ಹೊಸ ವರ್ಷದ 365 ದಿನಗಳ ಪುಟಗಳು ನಿಮಗಾಗಿ ತೆರೆದುಕೊಳ್ಳುತ್ತಿವೆ. ಈ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಬದಲಾವಣೆ ತರಬೇಕು ಎಂದರೆ ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ. ಈ ವರ್ಷದಲ್ಲಿ ನೀವು ಯಾವೆಲ್ಲ ಕೆಲಸ ಮಾಡಬಹುದು, ಹಿಂದಿನ ವರ್ಷದಲ್ಲಿ ಬಾಕಿ ಉಳಿದಿರುವ ಕೆಲಸಗಳೇನು ಎಂಬ ಚಿಂತನೆಯ ಮೂಲಕ ಸಣ್ಣ ಪ್ಲಾನ್ ಮಾಡಿಕೊಳ್ಳಿ. ನಿಮ್ಮಲ್ಲಿ ನೀವು ಅಭಿವೃದ್ಧಿ ಕಂಡುಕೊಳ್ಳಲೇಬೇಕು, ಈ ಸಮಯವನ್ನು ಒಂದಿಷ್ಟೂ ಹಾಳುಮಾಡದೆ, ಮುನ್ನಡೆಯಬೇಕು ಎಂದೇನಾದರೂ ನಿಮಗೆ ಅನ್ನಿಸಿದ್ದರೆ, ನಿಮ್ಮಲ್ಲಿ ನೀವು ಒಂದಷ್ಟು ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ.
ಮೊಬೈಲ್ ಬಳಕೆ ಮಿತವಾಗಿರಲಿ: ಹೊಸ ವರ್ಷದಲ್ಲಿ ನೀವು ಮಾಡಬಹುದಾದ ಸಿಂಪಲ್ ಹಾಗೂ ಸರಳ ಸೂತ್ರವೆಂದರೆ ಫೋನ್ ಬಳಕೆ ಕಡಿಮೆ ಮಾಡುವುದು. ನಿಮ್ಮ ಸಮಯವನ್ನು ಹೆಚ್ಚಾಗಿ ತಿನ್ನುವುದರಲ್ಲಿ ಮೊಬೈಲ್ ಪಾತ್ರ ದೊಡ್ಡದು. ನೀವು ಮೊಬೈಲ್ ಕಡಿಮೆ ಬಳಸುವುದರಿಂದ ಹಲವು ಕೆಲಸಗಳನ್ನು ಮಾಡುವುದಕ್ಕೆ ನಿಮಗೆ ಟೈಮ್ ಸಿಗುತ್ತದೆ. ಸೋಷಿಯಲ್ ಮೀಡಿಯಾ ಬಳಸುವುದಕ್ಕೆ ಟೈಮ್ ಫಿಕ್ಸ್ ಮಾಡಿಕೊಳ್ಳಿ. ಇದರಿಂದ ನೀವು ಬೇರೆ ಕೆಲಸಗಳನ್ನು ಮಾಡಿಕೊಳ್ಳಬಹುದು.
ಇಂದಿನ ಕೆಲಸ ಇಂದೇ ಆಗಲಿ: ನೀವು ಪ್ರತಿ ದಿನ ಏನು ಮಾಡಬೇಕು ಎನ್ನುವುದನ್ನು ಒಂದು ಲಿಸ್ಟ್ ಮಾಡಿಕೊಳ್ಳಿ. ಇದಕ್ಕೆ ಅಂತ ಒಂದು ಡೈರಿ ಇಟ್ಟುಕೊಳ್ಳಿ. ಅದರಲ್ಲಿ ಪ್ರತಿ ದಿನ ಅಥವಾ ಪ್ರತಿ ವಾರ ಏನೆಲ್ಲ ಕೆಲಸ ಮಾಡಬೇಕು ಅಂತ ಬರೆದಿಟ್ಟುಕೊಳ್ಳಿ. ಯಾವ ಕೆಲಸಗಳು ಇಂದು ಮುಗಿದಿವೆ ಎಂಬುದನ್ನು ದಿನದ ಕೊನೆಯಲ್ಲಿ ಟಿಕ್ ಮಾಡಿ. ನೀವು ಹಾಕಿಕೊಂಡ ಪ್ಲಾನ್‌ನಲ್ಲಿ ಎಷ್ಟು ಆಗಿವೆ. ಇನ್ನೆಷ್ಟು ಆಗಿಲ್ಲ ಎನ್ನುವ ಸಿಂಪಲ್ ಲೆಕ್ಕ ಇದರಿಂದ ಸಿಗುತ್ತದೆ.
ಕುಟುಂಬಕ್ಕೆ ಸಮಯ ನೀಡಿ: ಮೊಬೈಲ್ ಬಂದ ನಂತರ ನಾವೆಲ್ಲ ಮನೆಯವರೊಂದಿಗೆ ಕಾಲ ಕಳೆಯುವುದನ್ನೇ ಮರೆತುಬಿಟ್ಟಿದ್ದೇವೆ. ಎಲ್ಲರೂ ಒಂದಾಗಿ ಮನೆಯವರೊಂದಿಗೆ ಕಾಲ ಕಳೆಯುವುದರಿಂದ ಸಿಗುವ ಖುಷಿಯೇ ಬೇರೆ. ಮನೆಯವರ ಜೊತೆ ಇರುವ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ. ಎಲ್ಲರೂ ಸೇರಿ ಸಿನಿಮಾ ನೋಡುವುದು ಹಾಗೂ ಊಟ ಮಾಡುವುದು. ಹೊರಗೆ ಹೋಗಿ ಬರುವ ಸಿಂಪಲ್ ಪ್ಲಾನ್‌ಗಳನ್ನು ಮಾಡಿಕೊಳ್ಳಿ. ಇದರಿಂದ ನಿಮ್ಮ ಕುಟುಂಬದ ನಡುವೆ ಬಾಂಧವ್ಯ ಹೆಚ್ಚುತ್ತದೆ, ಅಲ್ಲದೆ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ.
ಪ್ರವಾಸದ ಪ್ಲಾನ್ ಮಾಡಿಕೊಳ್ಳಿ: ಪ್ರವಾಸ ಮಾಡುವುದು ಯಾರಿಗೆ ತಾನೆ ಇಷ್ಟವಿಲ್ಲ?. ಸಮಯ ಹಾಗೂ ಹಣಕಾಸಿನ ತೊಡಕಿನಿಂದ ಹಲವರು ಪ್ರವಾಸದ ಪ್ಲಾನ್‌ಗಳನ್ನು ಮುಂದೂಡುವುದು ಇದೆ. ಆದರೆ, ಪ್ರವಾಸವನ್ನು ಸಣ್ಣ ಖರ್ಚುಗಳಲ್ಲಿ ಹಾಗೂ ಕಡಿಮೆ ಸಮಯದಲ್ಲೂ ಮಾಡಬಹುದು. ಈ ರೀತಿ ಮಾಡುವುದರಿಂದ ನೀವು ಹೊಸ ಜಾಗಗಳನ್ನು ನೋಡಬಹುದು. ಕೆಲಸದ ಒತ್ತಡದಿಂದ ಸ್ವಲ್ಪ ನಿರಾಳರಾಗುವುದಕ್ಕೂ ಸಾಧ್ಯವಾಗುತ್ತದೆ.
ಸಮಯಕ್ಕೆ ಸರಿಯಾಗಿ ನಿದ್ರಿಸಿ: ಇದು ಚಿಕ್ಕದೆನಿಸಬಹುದು. ಆದರೆ, ಇದರಿಂದ ದೊಡ್ಡ ಬದಲಾವಣೆ ಸಾಧ್ಯವಿದೆ. ಮಧ್ಯರಾತ್ರಿಯವರೆಗೆ ಎಚ್ಚರವಾಗಿದ್ದರೆ ನಿಮ್ಮ ಬೆಳಗ್ಗೆಯ ಪ್ಲಾನ್‌ಗಳು ತಲೆಕೆಳಗಾಗುತ್ತವೆ. ಬೇಗ ಮಲಗಿ ಬೇಗ ಏಳುವುದರಿಂದ ನಿಮ್ಮ ಹಲವಾರು ಕೆಲಸಗಳು ಪೂರ್ಣಗೊಳ್ಳುತ್ತವೆ. ಕ್ರಿಯೇಟಿವ್ ಕೆಲಸಗಳು ನಡೆಯಬೇಕು ಎಂದಾದರೆ ನೀವು ಸರಿಯಾದ ಸಮಯಕ್ಕೆ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಹಣಕಾಸು ನಿರ್ವಹಿಸಿ: ಹಣಕಾಸು ನಿರ್ವಹಣೆ ಪ್ರತಿಯೊಬ್ಬರ ಬದುಕಿಗೂ ಅವಶ್ಯಕ. ಹಣಕಾಸಿನ ನಿರ್ವಹಣೆಯಲ್ಲಿ ಸೋತರೆ ಬದುಕಿನಲ್ಲಿ ಸೋತಂತೆ. ಹಾಗಾಗಿ 2025 ರಲ್ಲಿ ನಿಮ್ಮ ಖರ್ಚು ವೆಚ್ಚಗಳ ಲೆಕ್ಕಾಚಾರದ ಹಾಗೂ ಉಳಿತಾಯದ ಮೇಲೆ ಗಮನ ಹರಿಸುವ ನಿರ್ಣಯ ಕೈಗೊಳ್ಳಿ.
ಸಂತೋಷವಾಗಿರಿ: ಪ್ರತಿಯೊಬ್ಬರಿಗೂ ನೋವು, ಬೇಸರ ಸಹಜ. ಆದರೆ ಅದು ತಾತ್ಕಾಲಿಕ. ಹಾಗಾಗಿ ಎಲ್ಲ ಕ್ಷಣದಲ್ಲೂ ಖುಷಿಯಿಂದಲೇ ಇದ್ದು ಬದುಕನ್ನು ಕಳೆಯುವ ಪ್ರಯತ್ನ ಮಾಡಿ.
ಪುಸ್ತಕಗಳನ್ನು ಓದಿ: ತಿಂಗಳಿಗೆ 2 ಪುಸ್ತಕಗಳನ್ನಾದರೂ ಓದುವ ಸಂಕಲ್ಪ ಮಾಡಿಕೊಳ್ಳಿ. ಇದರಿಂದ ನಿಮ್ಮ ಜ್ಞಾನವೂ ಹೆಚ್ಚುವುದಲ್ಲದೆ, ನಿಮಗೆ ಹೆಚ್ಚು ಖುಷಿಯನ್ನು ಹಾಗೂ ಶಾಂತಿ ದೊರೆಯುತ್ತದೆ.
ಆರೋಗ್ಯದ ಕಡೆ ಗಮನ ಕೊಡಿ: ಆರೋಗ್ಯಕ್ಕಿಂತ ಬೇರೆ ಯಾವುದೂ ಮುಖ್ಯವಲ್ಲ. ಉತ್ತಮ ಆಹಾರ ಕ್ರಮವನ್ನು ನಿರ್ವಹಿಸಿ ಮತ್ತು ಮನೆಯಲ್ಲೇ ತಯಾರಿಸಿದ ಆಹಾರವನ್ನು ಸೇವಿಸುವುದು ಉತ್ತಮ. ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್‌ಗೆ ಹೋಗಿ. ಯೋಗ, ಪ್ರಾಣಾಯಾಮ ಅಥವಾ ವ್ಯಾಯಾಮವನ್ನು ಅಳವಡಿಸಿಕೊಳ್ಳಿ. ನಿತ್ಯ ಕನಿಷ್ಠ ಒಂದು ಗಂಟೆಯಾದರೂ ಧ್ಯಾನ ಹಾಗೂ ಯೋಗಕ್ಕಾಗಿ ಸಮಯವನ್ನು ಮೀಸಲಿಡಿ. ಇದರಿಂದ ದಿನಪೂತಿ ಉತ್ಸಾಹ ಹಾಗೂ ಸಂತೋಷದಿಂದ ಕಳೆಯಬಹುದು.
ಹೊಸ ಕೌಶಲ್ಯವನ್ನು ಕಲಿಯಿರಿ: ಹೊಸ ಹೊಸ ಕೌಶಲ್ಯಗಳು ನಿಮ್ಮ ಪ್ರತಿಭೆ ಹಾಗೂ ಜ್ಞಾನವನ್ನು ಹೆಚ್ಚಿಸುತ್ತವೆ. ಅಡುಗೆ, ಇತರ ಭಾಷೆಗಳ ಕಲಿಕೆ, ಪೇಂಟೀಂಗ್, ಡಾನ್ಸ್, ಕೋಡಿಂಗ್ ಸೇರಿದಂತೆ ನಿಮಗೆ ಇಷ್ಟವಾಗುವ ಹೊಸ ಕೌಶಲ್ಯಗಳನ್ನು ಕಲಿಯುವುದರಿಂದ ವೈಯಕ್ತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆಸಕ್ತಿದಾಯಕ ಮತ್ತು ಸಾಧಿಸಬಹುದಾದ ಯಾವುದನ್ನಾದರೂ ನೀವು ಆಯ್ಕೆ ಮಾಡಿಕೊಳ್ಳಬಹುದು.
_________________________