ಈ ಜಗತ್ತೇ ಹೀಗೆ… ನೋಡ ನೋಡ್ತಿದ್ದಂತೆ ಕೆಲವರು ಇದ್ದಕ್ಕಿದ್ದಂತೇ ಸ್ಟಾರ್ ಆಗಿಬಿಡ್ತಾರೆ. ರಾತ್ರಿ ಮಲಗಿ ಬೆಳಗ್ಗೆ ಎದ್ದೇಳೋವಷ್ಟರಲ್ಲಿ ಎಲ್ಲರ ಫೇವರೇಟ್ ಆಗಿಬಿಟ್ಟಿರ್ತಾರೆ. ಅಂಥದ್ದೇ ಒಂದು ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ನಡೆದಿದೆ. ಈಗಾಗಲೇ ಕೆಲ ಸಾಧು ಸಂತರು ತಮ್ಮ ಪೂರ್ವಾಶ್ರಮದ ಕಥೆ ಹೇಳಿ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ. ಹಾಗಂತ ಇಲ್ಲಿ ಯಾರೋ ಸಾಧುಸಂತರು ದಿಢೀರ್ ಸ್ಟಾರ್ ಆಗಿದ್ದಲ್ಲ. ಮಹಾಕುಂಭ ಇಡೀ ಜಗತ್ತಿಗೇ ಖ್ಯಾತಿ ಪಡೆದಿದ್ರೆ, ಇಲ್ಲಿನ ಒಂದು ಹುಡುಗಿ ದಿಢೀರನೇ ಸೋಷಿಯಲ್ ಮೀಡಿಯಾದಲ್ಲಿ ನಂಬರ್ ಒನ್ ವೈರಲ್ ಹುಡುಗಿ ಆಗಿ ಮಿಂಚುತ್ತಿದ್ದಾಳೆ. ಆಕೆನೇ ಈ ಮೊನಾಲಿಸಾ ಬೋಸ್ಲೆ.
ಮಧ್ಯಪ್ರದೇಶ ಮೂಲದ ಕೇವಲ 16 ವರ್ಷದ ಹುಡುಗಿ ಬೋಸ್ಲೆ ಈಗ ಸೋಷಿಯಲ್ ಮೀಡಿಯಾದಲ್ಲಿ ಮೊನಾಲಿಸಾ ಅಂತಾನೇ ಫೇಮಸ್. ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿರುವ ಈ ಹುಡುಗಿ ಎಲ್ಲರ ಅಟ್ರ್ಯಾಕ್ಷನ್ ಆಗಿದ್ದಾಳೆ. ಮೊನಾಲಿಸಾ ಭೋಸ್ಲೆ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ, ಜಪಮಾಲೆ ಸೇರಿದಂತೆ ನಾನಾ ರೀತಿಯ ಸರಗಳನ್ನು ಮಾರುತ್ತಾಳೆ. ತನ್ನ ತಂದೆ ಮತ್ತು ತಂಗಿಯ ಜೊತೆ ರುದ್ರಾಕ್ಷಿ ಸರ ಮಾರುತ್ತಿರುವ ಈಕೆಗೆ ಯಾರಿಗೂ ಬರದ ಸಂಕಷ್ಟ ಬಂದುಬಿಟ್ಟಿದೆ. ಆ ಸಂಕಷ್ಟ ಏನು ಅನ್ನೋದನ್ನ ಹೇಳೋಕೆ ಮುಂಚೆ ಈಕೆ ಹೇಗೆ ಫೇಮಸ್ ಆದ್ಲು ಅಂತಾ ನೋಡೋಣ.
ಮಹಾಕುಂಭ ಮೇಳ ಆರಂಭವಾದ ದಿನದಂದು ಯ್ಯೂಟ್ಯೂಬ್ ಚಾನೆಲ್ಗಳೂ ಕೂಡ ಮಹಾಕುಂಭದಲ್ಲಿ ಠಿಕಾಣಿ ಹೂಡಿದ್ದವು. ಅಲ್ಲಿಗೆ ಬಂದಿರುವ ಸಾಧು-ಸಂತರ ಜೀವನ ಶೈಲಿ, ಅಲ್ಲಿನ ಪೂಜೆ ಹೀಗೆ ತರೇಹವಾರಿ ಸ್ಟೋರಿಗಳನ್ನು ರೆಡಿ ಮಾಡಿ ಹಾಕೋಕೆ ಶುರು ಮಾಡಿದರು. ಅದ್ಯಾರದೋ ಕಣ್ಣಿಗೆ ಈಕೆ ಬಿದ್ದಿದ್ದಾಳೆ. ಅಷ್ಟೇ, ಆ ಪುಣ್ಯಾತ್ಮ ಈಕೆಯ ಕಣ್ಣುಗಳನ್ನು ನೋಡಿದ ತಕ್ಷಣ ಒಂದು ವಿಡಿಯೋ ಮಾಡಿ ಮಹಾಕುಂಭದಲ್ಲಿ ಮಹಾಚೆಲುವೆ ಅಂತಾ ಟೈಟಲ್ ಕೊಟ್ಟು ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋ 7 ಕೋಟಿಗೂ ಹೆಚ್ಚು ಜನರ ವೀಕ್ಷಣೆ ಪಡೆದುಕೊಂಡಿದೆ.
ಆ ವಿಡಿಯೋ ನೋಡಿದ್ದೇ ತಡ ಮಹಾಕುಂಭಕ್ಕೆ ಬರ್ತಿರೋ ಪ್ರತಿಯೊಬ್ಬರೂ ಈಕೆಯ ಬಳಿ ಓಡೋಡಿ ಬರುತ್ತಿದ್ದಾರೆ. ಪಾಪ, ಮುಗ್ಧ ಹುಡುಗಿಗೆ ಒಂಥರಾ ಮುಜುಗರ. ಯೂಟ್ಯೂಬರ್ಸ್, ಸಾಮಾನ್ಯ ಜನರು, ಮಹಾಕುಂಭ್ ಭಕ್ತರೆಲ್ಲರೂ ಈಕೆ ಬಳಿ ಬಂದು ಸೆಲ್ಫೀ ತಗೊಳ್ಳೋದು, ವಿಡಿಯೋ ಮಾಡೋದು, ಇಂಟರ್ವ್ಯೂ ಮಾಡೋದನ್ನ ಜಾಸ್ತಿ ಮಾಡಿದ್ದಾರೆ. ಹೀಗಾಗಿ ಇನ್ಸ್ಟಾ, ಯೂಟ್ಯೂಬ್, ಫೇಸ್ಬುಕ್ ಹೀಗೆ ಎಲ್ಲೇ ನೋಡಿದ್ರೂ ನೀಲಿಕಂಗಳ ಈ ಚೆಲುವೆಯ ವಿಡಿಯೋನೇ ರಾರಾಜಿಸುತ್ತಿದೆ.
ಮೊನಾಲಿಸಾಳನ್ನು ಮನೆಗೆ ಕಳಿಸಿದ ಅಪ್ಪ:
ಮೊನಾಲಿಸಾ ಆಕರ್ಷಕ ಕಣ್ಣುಗಳು ಹಾಗೂ ನಿಷ್ಕಲ್ಮಶ ನಗುವಿನ ಮೂಲಕ ಎಲ್ಲರನ್ನು ಸೆಳೆಯುತ್ತಿದ್ದಳು. ಹೀಗಾಗಿ ಮೊನಾಲಿಸಾ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಳು. ಈಕೆಯ ಫೋಟೋ, ರೀಲ್ಸ್‌ಗಳು ಒಂದರ ಹಿಂದೆ ಒಂದರಂತೆ ಬರಲು ಆರಂಭವಾದವು. ದಿನ ಬೆಳಗಾಗುವುದರೊಳಗೆ ಭಾರಿ ಜನಪ್ರಿಯತೆ ಪಡೆದ ಮೊನಾಲಿಸಾ ಭೋಸ್ಲೆ ಸದ್ಯದ ಪರಿಸ್ಥಿತಿ ಯಾರಿಗೂ ಬೇಡ ಎಂಬಂತಾಗಿದೆ.
ಪ್ರಯಾಗ್ರಾಜ್ನಲ್ಲಿರೋ ಮೀಡಿಯಾಗಳು, ವ್ಲಾಗರ್ಗಳು, ಯೂಟ್ಯೂಬರ್ಸ್, ಡಿಜಿಟಲ್ ಕ್ರಿಯೇಟರ್ಸ್ ಈಕೆಯ ಹಿಂದೆ ಬಿದ್ದಿದ್ದಾರೆ. ಇಂಟರ್ವ್ಯೂ ಕೊಡೋಕೆ ಧಮಕಿ ಹಾಕ್ತಿದ್ದಾರೆ. ಈ ಹುಡುಗಿ ಎಲ್ಲೇ ಹೋದ್ರೂ ಹಿಂದೆ ಬರ್ತಿದ್ದಾರೆ. ಇದರಿಂದ ವ್ಯಾಪಾರ ಮಾಡೋಕೆ ಆಗ್ತಿಲ್ವಂತೆ. ಇವರಿಂದ ತಪ್ಪಿಸಿಕೊಂಡು ಮುಖಕ್ಕೆ ಮುಸುಕು ಹಾಕಿಕೊಂಡು ಓಡಾಡುತ್ತಿದ್ದಳು. ಆದ್ರೂ ಕೆಲವರಂತೂ ಅವಾಚ್ಯ ಶಬ್ದಗಳಿಂದ ಬೈಯೋಕೆ ಶುರು ಮಾಡಿದ್ದರಂತೆ. ಇದೆಲ್ಲವನ್ನೂ ಅರಿತ ಈಕೆಯ ತಂದೆ ಈಕೆಯನ್ನು ವಾಪಸ್ ಊರಿಗೆ ಹೋಗುವಂತೆ ಹೇಳಿದ್ದಾರೆ. ಈಕೆಯ ಬಳಿ ಇದ್ದ ಸರಗಳನ್ನು ಖರೀದಿ ಮಾಡುವ ಬದಲು ಸೆಲ್ಫೀ ಕ್ಲಿಕ್ಕಿಸಿಕೊಳ್ಳೋರೆ ಜಾಸ್ತಿ ಆಗಿದ್ದರಂತೆ. ಇದೆಲ್ಲದರಿಂದ ತುಂಬಾ ಕಿರಿಕಿರಿ ಆಗ್ತಿದ್ದರಿಂದ ಈಕೆ ಸದ್ಯಕ್ಕೀಗ ಕುಂಭಮೇಳವನ್ನು ತೊರೆದು ಮನೆ ಸೇರಿದ್ದಾಳೆ.
——————-