ಸಿನಿಮಾ ರಂಗದಲ್ಲಿ ಏನಾದರೂ ಮಾಡಬೇಕೆಂಬ ಆಸೆ. ಶಾರ್ಟ್‌ ಫಿಲಂಸ್‌ ಮಾಡುವುದರ ಮೂಲಕ ಗಮನ ಸೆಳೆದ ಹರಿ ಮತ್ತು ಪ್ರತೀಕ್‌ ಸುಬ್ರಹ್ಮಣಿ ತಮ್ಮ ಪ್ರತಿಭೆಯಿಂದ ಅವಕಾಶ ಪಡೆದಂತಹ ಯುವಕರು. ಯೂಟ್ಯೂಬ್‌ನಲ್ಲಿ ಇವರ ಶಾರ್ಟ್‌ ಫಿಲಂಸ್ ನೋಡಿಯೇ ಹಣ ಹಾಕಲು ಮುಂದೆ ಬಂದವರು ವಿದೇಶದಲ್ಲಿದ್ದ ವೈದ್ಯರು ಡಾ. ರಮೇಶ್‌ ರಾಮಯ್ಯ. ಇಂದು ಅವರಿಗೊಂದು ಒಳ್ಳೆಯ ಸಿನಿಮಾ ಮಾಡಿಕೊಟ್ಟ ತೃಪ್ತಿ ಈ ಯುವ ಪ್ರತಿಭೆಗಳಿಗಿದೆ.

ನಿರ್ದೇಶಕ ಹರಿ ಅವರನ್ನು ಮಾತನಾಡಿಸಿದಾಗ, ತಮ್ಮ ಚಿತ್ರದ ಬಗ್ಗೆ, ತಂಡದ ಬಗ್ಗೆ ಹೇಳಿಕೊಂಡರು. ಇತ್ತೀಚಿನ ದಿನಗಳಲ್ಲಿ ವಿಭಿನ್ನ ಶೀರ್ಷಿಕೆಯೊಂದಿಗೆ ಹೊಸ ಚಿತ್ರ ತಂಡಗಳು ಚಿತ್ರರಂಗದತ್ತ ಮುಖ ಮಾಡುತ್ತಿವೆ. ಅದರಲ್ಲಿ ಪ್ರಮುಖವಾಗಿ ಕರ್ಮಣ್ಯೇ ವಾಧಿಕಾರಸ್ತೇ ಎಂಬ ಹೆಸರಿನೊಂದಿಗೆ ಬರುತ್ತಿದೆ ಈ ವಿಭಿನ್ನ ಮತ್ತು ವಿಶೇಷ ಚಿತ್ರ. ಕರ್ಮಣ್ಯೇ ವಾಧಿಕಾರಸ್ತೇ ಮಹಾಭಾರತದ ಕಾವ್ಯದಲ್ಲಿ ಬರುವ ಸೂಕ್ತಿಯಾಗಿದ್ದು, ನಿನ್ನ ಕೆಲಸವನ್ನು ನೀನು ಮಾಡು. ಕರ್ಮಫಲಗಳನ್ನು ನನಗೆ ಬಿಡು ಎಂದು ಕೃಷ್ಣ ಹೇಳುವಂತೆ ಚಿತ್ರದ ಕಥೆಗೆ ಸಂಬಂಧವಿದೆ. ಒಂದು  ಘಟನೆಯನ್ನಾಧರಿಸಿ ಈ ಚಿತ್ರ ನಿರ್ಮಿಸಲಾಗಿದೆ. ಎಲ್ಲಾ ಕೆಲಸವನ್ನು ಮುಗಿಸಿರುವ ಚಿತ್ರತಂಡ, ಸದ್ಯದಲ್ಲೇ ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಿದ್ಧವಾಗಿದೆ. ಮೊದಲಿಗೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ್ದು, ಎಲ್ಲಾ ಚಿತ್ರ ರಸಿಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಟ್ರೇಲರ್‌ ನಲ್ಲಿ ಬಿಡುಗಡೆಯಾದ ಸಿನಿಮಾದ ತುಣುಕುಗಳ ಗುಣಮಟ್ಟ ಬಾಲಿವುಡ್‌ ಸಿನಿಮಾಗಳ ಶ್ರೇಣಿಯಲ್ಲಿ ನಿಲ್ಲುತ್ತದೆ.

ಪ್ರತಿಯೊಂದು ಫ್ರೇಮ್ ನಲ್ಲೂ ನಿರ್ದೇಶಕರಿಗೆ ಸಿನಿಮಾ ಮೇಲಿನ ಪ್ರೀತಿ ಎದ್ದು ಕಾಣುತ್ತದೆ. ಹಾಗೇ ಇದನ್ನು ನೋಡಿದ ಚಿತ್ರರಂಗದ ಮೇರು ನಟರು, ತಂತ್ರಜ್ಞರು ಮೆಚ್ಚಿ ಶಭಾಷ್‌ ಎಂದು ಬೆನ್ನು ತಟ್ಟಿದ್ದಾರೆ. ಅತ್ಯದ್ಭುತವಾಗಿ ಈ ಟ್ರೇಲರ್‌ ಮೂಡಿ ಬಂದಿದ್ದು, ಸಿನಿಮಾ ಮಂದಿ ಹುಬ್ಬೇರಿಸುವಂತೆ ಮಾಡಿದೆ.

ಸದಭಿರುಚಿಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವ ಉದ್ದೇಶದಿಂದ ಬಹುತೇಕ ವಿದ್ಯಾವಂತರು, ಸುಸಂಸ್ಕೃತರು ಸೇರಿ ಮಾಡಿರುವ ಈ ಚಿತ್ರವನ್ನು ಈಗ ಯು.ಎಸ್‌.ಎ.ನಲ್ಲಿ ಅನಸ್ತೇಶಿಯಾ ತಜ್ಞರಾಗಿ ಗುರುತಿಸಿಕೊಂಡಿರುವ ಡಾ. ರಮೇಶ್‌ ರಾಮಯ್ಯ ನಿರ್ಮಾಣ ಮಾಡಿದ್ದಾರೆ. ಅವರು ತಾಯ್ನಾಡಿನ ಮೇಲೆ ಇರುವ ಅಭಿಮಾನದಿಂದ ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಉದ್ದೇಶದಿಂದ ಅನಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕರಾಗಿ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ.

NN_P4726

ಈ ಚಿತ್ರವನ್ನು ಹೊಸಬರಾದ ಶ್ರೀಹರಿ ಆನಂದ್‌ ನಿರ್ದೇಶಿಸಿದ್ದು, ಇವರು ಚಿತ್ರರಂಗದಲ್ಲಿ ಹಲವಾರು ಅನುಭವಗಳನ್ನು ಗಳಿಸಿ ಹಲವು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಈ ಅನುಭವದ ಮೇರೆಗೆ ಹೊಸ ಕಥೆಯನ್ನು ರಚಿಸಿ, ನಿರ್ದೇಶಿಸಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ನಾಯಕನಾಗಿ ಪ್ರತೀಕ್‌ ಸುಬ್ರಹ್ಮಣ್ಯ ಬಣ್ಣ ಹಚ್ಚಿದ್ದಾರೆ.

ಇವರು ಹುಬ್ಬಳ್ಳಿ ಮೂಲದವರಾಗಿದ್ದು, ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ವ್ಯಾಸಂಗ ಮುಗಿಸಿ ನಂತರ ವೃತ್ತಿಯಾಗಿ ಕಲೆಯನ್ನು ಆರಿಸಿಕೊಂಡು ಕಲೆಯನ್ನು ಪ್ರೀತಿಸಿಕೊಂಡು ಬಂದು ಈ ಚಿತ್ರದಲ್ಲಿ ಒಂದು ಅದ್ಭುತ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕಿಯಾಗಿ ದಿವ್ಯಾ ಕಾಣಿಸಿಕೊಂಡಿದ್ದಾರೆ. ಇವರದು ಆರ್ಕಿಯಾಲಜಿಸ್ಟ್ ಪಾತ್ರ. ಹಾಗೇ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಉತ್ತರ ಭಾರತದ ನೇಪಾಳಿ ಮೂಲದ ಹುಡುಗಿ ಡೋಲ್ಕಾ ನಡಿಸಿದ್ದಾರೆ.

ಚಿತ್ರದ ಚಿತ್ರೀಕರಣ ಬಹುತೇಕ ಭಾಗ ಬೆಂಗಳೂರು ಸುತ್ತಮುತ್ತ ನಡೆದಿದ್ದು, ಇನ್ನುಳಿದ ಭಾಗವನ್ನು ದಾಂಡೇಲಿ, ಮಲ್ಪೆ, ತೀರ್ಥಹಳ್ಳಿ, ಆಗುಂಬೆಯ ಸುತ್ತಮುತ್ತ ಸುಮಾರು 70 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರಕ್ಕೆ ಋತ್ವಿಕ್ ಮುರಳಿಧರ್‌ ಸಂಗೀತ ಸಂಯೋಜನೆಯಿದ್ದು, ವಿಜೇತ್‌ ಚಂದ್ರರ ಸಂಕಲನ, ಉದಯ್‌ ಲೀಲಾರವರ ಛಾಯಾಗ್ರಹಣದ ಕೈಚಳಕ ಈ ಚಿತ್ರಕ್ಕಿದೆ. ಚಿತ್ರದ ಪ್ರಮುಖ ತಾರಾಬಳಗದಲ್ಲಿ ಉಗ್ರಂ ಮಂಜು, ವಿಜಯ್‌, ಅಭಿಷೇಕ್‌ ಶೆಟ್ಟಿ, ನಾಟ್ಯರಂಗ, ನಟನಾ ಪ್ರಶಾಂತ್ ಹಾಗೂ ಇತರರಿದ್ದಾರೆ.

ಮರ್ಡರ್‌ ಮಿಸ್ಟರಿ ಕಥಾಹಂದರ ಹೊಂದಿರುವ ಶ್ರೀಹರಿ ಆನಂದ್‌ ನಿರ್ದೇಶಿಸಿರುವ ಈ ಚಿತ್ರದಲ್ಲಿ ಎರಡು ಹಾಡುಗಳಿದ್ದು ಋತ್ವಿಕ್ ಮುರಳೀಧರ್‌ ಸಂಗೀತ ನೀಡಿದ್ದಾರೆ. ಸಂಚಿತ್‌ ಹೆಗ್ಡೆ, ಅಶ್ವಿನಿ, ಋತ್ವಿಕ್‌ ಮುರಳೀಧರ್‌, ಅನನ್ಯಾ ಭಟ್‌ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.

ಪ್ರತೀಕ್‌ ಸುಬ್ರಹ್ಮಣಿ ಈ ಚಿತ್ರದ ನಾಯಕನಾಗಿ ನಟಿಸಿರುವುದರ ಜೊತೆಗೆ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳುವ ಹರಿ, ಪ್ರತೀಕ್‌ ಈ ಚಿತ್ರದ ನಂತರ ಸಾಕಷ್ಟು ಅವಕಾಶಗಳನ್ನು ಖಂಡಿತಾ ಪಡೆಯುತ್ತಾರೆ ಎನ್ನುತ್ತಾರೆ.

ದಿವ್ಯಾ ಹಾಗೂ ನೇಪಾಳದ ಡೋಲ್ಕಾ ನಾಯಕಿಯರ ಬಗ್ಗೆ ಮಾತನಾಡುತ್ತಾ ಸರಿಸಮಾನವಾಗಿ ಪಾತ್ರ ನೀಡಲಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರಂತೆ. ನಾಟ್ಯರಂಗ, ಉಗ್ರಂ  ಮಂಜು, ನಟನ ಪ್ರಶಾಂತ್‌ ಈ ಚಿತ್ರದಲ್ಲಿ ಅಭಿನಯಿಸಿರುವ ಸಹ ಕಲಾವಿದರಾಗಿ ಗಮನ ಸೆಳೆಯುತ್ತಾರೆ ಎನ್ನುವ ಡೈರೆಕ್ಟರ್‌ ಹರಿ ಬಳಿ ಈಗ ಎರಡು ಹೊಸ ಚಿತ್ರಗಳು ಬಂದಿವೆ. ಈ ಚಿತ್ರದ ಬಿಡುಗಡೆ ನಂತರ ಕೈಗೆತ್ತಿಕೊಳ್ಳುವುದಾಗಿ ಹೇಳಿದರು.

ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ