ನಾವು ಅಡುಗೆಗೆ ನಿತ್ಯ ಬಳಸುವ ಮಸಾಲೆ ಪದಾರ್ಥಗಳು ಸಣ್ಣಪುಟ್ಟ ರೋಗ ಕಾಡಿದಾಗ ಖಂಡಿತಾ ಹೆಚ್ಚು ಉಪಯುಕ್ತ ಎನಿಸುತ್ತವೆ.
ನಿಂಬೆ :
ಈ ನಿಂಬೆ ಹಲವು ವಿಟಮಿನ್ಸ್, ಮಿನರಲ್ಸ್ ತುಂಬಿರುವ ಖಜಾನೆ ಎಂದರೆ ಉತ್ಪ್ರೇಕ್ಷೆಯಲ್ಲ! ಇದು ವಿಟಮಿನ್ `ಸಿ’ ಅಡಗಿರುವ ಭಂಡಾರ. ಹೀಗಾಗಿ ಇದರ ಸೇವನೆಯಿಂದ ಇನ್ ಫೆಕ್ಷನ್ ದೂರವಾಗುತ್ತದೆ. ಆಸ್ತಮಾ, ಟ್ರಾನ್ಸಿಲೈಟಿಸ್, ಗಂಟಲು ಕೆಟ್ಟಾಗ ಇದರ ಸೇವನೆಯಿಂದ ಆರಾಮ ಸಿಗುತ್ತದೆ. ನಿಂಬೆ ಪಾನಕದ ಸೇವನೆಯಿಂದ ಈ ನಿಂಬೆ ರಸ ಹೈಡ್ರೋಕ್ಲೋರಿಕ್ ಆ್ಯಸಿಡ್ ಪ್ರೊಡಕ್ಷನ್ ನಲ್ಲಿ ಸಹಕಾರಿ, ಅದು ಆಹಾರ ಜೀರ್ಣವಾಗಲು ಸಹಾಯಕಾರಿ.
ನಿಂಬೆ ಪಾನಕದಿಂದ ಬಿ.ಪಿ, ಒತ್ತಡ ಎಷ್ಟೋ ಕಡಿಮೆ ಆಗುತ್ತದೆ. ಲಿವರ್ ಗೆ ಇದು ಟಾನಿಕ್ ತರಹ ಕೆಲಸ ಮಾಡುತ್ತದೆ. ಡಯೇರಿಯಾದಂಥ ಸಮಸ್ಯೆಗೆ ಉತ್ತಮ ಫಲ ನೀಡುತ್ತದೆ. ಇದು ಒಂದು ಉತ್ತಮ ಬ್ಲೀಚಿಂಗ್ ಏಜೆಂಟ್. ಮುಖಕ್ಕೆ ಸರುವುದರಿಂದ, ಮುಖಕ್ಕೆ ಹೆಚ್ಚಿನ ಕಾಂತಿ ಬರುತ್ತದೆ, ಮುಖದಲ್ಲಿನ ಕಲೆಗುರುತು ತಾನಾಗಿ ದೂರಾಗುತ್ತದೆ.
ಶುಂಠಿ :
ಶುಂಠಿಗೆ ಮಹಾಔಷಧಿ ಎಂಬ ಹೆಸರಿದೆ. ಇದು ಹಸಿ ಅಥವಾ ಒಣ ರೂಪದಲ್ಲಿಯೂ ಅತ್ಯುತ್ತಮ ಎನಿಸುತ್ತದೆ. ಇದರಲ್ಲಿ ಐರನ್, ಕ್ಯಾಲ್ಶಿಯಂ, ಅಯೋಡಿನ್, ಕ್ಲೋರಿನ್, ವಿಟಮಿನ್ ಸಹಿತ ಇನ್ನೂ ಅನೇಕ ಪೋಷಕಾಂಶಗಳು ಅಡಗಿವೆ. ಸಾಮಾನ್ಯವಾಗಿ ಗರ್ಭವತಿಯರನ್ನು ಕಾಡುವ ಮಾರ್ನಿಂಗ್ ಸಿಕ್ ನೆಸ್ ದೂರಾಗಲು ಇದರ ರಸ ಸೇವಿಸಬೇಕು.
ಇದು ಸಹಜವಾಗಿಯೇ ಜೀರ್ಣಶಕ್ತಿ ಸುಧಾರಿಸಲು ನೆರವಾಗುತ್ತದೆ. ಹೊಟ್ಟೆಯ ಸಣ್ಣಪುಟ್ಟ ತೊಂದರೆಗಳನ್ನೂ ನಿವಾರಿಸುತ್ತದೆ. ಇದರ ಜೊತೆ ಓಮ, ಸೈಂಧವ ಲವಣ, ನಿಂಬೆರಸ ಬೆರೆಸಿ ಸೇವಿಸುವುದರಿಂದ ದುರ್ಬಲ ಜೀರ್ಣಶಕ್ತಿಯೂ ಎಷ್ಟೋ ಪಟ್ಟು ಸುಧಾರಿಸುತ್ತದೆ. ಇದರ ನಿಯಮಿತ ಸೇವನೆಯಿಂದ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದಿಲ್ಲ. ಹುಳಿತೇಗು ಸಹ ಮಾಯವಾಗುತ್ತದೆ. ನೆಗಡಿ, ಜ್ವರ, ತಲೆನೋವು ಹಾಗೂ ಮುಟ್ಟಿನ ಹೊಟ್ಟೆನೋವಿಗೂ ಇದು ಉಪಶಮನ ನೀಡುತ್ತದೆ. ನಿಯಮಿತ, ನಿರಂತರ ಶುಂಠಿ ಸೇವನೆಯಿಂದ ಕೊಲೆಸ್ಟ್ರಾಲ್ ಎಷ್ಟೋ ಪಟ್ಟು ಕಡಿಮೆ ಆಗುತ್ತದೆ.
ಓಮ :
ನಿಯಮಿತ ರೂಪದಲ್ಲಿ ಓಮ ಸೇವಿಸುವುದರಿಂದ ಡೈಜೆಶನ್ ಸುಸೂತ್ರವಾಗಿರುತ್ತದೆ. ಹೊಟ್ಟೆನೋವು, ಅಸಿಡಿಟಿಯ ಕಿರಿಕಿರಿ ತಪ್ಪುತ್ತದೆ. 1 ಚಮಚ ಓಮಕಾಳು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು, ತುಸು ಬಿಸಿ ನೀರು ಕುಡಿಯುವುದರಿಂದ ಎಷ್ಟೋ ಲಾಭವಿದೆ. ಓಮ, ಸೈಂಧವ ಲವಣ, ಇಂಗು, ಜಜ್ಜಿದ ನೆಲ್ಲಿಕಾಯಿ, ತುಸು ಜೇನುತುಪ್ಪ ಬೆರೆಸಿ ಬೆಳಗೂ ಬೈಗೂ ಸೇವಿಸುವುದರಿಂದ ಹುಳಿತೇಗು, ವಾಕರಿಕೆ, ಹೊಟ್ಟೆ ತೊಳೆಸುವಿಕೆ ಮುಂತಾವುದೆಲ್ಲ ಎಷ್ಟೋ ತಗ್ಗುತ್ತದೆ. ತಲೆನೋವು ಬಂದಾಗ ಓಮ ಅಗಿದು ಸೇವಿಸಿ, ಲಾಭ ಪಡೆಯಿರಿ. ಹೆಚ್ಚು ನವೆ, ಕಡಿತ, ತುರಿಕೆ ಇರುವ ಕಡೆ ಓಮ ಅರೆದು ಪೇಸ್ಟ್ ಹಚ್ಚಬೇಕು. ಕಿವಿ ನೋವು ಕಾಡುತ್ತಿದೆಯೇ? 1-2 ಹನಿ ಓಮದ ಎಣ್ಣೆ ಕಿವಿಗೆ ಹಾಕಿದರೆ ತಗ್ಗುತ್ತದೆ. ಕಿವಿಯಲ್ಲಾಗುವ ಸೋಂಕು ದೂರಗೊಳಿಸುವಲ್ಲಿ ಓಮದ ಪಾತ್ರ ಹಿರಿದು. ಆಸ್ತಮಾ ರೋಗಿಗಳು ದಿನಾ ಬೆಳಗ್ಗೆ 1 ಲೋಟ ಬಿಸಿ ನೀರಿಗೆ ಅರ್ಧ ಚಮಚ ಓಮದ ಪುಡಿ ಬೆರೆಸಿ ಸೇವಿಸುವುದರಿಂದ ರೋಗ ಉಲ್ಬಣಗೊಳ್ಳಲು ಬಿಡದೆ, ತಗ್ಗಿಸುತ್ತದೆ.
ಸಾಮಾನ್ಯವಾಗಿ ಮಕ್ಕಳಿಗೆ ಜಂತುಹುಳು ಕಾಟ ತಪ್ಪಿದ್ದಲ್ಲ. ಆಗ ಮಕ್ಕಳಿಗೆ ಅರ್ಧ ಲೋಟ ಬಿಸಿ ನೀರಿಗೆ 2-2 ಚಿಟಕಿ ಓಮ, ಬ್ಲ್ಯಾಕ್ ಸಾಲ್ಟ್ ಬೆರೆಸಿ ಕುಡಿಸುವುದರಿಂದ ಎಷ್ಟೋ ಲಾಭವಿದೆ. ತಲೆಯಲ್ಲಿ ಹೇನಿನ ಕಾಟವೇ? 1 ಚಮಚ ಸ್ಛಟಿಕದ ಪುಡಿಗೆ, 2 ಸಣ್ಣ ಚಮಚ ಓಮದ ಪುಡಿ ಬೆರೆಸಿ, ಇದಕ್ಕೆ ಅರ್ಧ ಗ್ಲಾಸ್ ಟೀ ಡಿಕಾಕ್ಷನ್ ಗೆ ಬೆರೆಸಿ ಸ್ನಾನಕ್ಕೆ ಮುನ್ನ ಕೂದಲಿನ ಬುಡಕ್ಕೆ ತಿಕ್ಕಿ 1 ಗಂಟೆ ಕಾಲ ನೆನೆದು, ನಂತರ ಬಿಸಿನೀರಲ್ಲಿ ಸ್ನಾನ ಮಾಡಿದರೆ ಹೇನಿನ ಕಾಟ ತಪ್ಪುತ್ತದೆ.
ಏಲಕ್ಕಿ :
ಇದು ಅಡುಗೆಗೆ ಸುವಾಸನೆ ಬೆರೆಸುವುದು ಮಾತ್ರವಲ್ಲದೆ, ಔಷಧಿಗೂ ಹೆಚ್ಚು ಉಪಯುಕ್ತ. ಇದನ್ನು ನಿಯಮಿತ ರೂಪದಲ್ಲಿ ಅಡುಗೆಗೆ ಬಳಸುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಆಂತರಿಕವಾಗಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಗುಣ ಇದಕ್ಕಿದೆ. ಉಸಿರಾಟಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆ ಕಾಡಿದಾಗ ಇದನ್ನು ಸೇವಿಸಿದರೆ ಹೆಚ್ಚಿನ ಲಾಭವಿದೆ.
ಉರಿಮೂತ್ರ, ಮೂತ್ರ ಕಟ್ಟುವಿಕೆ ಮುಂತಾದ ಸಮಸ್ಯೆಗೂ ಇದು ಹಿತಕರ. ಕಿಡ್ನಿಗೆ ಆಗುವ ರೋಗ ದೂರ ಮಾಡುವಲ್ಲಿಯೂ ಸಹಾಯಕ. ತಲೆನೋವು ತಕ್ಕಮಟ್ಟಿಗೆ ದೂರವಾಗಲಿಕ್ಕೂ ಸಹಾಯಕ. ಸುಸ್ತು, ಸಂಕಟ, ಮಾನಸಿಕ ಒತ್ತಡ ದೂರಾಗಲು ಇದು ಪೂರಕ. ಬ್ಯಾಕ್ಟೀರಿಯಲ್, ವೈರಲ್ ಇನ್ ಫೆಕ್ಷನ್ ಆದಾಗ ಇದರ ನೆರವು ಪಡೆಯಿರಿ. ಇದರಲ್ಲಿ ಧಾರಾಳ ಪೊಟ್ಯಾಶಿಯಂ ಅಡಗಿದೆ.
– ಮೋನಿಕ