ಪಾರ್ಶ್ವವಾಯು ಅಥವಾ ಬ್ರೇನ್‌ ಸ್ಟ್ರೋಕ್‌ ಮೆದುಳಿನ ಯಾವ ಭಾಗದಲ್ಲಾದರೂ ರಕ್ತ ಪೂರೈಕೆ ಸ್ಥಗಿತಗೊಳಿಸುವ ಅಥವಾ ಕಡಿಮೆ ಮಾಡುವುದರಿಂದ ಉಂಟಾಗುತ್ತದೆ. ಮೆದುಳಿನಲ್ಲಿ ಆಕ್ಸಿಜನ್‌ ಹಾಗೂ ಪೋಷಕಾಂಶಗಳ ಕೊರತೆಯಿಂದ ರಕ್ತನಾಳಗಳ ಮಧ್ಯೆ ರಕ್ತ ಗರಣೆಗಟ್ಟುವ ಕಾರಣದಿಂದ ಅದರ ಕ್ರಿಯಾಕಲಾಪಗಳಲ್ಲಿ ವ್ಯತ್ಯಯ ಉಂಟಾಗುತ್ತದೆ. ಈ ಕಾರಣದಿಂದ ಮೆದುಳಿನ ಜೀವಕೋಶಗಳು ನಷ್ಟವಾಗುತ್ತವೆ. ಅದರಿಂದಾಗಿ ಮೆದುಳು ತನ್ನ ನಿಯಂತ್ರಣ ಕಳೆದುಕೊಳ್ಳುತ್ತದೆ. ಅದನ್ನೇ `ಸ್ಟ್ರೋಕ್‌’ ಅಥವಾ `ಪಾರ್ಶ್ವವಾಯು’ (ಲಕ್ವಾ) ಎಂದು ಹೇಳಲಾಗುತ್ತದೆ. ಸಕಾಲಕ್ಕೆ ಇದಕ್ಕೆ ಚಿಕಿತ್ಸೆ ಕೊಡಿಸದೇ ಇದ್ದರೆ ಮೆದುಳು ಖಾಯಂ ಆಗಿ ಹಾನಿಗೊಳಗಾಗಬಹುದು, ಇಲ್ಲಿ ವ್ಯಕ್ತಿಯ ಸಾವು ಕೂಡ ಸಂಭವಿಸಬಹುದು.

ಪ್ರಸ್ತುತ ವಿಶ್ವದಲ್ಲಿ ಸುಮಾರು 80 ದಶಲಕ್ಷ ಜನರು ಸ್ಟ್ರೋಕ್‌ ನ ತೊಂದರೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ 55 ಮಿಲಿಯನ್‌ ನಷ್ಟು ಮಂದಿ ಶಾಶ್ವತ ಅಂಗವಿಕಲತೆಗೆ ತುತ್ತಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶೇ.25ರಷ್ಟು ಬ್ರೇನ್‌ ಸ್ಟ್ರೋಕ್‌ ನ ರೋಗಿಗಳ ವಯಸ್ಸು 40 ವರ್ಷ ಇರುತ್ತದೆ. ಅದೇ ಕಾರಣದಿಂದ ಅಕ್ಟೋಬರ್‌ ನ್ನು `ವರ್ಲ್ಡ್ ಸ್ಟ್ರೋಕ್‌ ಡೇ’ ಎಂದು ಆಚರಿಸಲಾಗುತ್ತದೆ. ಇದರ ಉದ್ದೇಶ ಸ್ಟ್ರೋಕ್‌ ನ್ನು ತಡೆಯುವುದು, ಚಿಕಿತ್ಸೆ ಹಾಗೂ ಸಹಕಾರ ನೀಡುವ ಕುರಿತಂತೆ ಜಾಗರೂಕತೆ ಹೆಚ್ಚಿಸುವುದಾಗಿದೆ. ಈ ಕುರಿತಂತೆ ಮೆದುಳು ರೋಗ ತಜ್ಞ ಹಾಗೂ ನ್ಯೂರಾಲಜಿಸ್ಟ್ ಡಾ. ಮೊಹನೀಶ್‌ ಹೀಗೆ ಹೇಳುತ್ತಾರೆ, “ಜಗತ್ತಿನಾದ್ಯಂತ ಬ್ರೇನ್‌ ಸ್ಟ್ರೋಕ್‌ ಸಾವಿಗೆ 3ನೇ ಅತಿ ದೊಡ್ಡ ಕಾರಣ ಎಂದು ಹೇಳಲಾಗುತ್ತದೆ. ಭಾರತದಲ್ಲಿಯೇ ಪ್ರತಿ ನಿಮಿಷಕ್ಕೆ 6 ಜನರು ಸಾವಿಗೀಡಾಗುತ್ತಿದ್ದಾರೆ. ಏಕೆಂದರೆ ಇಲ್ಲಿ ಬ್ರೇನ್‌ ಸ್ಟ್ರೋಕ್‌ ನಂತಹ  ವೈದ್ಯಕೀಯ ಸ್ಥಿತಿಯಲ್ಲಿ ಅದರ ಲಕ್ಷಣಗಳು, ಕಾರಣಗಳು, ತಡೆ ಹಾಗೂ ತಕ್ಷಣದ ಉಪಾಯಗಳ ಬಗ್ಗೆ ಜನಜಾಗೃತಿಯ ಕೊರತೆಯಿದೆ. ಬ್ರೇನ್‌ ಸ್ಟ್ರೋಕ್‌ ನ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಿದರೆ ಅವರು ಗುಣಮುಖರಾಗುವ ಸಾಧ್ಯತೆ ಶೇ.50-70 ರಷ್ಟು ಹೆಚ್ಚುತ್ತದೆ.

ಏನು ಕಾರಣ?

ಡಾ. ಮೊಹನೀಶ್‌ ಪ್ರಕಾರ, ಇಂದಿನ ಧಾವಂತದ ಜೀವನದಲ್ಲಿ ಮಾನಸಿಕ ಒತ್ತಡ, ಜೀವನಶೈಲಿ, ಧೂಮಪಾನ, ಮದ್ಯಪಾನ, ಅತಿ ರಕ್ತದೊತ್ತಡ, ಮಧುಮೇಹ, ಬೊಜ್ಜು ಮುಂತಾದ ಬ್ರೇನ್‌ ಸ್ಟ್ರೋಕ್‌ ಗೆ ಕಾರಣವಾಗಿವೆ. ಇದರ ಹೊರತಾಗಿ ಆರಾಮದಾಯಕ ಅಥವಾ ನಿರಂತರ ಕುಳಿತು ಕೆಲಸ ಮಾಡುವ ಶೈಲಿ ಸಹ ಮೆದುಳು ಹಾಗೂ ಹೃದಯ ಸಂಬಂಧಿ ರೋಗಗಳಿಗೆ ಆಮಂತ್ರಣ ನೀಡುತ್ತದೆ. ಇವೆಲ್ಲ ಕಾರಣಗಳು ಯುವ ಜನಾಂಗದವರಲ್ಲಿ ಈ ಕಾಯಿಲೆ ವೇಗವಾಗಿ ಹರಡಲು ಮುಖ್ಯ ಕಾರಣವಾಗಿದೆ.  ಶೇ.80ರಷ್ಟು ಜನರಿಗೆ ವಾತಾವರಣ ಹಾಗೂ ಹವಾಮಾನದಲ್ಲಾದ ಅಸಾಮಾನ್ಯ ಪರಿವರ್ತನೆ ಅದು ನಮ್ಮ ಮೆದುಳು ಹಾಗೂ ತ್ವಚೆಯ ಮೇಲೆ ತದ್ವಿರುದ್ಧ ಪರಿಣಾಮ ಬೀರಬಹುದು. ಅದರ ಪರಿಣಾಮ ಮುಂದಿನ ದಿನಗಳಲ್ಲಿ ಮಾರಕವಾಗಿ ಪರಿಣಮಿಸಬಹುದು.

ನರರೋಗ ತಜ್ಞ ಡಾ. ಸಿದ್ಧಾರ್ಥ ಹೀಗೆ ಹೇಳುತ್ತಾರೆ, ಬ್ರೇನ್‌ ಸ್ಟ್ರೋಕ್‌ ನ್ನು ಸಾಮಾನ್ಯವಾಗಿ ನಿರ್ಲಕ್ಷ ಮಾಡಲಾಗುತ್ತದೆ. ಆದರೆ ವಾಸ್ತವದಲ್ಲಿ ಪ್ರತಿ 6 ಜನರಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಈ ರೀತಿ ಒಮ್ಮೆಯಾದರೂ ಸಿಲುಕುತ್ತಾನೆ. ಚಳಿಗಾಲದಲ್ಲಿ ಇದರ ಸಾಧ್ಯತೆ ಹೆಚ್ಚು. ಹೃದ್ರೋಗ, ಕ್ಯಾನ್ಸರ್‌ ಹಾಗೂ ಮಧುಮೇಹಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಜನರು ಬ್ರೇನ್‌ ಸ್ಟ್ರೋಕ್‌ ನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ.

ಟೈಪ್‌ ಮಧುಮೇಹ ರೋಗಿಗಳಲ್ಲಿ ಇದರ ಅಪಾಯ ಹೆಚ್ಚು. ಹೈ ಬಿಪಿ ಹಾಗೂ ಹೈಪರ್‌ ಟೆನ್ಶನ್‌ ರೋಗಿಗಳು ಇದರ ಕಪಿಮುಷ್ಟಿಗೆ ಬಹುಬೇಗ ಸಿಲುಕುತ್ತಾರೆ. ಗರ್ಭ ನಿರೋಧಕ ಮಾತ್ರೆಗಳ ಸೇವನೆ ಹಾಗೂ ಕೊಲೆಸ್ಟ್ರಾಲ್ ನ ಹೆಚ್ಚುತ್ತಿರುವ ಮಟ್ಟ ಕೂಡ ಬ್ರೇನ್ ಸ್ಟ್ರೋಕ್‌ಗೆ ಆಮಂತ್ರಣ ನೀಡುತ್ತದೆ.

ಬ್ರೇನ್ಸ್ಟ್ರೋಕ್ ಲಕ್ಷಣಗಳು

ಇಡೀ ದೇಹದಲ್ಲಿ ಮೆದುಳಿನ ಕೆಲಸ ಅತ್ಯಂತ ಮಹತ್ವದ್ದಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ದೇಹದ ಇತರೆ ರೋಗಗಳನ್ನು ನಿರ್ಲಕ್ಷಿಸಿದರೆ ನಮ್ಮ ಮೆದುಳಿಗೆ ತದ್ವಿರುದ್ಧ ರೀತಿಯಲ್ಲಿ ಪರಿಣಾಮ ಉಂಟಾಗುತ್ತದೆ. ಬ್ರೇನ್‌ ಸ್ಟ್ರೋಕ್‌ ನ ಸಂಕೇತವೆಂಬಂತೆ ಬಾಯಿ, ಕೈ ಹಾಗೂ ಕಾಲುಗಳು ಅಂಕುಡೊಂಕಾಗುವುದು, ತಲೆಸುತ್ತು ಬರುವುದು, ಕಣ್ಣುಗಳು ಮಂಜುಮಂಜಾಗಿ ಕಾಣುವುದು, ಮಾತನಾಡಲು, ನಡೆದಾಡಲು ಸಮಸ್ಯೆ, ಬೆನ್ನುನೋವು ಇವ ಪ್ರಮುಖ ಲಕ್ಷಣಗಳು.

ಸ್ಟ್ರೋಕ್‌ ನಾನ್‌ ಬ್ಲೀಡಿಂಗ್‌ ಹಾಗೂ ಬ್ಲೀಡಿಂಗ್‌ ಎರಡೂ ರೀತಿಯದ್ದಾಗಿರುತ್ತದೆ. ಅದರಿಂದಾಗಿ ಮೆದುಳಿನ ನರಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇಲ್ಲಿ ಆ ನರಗಳು ಒಡೆದು ಹೋಗಬಹುದು.

ಸ್ಟ್ರೋಕ್ಗೆ ತಕ್ಕಂತೆ ಚಿಕಿತ್ಸೆ

ಸ್ಟ್ರೋಕ್‌ ನ ಸ್ಥಿತಿಯಲ್ಲಿ ತಕ್ಷಣವೇ ಚಿಕಿತ್ಸೆ ಆಗಬೇಕು. ಸ್ಟ್ರೋಕ್‌ ಹೊಡೆದ 3-4 ಗಂಟೆಗಳೊಳಗೆ ಚಿಕಿತ್ಸೆ ಕೊಡಿಸಿದರೆ ಮೆದುಳಿನಲ್ಲಿ ಆಗಬಹುದಾದ ಸಂಭಾವ್ಯ ಹಾನಿ ಅಥವಾ ತೊಂದರೆಯನ್ನು ಕಡಿಮೆಗೊಳಿಸಬಹುದು. ಉದಾಹರಣೆಗೆ, 3 ಗಂಟೊಳಗಾಗಿ ಕ್ಲಾಟ್ ಬಸ್ಟಿಂಗ್‌ ಔಷಧಿ ಕೊಡಬೇಕು. ಆ ಬಳಿಕ ತಜ್ಞ ವೈದ್ಯರು ಸಿಟಿ ಸ್ಕ್ಯಾನ್‌, ಎಂಆರ್‌ಐ ಮುಂತಾದವುಗಳನ್ನು ಮಾಡಬೇಕು. ಇದರ ಉದ್ದೇಶ ಮೆದುಳಿನ ಹಾನಿಯನ್ನು ತಡೆಗಟ್ಟುವುದಾಗಿದೆ. ಒಂದು ವೇಳೆ ಸ್ಟ್ರೋಕ್‌ ಮೆದುಳಿನ ರಕ್ತ ಪೂರೈಕೆಯ ಅಡ್ಡಿಯಿಂದಾಗಿ ಆಗಿದ್ದರೆ ಅದರ ಚಿಕಿತ್ಸೆ ಕೆಳಕಂಡಂತೆ ಮಾಡಬೇಕು :

ನಾನ್‌ ಬ್ಲೀಡಿಂಗ್‌ ಬ್ರೇನ್‌ ಸ್ಟ್ರೋಕ್‌ ಆಗಿದ್ದರೆ 3 ಗಂಟೆಗಳೊಳಗೆ ಕ್ಲಾಟ್‌ ಬ್ಲಸ್ಟಿಂಗ್‌ ಡ್ರಗ್‌ ನ ಚುಚ್ಚುಮದ್ದು ಕೊಡುವುದು ಅತ್ಯಂತ ಅಗತ್ಯ. ಜೊತೆಗೆ ರಕ್ತವನ್ನು ತೆಳ್ಳಗಾಗಿಸುವ ಔಷಧಿ ಕೂಡ ಕೊಡಬೇಕು. ಏಕೆಂದರೆ ಒಂದೆಡೆ ರಕ್ತ ಜಮೆಗೊಳ್ಳಬಾರದು. ಇದರ ಹೊರತಾಗಿ ಶಸ್ತ್ರಚಿಕಿತ್ಸೆ ಕೂಡ ಮಾಡಲಾಗುತ್ತದೆ. ಅದರಲ್ಲಿ ಕುತ್ತಿಗೆ ಭಾಗದ ಸಂಕುಚಿತ ರಕ್ತನಾಳಗಳನ್ನು ತೆಗೆಯಲಾಗುತ್ತದೆ.

ಒಂದು ವೇಳೆ ಬ್ಲೀಡಿಂಗ್‌ ಕಾರಣದಿಂದ ಬ್ರೇನ್‌ ಸ್ಟ್ರೋಕ್‌ ಆಗಿದ್ದರೆ ನಾರ್ಮಲ್ ಬ್ಲಡ್‌ ಕ್ಲಾಟಿಂಗ್‌ ನ್ನು ಕಾಯ್ದುಕೊಂಡು ಹೋಗುವಂತಹ ಔಷಧವನ್ನು ನೀಡಲಾಗುತ್ತದೆ. ಮೆದುಳಿನಿಂದ ರಕ್ತವನ್ನು ಹೊರತೆಗೆಯುವ ಅಥವಾ ಒತ್ತಡವನ್ನು ಕಡಿಮೆಗೊಳಿಸುವ ಸರ್ಜರಿ ಮಾಡಲಾಗುತ್ತದೆ.

ಬ್ಲೀಡಿಂಗ್‌ ನ್ನು ತಡೆಯಲು ಕಾಯಿಲ್ ಅಂದರೆ ತಂತಿಯನ್ನು ಬಳಸಲಾಗುತ್ತದೆ. ಇದರ ಹೊರತಾಗಿ ಮೆದುಳಿನ ಖಾಲಿ ಭಾಗದಲ್ಲಿ ಟ್ಯೂಬ್‌ ಹಾಕಿ ಒತ್ತಡ ಕಡಿಮೆಗೊಳಿಸುವ ಪ್ರಯತ್ನ ಮಾಡಲಾಗುತ್ತದೆ. ಅಫೇಸಿಯಾ ಉಂಟಾಗುವ ಸಾಧ್ಯತೆ ಸ್ಟ್ರೋಕ್‌ ನ ಬಳಿಕ ರೋಗಿಗೆ ದೈಹಿಕ ಹಾಗೂ ಮಾನಸಿಕ ಅಸಮರ್ಥತೆ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಅದು ಸ್ಟ್ರೋಕ್‌ ನ ತೊಂದರೆಗೊಳಗಾದ ಭಾಗ ಮತ್ತು ಆಕಾರದ ಮೇಲೆ ಅವಲಂಬಿಸಿರುತ್ತದೆ.  `ನ್ಯಾಷನಲ್ ಅಫೇಸಿಯಾ ಅಸೋಸಿಯೇಶನ್‌’ ಪ್ರಕಾರ, ಶೇ.25-35ರಷ್ಟು ಬ್ರೇನ್‌ ಸ್ಟ್ರೋಕ್‌ ರೋಗಿಗಳು ಅಫೇಸಿಯಾ ಕಪಿಮುಷ್ಟಿಗೆ ಸಿಲುಕುತ್ತಾರೆ. ಇದು ಎಂತಹ ಒಂದು ಸ್ಥಿತಿಯೆಂದರೆ, ರೋಗಿ ಮಾತನಾಡುವ ಬರೆಯುವ ಹಾಗೂ ಭಾವನೆ ವ್ಯಕ್ತಪಡಿಸುವ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು `ಲ್ಯಾಂಗ್ವೆಂಜ್‌ ಡಿಸಾರ್ಡರ್‌’ ಎಂದೂ ಕರೆಯುತ್ತಾರೆ. ಇದು ಬ್ರೇನ್‌ ಟ್ಯೂಮರ್‌, ಬ್ರೇನ್‌ ಇನ್‌ಫೆಕ್ಷನ್‌, ಅಲ್ಜೈಮರ್‌ ಮುಂತಾದ ಕಾರಣಗಳಿಂದ ಆಗುತ್ತದೆ. ಹಲವು ಪ್ರಕರಣಗಳಲ್ಲಿ ಅಫೇಸಿಯಾನ್ನು ಎಪಿಲೆಪ್ಸಿ (ಫಿಟ್ಸ್) ಹಾಗೂ ಇತರೆ ನರರೋಗಗಳ ಸಂಕೇತದ ರೂಪದಲ್ಲೂ ಕಾಣಲಾಗುತ್ತದೆ.

ರಿಹ್ಯಾಬಿಲಿಟೇಶನ್ಉಪಯುಕ್ತ

ಬ್ರೇನ್‌ ಸ್ಟ್ರೋಕ್‌ ನಿಂದಾಗಿ ಆದ ಹಾನಿಯನ್ನು ಭರ್ತಿ ಮಾಡಲು ರಿಹ್ಯಾಬಿಲಿಟೇಶನ್‌ ಬಹಳಷ್ಟು ನೆರವಾಗುತ್ತದೆ. ಅದರಿಂದಾಗಿ ಬಹಳಷ್ಟು ರೋಗಿಗಳ ಆರೋಗ್ಯ ಚೇತರಿಸುತ್ತದೆ. ಡೆಡ್‌ ಸ್ಕಿನ್‌ ಸೆಲ್ಸ್, ನರ್ವ್ ಸೆಲ್ಸ್ ಸರಿಪಡಿಸಲು ಅಥವಾ ಮರುಸ್ಥಾಪಿಸಲು ಸಾಧ್ಯವಿಲ್ಲ. ಆದರೆ ಮನುಷ್ಯನ ಮೆದುಳು ಫ್ಲೆಕ್ಸಿಬಲ್ ಆಗಿರುತ್ತದೆ. ಅದರಲ್ಲಿ ರೋಗಿ ಹಾನಿರಹಿತ ಬ್ರೇನ್‌ ಸೆಲ್ಸ್ ಉಪಯೋಗ ಮಾಡಿಕೊಂಡು ಕೆಲಸ ಮಾಡುವ ಹೊಸ ವಿಧಾನ ಕಲಿಯಬಹುದು. ಅಂತಹ ರೋಗಿಗಳ ಜೀವನವನ್ನು ಸೂಕ್ತ ನಿರ್ವಹಣೆ, ಪ್ರೋತ್ಸಾಹದ ಜೊತೆಗೆ ಸಾರ್ಥಕಗೊಳಿಸಬಹುದು.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ