ಉಳಿತಾಯದ ಮಹತ್ವವನ್ನು ತಿಳಿದುಕೊಂಡ ಬಳಿಕ ಸರಿಯಾದ ದಿಸೆಯಲ್ಲಿ ಸಾಗುವುದರ ಮೂಲಕ ಆ ಕೆಲಸವನ್ನು ಮಾಡುತ್ತಾ ಇರಬೇಕು. ಒಂದು ವೇಳೆ ನಿಮ್ಮ ಮಗು ಬಾಲ್ಯದಿಂದಲೇ ಉಳಿತಾಯದ ಮಹತ್ವವನ್ನು ತಿಳಿದುಕೊಂಡರೆ, ಅದು ತನ್ನ ಜೀವನದಲ್ಲಿ ಬರುವ ಸಮಸ್ಯೆಯನ್ನು ಸುಲಭವಾಗಿ ಎದುರಿಸಬಲ್ಲದು. ಯಾವ ತಾಯಿ ತಂದೆಯರು ತಮ್ಮ ಮಕ್ಕಳಿಗೆ ಉಳಿತಾಯದ ಅಭ್ಯಾಸ ರೂಢಿಸುತ್ತಾರೊ, ಅವರು ತಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸುತ್ತಾರೆ. ಉಳಿತಾಯದ ಮಹತ್ವವನ್ನು ತಿಳಿದುಕೊಂಡ ಬಳಿಕ ಅವರಿಗೆ ಹಣದ ಮಹತ್ವ ಅರಿವಿಗೆ ಬರುತ್ತದೆ. ಆಗ ಅವರಲ್ಲಿ ಖರ್ಚಿನ ಬಗ್ಗೆ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ನೀವು ಕೂಡ ಈಗಿನಿಂದಲೇ ನಿಮ್ಮ ಮಕ್ಕಳಿಗೆ ಅದರ ಬಗ್ಗೆ ಶಿಕ್ಷಣ ನೀಡುತ್ತಾ ಹೋಗಿ.
ಹಣದ ಮೌಲ್ಯ ತಿಳಿಸಿ : ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಮಕ್ಕಳಿಗೆ ಹಣದ ಮೌಲ್ಯದ ಬಗ್ಗೆ ತಿಳಿಸಿ ಹೇಳಿ, ಹಣ ಗಳಿಸಲು ನೀವು ದಿನವಿಡೀ ಅದೆಷ್ಟು ಕಷ್ಟಪಡುತ್ತೀರಿ ಎಂಬುದನ್ನು ಅವರಿಗೆ ಮನವರಿಕೆ ಮಾಡಿ ಕೊಡಿ. ನೀವು ಯಾವುದಕ್ಕೆ ಬೇಡಿಕೆ ಸಲ್ಲಿಸುತ್ತೀರೊ, ಅದಕ್ಕಾಗಿ ಎಷ್ಟು ಗಂಟೆ ಶ್ರಮಿಸಬೇಕಾಗುತ್ತದೆ ಎಂಬುದರ ಬಗ್ಗೆ ತಿಳಿಸಿ.
ಪ್ರತಿಯೊಂದು ಬೇಡಿಕೆ ಪೂರೈಸಬೇಡಿ : ಪ್ರತಿಯೊಬ್ಬ ತಾಯಿ ತಂದೆ ತಮ್ಮ ಮಕ್ಕಳನ್ನು ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತಾರೆ. ಅವರ ಪ್ರತಿಯೊಂದು ಬೇಡಿಕೆಯನ್ನೂ ಈಡೇರಿಸಲು ಪ್ರಯತ್ನಿಸುತ್ತಾರೆ. ನಿಮ್ಮ ಮಗು ಶಿಸ್ತುಪಾಲನೆ ಮಾಡಬೇಕು, ಕಷ್ಟಪಟ್ಟು ದುಡಿದ ಹಣದ ಮೌಲ್ಯ ಮಕ್ಕಳಿಗೆ ಗೊತ್ತಾಗಬೇಕು ಎಂದರೆ, ಅವರ ದೊಡ್ಡ ಬೇಡಿಕೆ ಅಥವಾ ಚಿಕ್ಕಪುಟ್ಟ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವುದು ಅವರ ಭವಿಷ್ಯಕ್ಕೆ ಒಳ್ಳೆಯದಲ್ಲ. ನೀವು ಹಾಗೆ ಮಾಡುವವರಾಗಿದ್ದರೆ, ನಿಮ್ಮ ಈ ಅಭ್ಯಾಸವನ್ನು ಬದಲಿಸಿಕೊಳ್ಳುವ ಅಗತ್ಯ ಇದೆ. ಇಲ್ಲದಿದ್ದರೆ ನಿಮ್ಮ ಮಕ್ಕಳು ಹಠಮಾರಿ ಸ್ವಭಾವದವರು, ಶಿಸ್ತು ಪಾಲಿಸದವರು ಆಗಬಹುದು. ನೀವು ಮೊದಲಿನಿಂದಲೇ ಮಕ್ಕಳಿಗೆ ಅಗತ್ಯ ಹಾಗೂ ವೈಭವೀ ಜೀವನದ ವ್ಯತ್ಯಾಸವನ್ನು ತಿಳಿಸಿಕೊಡಿ. ಯಾವುದನ್ನು ಖರೀದಿಸಬಹುದು, ಖರೀದಿಸದೇ ಇರಬಹುದು, ಏನನ್ನು ತಿನ್ನುವುದು ಅವಶ್ಯಕ ಈ ಎಲ್ಲ ಸಂಗತಿಗಳನ್ನು ಮಕ್ಕಳಿಗೆ ತಿಳಿಸುವುದು ಅತ್ಯವಶ್ಯಕ.
ಮಕ್ಕಳಿಗೆ ಪಿಗ್ಗಿ ಬ್ಯಾಂಕ್ : ನಿಮ್ಮ ಮನೆಗೆ ಬರುವ ಅತಿಥಿಗಳು ನಿಮ್ಮ ಮಗುವಿನ ಕೈಗೆ ಒಂದಿಷ್ಟು ಹಣ ಕೊಟ್ಟು ಹೋಗುತ್ತಾರೆ. ಅಜ್ಜಿ, ತಾತಾ, ಚಿಕ್ಕಪ್ಪ, ಮಾಮ ಇವರಿಂದಲೂ ಕೂಡ ಮಕ್ಕಳಿಗೆ ಹಣ ಸಿಗುತ್ತಲೇ ಇರುತ್ತದೆ. ನೀವು ಅವರಿಗೆ ಪಾಕೆಟ್ ಮನಿ ಎಂದು ಒಂದಿಷ್ಟು ಮೊತ್ತ ಕೊಡುತ್ತೀರಿ. ನಿಮ್ಮ ಮಗು ಈ ಹಣವನ್ನು ಉಳಿತಾಯ ಮಾಡುತ್ತದೊ ಅಥವಾ ಖರ್ಚು ಮಾಡುತ್ತದೋ? ಒಂದು ವೇಳೆ ನಿಮ್ಮ ಮಗು ಆ ಹಣವನ್ನು ಉಳಿಸುತ್ತಿದ್ದರೆ ನಿಶ್ಚಿಂತರಾಗಿರಿ. ಒಂದು ವೇಳೆ ನಿಮ್ಮ ಮಗು ಆ ಎಲ್ಲ ಹಣವನ್ನು ತನ್ನ ಮೆಚ್ಚಿನ ವಸ್ತುಗಳ ಖರೀದಿಗೆ, ಬಾಹ್ಯ ತಿಂಡಿಗಳ ರುಚಿಗೆ ಖರ್ಚು ಮಾಡುತ್ತಿದ್ದರೆ, ಇದು ಮುಂಬರುವ ದಿನಗಳಲ್ಲಿ ಆ ಮಗುವಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಮಗು ಹಣ ಉಳಿತಾಯ ಮಾಡಬೇಕೆಂದು ನೀವು ಬಯಸುವಿರಾದರೆ, ಹಣದ ಸದ್ಬಳಕೆಯ ಬಗ್ಗೆ ಕಲಿಸಿಕೊಡಿ. ಒಂದಿಷ್ಟು ಖರ್ಚು ಮಾಡು, ಒಂದಿಷ್ಟು ಉಳಿಸುವ ಎಂದು ತಿಳಿಸಿ. ಮಗುವನ್ನು ಉಳಿತಾಯದತ್ತ ಆಕರ್ಷಿಸಲು ಅದಕ್ಕೆ ಕಾರ್ಟೂನ್ ಕ್ಯಾರೆಕ್ಟರ್ ಇವರು ಪಿಗ್ಗಿ ಬ್ಯಾಂಕ್ ತಂದುಕೊಡಿ. ಅದರಲ್ಲಿ ಹಣ ಹಾಕುವುದರಿಂದ ಮಗುವಿಗೆ ಉಳಿತಾಯದ ಅಭ್ಯಾಸ ರೂಢಿಯಾಗುತ್ತದೆ.
ಉಳಿತಾಯ ಖಾತೆ ತೆರೆಯಿರಿ : ಮಗುವಿಗೆ ಉಳಿತಾಯದ ಅಭ್ಯಾಸ ರೂಢಿಸಿಕೊಳ್ಳುವುದರ ಲಾಭಗಳ ಬಗ್ಗೆ ಮನವರಿಕೆ ಮಾಡಿ ಕೊಡಿ. ಪ್ರತಿ ತಿಂಗಳು ಉಳಿಸಿದ ಹಣದಿಂದ ಹೇಗೆ ಹಂಚಿಕೆ ಮಾಡಬೇಕು ಎನ್ನುವುದನ್ನು ತಿಳಿಸಿ ಕೊಡಲು ನಿಮ್ಮೊಂದಿಗೆ ಮಗುವನ್ನು ಸಹ ಬ್ಯಾಂಕಿಗೆ ಕರೆದುಕೊಂಡು ಹೋಗಿ. ಮಗುವಿನ ಹೆಸರಿನಲ್ಲಿ ಒಂದು ಖಾತೆ ತೆರೆಯಿರಿ. ಅವರ ಇಂದಿನ ಚಿಕ್ಕಪುಟ್ಟ ಉಳಿತಾಯವೇ ಮುಂದೆ ಅವರ ಅವಶ್ಯಕತೆಯನ್ನು ಈಡೇರಿಸುತ್ತದೆ.
ವ್ಯರ್ಥ ಮಾಡುವುದರ ಬಗ್ಗೆ ತಿಳಿಹೇಳಿ : ಬಹಳಷ್ಟು ಮಕ್ಕಳು ಪೆನ್ಸಿಲ್, ಪೇಪರ್, ರಬ್ಬರ್ ಅಥವಾ ಬೇರೆ ಕೆಲವು ವಸ್ತುಗಳನ್ನು ಹಾಳು ಮಾಡುತ್ತಿರುತ್ತಾರೆ. ಪೆನ್ಸಿಲ್ ಗಾತ್ರ ಸ್ವಲ್ಪ ಕಿರಿದಾಗಿಬಿಟ್ಟರೆ ಅದನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ನೋಟ್ ಬುಕ್ನ ಅದೆಷ್ಟೋ ಹಾಳೆಗಳನ್ನು ಹಾಗೆಯೇ ಬಿಟ್ಟಿರುತ್ತಾರೆ. ನೀವು ಹಾಳು ಮಾಡುವ ಕಾಗದ ಅನೇಕ ಮರಗಳನ್ನು ಕತ್ತರಿಸುವಂತೆ ಮಾಡುತ್ತದೆ ಎನ್ನುವುದನ್ನು ಅವರಿಗೆ ತಿಳಿಸಿಹೇಳಿ. ಈ ರೀತಿಯ ಕಥೆ ಹಾಗೂ ವಾಸ್ತವ ಸಂಗತಿಗಳ ಮೂಲಕ ಅವರಿಗೆ ವಸ್ತುಗಳನ್ನು ವ್ಯರ್ಥಗೊಳಿಸದಿರುವಂತೆ ದೂರ ಇರಿಸಿ.
ದುಂದುವೆಚ್ಚದ ಬಗ್ಗೆ ತಿಳಿಸಿ : ನಿಮ್ಮ ಮಗುವಿಗೆ ಬಿಸ್ಕತ್ತು, ಚಾಕ್ಲೆಟ್, ಕೂಲ್ ಡ್ರಿಂಕ್ಸ್, ಪಿಜ್ಜಾ, ಬರ್ಗರ್ ಮುಂತಾದವುಗಳ ಬದಲು ಆಟಿಕೆಗಳನ್ನು ಖರೀದಿಸಲಿ. ಸಾಕಷ್ಟು ಹಣ ವ್ಯರ್ಥ ಮಾಡುವುದರಿಂದ ನಿಮ್ಮ ಬಜೆಟ್ ಬಿಗಡಾಯಿಸುತ್ತದೆ. ಫಾಸ್ಟ್ ಫುಡ್ಗಳಿಂದ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಅವರ ದೇಹಕ್ಕೆ ಬೊಜ್ಜು ಸೇರುತ್ತದೆ. ಆಲಸ್ಯತನ ಹೆಚ್ಚುತ್ತದೆ. ನಾನು ಏನೇ ಕೇಳಿದರೂ ಮನೆಯವರು ಕೊಡಿಸುತ್ತಾರೆ ಎಂದು ಮಗು ಭಾವಿಸಿರುತ್ತದೆ. ನೀವೆಷ್ಟು ಕಷ್ಟಪಟ್ಟು ಹಣ ಸಂಪಾದಿಸುತ್ತೀರಿ ಎನ್ನುವುದನ್ನು ತಿಳಿಸುವುದರ ಜೊತೆಗೆ ಹಣ ಇಲ್ಲದಿರುವಾಗ ಎಂತಹ ಸ್ಥಿತಿ ಉಂಟಾಗುತ್ತದೆ ಎನ್ನುವುದರ ಬಗ್ಗೆ ಕೂಡ ಮನವರಿಕೆ ಮಾಡಿ ಕೊಡಿ.
ಸ್ಕೂಲ್ ಫೀಸ್ ಕೊಡಲು ಆಗದೇ ಇರಬಹುದು, ಅಜ್ಜಿ ತಾತನಿಗೆ ಔಷಧಿ ತರಲು ಕಷ್ಟವಾಗಬಹುದು. ವಿದ್ಯುತ್ ಬಿಲ್ ಕಟ್ಟಲು ಆಗಲಿಕ್ಕಿಲ್ಲ ಎಂದೆಲ್ಲ ಅವರಿಗೆ ತಿಳಿಸಿ ಹೇಳಿದರೆ ಅವರಿಗೆ ಉಳಿತಾಯದ ಅಭ್ಯಾಸ ರೂಢಿಸಬಹುದು.
ಮನೆಯ ಬಜೆಟ್ಗೆ ಮಕ್ಕಳನ್ನು ಸೇರಿಸಿಕೊಳ್ಳಿ : ನೀವು ನಿಮ್ಮ ಸಂಗಾತಿಯ ಜೊತೆಗೆ ಅಥವಾ ಅಪ್ಪ ಅಮ್ಮನ ಜೊತೆಗೆ ತಿಂಗಳ ಬಜೆಟ್ ರೂಪಿಸುವ ಸಂದರ್ಭದಲ್ಲಿ ಅದರಲ್ಲಿ ಮಕ್ಕಳನ್ನು ಕೂಡ ಸೇರಿಸಿಕೊಳ್ಳಿ. ನಿಮ್ಮ ಚಿಂತೆ, ಹಣದ ಬಿಕ್ಕಟ್ಟು, ಕೊಡಬೇಕಾದ ಸಾಲದ ಬಗ್ಗೆ ವಾಸ್ತವ ಸಂಗತಿ ತಿಳಿದಾಗ, ಮುಂದಿನ ಕೆಲವೇ ತಿಂಗಳಲ್ಲಿ ಮಗು ತನ್ನ ದುಂದುವೆಚ್ಚ ಬಿಟ್ಟುಬಿಡಬಹುದು. ಅದು ತನ್ನ ಪಾಕೆಟ್ ಮನಿಯನ್ನು ಮನೆಯ ಖರ್ಚುಗಳಿಗೆ ಬಳಸಲು ಕೊಡಬಹುದು. ಇದು ಅದರ ಬದಲಾವಣೆಯ ಸಂಕೇತ.
ಉಳಿತಾಯದ ಹಣದಿಂದ ಉಡುಗೊರೆ ಕೊಡಿಸಿ : ಮಗು ಉಳಿತಾಯ ಮಾಡಿದ ಹಣದಿಂದ ಅದರ ಅಗತ್ಯ ವಸ್ತುಗಳನ್ನು ಕೊಡಿಸಬಹುದು. ಅದು ತನಗೆ ಟೇಬಲ್, ಟೇಬಲ್ ಲ್ಯಾಂಪ್ ಅಗತ್ಯವಿದೆಯೆದು ಹೇಳಿದರೆ, ಅದು ಸ್ವಯಂ ಉಳಿತಾಯ ಮಾಡಿದ ಹಣದಿಂದ ಕೊಡಿಸಿದರೆ, ಅದಕ್ಕೆ ಉಳಿತಾಯ ಹಣದ ಮಹತ್ವ ಗೊತ್ತಾಗುತ್ತದೆ. ಹೀಗೆ ಮಾಡುವುದರ ಮೂಲಕ ನೀವು ಅದರ ಉಳಿತಾಯ ಮನೋಭಾವವನ್ನು ಪ್ರೋತ್ಸಾಹಿಸುವಿರಿ. ತನ್ನದೇ ಹಣದಿಂದ ಖರೀದಿಸಿದ ವಸ್ತುವನ್ನು ಅದು ಅಷ್ಟೇ ಜೋಪಾನವಾಗಿ ಕಾಪಾಡಿಕೊಳ್ಳುತ್ತದೆ.
ಮಕ್ಕಳನ್ನು ಕ್ರಿಯಾಶೀಲರಾಗಿಸಿ : ಮನೆಯ ಹಳೆಯ ವಸ್ತುಗಳಿಂದ ಯಾವುದಾದರೂ ಉಪಯುಕ್ತ ವಸ್ತುವನ್ನಾಗಿ ರೂಪಿಸಿ ಮಕ್ಕಳಿಗೆ ತೋರಿಸಿಕೊಡಿ ಹಾಗೂ ಅವರಿಗೆ ಹೀಗೆ ಮಾಡಲು ಪ್ರೇರೇಪಿಸಿ. ಕೂಲ್ ಡ್ರಿಂಕ್ಸ್ ನ ಖಾಲಿ ಬಾಟಲ್ ಗಳಿಂದ ಪೆನ್ ಸ್ಟಾಂಡ್, ಐಸ್ ಕ್ರೀಮ್ ಕಡ್ಡಿಗಳಿಂದ ಲ್ಯಾಂಪ್ ತಯಾರಿಸುವುದು ಮಕ್ಕಳಿಗೆ ಕುತೂಹಲ ಹುಟ್ಟಿಸುತ್ತದೆ. ಹಳೆಯ ವಸ್ತುಗಳನ್ನು ಪುನಃ ಬಳಸಲು ಕಲಿಸಿ. ಪೆನ್ಸಿಲ್ ಹಾಗೂ ಎರೇಸರ್ ಮುಗಿದ ಬಳಿಕವೇ ಹೊಸದನ್ನು ತರಲು ಹೇಳಬೇಕು. ಹೀಗೆ ಮಾಡುವುದರಿಂದ ಅವರಿಗೆ ಬಾಲ್ಯದಿಂದಲೇ ವಸ್ತುಗಳ ಮಹತ್ವ ಅರಿತುಕೊಳ್ಳುವುದು ಸಾಧ್ಯವಾಗುತ್ತದೆ.
ಪಾಕೆಟ್ ಮನಿ ಸಂಪಾದನೆ : ಪ್ರತಿ ತಿಂಗಳು ನೀವು ಮಗುವಿಗೆ ಪಾಕೆಟ್ ಮನಿಗೆಂದು ಒಂದಿಷ್ಟು ಮೊತ್ತ ಕೊಡುವಿರಿ. ಇದರ ಹೊರತಾಗಿಯೂ ಅದಕ್ಕೆ ಪಾಕೆಟ್ ಮನಿಗಾಗಿ ಒಂದಿಷ್ಟು ಗಳಿಕೆ ಮಾಡಲು ಪ್ರೇರೇಪಿಸಿ. ಅದು ಯಾವುದೇ ರೀತಿಯಲ್ಲಾದರೂ ಸಾಧ್ಯವಿದೆ. ಮನೆಯ ಕೆಲವು ಕೆಲಸಗಳನ್ನು ಮುಗಿಸಿದ ಬಳಿಕ ನೀವು ಬಹಮಾನದ ರೂಪದಲ್ಲಿ ಒಂದಿಷ್ಟು ಹಣವನ್ನು ಕೊಡಬಹುದು. ಕೋಣೆಯನ್ನು ಸ್ವಚ್ಛಗೊಳಿಸಿದ ಬಳಿಕ ಅವರಿಗೆ ನಿರ್ದಿಷ್ಟ ಮೊತ್ತ ಪಿಗ್ಗಿ ಬ್ಯಾಂಕಿನಲ್ಲಿ ಹಾಕಲು ಕೊಡಿ. ಯಾವ ಕೆಲಸಕ್ಕೆ ಎಷ್ಟು ಮೊತ್ತ ಎನ್ನುವುದು ಕೆಲಸ ಎಷ್ಟು ಕಠಿಣ ಎನ್ನುವುದರ ಮೇಲೆ ಅಲಂಬಿಸಿರುತ್ತದೆ. ಇದರಿಂದ ಅವರಿಗೆ ಶ್ರಮ ಹಾಗೂ ಹಣದ ಮಹತ್ವ ತಿಳಿಯುತ್ತದೆ.
ಉಳಿತಾಯಕ್ಕೆ ಬಹುಮಾನ : ನಿಮ್ಮ ಮಗು ಯಾವಾಗ ಉಳಿತಾಯದ ಆರ್ಥಿಕ ಗುರಿಯನ್ನು ತಲುಪುತ್ತದೊ, ಆಗ ಅದಕ್ಕೆ ಏನನ್ನಾದರೂ ಬಹುಮಾನದ ರೂಪದಲ್ಲಿ ಕೊಡಲು ಯೋಜಿಸಿ. ಅದರ ಈ ಸಾಧನೆಗೆ ನೀವು ಅದಕ್ಕೆ ಒಂದು ಡ್ರೆಸ್ ಖರೀದಿಸಿ ಕೊಡಿಸಿ ಇಲ್ಲವೇ ಅದು ಉಳಿತಾಯ ಮಾಡಿದ ಹಣಕ್ಕೆ ಸರಿಸಮಾನವಾಗಿ ಹಣ ಸೇರಿಸಿ ಅದರದ್ದೇ ಆದ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಇದರಿಂದ ಅದರ ಉತ್ಸಾಹ ಹೆಚ್ಚುತ್ತದೆ. ಹೆಚ್ಚೆಚ್ಚು ಉಳಿತಾಯ ಮಾಡಲು ಪ್ರೇರಣೆ ದೊರಕುತ್ತದೆ.
– ರಾಗಿಣಿ ರಾಜೇಶ್