ಪ್ರತಿಯೊಬ್ಬ ಮಹಿಳೆ ತನ್ನ ಕುಟುಂಬದ ಆರೋಗ್ಯ ಕಾಪಾಡುವ ಸಕಲ ಪ್ರಯತ್ನ ಮಾಡುತ್ತಾಳೆ. ಆದರೆ ಆಕೆ ತನ್ನ ಆರೋಗ್ಯದ ಬಗ್ಗೆ ಮಾತ್ರ ನಿರ್ಲಕ್ಷ್ಯ ತೋರುತ್ತಾಳೆ. ಒಳ್ಳೆಯ ಆರೋಗ್ಯಕ್ಕೆ ಅದೆಷ್ಟೋ ಸಂಗತಿಗಳಿದ್ದು, ಅವುಗಳ ಬಗ್ಗೆ ಅಜಾಗರೂಕತೆ ತೋರಿಸಬಾರದು.
ಯೀಸ್ಟ್ ಇನ್ ಫೆಕ್ಷನ್ : ವೈದ್ಯಕೀಯ ವಿಜ್ಞಾನದ ಸಮೀಕ್ಷೆಗಳ ಪ್ರಕಾರ, ಶೇ.95ರಷ್ಟು ಮಹಿಳೆಯರು ಜೀವನದಲ್ಲಿ ಒಂದಲ್ಲ ಒಂದು ಬಾರಿ ಈ ಸಮಸ್ಯೆಗೆ ಸಿಲುಕುತ್ತಾರೆ.
ಲಕ್ಷಣಗಳು : ಜೈನಾ ಭಾಗದಲ್ಲಿ ತುರಿಕೆ, ಉರಿ, ಬಿಳಿ ಬಣ್ಣದ ಗಾಢ ದ್ರವ ಸ್ರಾವ, ಸ್ಕಿನ್ ರಾಶೆಸ್, ಊತ, ಮೇಲಿಂದ ಮೇಲೆ ಮೂತ್ರಕ್ಕೆ ಹೋಗಬೇಕೆನ್ನುವುದು ಹಾಗೂ ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ನೋವುಂಟಾಗುವುದು.
ಕಾರಣಗಳು : ಯೀಸ್ಟ್, ವಜೈನಾದಲ್ಲಿ ಹಲವು ಕಾರಣಗಳಿಂದಾಗಿ ಸಕ್ರಿಯಗೊಂಡಿರುತ್ತದೆ. ಉದಾಹರಣೆಗೆ ಅಪೌಷ್ಟಿಕತೆ, ನಿದ್ರಾಹೀನತೆ, ಅತಿಯಾಗಿ ಆ್ಯಂಟಿಬಯಾಟಿಕ್ ಗಳನ್ನು ಸೇವಿಸುವುದು, ನೈಲಾನ್ ಅಥವಾ ಲೈಕ್ರಾದ ಒಳ ಉಡುಪುಗಳನ್ನು ಧರಿಸುವುದು, ಗರ್ಭಾವಸ್ಥೆಯಲ್ಲಿ ಮಧುಮೇಹ, ಗರ್ಭನಿರೋಧಕ ಮಾತ್ರೆಗಳ ಸತತ ಸೇವನೆ ಮತ್ತು ಅತಿಯಾದ ಹುಳಿ ಪದಾರ್ಥಗಳ ಸೇವನೆ.
ರಕ್ಷಣೆ : ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಕೊಡಿ. ಸ್ವಿಮ್ಮಿಂಗ್ ಬಳಿಕ ತಡ ಮಾಡದೆಯೇ ಸ್ನಾನ ಮಾಡಿ ಬಟ್ಟೆ ಬದಲಿಸಿ. ಹತ್ತಿಯ ಸಡಿಲವಾದ ಉಡುಪುಗಳನ್ನೇ ಧರಿಸಿ. ವೈದ್ಯರ ಸಲಹೆಯಿಲ್ಲದೆ, ಆ್ಯಂಟಿಬಯಾಟಿಕ್ ಗಳನ್ನು ಸೇವಿಸಬೇಡಿ. ನೀವು ಮಧುಮೇಹಿಗಳಾಗಿದ್ದಲ್ಲಿ, ರಕ್ತದಲ್ಲಿನ ಸಕ್ಕರ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ. ಇದಕ್ಕಾಗಿ ತಜ್ಞರ ಸಲಹೆ ಪಡೆಯಿರಿ.
ಯೂರಿನ್ ಲೀಕ್ ಆಗುವುದು : ಈ ಸಮಸ್ಯೆಗೆ ತುತ್ತಾದ ಸ್ತ್ರೀ ನಗುವಾಗ, ಕೆಮ್ಮುವಾಗ, ಸೀನುವಾಗ ಅಥವಾ ವ್ಯಾಯಾಮ ಮಾಡುವ ಸಂದರ್ಭದಲ್ಲಿ ಮೂತ್ರ ಸೋರಿಕೆ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಪ್ರಸವದ ಬಳಿಕ ಮೂತ್ರ ಜನಕಾಂಗಕ್ಕೆ ಸಪೋರ್ಟ್ ಮಾಡುವ ಪೆಲ್ವಿಕ್ ಪ್ಲೇರ್ ಮಸಲ್ಸ್ ಬಿಗುವು ಕಳೆದುಕೊಳ್ಳುವುದರಿಂದ ತಲೆದೋರುತ್ತದೆ.
ರಕ್ಷಣೆ : ಸಾಮಾನ್ಯವಾಗಿ ಹೆರಿಗೆಯಾದ 6-7 ತಿಂಗಳ ಬಳಿಕ ಈ ಸಮಸ್ಯೆ ತಂತಾನೆ ಸರಿಹೋಗುತ್ತದೆ. ಏಕೆಂದರೆ ಪೆಲ್ವಿಕ್ ಪ್ಲೇರ್ ಮಸಲ್ಸ್ ತಂತಾನೇ ಬಿಗುವು ಪಡೆದುಕೊಳ್ಳುತ್ತವೆ. ಆಗಲೂ ಈ ಸಮಸ್ಯೆ ಸರಿಹೋಗದಿದ್ದರೆ ಕೇಜಲ್ ಎಕ್ಸರ್ ಸೈಜ್ ನಿಮಗೆ ನೆರವಾಗುತ್ತದೆ. ಇದರಿಂದ ಯೋನಿಯ ಸ್ನಾಯುಗಳ ಟೋನಿಂಗ್ ಆಗುತ್ತದೆ. ತೀಕ್ಷ್ಣ ಹಾಗೂ ಮಸಾಲೆಯುಕ್ತ ಆಹಾರ, ಚಹಾ/ಕಾಫಿ, ಚಾಕ್ಲೇಟ್ ಹಾಗೂ ಅಸಿಡಿಕ್ ಫ್ರೂಟ್ ಹಾಗೂ ಹಾಲಿನ ಪದಾರ್ಥಗಳನ್ನು ಸೇವಿಸಬೇಡಿ.
ಯುಟಿಐ : ಸ್ತ್ರೀಯರ ದೈಹಿಕ ರಚನೆ ಈ ಯೂರಿನರಿ ಟ್ರಾಕ್ ಇನ್ ಫೆಕ್ಷನ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಬೊವೆಲ್ ಹಾಗೂ ವಜೈನಾದ ಆಸುಪಾಸಿನಲ್ಲಿರುವ ಬ್ಯಾಕ್ಟೀರಿಯಾಗಳು ಯುರೇಥ್ರಾದ ದಾರಿಯಲ್ಲಿ ಬ್ಲ್ಯಾಡರ್ ಅಥವಾ ಯೂರಿನರಿ ಟ್ರ್ಯಾಕ್ ನ ಇನ್ನೊಂದು ಬದಿಗೆ ತಲುಪುತ್ತವೆ. ಈ ಕಾರಣದಿಂದಾಗಿ ಯುಟಿಐ ಸಮಸ್ಯೆ ಉಂಟಾಗುತ್ತದೆ. ಸಮಾಗಮದ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನಕೊಡದೇ ಇರುವುದೂ ಇದಕ್ಕೆ ಕಾರಣ. ಮೂತ್ರದ ಒತ್ತಡವನ್ನು ಬಹಳ ಹೊತ್ತಿನತನಕ ತಡೆದುಕೊಳ್ಳುವುದರಿಂದ ಮೂತ್ರಾಶಯ ಸ್ನಾಯುಗಳ ಮೇಲೆ ಅಗತ್ಯಕ್ಕಿಂತ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದಾಗಿ ಅವು ದುರ್ಬಲಗೊಳ್ಳುತ್ತವೆ. ಹಾಗಾಗಿ ಯುಟಿಐನ ಸಮಸ್ಯೆ ಸೃಷ್ಟಿಯಾಗುತ್ತದೆ. ಗರ್ಭಾವಸ್ಥೆ ಮತ್ತು ಮಧುಮೇಹ ಕೂಡ ಯುಟಿಐಗೆ ಕಾರಣವಾಗುತ್ತದೆ.
ಲಕ್ಷಣಗಳು : ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ನೋವು ಮತ್ತು ಉರಿಯುಂಟಾಗುವುದು, ಮೇಲಿಂದ ಮೇಲೆ ಮೂತ್ರ ವಿಸರ್ಜನೆಗೆ ಹೋಗುವ ಅವಶ್ಯಕತೆ ಉಂಟಾಗುವಿಕೆ, ಮೂತ್ರದ ಜೊತೆಗೆ ರಕ್ತ ಬರುವಿಕೆ ಹಾಗೂ ಹೊಟ್ಟೆಯ ಕೆಳಭಾಗದಲ್ಲಿ ನೋವು.
ರಕ್ಷಣೆ : ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನಕೊಡಿ. ಹೆಚ್ಚೆಚ್ಚು ನೀರು ಕುಡಿಯಿರಿ. ಅತಿ ಖಾರದ, ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಬೇಡಿ. ವಿಟಮಿನ್ `ಸಿ’ ಯುಟಿಐ ಪಸರಿಸುವ ರೋಗಾಣುಗಳನ್ನು ನಾಶ ಮಾಡುವಲ್ಲಿ ಸಹಾಯಕವಾಗಿದೆ. ಹೀಗಾಗಿ ಈ ಸಮಸ್ಯೆಯಿಂದ ರಕ್ಷಿಸಿಕೊಳ್ಳಲು `ಸಿ’ ವಿಟಮಿನ್ ಯುಕ್ತ ನಿಂಬೆಹಣ್ಣು ಹಾಗೂ ಕಿತ್ತಳೆ ಹಣ್ಣುಗಳನ್ನು ಸೇವಿಸಿ.
ಹೊಟ್ಟೆ ಭಾರಾದಂತೆನಿಸುವುದು : ಋತುಚಕ್ರದ ಅವಧಿಯ ಹೊರತಾಗಿಯೂ ಹೊಟ್ಟೆ ಭಾರವಾದಂತೆ ಅನಿಸುತ್ತಿದ್ದರೆ ಅದರ ಬಗ್ಗೆ ನಿರ್ಲಕ್ಷ್ಯ ತೋರಿಸಲು ಹೋಗಬೇಡಿ. ಇದು ಯಾವುದಾದರೂ ಗಂಭೀರ ರೋಗದ ಅಂದರೆ ಅಂಡಾಶಯ ಕೊಲೋರೆಕ್ಟ್ ಕ್ಯಾನ್ಸರಿನ ಆರಂಭವಾಗಿರಬಹುದು. ಅಂದಹಾಗೆ 40ಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರಿಗೆ ಇದರ ಸಾಧ್ಯತೆ ಹೆಚ್ಚು. ಆದರೆ ಕಡಿಮೆ ವಯಸ್ಸಿನವರಲ್ಲಿ ಕಂಡುಬರುವ ಇಂತಹ ಲಕ್ಷಣಗಳನ್ನು ಋತುಚಕ್ರ ಅಥವಾ ಗರ್ಭಕ್ಕೆ ಸಂಬಂಧಪಟ್ಟ ಸಮಸ್ಯೆ ಎಂದು ಭಾವಿಸಿ ಅವುಗಳ ಬಗ್ಗೆ ಗಮನ ಕೊಡುವುದಿಲ್ಲ.
ರಕ್ಷಣೆ : ಮೇಲ್ಕಂಡ ಲಕ್ಷಣಗಳ ಬಗ್ಗೆ ಗಮನ ಕೊಡಿ. ಜೊತೆಗೆ ನಿರಂತರವಾಗಿ ಕ್ರ್ಯಾಂಪ್, ಮಲಬದ್ಧತೆ ಅಥವಾ ಭೇದಿ, ಹಸಿವಿನ ಕೊರತೆ, ಕಾರಣವಿಲ್ಲದೆ ದಣಿವು ಅಥವಾ ತೂಕ ಕಡಿಮೆಯಾಗುವಂತಹ ಲಕ್ಷಣಗಳು ಕ್ಯಾನ್ಸರಿನಂತಹ ರೋಗದ ಆರಂಭಿಕ ಲಕ್ಷಣಗಳಾಗಿರಬಹುದು.
ಮೆನೋಪಾಸ್ : ಈ ಸಮಯದಲ್ಲಿ ಸ್ತ್ರೀಯ ದೇಹದಲ್ಲಿ ಹಾರ್ಮೋನಿಗೆ ಸಂಬಂಧಪಟ್ಟ ಅನೇಕ ಬದಲಾವಣೆಗಳು ಅಂದರೆ ದೇಹದ ತಾಪಮಾನದಲ್ಲಿ ಏರುಪೇರು ಆಗುವಿಕೆ, ಆಕಸ್ಮಿಕವಾಗಿ ಜ್ವರ ಅಥವಾ ಬೆವರು ಬರುವಿಕೆ, ಸ್ಮರಣಶಕ್ತಿ ಕುಂದುವಿಕೆ, ಸಿಡಿಮಿಡಿತನ, ನಿದ್ರಾಹೀನತೆ, ಲೈಂಗಿಕ ಆಸಕ್ತಿ ಕಡಿಮೆಯಾಗುವಿಕೆ. ತ್ವಚೆ ಶುಷ್ಕಗೊಳ್ಳುವುದು, ಕೂದಲುದುರುವಿಕೆ, ಬೇಡವಾದ ಕೂದಲುಗಳ ಸಮಸ್ಯೆ ಹಾಗೂ ಹೃದಯ ನಾಳ ಸಂಕುಚಿತಗೊಳ್ಳುವುದರಿಂದ ಹೃದ್ರೋಗದ ಅಪಾಯ ಉಂಟಾಗುತ್ತದೆ. ಈ ಅವಧಿಯಲ್ಲಿ ಈಸ್ಟ್ರೊಜೆನ್ ಹಾಗೂ ಪ್ರೊಜೆಸ್ಟ್ರಾನ್ ಹಾರ್ಮೋನ್ ನ ನಿರ್ಮಾಣ ಪ್ರಕ್ರಿಯೆ ಮಂದಗೊಳ್ಳುತ್ತದೆ. ಈ ಕಾರಣದಿಂದಾಗಿ ಯುಟಿಐ ಮತ್ತು ಕೆಮ್ಮಿನ ಜೊತೆಗೆ ಮೂತ್ರ ಸೋರಿಕೆಯಂತಹ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ.
ರಕ್ಷಣೆ : ಆಹಾರದಲ್ಲಿ ಹಸಿರು ತರಕಾರಿಗಳು, ಸಲಾಡ್, ಮೊಳಕೆ ಕಾಳುಗಳು, ಬೇಳೆಗಳು, ತಾಜಾ ಹಣ್ಣುಗಳು ಹಾಗೂ ಹಣ್ಣಿನ ರಸಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಿ. ಮುಟ್ಟಂತ್ಯಕ್ಕಿಂತ ಮುಂಚೆಯೇ 1200 ಮಿಲಿಗ್ರಾಂ ತನಕ ಕ್ಯಾಲ್ಸಿಯಂ ಅವಶ್ಯವಾಗಿ ಸೇವಿಸಿ. ಹಾಲು ಮೊಸರು, ಮಜ್ಜಿಗೆಯನ್ನು ಯಥೇಚ್ಛವಾಗಿ ಬಳಸಿ. ಹತ್ತಿ ಬಟ್ಟೆಗಳನ್ನೇ ಧರಿಸಿ. ಏಕೆಂದರೆ ಈ ಅವಧಿಯಲ್ಲಿ ಹೆಚ್ಚು ಬೆವರು ಬರುತ್ತದೆ. ಇದರಿಂದಾಗಿ ನೀವು ಚರ್ಮಕ್ಕೆ ಸಂಬಂಧಪಟ್ಟ ರೋಗಗಳಿಂದ ದೂರ ಇರುತ್ತೀರಿ.
ಮುಟ್ಟಂತ್ಯದ ಬಳಿಕ ದೇಹಕ್ಕೆ ಸುಸ್ತಾಗುತ್ತದೆ ಎಂದು ಯೋಚಿಸುದು ತಪ್ಪು. ಬಿರುಸಿನ ನಡಿಗೆ, ಈಜು, ಸ್ಕಿಪ್ಪಿಂಗ್ ನಂತಹ ವ್ಯಾಯಾಮಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾಡಬಹುದು.
ರಕ್ತಹೀನತೆ : ಗಾಯಗೊಳ್ಳುವುದು, ಶಸ್ತ್ರಚಿಕಿತ್ಸೆ ಅಥವಾ ಹೆಚ್ಚು ರಕ್ತಸ್ರಾವ, ಆಹಾರದ ಬಗ್ಗೆ ನಿರಾಸಕ್ತಿ, ಗರ್ಭಾವಸ್ಥೆಯಲ್ಲಿ ಕಬ್ಬಿಣಾಂಶ ಮತ್ತು ಫಾಲಿಕ್ ಆ್ಯಸಿಡ್ ನ ಮಾತ್ರೆಗಳನ್ನು ಸೇವನೆ ಮಾಡದಿರುವುದು ರಕ್ತಹೀನತೆ ಉಂಟಾಗಲು ಮುಖ್ಯ ಕಾರಣವಾಗಿದೆ. ತಲೆನೋವು, ದಣಿವು, ತಲೆಸುತ್ತು ಬರುವುದು, ಕಣ್ಣುಕತ್ತಲೆ ಬರುವುದು, ಹೃದಯಗತಿ ಮಂದಗೊಳ್ಳುವುದು, ಎಂದಾದರೊಮ್ಮೆ ಪ್ರಜ್ಞೆ ತಪ್ಪುವುದು, ಆಹಾರದ ಬಗ್ಗೆ ನಿರಾಸಕ್ತಿ, ಕಣ್ಣಿನ ಕೆಳಭಾಗದಲ್ಲಿ ಕಪ್ಪು ಆರಿಸಿಕೊಳ್ಳುವುದು, ಉಗುರಿನ ಬಣ್ಣ ಬೆಳ್ಳಗಾಗುವಿಕೆ ಇವು ಇದರ ಪ್ರಮುಖ ಲಕ್ಷಣಗಳು.
ರಕ್ಷಣೆ : ಸಮತೋಲನದಿಂದ ಕೂಡಿದ ಪೌಷ್ಟಿಕ ಆಹಾರ ಸೇವಿಸಿ. ಕಬ್ಬಿಣಾಂಶದಿಂದ ಕೂಡಿದ ಹಸಿರು ಸೊಪ್ಪುಗಳು, ಹಣ್ಣುಗಳು, ನೆಲ್ಲಿಕಾಯಿ, ಕ್ಯಾರೆಟ್, ಬೀಟ್ ರೂಟ್, ಸೇಬು, ದಾಳಿಂಬೆಹಣ್ಣು, ಶೇಂಗಾ, ಬೆಲ್ಲ ಹಾಗೂ ಒಣಹಣ್ಣುಗಳನ್ನು ಸೇವನೆ ಮಾಡಿದರೆ ಫಾಲಿಕ್ ಆ್ಯಸಿಡ್ ನ ಪ್ರಮಾಣ ಹೆಚ್ಚುತ್ತದೆ. ಜವೆಗೋದಿ, ಅಣಬೆ, ಜೇನುತುಪ್ಪ ಸೇವಿಸಿ. ವೈದ್ಯರ ಸಲಹೆಯ ಮೇರೆಗೆ ಕಬ್ಬಿಣಾಂಶ ಹಾಗೂ ಫಾಲಿಕ್ ಆ್ಯಸಿಡ್ ನ ಮಾತ್ರೆಗಳನ್ನು ಸೇವಿಸಿ. ವರ್ಷದಲ್ಲಿ 1 ಸಲ ಹಿಮೋಗ್ಲೋಬಿನ್ ನ ಪರೀಕ್ಷೆ ಮಾಡಿಸಿಕೊಳ್ಳಿ.
ಸರ್ವೈಕಲ್ ಕ್ಯಾನ್ಸರ್ : ಇದು ಗರ್ಭಾಶಯಕ್ಕೆ ಸಂಬಂಧಪಟ್ಟ ಕ್ಯಾನ್ಸರ್ ಆಗಿದೆ. ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಕೊಡದೇ ಇರುವುದು, ಚಿಕ್ಕ ವಯಸ್ಸಿನಲ್ಲಿ ಮದುವೆ, ಹೆಚ್ಚು ಮಕ್ಕಳಾಗಿರುವುದು ಅಥವಾ ಮೇಲಿಂದ ಮೇಲೆ ಗರ್ಭಪಾತ, ಧೂಮಪಾನ, ವೈದ್ಯರ ಸಲಹೆಯಿಲ್ಲದೆ ಗರ್ಭನಿರೋಧಕ ಮಾತ್ರೆಗಳ ಸೇವನೆ ಹಾಗೂ ಸಮಾಗಮದಲ್ಲಿ ಲೈಂಗಿಕ ಸೋಂಕು ಸರ್ವೈಕಲ್ ಕ್ಯಾನ್ಸರ್ ನ ಮುಖ್ಯ ಕಾರಣಗಳಾಗಿವೆ.
ಲಕ್ಷಣಗಳು : ಋತುಚಕ್ರದ ಹೊರತಾಗಿ ಅಕಸ್ಮಾತಾಗಿ ರಕ್ತಸ್ರಾವವಾಗುವುದು, ವಜೈನಾದಿಂದ ಬಿಳಿ ಸ್ರಾವ, ಹೊಟ್ಟೆಯ ಕೆಳಭಾಗದಲ್ಲಿ ನೋವು, ಸಮಾಗಮದ ಸಮಯದಲ್ಲಿ ರಕ್ತ ಸ್ರಾವ, ಈ ಲಕ್ಷಣಗಳಲ್ಲಿ ಯಾವುದಾದರೊಂದು ಕಾಣಿಸಿದರೂ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ. ಈಗ ಸರ್ವೈಕಲ್ ಕ್ಯಾನ್ಸರಿನಿಂದ ರಕ್ಷಿಸಿಕೊಳ್ಳಲು ಚುಚ್ಚುಮದ್ದು ಕೂಡ ಲಭ್ಯವಿದೆ.
ವಿಟಮಿನ್ `ಇ‘ ಮತ್ತು `ಸಿ‘ಯ ಅವಶ್ಯಕತೆ : ಇವೆರಡು ರೋಗದೊಂದಿಗೆ ಹೋರಾಡುವ ಆ್ಯಂಟಿ ಆಕ್ಸಿಡೆಂಟ್ ಗಳಂತೂ ಆಗಿವೆ, ಜೊತೆಗೆ ಒವೇರಿಯನ್ ಕ್ಯಾನ್ಸರ್ ನಿಂದ ರಕ್ಷಿಸುತ್ತವೆ. ಅಧ್ಯಯನಗಳಿಂದ ತಿಳಿದು ಬಂದ ಸಂಗತಿಯೆಂದರೆ, ಯಾವ ಮಹಿಳೆಯರ ಡಯೆಟ್ ನಲ್ಲಿ ಕನಿಷ್ಠ 90 ಮಿಲಿಗ್ರಾಂ ವಿಟಮಿನ್ `ಸಿ’ ಮತ್ತು 30 ಮಿಲಿಗ್ರಾಂ ಅಥವಾ ಹೆಚ್ಚು ವಿಟಮಿನ್ `ಇ’ ಸೇರ್ಪಡೆಗೊಂಡಿರುತ್ತದೊ, ಅಂಥವರಲ್ಲಿ ಒವೇರಿಯನ್ ಕ್ಯಾನ್ಸರ್ ನ ಸಾಧ್ಯತೆ ಕಡಿಮೆ ಇರುತ್ತದೆ.
ಫಾಲಿಕ್ ಆಸಿಡ್ ನ ಮಹತ್ವ : ಗರ್ಭಾವಸ್ಥೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದ ಫಾಲಿಕ್ ಆ್ಯಸಿಡ್ ಶಿಶುವಿನ ನ್ಯೂರ್ ಟ್ಯೂಬ್ ನ ತೊಂದರೆಯನ್ನು ಕಡಿಮೆಗೊಳಿಸುತ್ತದೆ. 329 ಮಹಿಳೆಯರ ಮೇಲೆ ನಡೆಸಿದ ಸಮೀಕ್ಷೆಯ ಪ್ರಕಾರ, ಸರ್ವೈಕಲ್ ಕ್ಯಾನ್ಸರ್ ಅಥವಾ ಕ್ಯಾನ್ಸರ್ ನ ಪೂರ್ವ ಅವಸ್ಥೆ ಸಾಮಾನ್ಯ ಪ್ಯಾಪ್ ಸ್ಮಿಯರ್ ಯುಕ್ತ ಮಹಿಳೆಯರಿಗಿಂತ ಫಾಲಿಕ್ ಆ್ಯಸಿಡ್ ಕಡಿಮೆಯಿರುವ ಮಹಿಳೆಯರಲ್ಲಿ ಶೇ.30ರಷ್ಟು ಹೆಚ್ಚಿಗೆ ಇತ್ತು. ಪಾಲಕ್ ಸೊಪ್ಪು ಇದರ ಮುಖ್ಯ ಮೂಲವಾಗಿದೆ.
ಪರೀಕ್ಷೆ ಅತ್ಯಗತ್ಯ : ಮಹಿಳೆಯರು ಪರೀಕ್ಷೆ ಮಾಡಿಸಿಕೊಳ್ಳಲು ಹೋದಾಗ ಬ್ಲಡ್ ಟಿಎಸ್‌ಎಚ್ (ಥೈರಾಯ್ಡ್ ಸ್ಟಿಮುಲೇಟಿಂಗ್ ಹಾರ್ಮೋನು) ಪರೀಕ್ಷೆಯನ್ನು ಅವಶ್ಯವಾಗಿ ಮಾಡಿಸಿ. ಏಕೆಂದರೆ ಈ ಗ್ರಂಥಿ ಸರಿಯಾಗಿ ಕಾರ್ಯನಿರ್ಹಿಸುತ್ತಿದೆಯೋ ಇಲ್ಲವೋ ಎನ್ನುವುದನ್ನು ಅರಿತುಕೊಳ್ಳಬೇಕು. ಥೈರಾಯ್ಡ್ ಗ್ರಂಥಿ ನಮ್ಮ ದೇಹದ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುವಲ್ಲಿ ನೆರವಾಗುತ್ತದೆ. ಥೈರಾಯ್ಡ್ ನಲ್ಲಿ ಏರುಪೇರು ಹತ್ತು ಹಲವು ಬಗೆಯ ತೊಂದರೆಗಳಿಗೆ ಜನ್ಮ ನೀಡುತ್ತದೆ. ಉದಾಹರಣೆಗೆ ಋತುಚಕ್ರದ ನಡುವೆ ಸ್ಪಾಟಿಂಗ್, ಹೆಚ್ಚು ಅಥವಾ ಕಡಿಮೆ ರಕ್ತಸ್ರಾವ, ಖಿನ್ನತೆ, ಚಿಂತೆ, ತೂಕ ಹೆಚ್ಚುವುದು, ಕೂದಲುದುರುವಿಕೆ, ಶುಷ್ಕ ತ್ವಚೆ ಹಾಗೂ ದಣಿವು. ಗರ್ಭಧಾರಣೆಯ ಸಂದರ್ಭದಲ್ಲಿ ಈ ಟೆಸ್ಟ್ ಮಾಡಿಸುವುದು ಅತ್ಯವಶ್ಯಕ. ಏಕೆಂದರೆ ಒಂದಿಷ್ಟು ಆ್ಯಸ್ಮಿಟೊಮ್ಯಾಟಿಕ್ ಥೈರಾಯ್ಡ್ ಡಿಫಿಶಿಯೆನ್ಸಿ ಶಿಶುವಿನ ಸಾಮಾನ್ಯ ಜ್ಞಾನವನ್ನು ಪ್ರಭಾವಿತಗೊಳಿಸಬಲ್ಲದು ಅಥವಾ ಕಡಿಮೆಗೊಳಿಸಬಹುದು.
– ಪುಷ್ಪಾ ಭಟ್