“ಶೈಲಜಾ, ನಾಳೆ ನೀನು ಆಫೀಸಿಗೆ ರಜೆ ಹಾಕಬೇಕು. ನಾಳೆ ನಮ್ಮ ಮನೆಯಲ್ಲಿ ಕೀರ್ತನೆಯ ವ್ಯವಸ್ಥೆ ಇಟ್ಟುಕೊಂಡಿದ್ದೇವೆ. ಆ ಮೂಲಕ ನಾವು ದೇವಿಯ ಸ್ಮರಣೆಯಲ್ಲಿ ಕಾಲ ಕಳೆಯೋಣ,” ಎಂದು ಅತ್ತೆ ಹೇಳಿದಾಗ ಶೈಲಜಾ ಒಪ್ಪಿಗೆಯಿಂದ `ಹ್ಞೂಂ…’ ಎಂದಳು.

ಶೈಲಜಾಳಿಗೆ ಹೊಸದಾಗಿ ಮದುವೆಯಾಗಿತ್ತು. ಅತ್ತೆ ಮನೆಯಲ್ಲಿ ಧಾರ್ಮಿಕ ವಾತಾವರಣ ಹೆಚ್ಚಿಗೆ ಇದೆ ಎನ್ನುವುದು ಅವಳಿಗೆ ಮದುವೆಯ ದಿನದಂದೇ ಅರಿವಿಗೆ ಬಂದಿತ್ತು. ಪ್ರತಿಯೊಬ್ಬ ವಿವಾಹಿತ ಮಹಿಳೆ ತನ್ನ ಅತ್ತೆಮನೆಯ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ ಎಂದು ಶೈಲಜಾ ಯೋಚಿಸಿ ಅತ್ತೆಮನೆಯ ಪ್ರತಿಯೊದು ರೀತಿ ರಿವಾಜುಗಳನ್ನು ಕಲಿಯತೊಡಗಿದಳು.

ನಗರದಲ್ಲಿ ಬೆಳೆದಿದ್ದ ಆಧುನಿಕ ಮನೋಭಾವದ ಯುವತಿಯಾಗಿಯೂ ಕೂಡ ಆಕೆ ಒಳ್ಳೆಯ ಸೊಸೆ ಎನಿಸಿಕೊಳ್ಳಲು ತನ್ನ ತಾರ್ಕಿಕ ಯೋಚನೆಯನ್ನು ಮನದಲ್ಲಿಯೇ ಹತ್ತಿಕ್ಕಿದಳು.

ಶಾಸ್ತ್ರದ ಪ್ರಕಾರ, ನಮ್ಮ ಉಸಿರಾಟಕ್ಕೆ ಯಾವುದೇ ಭರವಸೆ ಇಲ್ಲ. ಹೀಗಾಗಿ ಬಾಲ್ಯದಿಂದಲೇ ಭಜನೆ ಕೀರ್ತನೆಯಲ್ಲಿ ಮನಸ್ಸು ತೊಡಗಿಸಬೇಕು. ಇದೇ ಯೋಚನೆಯ ಲಾಭವನ್ನು ಹಸುವಿನ ವೇಷ ತೊಟ್ಟು ತೋಳಗಳಂತಿರುವ ಭ್ರಷ್ಟ ಗುರುಗಳು ಪಡೆದುಕೊಳ್ಳುತ್ತಿದ್ದಾರೆ. ಬಾಲ್ಯದಿಂದಲೇ ಭಜನೆ ಕೀರ್ತನೆಯಲ್ಲಿ ಮನಸ್ಸು ತೊಡಗಿಸಬೇಕೆಂಬ ನಿಯಮವನ್ನು ಪ್ರತಿಯೊಬ್ಬ ಪೋಷಕರು ಅನುಷ್ಠಾನಗೊಳಿಸಲು ಶುರು ಮಾಡಿದರೆ, ಮಕ್ಕಳಿಗೆ ಓದಲು ಸಮಯವಾದರೂ ಎಲ್ಲಿ ಸಿಕ್ಕೀತು? ಆಸಾರಾಮ್ ಹಾಗೂ ರಾಮ ರಹೀಮ್ ರಂತಹ ಗುರುಗಳೇನಾದರೂ ದೊರೆತರೆ ಅದರ ಪರಿಣಾಮ ಏನಾಗಬಹುದು ಎಂಬುದು ಎಲ್ಲರಿಗೂ ಗೊತ್ತೇ ಇದೆ.

ಕೀರ್ತನೆಯ ಹಿಂದಿನ ಮಾನಸಿಕತೆ ಏನಾಗಿದೆಯೆಂದರೆ, ಪುಣ್ಯ ಸಂಪಾದಿಸಬೇಕೆಂದರೆ ಕೀರ್ತನೆ ಸತ್ಸಂಗ ಮಾಡಬೇಕು. ಯಾರು ದೇವರ ಸ್ಮರಣೆ ಮಾಡುವುದಿಲ್ಲವೋ ಅಥವಾ ಇತರರ ಸ್ಮರಣೆಗೆ ಅಡ್ಡಿ ಉಂಟು ಮಾಡುತ್ತಾರೊ ಅವರು ಪಾಪದಲ್ಲಿ ಭಾಗಿಯಾಗುತ್ತಾರೆ.

ಕೀರ್ತನೆ ಏರ್ಪಡಿಸುವುದರ ಎರಡು ಲಾಭಗಳೆಂದರೆ, ತಮ್ಮ ಶ್ರೀಮಂತಿಕೆ ವೈಭವ ತೋರಿಸಿಕೊಳ್ಳುವುದು ಹಾಗೂ ಸಮಾಜದಲ್ಲಿ ತಮ್ಮದೇ ವರ್ಚಸ್ಸು ಕಾಯ್ದುಕೊಳ್ಳುವುದು.

ಕೀರ್ತನೆ ಮತ್ತು ಆಡಂಬರ

ಕೀರ್ತನೆ ಎಂದರೆ ಕೇವಲ ದೇವರಲ್ಲಿ ಮನಸ್ಸು ತೊಡಗಿಸುವುದಲ್ಲ, ಸಮಾಜದಲ್ಲಿ ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸುವ ಒಂದು ವಿಧಾನವಾಗಿದೆ. ಪೂಜೆಯ ಮಂಟಪವನ್ನು ಅದ್ಧೂರಿಯಾಗಿ ಅಲಂಕರಿಸಿ, ವಿದ್ಯುದ್ದೀಪಗಳನ್ನು ಬೆಳಗಿಸಿ ಹೂಗಳಿಂದ ಅಂದವಾಗಿ ಪೇರಿಸಲಾಗುತ್ತದೆ. ಅಲ್ಲಿ ಬರುವ ಮಹಿಳೆಯರಿಗಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವುದು, ಧೂಪ ಶ್ರೀಗಂಧದ ಕಡ್ಡಿಗಳನ್ನು ಗ್ಲಾಸಿನಲ್ಲಿ ಅಲಂಕರಿಸಿ ವಿವಿಧ ಬಗೆಯ ಸಂಗೀತ ಉಪಕರಣಗಳನ್ನು ತರಲಾಗುತ್ತದೆ. ಅಷ್ಟೇ ಅಲ್ಲ, ವ್ರತಸ್ಥರೂ ತಿನ್ನಬಹುದಾದಂತಹ ಪ್ರಸಾದವನ್ನು ವಿತರಿಸಲಾಗುತ್ತದೆ.

ಕೀರ್ತನೆಯ ಬಳಿಕ ಬಹು ಉಪಹಾರದ ವ್ಯವಸ್ಥೆ ಕೂಡ ಇರುತ್ತದೆ. ಕೀರ್ತನೆಯನ್ನು ಆಯೋಜಿಸುವ ಮಹಿಳೆ ಅದೆಷ್ಟು ಶ್ರೀಮಂತರು ಎನ್ನುವುದು ಅವರು ಏರ್ಪಡಿಸುವ ಕೀರ್ತನೆಯ ಮ್ಯಾನೇಜ್‌ಮೆಂಟ್‌ನ್ನು ಅವಲಂಬಿಸಿರುತ್ತದೆ.

ಮೋಕ್ಷದ್ದಲ್ಲ, ಪ್ರಶಂಸೆಯ ದುರಾಸೆ

ಒಂದು ಕಥೆಯ ಪ್ರಕಾರ, ನಾರದ ಮುನಿ ಬ್ರಹ್ಮರ್ಷಿಗಳಿಗೆ ಕೇಳುತ್ತಾರೆ. ನಾನು ಕಲಿಯುಗದ ಭಯಾನಕ ಜಾಲಕ್ಕೆ ಸಿಲುಕದಿರಲು ಏನು ಮಾಡಬೇಕೆಂದು ಕೇಳುತ್ತಾರೆ.

ಆ ಮಾತಿಗೆ ಬ್ರಹ್ಮ ಉತ್ತರಿಸುತ್ತಾರೆ : ಆದಿ ಪುರುಷ ನಾರಾಯಣಸ್ಯ ನಮೋಚ್ಚಾರಣ ಮಾತ್ರೇಣ ನಿರ್ಧೂತ ಕಲಿರ್ಭತಿ.

ಅಂದರೆ ಮನುಷ್ಯನು ದೇವರ ಜಪ ಮಾಡುತ್ತಿರಬೇಕು. ಅದೇ ಉಪಾಯದಿಂದ ಹುಟ್ಟು ಸಾವಿನ ಜಾಲದಿಂದ ಮುಕ್ತನಾಗುತ್ತಾನೆ. ಅಂತಹುದೇ ಒಂದು ಶ್ಲೋಕ ಪದ್ಮ ಪುರಾಣದಲ್ಲೂ ಬರುತ್ತದೆ.

ಯೇ ದಂತಿ ನರಾ ನಿತ್ರಂ ಹಿರಿರಿತ್ಯ ಕ್ಷರದ್ಯಯಂತಸ್ಯೋಚ್ಚಾರಣ ಮಾತ್ರೇಣ ವಿಮುಕ್ತಾಸ್ತೆ ನ ಸಂಶಯಂ

ಇದರಲ್ಲಿ ಹೀಗೆ ಹೇಳಲಾಗಿದೆ : ಶುದ್ಧ ಅಥವಾ ಅಶುದ್ಧ, ಎಚ್ಚರಿಕೆಯ ಅಥವಾ ಎಚ್ಚರಿಕೆ ಇಲ್ಲದಿರುವ ಸ್ಥಿತಿಯಲ್ಲಿ ಹರಿ ನಾಮ ಸ್ಮರಣೆಯಿಂದ ಮನುಷ್ಯನಿಗೆ ಮುಕ್ತಿ ದೊರಕುತ್ತದೆ. ಈಗ ಯೋಚಿಸಬೇಕಾದ ಸಂಗತಿಯೆಂದರೆ, `ಮುಕ್ತಿ’ ಎಂದರೇನು? ಧರ್ಮದ ಪ್ರಕಾರ, ಮುಕ್ತಿ ಅಂದರೆ ಸಾಂಸಾರಿಕ ಆಗುಹೋಗುಗಳಿಂದ ಮುಕ್ತಿ. ಹಿಂದಿನ ಮುಂದಿನ ಜನ್ಮ ಯಾವುದು? ಇದರ ಬಗ್ಗೆ ಯಾವುದಾದರೂ ಪ್ರಮಾಣೀಕೃತವಾಗಿ ಹೇಳಲು ಸಾಧ್ಯವೇ? ಹಾಗಾದರೆ ಮುಕ್ತಿಗೆ ಏನು ಅರ್ಥ ಯಾವ ಮಹಿಳೆಯರು ಕೀರ್ತನೆಯ ಸಂದರ್ಭದಲ್ಲಿ ವಿವಿಧ ವಾದ್ಯಗಳ ನಿರ್ವಹಣೆ ಮಾಡುತ್ತಾರೊ, ಅವರಿಗೆ ಮುಕ್ತಿಗಿಂತ ಹೆಚ್ಚಾಗಿ ಜನರಿಂದ ಶಭಾಷ್‌ ಗಿರಿ ಪಡೆಯುವುದಾಗಿರುತ್ತದೆ. ಅವರಿಗೆ ಕುಳಿತುಕೊಳ್ಳುವ ವಿಶೇಷ ವ್ಯವಸ್ಥೆ ಆಗಿರುತ್ತದೆ. ಅವರು ಬರುತ್ತಿದ್ದಂತೆ ಕೀರ್ತನೆಗೆ ಶುಭಾರಂಭವಾಗುತ್ತದೆ. ಯಾರು ಮೈಕನ್ನು ಸಂಭಾಳಿಸುತ್ತಿರುತ್ತಾರೊ,

ಅವರನ್ನು ತಡೆಯುವವರು ಯಾರೂ ಇರುವುದಿಲ್ಲ. ಒಂದು ಸಲ ಅವರು ಮೈಕ್‌ ಮುಂದೆ ನಿಂತರೆ, ಹಾಡು ಧ್ವನಿ ಹೇಗೆಯೇ ಇರಲಿ, ಒಂದು ರೀತಿಯ ಸ್ಪರ್ಧೆಯೇ ಏರ್ಪಟ್ಟಂತೆ ಅವರು ಹಾಡುತ್ತಿರುತ್ತಾರೆ.

ಆ ಸಮಯದಲ್ಲಿ ಯಾರೊಬ್ಬರಿಗೂ ದೇವರ ಹೆಸರಾಗಲಿ, ಮೋಕ್ಷದ ಅಪೇಕ್ಷೆಯಾಗಲಿ ಇರುವುದಿಲ್ಲ. ಆಗ ಅವರಿಗಿರುವುದು ತಮ್ಮ ಹೆಸರು ಬೆಳಗಿಸುವ ಉನ್ನತ ಇಚ್ಛೆ. ಇಲ್ಲಿ ಮಹಿಳೆಯರು ಪೂಜೆ ಹೇಗೆ ನೆರವೇರಿಸುವುದು, ನೈವೇದ್ಯ ಕೊಡುವುದು ಹೇಗೆ? ಎಂದು ನಿರ್ದೇಶನ ಕೊಡುತ್ತಿರುತ್ತಾರೆ. ಅವರು ಹೇಳಿದಂತೆಯೇ ಎಲ್ಲವೂ ಚಾಚೂ ತಪ್ಪದೇ ನಡೆಯುತ್ತಿರುತ್ತದೆ.

ವೈಯಕ್ತಿಕವಾಗಿ ಮಹಿಳೆ ಹೇಗೇ ಇರಲಿ, ಅವರು ಧಾರ್ಮಿಕ ಆಡಂಬರಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಸಮಾಜ ಅವಳನ್ನು `ಉತ್ತಮ ಮಹಿಳೆ’ ಎಂಬ ಮುಕುಟ ನೀಡಲು ಸ್ವಲ್ಪ ಹಿಂದೇಟು ಹಾಕುವುದಿಲ್ಲ.

ಕೀರ್ತನೆ ಬಳಿಕ ಕಿಟಿ ಪಾರ್ಟಿ

ಕೀರ್ತನೆಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಚಹಾ ಉಪಾಹಾರದ ವ್ಯವಸ್ಥೆ ಆಗುತ್ತದೆ. ಅದಾದ ಬಳಿಕ ಇನ್ನೊಬ್ಬರ ಅವಹೇಳನ, ದೂರುಗಳನ್ನು ಹೇಳುವಿಕೆ ಶುರುವಾಗುತ್ತದೆ. ಸ್ವಲ್ಪ ಹೊತ್ತಿನ ಮುಂಚಿನ ತನಕ ಮಹಿಳೆಯರು ಜೋರು ಜೋರಾಗಿ ಭಜನೆ ಹಾಡುತ್ತಿದ್ದರು. ಸಂಸಾರ, ಒಂದು ಮಿಥ್ಯೆ ಎಂದು ಒತ್ತಿ ಒತ್ತಿ ಹೇಳುತ್ತಿದ್ದರು. ನಾವು ಏನೂ ಕೊಂಡೊಯ್ಯುವುದಿಲ್ಲ. ಎಲ್ಲವನ್ನೂ ಇಲ್ಲಿಯೇ ಬಿಟ್ಟುಹೋಗುತ್ತೇವೆ. ಅದಕ್ಕೆ ಏಕೆ ಮತ್ಸರ, ದುರ್ಬುದ್ಧಿ ತೋರಬೇಕು ಎಂದು ತಿಳಿ ಹೇಳುತ್ತಿದ್ದರು.

ಈಗ ಒಮ್ಮೆಲೇ ಒಬ್ಬರು ಇನ್ನೊಬ್ಬರ ವಿಚಾರಗಳನ್ನು ತೆಗೆದುಕೊಳ್ಳಲು ಆರಂಭಿಸಿದರು. ಅಂದಹಾಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಸಾಂಗವಾಗಿ ನೆರವೇರಿಸಲು ಅವರೆಲ್ಲ ಸೇರಿದ್ದರು. ಈಗ ಅವರಲ್ಲಿ ತಮ್ಮ ಅತ್ತೆ, ಮಾವ, ಮೈದುನ, ನಾದಿನಿ ಇವರನ್ನೆಲ್ಲ ಬಾಯಿಗೆ ಬಂದಹಾಗೆ ಹಳಿಯತೊಡಗುತ್ತಾರೆ. ಧರ್ಮದ ಹೆಸರಿನಲ್ಲಿ ಅವರೆಲ್ಲ ಈ ರೀತಿ ಮಾಡುತ್ತ ತಮ್ಮ ಮನಸ್ಸನ್ನು ಖುಷಿಗೊಳಿಸುತ್ತಾರೆ.

ಯಾವ ಮಹಿಳೆಯರಿಗೆ ಮನೆಯಲ್ಲಿ ವೃದ್ಧರ ಹೊಣೆ ನಿಭಾಯಿಸುವ ಕಾರಣದಿಂದ ಕೀರ್ತನೆ ಕಾರ್ಯಕ್ರಮದಲ್ಲಿ ಸೇರ್ಪಡೆಗೊಳ್ಳಲು ಆಗುವುದಿಲ್ಲವೋ, ಅವರು ತಮಗೆ ಬಂದ ಕಷ್ಟ ಕಾರ್ಪಣ್ಯಗಳಿಗೆ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳದೇ ಇದ್ದಿದ್ದರಿಂದ ಹೀಗಾಯಿತೆಂದು ತಮ್ಮನ್ನು ತಾವು ಶಪಿಸಿಕೊಳ್ಳುತ್ತಾರೆ. ಯಾರಿಗೆ ಮಾಡಲು ಏನೂ ಕೆಲಸ ಇರುವುದಿಲ್ಲವೋ ಅವರು ವಿದೇಶಿ ಮಹಿಳೆಯರ ಹಾಗೆ ಅಕ್ಕಪಕ್ಕದ ಜನರು ಮತ್ತು ಸಮಾಜ ಸುಧಾರಣೆಯಲ್ಲಿ ತೊಡಗಿಕೊಳ್ಳದೆ, ಭಜನೆ ಕೀರ್ತನೆಯಲ್ಲಿ ಸಮಯ ಕಳೆಯಲು ಇಚ್ಛಿಸುತ್ತಾರೆ.

ಬೃಹನಾರದೀಯ ಪುರಾಣದಲ್ಲಿ ಹೀಗೆ ಹೇಳಲಾಗಿದೆ.

ಸಂಕೀರ್ತನ ಧ್ವರ್ನಿ ಶ್ರುತ್ವಾ ಯೆ ಚ ನೃತ್ಯತಿ ಮಾನಾಃವೇಷಾಂ ಪಾದರಜಸ್ತರ್ಶಾನ್ಸಧ್ಯ ಪೂಜಾ ವಸುಂಧರಾ

ಅಂದರೆ ಯಾರು ದೇವರ ಧ್ವನಿಯನ್ನು ಆಲಿಸಿ ಪ್ರೀತಿಯಲ್ಲಿ ತನ್ಮಯರಾಗಿ ನೃತ್ಯ ಮಾಡುತ್ತಾರೊ, ಅವರ ಪಾದಸ್ಪರ್ಶದಿಂದ ಪೃಥ್ವಿ ಪವಿತ್ರವಾಗುತ್ತದೆ. ಅದರಿಂದಲೇ ಪ್ರೇರಿತರಾಗಿ ಚೈತನ್ಯ ಮಹಾಪ್ರಭುಗಳು ಸಾಮೂಹಿಕವಾಗಿ ಕೀರ್ತನೆ ನಡೆಸುವ ಪದ್ಧತಿ ಶುರು ಮಾಡಿದರು. ಇಸ್ಕಾನ್‌ನ ಸಂಸ್ಥಾಪಕ ಶ್ರೀಪ್ರಭುಪಾದ ದಾಸರು ಹರಿನಾಮ ಸಂಕೀರ್ತನವನ್ನು ವಿಶ್ವದ ಮೂಲೆ ಮೂಲೆಗೂ ತಲುಪಿಸಿದರು.

ಒಂದು ವೇಳೆ ಶ್ಲೋಕದ ಅರ್ಥದ ಬಗ್ಗೆ ವಿಶ್ವಾಸ ಇಡುವುದಾದರೆ, ಕೀರ್ತನೆಯನ್ನು ಇಷ್ಟೊಂದು ಜಾಗದಲ್ಲಿ ಏರ್ಪಡಿಸಲಾಗುತ್ತದೆ. ಅಲ್ಲಿ ಎಷ್ಟೊಂದು ಉದ್ಧಾರದ ಕೆಲಸಗಳು ಆಗಬೇಕಿತ್ತಲ್ಲವೇ? ಆದರೆ ಭೂಮಿ ದಿನದಿಂದ ದಿನಕ್ಕೆ ಕಲುಷಿತವಾಗುತ್ತಾ ಹೊರಟಿದೆ. ಅದರ ಸಂಪನ್ಮೂಲ ಬರಿದಾಗುತ್ತಾ ಹೊರಟಿದೆ. ಅದಕ್ಕೆ ಸಮರ್ಪಕ ಚಿಕಿತ್ಸೆ ಕೀರ್ತನೆಯಲ್ಲಿ ಹುದುಗಿದೆಯೇ? ಹೌದು ಎಂದಾದರೆ, ಜಗತ್ತಿನಲ್ಲಿ ಇಷ್ಟೊಂದು ಕೀರ್ತನೆಗಳ ಪರಿಣಾಮ ಏಕೆ ಗೋಚರಿಸುತ್ತಿಲ್ಲ. ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ ನಾವು ನಮ್ಮ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಬೇಕಿದ್ದರೆ, ಸಮಾಜ ಉತ್ತಮವಾಗಬೇಕಿದ್ದರೆ, ಭೂಮಿ ಸುಧಾರಣೆ ಆಗಬೇಕಿದ್ದರೆ ನಾವು ಕೀರ್ತನೆಗಳಲ್ಲಿ ಸಮಯ ವ್ಯರ್ಥ ಮಾಡದೆ, ಪ್ರಗತಿ ಪರ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಿದೆ. ಸಮಾಜವನ್ನು ಇನ್ನಷ್ಟು ಶ್ರೇಷ್ಠಗೊಳಿಸಲು ನಾವು ವೈಜ್ಞಾನಿಕ ಯೋಜನೆ ರೂಢಿಗೊಳಿಸಿಕೊಳ್ಳಬೇಕಿದೆ.

– ಪಾರ್ವತಿ ಭಾರದ್ವಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ