ಮನೆಯ ನೆಲ, ಗೋಡೆಗಳು, ಸೆರಾಮಿಕ್ ಟೈಲ್ಸ್ ಫ್ಲೋರ್ಸ್, ಮೆಟ್ಟಿಲು ಹಾಗೂ ಅದರ ರೇಲಿಂಗ್, ಫರ್ನೀಚರ್ ಇತ್ಯಾದಿಗಳ ಮೇಲೆ ತಿಳಿದೋ ತಿಳಿಯದೆಯೋ ಕಲೆ ಗುರುತುಗಳಾಗಿಬಿಡುತ್ತವೆ. ಹೀಗಾದಾಗ ಮನೆಯ ಅಂದ, ಆರೋಗ್ಯ ಕೆಟ್ಟಿತೆಂದು ಪರಿತಪಿಸುವ ಬದಲು ಮನೆಯಲ್ಲೇ ಸಿಗುವ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಪ್ರಾಡಕ್ಟ್ಸ್ ಬಳಸಿ ಇವನ್ನು ಶುಚಿ ಮಾಡಬಹುದು. ಮನೆಯ ಯಾವ ಮೂಲೆಯಲ್ಲೇ ಆಗಲಿ ತಗುಲಿರುವ ಈ ಕಲೆಗಳನ್ನು ಸುಲಭವಾಗಿ ತೊಲಗಿಸಲು ಈ ಸಲಹೆಗಳನ್ನು ಅನುಸರಿಸಿ.
ನಿಮ್ಮ ಮನೆಯಲ್ಲಿ ಸೆರಾಮಿಕ್ ಫ್ಲೋರ್ ಇದ್ದು, ಅದರ ಮೇಲೆ ಕಲೆಗಳಾಗಿದೆಯೇ? ಆಗ ಸ್ಪಂಜ್ ಮೇಲೆ ಬೇಕಿಂಗ್ ಸೋಡ ಉದುರಿಸಿ, ಕಲೆ ಆಗಿರುವ ಭಾಗ ತುಸು ಒದ್ದೆ ಮಾಡಿಕೊಂಡು ಇದರಿಂದ ಲಘುವಾಗಿ ಉಜ್ಜಬೇಕು. ನಿಧಾನವಾಗಿ ಉಜ್ಜುತ್ತಿದ್ದಂತೆ ಈ ಕಲೆ ಬಿಡುತ್ತದೆ. ಇದೇ ತರಹ ಸೋಡಿಯಂ ಬೈಕಾರ್ಬೋನೇಟ್ ಬಳಸಿ ಕಲೆಗಳನ್ನು ನಿವಾರಿಸುವುದು ಮಾತ್ರವಲ್ಲದೆ, ಆ ಜಾಗ ಫಳಫಳ ಹೊಳೆಯುವಂತೆಯೂ ಮಾಡಬಹುದು.
ಹೊಳಪು ಸದಾ ಇರಲಿ
ಗೋಡೆಗಳು ಹಾಗೂ ಮೆಟ್ಟಿಲಿನ ರೇಲಿಂಗ್‌ನ ಹೊಳಪು ಮಾಸದೆ ಪ್ರಕಾಶಿಸುತ್ತಿರಬೇಕೆಂದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಮಿಸ್ಟರ್ ಕ್ಲೀನ್ ಮ್ಯಾಜಿಕ್ ಇರೇಸರ್‌ನ್ನು ನೀರಿನಿಂದ ಒದ್ದೆ ಮಾಡಿ, ಕಲೆಗಳಿರುವ ಜಾಗದಲ್ಲಿ ನಿಧಾನವಾಗಿ ಗೋಲಾಕಾರವಾಗಿ ಉಜ್ಜಬೇಕು. ಆಗ ಆ ಕಲೆಗಳು ಮಾಯವಾಗುತ್ತವೆ. ಅದು ಹಠಮಾರಿ ಕಲೆಯಾಗಿ ಹಾಗೇ ಉಳಿದಿದ್ದರೆ, ಆ ಜಾಗವನ್ನು ಒಣಗಲು ಬಿಟ್ಟು ಇದನ್ನು ರಿಪೀಟ್ ಮಾಡಿ. ಆಗ ಕಲೆಗಳು ದೂರವಾಗುತ್ತವೆ.
ಇವತ್ತಿಗೂ ಸಹ ಎಷ್ಟೋ ಹಳೆಯ ಬಂಗಲೆಗಳು, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಲಿನೋಲಿಯಮ್ ನೆಲ ಕಂಡುಬರುತ್ತದೆ. ಅಕಸ್ಮಾತ್ ಇಂಥ ನೆಲದ ಮೇಲೆ ಕಿಗಳಾದರೆ, ಯಾವುದೇ ಟೂತ್ ಪೇಸ್ಟ್ ನ್ನು ಹಳೆಯ ಬಟ್ಟೆಗೆ ಹಾಕಿ ಅದರ ಮೇಲೆ ತಿಕ್ಕುವುದರಿಂದ, ಅದು ಸುಲಭವಾಗಿ ಬಿಟ್ಟುಹೋಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಮೈಕ್ರೋಫೈಬರ್ ಬಟ್ಟೆಯಿಂದ ಫರ್ನೀಚರ್‌ಗೆ ತಗುಲಿರುವ ಕಲೆಯನ್ನು ಮೃದುವಾಗಿ ಒರೆಸಿದರೆ ಆ ಕಲೆ ಹೋಗುತ್ತದೆ, ಆದರೆ ಅದರಿಂದ ಜೋರಾಗಿ ತಿಕ್ಕಬೇಡಿ.
ಎಷ್ಟೋ ಸಲ ನಮ್ಮ ಬಿಡುವಿಲ್ಲದ ಕೆಲಸಗಳ ಕಾರಣ ದಿನೇದಿನೇ ಮನೆಯ ಶುಚಿತ್ವದ ಕೆಲಸ ಮಾಡಲಾಗದು. ಆಗ ರಜಾದಿನಗಳಲ್ಲಿ ಆ ಕೆಲಸ ಮಾಡುವುದು ಲೇಸು. ಇದನ್ನೇ ಡೀಪ್ ಕ್ಲೀನಿಂಗ್ ಎನ್ನುತ್ತಾರೆ. ಇದೇ ತರಹ ಐಟಿ, ಬಿಟಿ, ಎಂಎನ್‌ಸಿಗಳಲ್ಲಿ ಕೆಲಸ ಮಾಡುವ ದಂಪತಿಗಳಿಗೆ ವೀಕೆಂಡ್ ಅಥವಾ ಹಾಲಿಡೇ ಕ್ಲೀನಿಂಗ್ ಹೆಚ್ಚು ಹಿತ ಎನಿಸುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ಲೀನಿಂಗ್ ಏಜೆಂಟ್ಸ್ ಜೊತೆ ಬೇಕಿಂಗ್ ಸೋಡ ಬೆರೆಸಿ ಕೆಲಸ ಪೂರೈಸಬಹುದು. ಬಾತ್ ರೂಮ್ ಟೈಲ್ಸ್, ಗೋಡೆಗಳು, ಲ್ಯಾಂಡ್ರಿ ರೂಮ್, ಲಿವಿಂಗ್ ರೂಮ್ ಇತ್ಯಾದಿಗಳಿಗೆ ತಗುಲಿರುವ ಕಲೆಯನ್ನು ಸುಲಭವಾಗಿ ತೊಲಗಿಸಲು ಬೇಕಿಂಗ್ ಸೋಡ ಅತ್ಯಗತ್ಯ. ಇದರ ಜೊತೆಗೆ ಟೈಲ್ಸ್ ನೆಲದ ಮೇಲೆ ತುಸು ಬೇಕಿಂಗ್ ಸೋಡ ಉದುರಿಸಿ, ನಂತರ ವ್ಯಾಕ್ಯೂಮ್ ಕ್ಲೀನ್ ಮಾಡಿದರೆ, ತಕ್ಷಣ ನೆಲ 100% ಶುಚಿಗೊಳ್ಳುತ್ತದೆ ಹಾಗೂ ದುರ್ವಾಸನೆಯೂ ತೊಲಗುತ್ತದೆ.
ಬೆಡ್ ರೂಮಿನಲ್ಲಿ ತಾಜಾತನ
ಇದೇ ತರಹ ಬೆಡ್ ರೂಮಿನಲ್ಲಿ ತಾಜಾತನ ತರಲು, ಕಂಬಳಿ ಮೇಲೆ ತುಸು ಬೇಕಿಂಗ್ ಸೋಡ ಉದುರಿಸಿ. ಆಮೇಲೆ ಅದನ್ನು ಜೋರಾಗಿ ಒದರಿದರೆ, ಅದರಲ್ಲಿನ ದುರ್ವಾಸನೆ ಹೋಗುತ್ತದೆ.
ಫ್ರಿಜ್ ನಲ್ಲಿರಿಸಿರುವ ವಸ್ತುಗಳು ಬಹುಕಾಲ ತಾಜಾ ಆಗಿರಲು, ಒಂದು ಸಣ್ಣ ಡಬ್ಬಿಯಲ್ಲಿ ಬೇಕಿಂಗ್ ಸೋಡ ಹಾಕಿಟ್ಟು ಅದನ್ನು ಫ್ರಿಜ್‌ನಲ್ಲಿ ಇರಿಸಿಬಿಡಿ. ಆಗ ಫ್ರಿಜ್‌ನ ಎಲ್ಲಾ ವಸ್ತುಗಳೂ ತಾಜಾ ಆಗಿರುತ್ತವೆ. ಇದೇ ತರಹ ಕುಕಿಂಗ್ ರೇಂಜ್, ಮೈಕ್ರೋವೇವ್, ಓವನ್, ಚಿಮಣಿ ಇತ್ಯಾದಿಗಳ ಮೇಲೂ ಬೇಕಿಂಗ್ ಸೋಡ ಕರಗಿದ ನೀರಲ್ಲಿ ತೆಳು ಬಟ್ಟೆ ಅದ್ದಿ ಒರೆಸಿದರೆ ಅದರ ಕೊಳಕನ್ನು ದೂರ ಮಾಡಬಹುದು. ಅದೇ ತರಹ ಸಿಂಕ್, ವಾಶ್ ಬೇಸಿನ್‌ಗೆ ಸಹ ಇದನ್ನು ಬಳಸಿ ಶುಚಿಗೊಳಿಸಿದರೆ ಅದು ಚೆನ್ನಾಗಿ ಹೊಳೆಯುತ್ತದೆ. ಇದೇ ತರಹ ಡಸ್ಟ್ ಬಿನ್‌ಗಳಿಗೂ ಈ ವಿಧಾನ ಅನುಸರಿಸಿದರೆ, ಅದು ದುರ್ಗಂಧ ಬೀರದು, ಹೊಳಪು ಕೂಡ ಹೆಚ್ಚುತ್ತದೆ.
– ಕೆ. ಅಮೃತಾ