ಇಂದು ಮಹಾನಗರಗಳಲ್ಲಿ ವಾಸಿಸುವ ಯುವಜನತೆ ಹಲವು ವ್ಯಾಯಾಮಗಳ ಮೂಲಕ ತಮ್ಮನ್ನು ತಾವು ಪರ್ಫೆಕ್ಟ್ ಫಿಟ್ ಆಗಿರಿಸಿಕೊಳ್ಳಲು ಹಲವಾರು ಪ್ರಯಾಸಗಳನ್ನು ಮಾಡುತ್ತಿದೆ. ಜಿಮ್ ಮತ್ತು ಪಾರ್ಕುಗಳಲ್ಲಿ ಹೆಚ್ಚುತ್ತಿರುವ ಅವರ ಜನಸಂದಣಿ ಇದನ್ನು ಸೂಚಿಸುತ್ತದೆ. ಆದರೆ ಎಲ್ಲರೂ ಇದೇ ತರಹ ಇರುವುದಿಲ್ಲ.`ನಾನಂತೂ ಸರಿಯಾಗಿದ್ದೀನಿ, ತಿಂದದ್ದು ಚೆನ್ನಾಗಿ ಜೀರ್ಣವಾಗುತ್ತದೆ, ಹಾಯಾಗಿ ನಿದ್ದೆ ಬರುತ್ತದೆ. ಹಾಗಿರುವಾಗ ಅಷ್ಟೆಲ್ಲ ಕಷ್ಟಪಟ್ಟು ಬೆವರುಹರಿಸಿ ವ್ಯಾಯಾಮ, ಆಟೋಟಗಳಲ್ಲಿ ಪಾಲ್ಗೊಳ್ಳಬೇಕಾದ ಅಗತ್ಯವೇನು?’ ಹೀಗೆ, ವಿತಂಡವಾದ ಮಾಡುವ ಒಂದು ವಿಲಕ್ಷಣ ತಂಡವೇ ಇದೆ. ಇಂಥ ಮಂದಿ ಮುಂದೆ ಏನೆಲ್ಲ ಕಷ್ಟಪಡಬೇಕಾಗುತ್ತದೋ ಹೇಳಲಾಗದು. ಇಂಥವರು ತಮ್ಮ ಆಹಾರದ ವಿಷಯದಲ್ಲೂ ಅಷ್ಟೇ ನಿರ್ಲಕ್ಷ್ಯ ವಹಿಸುತ್ತಾರೆ, ಅತ್ತ ಹೆಲ್ದಿ ಡಯೆಟ್‌ ಗೂ ಮಹತ್ವ ಕೊಡುವುದಿಲ್ಲ, ಇತ್ತ ವ್ಯಾಯಾಮದ ಗೊಡವೆಯೂ ಇರುವುದಿಲ್ಲ.

ವ್ಯಾಯಾಮ ಎಂದರೆ ಅಲರ್ಜಿ

ಎಕ್ಸ್ ಪರ್ಟ್ಸ್ ಹೇಳುವ ಪ್ರಕಾರ, ಇಂದು ತೆಳುಕಾಯ ಅಥವಾ ಆರೋಗ್ಯಕರವಾಗಿ ಕಂಡುಬರುವ ಇಂಥ ಯುವಜನತೆ, ಮುಂದೆ ಭವಿಷ್ಯದಲ್ಲೂ ಹಾಗೆಯೇ ಇರುತ್ತಾರೆ ಎಂದೇನೂ ಹೇಳಲಾಗದು. ಸಾಮಾನ್ಯವಾಗಿ ಕಂಡುಬರುವ ವಿಚಾರವೆಂದರೆ ಹಿಂದೆ ಸ್ಲಿಮ್ ಟ್ರಿಮ್ ಆಗಿದ್ದ ಜನ, ಮುಂದೆ ದಪ್ಪ ಆಗಿ ಬೊಜ್ಜು ಹೊಂದಬಹುದು ಅಥವಾ ಬೇರಾವುದೇ ಬಗೆಯ ರೋಗಗಳಿಗೆ ತುತ್ತಾಗಬಹುದು. ಆದ್ದರಿಂದ ಇಂಥ ಮಂದಿ ವ್ಯಾಯಾಮದಿಂದ ತಮಗೇನು ಲಾಭ ಎಂಬ ವಿತಂಡವಾದ ಬಿಟ್ಟುಬಿಡುವುದೇ ಸರಿ.

ಫಿಟ್‌ ನೆಸ್‌ ಎಕ್ಸ್ ಪರ್ಟ್ಸ್ ಪ್ರಕಾರ, ಯಾರು ತೆಳುಕಾಯ ಹೊಂದಿದ್ದಾರೋ ಅವರು 100% ಪರಿಪೂರ್ಣ ಆರೋಗ್ಯವಂತರೆಂದು ಹೇಳಲಾಗದು. ಯೌವನವನ್ನು ಮುಂದಿನ ಎಷ್ಟೋ ವರ್ಷ ಹಾಗೇ ಉಳಿಸಿಕೊಳ್ಳಲು ಹಾಗೂ ರೋಗಗಳನ್ನು ದೂರವಿರಿಸಲು ವ್ಯಾಯಾಮ ಅತ್ಯುತ್ತಮ ಸಾಧನವಾಗಿದೆ.

ವಾಕಿಂಗ್‌, ಬ್ರಿಸ್ಕ್ ವಾಕ್‌, ಜಾಗಿಂಗ್‌, ಸ್ವಿಮ್ಮಿಂಗ್‌, ಸ್ಕಿಪ್ಪಿಂಗ್‌, ವ್ಯಾಯಾಮ, ಯೋಗಾಭ್ಯಾಸ…. ಎಲ್ಲರಿಗೂ ಒಳ್ಳೆಯದೇ. ಇದನ್ನು ಇಂಥ ವಯಸ್ಸಿನವರೇ ಮಾಡಬೇಕು ಎಂಬ ನಿರ್ಬಂಧವಿಲ್ಲ. ಈ ಎಲ್ಲಾ ವ್ಯಾಯಾಮಗಳನ್ನೂ ಕಿಶೋರಾವಸ್ಥೆಯಿಂದಲೇ ರೂಢಿಸಿಕೊಂಡುಬಿಟ್ಟರೆ, ಮುಂದೆ ಜೀವನಪರ್ಯಂತ ಅದು ಆರಾಮ ನೀಡುತ್ತದೆ, ಭವಿಷ್ಯದಲ್ಲಿ ಹೆಚ್ಚಿನ ಲಾಭವಿದೆ.

ಯೌವನದಲ್ಲೇ ಕಾಡುವ ಹೃದ್ರೋಗಗಳು

ಹಿಂದೆಲ್ಲ ಕೇವಲ 50-60 ವಯಸ್ಸಿನವರು ಮಾತ್ರವೇ ಹೃದ್ರೋಗಗಳಿಗೆ ಈಡಾಗುತ್ತಿದ್ದರು. ಆಗೆಲ್ಲ ತುಂಬು ಯೌವನದ ಜನತೆಗೆ ಹೃದ್ರೋಗ ಕಾಡಬಹುದು ಎಂಬ ಪರಿಕಲ್ಪನೆಯೂ ಇರುತ್ತಿರಲಿಲ್ಲ. ಮುಖ್ಯವಾಗಿ ಅಂದಿನ ಕಾಲದಲ್ಲಿ ಆಹಾರ ಅಷ್ಟು ಪೌಷ್ಟಿಕವಾಗಿ ಇರುತ್ತಿತ್ತು. ಆದರೆ ಕಲಬೆರಕೆಯೇ ಪ್ರಧಾನವಾಗಿರುವ ಇಂದಿನ ಆಹಾರದಲ್ಲಿ ಏನನ್ನು ತಾನೇ ಒಳ್ಳೆಯದನ್ನು ಬಯಸಲು ಸಾಧ್ಯ?

ಆದರೆ ಇಂದಿನ ಆಧುನಿಕ ಯುಗದಲ್ಲಿ ಹೆಲ್ದಿ ಡಯೆಟ್‌ ಹಾಗೂ ವ್ಯಾಯಾಮವನ್ನು ನಿರ್ಲಕ್ಷಿಸುವ ಯುವಜನತೆ 30ರ ಹರೆಯದಲ್ಲೇ ಹೃದ್ರೋಗಗಳಿಗೆ ತುತ್ತಾಗುವ ಎಲ್ಲಾ ಸಾಧ್ಯತೆಗಳೂ ಉಂಟು.

ಇಂದಿನ ಆಧುನಿಕ ವೈದ್ಯಕೀಯದ ಪ್ರಕಾರ, ರಾತ್ರಿ ನಿದ್ರಿಸುವಾಗ ಅತಿಯಾಗಿ ಬೆವರುವಿಕೆ, ಬಹಳ ಸುಸ್ತು ಸಂಕಟ ಅನುಭವಿಸುವುದು, ಎದೆಯಲ್ಲಿ ಕ್ರಮೇಣ ನೋವು ಹೆಚ್ಚಾಗುವಿಕೆ….. ಇತ್ಯಾದಿಗಳನ್ನು ಕೇಲವು ಹಾರ್ಮೋನ್‌ ಇಂಬ್ಯಾಲೆನ್ಸ್ ಎಂದು ತಳ್ಳಿಹಾಕುವಂತಿಲ್ಲ. ಈ ಲಕ್ಷಣ ಕಾಣಿಸಿಕೊಂಡ ಕೂಡಲೇ ಅಗತ್ಯವಾಗಿ ಸೂಕ್ತ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು.

ಜೆನಿಟಿಕ್ಲಿಂಕ್

ಯುವಜನತೆಯ ಒಂದು ವರ್ಗ ಹೀಗೆ ಯೋಚಿಸುವುದೂ ಉಂಟು. ತಮ್ಮ ತಾಯಿ ತಂದೆ ತೆಳುಕಾಯದವರು, ಜೊತೆಗೆ ತಾವು ಈಗ ಉತ್ತಮ ಪರ್ಸನಾಲ್ಟಿಯಲ್ಲೇ ಇರುವುದರಿಂದ, ಸ್ಥೂಲಕಾಯ ಅಥವಾ ಇನ್ನಿತರ ರೋಗಗಳಿಗೆ ಸಂಬಂಧಪಟ್ಟಂತೆ ತಲೆ ಕೆಡಿಸಿಕೊಳ್ಳಬೇಕೇಕೆ? ಇಂಥವರ ತಾಯಿ ತಂದೆ 60-70 ವರ್ಷ ಬದುಕಿದ್ದರು, ಹೀಗಾಗಿ ತಾವು ಸಹ ಧಾರಾಳವಾಗಿ ಅಷ್ಟು ವರ್ಷ ಬದುಕಿಯೇ ಇರುತ್ತೇವೆ ಎಂದುಕೊಳ್ಳುತ್ತಾರೆ. ಅದು ಹಾಗೆಯೇ ಆಗುತ್ತದೆ ಎಂದು ದೃಢಪಡಿಸುವ ಯಾವ ವೈಜ್ಞಾನಿಕ ಆಧಾರ ಇಲ್ಲ.

ವ್ಯಾಯಾಮದಿಂದ ಲಾಭವಿಲ್ಲ ಎಂದುಕೊಳ್ಳುವುದು ತಪ್ಪೇ ಆಗುತ್ತದೆ. ಏಕೆಂದರೆ ಎಷ್ಟೋ ರೋಗಗಳು ಜೆನಿಟಿಕ್‌ ಲಿಂಕ್‌ ಇಲ್ಲದೆಯೇ ಬಂದು ಕೂಡಿಕೊಳ್ಳುತ್ತವೆ. ಕೇವಲ 5 ಬಗೆಯ ಕ್ಯಾನ್ಸರ್‌ ರೋಗ ಮಾತ್ರವೇ ಫ್ಯಾಮಿಲಿ ಹಿಸ್ಟ್ರಿಯ ಮೂಲ ಹೊಂದಿದೆ. ಮೌತ್‌, ಲಂಗ್ಸ್, ಸ್ಕಿನ್‌ ಕ್ಯಾನ್ಸರ್‌ ಗೂ ಆನುವಂಶಿಕತೆಗೂ ಸಂಬಂಧವಿಲ್ಲ.

ಯಾವ ಯುವಜನತೆಯ ಹಿಂದಿನ ತಲೆಮಾರಿನಲ್ಲಿ ಮೊದಲು ಯಾರಿಗೂ ಎಂದಿಗೂ ಕ್ಯಾನ್ಸರ್‌ತಗುಲಿರುವುದಿಲ್ಲವೋ, ಅಂಥ ಮುಂದಿನ ತಲೆಮಾರಿನಲ್ಲಿ ಧೂಮಪಾನ, ಮದ್ಯಪಾನಗಳಂಥ ದುರಭ್ಯಾಸಗಳಿಂದಾಗಿ ಕ್ಯಾನ್ಸರ್‌ ನಂಥ ಮಹಾಮಾರಿ ವಕ್ರಿಸಿಕೊಳ್ಳುವುದು ಆಶ್ಚರ್ಯವೇನಲ್ಲ.

ಮೂಳೆಯ ಶಕ್ತಿ

ಆಸ್ಟಿಯೋಪೊರೋಸಿಸ್‌ ನಿಂದ ಮೂಳೆಗಳಲ್ಲಿ ಫ್ರಾಕ್ಚರ್‌ ಆಗುವುದು ಮಾಮೂಲಿ ವಿಷಯ. ಕ್ರಮೇಣ ವಯಸ್ಸು ಹೆಚ್ಚುತ್ತಿದ್ದಂತೆ, ಮೂಳೆಗಳನ್ನು ಸಂರಕ್ಷಿಸುವ ಜೀವಕೋಶಗಳು ನಿಷ್ಕ್ರಿಯಗೊಳ್ಳುತ್ತಾ ಹೋಗುತ್ತವೆ. ಇತ್ತೀಚಿನ ಹೊಸ ಅಧ್ಯಯನಗಳ ಪ್ರಕಾರ, ತಮ್ಮ ಯೌವನದಲ್ಲಿ ವ್ಯಾಯಾಮದ ಮಹತ್ವವನ್ನು ನಿರ್ಲಕ್ಷಿಸುವ ಮಂದಿ, ಆಸ್ಟಿಯೋಪೊರೋಸಿಸ್‌ ಗೆ ತುತ್ತಾಗುತ್ತಾರೆ. ಈ ಕುರಿತಾಗಿ ತಜ್ಞರು, ತುಂಬು ಯೌವನದಲ್ಲಿ ಭಾರಿ ತೂಕ ಎತ್ತಿಳಿಸುವಂಥ ವ್ಯಾಯಾಮಗಳನ್ನು ಅಗತ್ಯವಾಗಿ ಮಾಡಬೇಕು. ನುರಿತ ತರಬೇತುದಾರರ ನೇತೃತ್ವದಲ್ಲಿ ಮಾಡಲಾಗುವ ಈ ವ್ಯಾಯಾಮಗಳಿಂದ, ಬೆನ್ನೆಲುಬು ಹಾಗೂ ಮಂಡಿ ಸಶಕ್ತಗೊಳ್ಳುತ್ತವೆ. ಇದರ ಹೊರತವಾಗಿ ಕ್ಯಾಲ್ಶಿಯಂ ಮತ್ತು ವಿಟಮಿನ್ಸ್ ನ್ನು ಸಹ ಧಾರಾಳವಾಗಿ ಸೇವಿಸಬೇಕು. ನಮ್ಮ ದೈನಂದಿನ ಆಹಾರದಲ್ಲಿ ಸೋಯಾಬೀನ್ಸ್, ಹುರುಳಿಕಾಳು, ಒಣ ಹಣ್ಣು ಹುರುಳಿಯ ಬೀಜ (ರಾಜ್ಮಾ), ಹಲಸಂದೆಕಾಳು, ಬೇಳೆಗಳು ಇತ್ಯಾದಿಗಳ ಸೇವನೆಯಿಂದ ಕ್ಯಾಲ್ಶಿಯಂ ಹಾಗೂ ವಿಟಮಿನ್‌ ಡಿ ಕೊರತೆಯನ್ನು ನೀಗಿಸಬಹುದು, ಎನ್ನುತ್ತಾರೆ.

ದುರ್ಬಲ ಜೀರ್ಣಶಕ್ತಿ

ವ್ಯಾಯಾಮವೆಂದರೆ ಮುಖ ಸಿಂಡರಿಸುವ ಯುವಜನರು ರೋಗಕ್ಕೆ ತುತ್ತಾದಾಗ, ಸಾಮಾನ್ಯವಾಗಿ ಅವರ ಪೋಷಕರು ವೈದ್ಯರ ಬಳಿ ಬಂದು, ನಾವು ಇವರಿಗೆ ದಿನ ಪೌಷ್ಟಿಕ ಆಹಾರವನ್ನೇ ಕೊಡುತ್ತೇವೆ. ಆದರೆ ಇವರ ದೇಹಕ್ಕೆ ಯಾವುದೂ ತಟ್ಟುವುದೇ ಇಲ್ಲ ಎಂದು ದೂರುವುದನ್ನು ಕಾಣುತ್ತೇವೆ.

ಈ ಕುರಿತಾಗಿ ತಜ್ಞರು ಹೇಳುವುದೆಂದರೆ, ಪ್ರತಿದಿನ ವ್ಯಾಯಾಮ ಮಾಡುವವರಿಗೆ ಮಾತ್ರವೇ ಪೌಷ್ಟಿಕ ಆಹಾರದ ಲಾಭ ಸರಿಯಾದ ಕ್ರಮದಲ್ಲಿ ದಕ್ಕಲು ಸಾಧ್ಯ. ದುರ್ಬಲ ಜೀರ್ಣಶಕ್ತಿಯಳ್ಳ ಮಂದಿಗೆ ಪೌಷ್ಟಿಕ ಆಹಾರ ಯಾವುದೇ ಉತ್ತಮ ಪರಿಣಾಮ ಬೀರದು.

ಅಸಲಿಗೆ ನಡೆಯುವುದೇನು?

ಈ ಜೀರ್ಣಕ್ರಿಯೆಯ ಕುರಿತಾಗಿ ಆಹಾರ ಮತ್ತು ಪೋಷಣ ತಜ್ಞರು ಹೇಳುವುದೆಂದರೆ, ಕ್ರಮೇಣ ವಯಸ್ಸು ಹೆಚ್ಚಿದಂತೆಲ್ಲ, ಪುರುಷರು ಹಾಗೂ ಮಹಿಳೆಯರ ಮೆಟಬಾಲಿಕ್‌ ರೇಟ್‌ ಪ್ರತಿ ವರ್ಷ ಶೇ.1ರ ಪ್ರಮಾಣದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಕಿಶೋರಾವಸ್ಥೆಯಿಂದಲೇ ಯಾರು ವ್ಯಾಯಾಮವನ್ನು ಚೆನ್ನಾಗಿ ರೂಢಿಸಿಕೊಂಡಿರುತ್ತಾರೋ ಹಾಗೂ ವಯಸ್ಸಾದ ಮೇಲೂ ಅದನ್ನು ಯಥಾಶಕ್ತಿ ಸತತ ಮುಂದುವರಿಸುತ್ತಾರೋ, ಅಂಥವರ ಜೀರ್ಣಕ್ರಿಯೆ, ವ್ಯಾಯಾಮವನ್ನೇ ಮಾಡದವರಿಗಿಂತ ಎಷ್ಟೋ ಪಾಲು ಉತ್ತಮವಾಗಿರುತ್ತದೆ. ಇಂಥ ಉತ್ತಮ ಜೀರ್ಣಶಕ್ತಿ ಹೊಂದಿದ ಮಂದಿ ಮಾತ್ರ ಎಲ್ಲಾ ಬಗೆಯ ಆಹಾರದ ಆನಂದ ಪಡೆಯಲು ಸಾಧ್ಯ.

ವ್ಯಾಯಾಮದಿಂದ ಅರಳುವ ವ್ಯಕ್ತಿತ್ವ

ವ್ಯಾಯಾಮ ಕೇವಲ ಸ್ಥೂಲಕಾಯದವರಿಗೆ, ಅವರ ಮೈತೂಕ ಕರಗಿಸಲಷ್ಟೆ ಎಂದು ಎಷ್ಟೋ ಮಂದಿ ಭಾವಿಸುತ್ತಾರೆ. ಅದು ಹಾಗಲ್ಲ, ತೆಳುಕಾಯದವರು ವ್ಯಾಯಾಮ ಶುರು ಮಾಡಿದ ನಂತರ, ಅವರ ಪೀಚುಪೀಚಾದ ಶರೀರ, ಕ್ರಮೇಣ ತುಂಬಿಕೊಳ್ಳುತ್ತದೆ. ಹೀಗಾಗಿ ಅಂಥವರ ವ್ಯಕ್ತಿತ್ವ ಪರ್ಫೆಕ್ಟ್ ಶೇಪ್‌ ಗೆ ಬರುತ್ತದೆ, ಪರ್ಸನಾಲ್ಟಿ ಇಂಪ್ರೂವ್ ‌ಆಗುತ್ತದೆ. ಹೀಗೆ ಪ್ರತಿನಿತ್ಯ ವ್ಯಾಯಾಮ ಮಾಡುವ ಜನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಾರೆ, ನಿರ್ಭಯರಾಗಿ ಶಕ್ತಿಶಾಲಿಗಳೆನಿಸುತ್ತಾರೆ.

ಇಲ್ಲಿಯವರೆಗೂ ನಿಮಗೆ ವ್ಯಾಯಾಮ ಮಾಡುವ ಆಸಕ್ತಿಯೇ ಇಲ್ಲದಿದ್ದರೆ, ಚಿಂತೆಯಿಲ್ಲ. ಈಗಲೂ ತಡವಾಗಿಲ್ಲ, `ಬೆಟರ್‌ ಲೇಟ್ ದ್ಯಾನ್‌ ನೆವರ್‌’ ಎಂಬಂತೆ, ನಾಳೆಯಿಂದಲೇ ವ್ಯಾಯಾಮ ಶುರು ಮಾಡಿ. ಹೀಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಹಾಗೂ ಪೌಷ್ಟಿಕ ಆಹಾರ ಸೇವಿಸುವುದನ್ನು ನೀವು ರೂಢಿಸಿಕೊಂಡರೆ, ನಿಮ್ಮಲ್ಲಿ ನೀವು ಹೊಸ ಪರಿವರ್ತನೆ ಕಂಡುಕೊಳ್ಳುವಿರಿ,

ಆಲ್ ದಿ ಬೆಸ್ಟ್!
ನಯನಾ ರವಿಶಂಕರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ