ಮೂಲತಃ ಕುಂದಾಪುರ ತಾಲ್ಲೂಕು ಅಂಪಾರು ಗ್ರಾಮದವರಾದ ಆರ್‌. ವಿದ್ಯಾಧರ್‌ ಹಾಗೂ ಶೋಭಾ ವಿ.ಎಸ್‌ ದಂಪತಿಯವರ ಸುಪುತ್ರಿಯಾಗಿ ಪ್ರಿಯಾ ಕೆ.ವಿ. ದಿನಾಂಕ. 2002ರಲ್ಲಿ ಜನಿಸಿದರು. ಪ್ರಸ್ತುತ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ.

ಸಂಗೀತ ಕ್ಷೇತ್ರದಲ್ಲಿ ಮಗಳಿಗಿದ್ದ ಅಪಾರ ಆಸಕ್ತಿಯನ್ನು ಮನಗಂಡ ತಾಯಿ ಶೋಭಾ ಮೈಸೂರಿನ ಶಾರದಾ ಕಲಾ ಕೇಂದ್ರ ಎಂಬ ಶಾಲೆಗೆ ಸೇರಿಸಿದರು. ಅಂದಿನಿಂದ ವಿದುಷಿ ರೇಖಾ ವೆಂಕಟೇಶ್‌ ಮಾರ್ಗದರ್ಶನದಲ್ಲಿ ಪ್ರಿಯಾ ಕರ್ನಾಟಕ ಶಾಸ್ತ್ರೀಯ ಸಂಗೀತ, ಜಾನಪದ ಗೀತೆ ಹಾಗೂ ಸುಗಮ ಸಂಗೀತವನ್ನು ಅಭ್ಯಸಿಸುತ್ತಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಗುರು ವಿದುಷಿ ರೇಖಾ ವೆಂಕಟೇಶ್‌ ಪ್ರಿಯಾರಿಗೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ನೀಡುತ್ತಿದ್ದಾರೆ. ಶಾಲಾ ಕಾಲೇಜು ಶಿಕ್ಷಕರು, ಕುಟುಂಬ ವರ್ಗದವರು ಇವರಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅಪರಿಮಿತ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಯುವ ಪ್ರತಿಭೆ ಪ್ರಿಯಾ, ಇತ್ತೀಚೆಗೆ ತಮ್ಮ ಪ್ರೀತಿಪಾತ್ರ ತಾಯಿಯವರನ್ನು ಕಳೆದುಕೊಳ್ಳಬೇಕಾಯಿತು. ಅನಾರೋಗ್ಯದಿಂದ ಪ್ರಿಯಾ ತಾಯಿ ಶೋಭಾ ನಿಧನರಾದರು. ತಾಯಿಯ ಅನನ್ಯ ಪ್ರೀತಿ ವಾತ್ಸಲ್ಯದಿಂದ ವಂಚಿತರಾಗಬೇಕಾದ ಪರಿಸ್ಥಿತಿ ಬಂದಿದ್ದರೂ ಪ್ರಿಯಾ ಅದನ್ನು ಲೆಕ್ಕಿಸದೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಇನ್ನೂ ಹೆಚ್ಚಿನ ಕೀರ್ತಿ ಮತ್ತು ಯಶಸ್ಸು ಸಂಪಾದಿಸಲು ಅನವರತ ಶ್ರಮಿಸುತ್ತಿದ್ದಾರೆ.

ಪ್ರಿಯಾ ಪ್ರಸ್ತುತ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸೀಝನ್‌ರ ಸ್ಪರ್ಧಿಯಾಗಿ ಮೈಸೂರನ್ನು ಪ್ರತಿನಿಧಿಸಿ ಸೆಮಿ ಫೈನಲ್ ಹಂತಕ್ಕೆ ತಲುಪಿದರು. ಹಾಗೆಯೇ ವಾಯ್ಸ್ ಆಫ್‌ ಕರ್ನಾಟಕ 2018ರ ರನ್ನರ್‌ ಅಪ್‌ ಕೂಡ ಆಗಿದ್ದಾರೆ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ 200ಕ್ಕೂ ಹೆಚ್ಚು ಬಹುಮಾನಗಳನ್ನು ಗಳಿಸಿದ್ದಾರೆ. 30ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಪ್ರಿಯಾ ಪಡೆದ ಬಹುಮಾನಗಳು

ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. 2011-12, 2013-14, 2015-16, 2017-18, 2019-20ನೇ ಸಾಲಿನ ಕ್ಲಸ್ಟರ್‌. ತಾಲ್ಲೂಕು, ಜಿಲ್ಲಾ ವಿಭಾಗ ಮತ್ತು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದಿರುತ್ತಾರೆ. ಮೈಸೂರಿನ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ನಡುವೆ ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆಗಳಲ್ಲಿ 2011-2020ರವರೆಗೆ ನಿರಂತರವಾಗಿ ಭಾಗವಹಿಸಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುತ್ತಾರೆ. ಮೈಸೂರಿನ ಸಮರ್ಪಣಾ ಟ್ರಸ್ಟ್ ನ 2013-14, 2015-16ರ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಮೈಸೂರಿನ ರೋಟರಿ ಸಂಸ್ಥೆ, ಅಮರಕಲಾ ಸಂಘ, ಸಂಗೀತ ಗಂಗಾ, ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ, ಜನಚೇತನ ಟ್ರಸ್ಟ್, ಕಲ್ಪವೃಕ್ಷ ಟ್ರಸ್ಟ್, ಸ್ನೇಹ ಸಿಂಚನ ಟ್ರಸ್ಟ್, ಶ್ರೀಕೃಷ್ಣ ಗಾನಸಭಾ, ದಿ. ಇನ್‌ಸ್ಟಿಟ್ಯೂಟ್‌ ಆಫ್‌ಎಂಜಿನಿಯರ್ಸ್, ಕನಕದಾಸ ಜಂಯತೋತ್ಸವ, ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ (ಕರ್ನಾಟಕ ವಿಭಾಗ), ಯಶು ಚಿಲ್ಡ್ರನ್‌ಕಲ್ಚರ್‌ ಅಕಾಡೆಮಿ, ಅರೋರಾ ಎಜುಕೇಶನ್‌ ಟ್ರಸ್ಟ್ ನವರು ನಡೆಸಿದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದಿರುತ್ತಾರೆ.

ಅಂತರ ಶಾಲಾ ಕಾಲೇಜು ಮಟ್ಟದ 70ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಪಂಜಿನ ಕವಾಯತು ಉಪ ಸಮಿತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಮೈಸೂರು ಜಿಲ್ಲಾಡಳಿತ ಹಾಗೂ ಸಾಂಸ್ಕೃತಿಕ ದಸರಾ ಉಪ ಸಮಿತಿಯ `ಸೂರ್ಯೋದಯದಿಂದ ಸೂಯ್ತಾಸ್ತಮಾನದವರೆಗೆ’ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 2018ನೇ ಸಾಲಿನ ದಸರಾ ಮಹೋತ್ಸವದ ಅಂಗವಾಗಿ ನಡೆದ ಯುವ ಸಂಭ್ರಮದಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಮೈಸೂರು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಅಭಿನಂದನೆಗೆ ಪಾತ್ರರಾಗಿದ್ದಾರೆ. ಸಂಸ್ಕಾರ ಭಾರತಿ ಸಂಸ್ಥೆಯ ಯುವ ಸಂಗೀತೋತ್ಸವದಲ್ಲಿ ಹಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೈಸೂರಿನ ಸಾಮಾಜಿಕ ಹಾಗೂ ಶೈಕ್ಷಣಿಕ ವಿಕಾಸ ವೇದಿಕೆಯ 2019ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸಂಗೀತ ಮಾತ್ರವಲ್ಲದೆ ಅಭಿನಯದಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಇವರು ಕ್ಲಸ್ಟರ್‌, ತಾಲ್ಲೂಕು, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಹತ್ತಾರು ನಾಟಕಗಳ ಪ್ರದರ್ಶನ ನೀಡಿರುತ್ತಾರೆ. ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಿಗುರು ಕಾರ್ಯಕ್ರಮದಲ್ಲಿ ನಾಟಕಗಳನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶಿವರಾತ್ರಿಯ ಅಂಗವಾಗಿ ಸುತ್ತೂರು ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಗಾಂಧಿ ಜಯಂತಿ ಪ್ರಯುಕ್ತ ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಮೈಸೂರಿನ ಶ್ರೀ ಶಾರದಾ ಮಠದಲ್ಲಿ ವಿಶೇಷ ದಿನಗಳಂದು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ, ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ, ರಾಣೆ ಬಹದ್ದೂರ್‌ ಸಭಾಂಗಣದಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

26.01.2021ರಂದು ಗಣರಾಜ್ಯೋತ್ಸ ದಿನದಂದು ಮೈಸೂರಿನ ಮೈಕಲ್ ಚಂದ್ರು ನಿರ್ವಹಣೆಯಲ್ಲಿ ಶೋ ಸರ್ಕಲ್ ಪ್ರಯೋಜಕತ್ವದಲ್ಲಿ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಡೆದ ಹಳೆಯ ಕನ್ನಡ ಹಾಡುಗಳು ಸಂಗಮ ಕಾರ್ಯಕ್ರಮದಲ್ಲಿ ಪ್ರಿಯಾ ಸುಶ್ರಾವ್ಯವಾಗಿ ಹಾಡಿ ಕಲಾ ರಸಿಕರ ಮೆಚ್ಚುಗೆಗೆ ಪಾತ್ರರಾದರು.

ಸುಗಮ ಸಂಗೀತ ಕ್ಷೇತ್ರದ ಯುವ ಸಾಧಕಿ ಪ್ರಿಯಾ ತಾವು ಸಾಧಿಸಬೇಕಾದದ್ದು ಇನ್ನೂ ಇದೆ, ಸಾಧನೆಗೆ ಕೊನೆ ಎಂಬುದೇ ಇಲ್ಲ ಎಂದು ವಿನಮ್ರವಾಗಿ ನುಡಿಯುತ್ತಾರೆ. ಇವರಿಗೆ ಗೃಹಶೋಭಾ ಪರವಾಗಿ ಶುಭಾಶಯಗಳು.

– ಬಿ. ಬಸವರಾಜು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ