ ಬಿಸಿಯಾಗಿ ಸವಿಯಲು ಕೊಡಿ. ಜೊತೆಗೆ ಹಬೆಯಾಡುವ ಕಾಫಿ, ಟೀ ಇರಲಿ.

ಮಸಾಲ ರೈಸ್ ಡೋನಟ್
ಸಾಮಗ್ರಿ : 2 ಕಪ್ ಅನ್ನ, ಅರ್ಧ ಕಪ್ ಕಾರ್ನ್ ಫ್ಲೋರ್, ಬೇಯಿಸಿ ಮಸೆದ 2 ಆಲೂ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿ ಶುಂಠಿ, ಪುದೀನಾ, ಕೊ.ಸೊಪ್ಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್ ಮಸಾಲ, ಗರಂಮಸಾಲ, ಟೊಮೇಟೊ ಸಾಸ್, ಬೇರೆಯಾಗಿ ನೆನೆಸಿ ಬೇಯಿಸಿದ ಕಡಲೆಕಾಳು, ಆಲೂ ತುಂಡು, ಕರಿಯಲು ಎಣ್ಣೆ.





