ಸೀನ : ಅವಳು ಆಡಿದ ಒಂದು ಮಾತು…. ಝಾಡ್ಸಿ ಎದೆ ಮೇಲೆ ಒದ್ದಂಗಾತು ನೋಡಪಾ….

ನಾಣಿ : ಅವಳು ಅಂಥದ್ದು ಏನು ಹೇಳಿದಳು?

ಸೀನ : …………..

ರಾಮು : ಈ ಜನರ ರೀತಿ ನೀತಿ ಒಂದೂ ಅರ್ಥ ಆಗಲ್ಲ. ಭಾಳ ವಿಚಿತ್ರ ಮಾಡ್ತಾರಾ….

ಶ್ಯಾಮು : ಅದೇನಾಯ್ತು? ಯಾಕೆ ಹಾಗೆ ಕೊರಗುತ್ತಿದ್ದಿ?

ರಾಮು : ದಿನಾ ಮಾತಾಡ್ತಿದ್ರೆ…. ಏನ್‌ ತಲೆ ತಿಂತೀಯಾ…. ಮಾಡಕ್‌ ಬೇರೆ ಏನೂ ಕೆಲಸ ಇಲ್ವಾ ಅಂತಾರೆ. ಯಾವಾಗಲೋ ಒಮ್ಮೆ ಮಾತಾಡ್ತಿದ್ರೆ, ಏನೋ ಭಾರಿ ಬಿಝಿ ಅನ್ನೋ ತರಹ ಆಡ್ತಾನೆ ಅಂತಾರೆ, ಕೆಲಸ ಇದ್ದಾಗ ಮಾತಾಡ್ತಿದ್ರೆ…. ಕೇವಲ ಕೆಲಸ ಇರೋವಾಗ ಮಾತ್ರ ಮಾತಾಡಿಸ್ತಾನೆ ಅಂತಾರೆ, ಆದಷ್ಟೂ ಮಾತಾಡೋದನ್ನು ಕಡಿಮೆ ಮಾಡಿದರೆ ಆಹಾಹಾ, ದುರಂಹಕಾರ ನನ್ನ ಮಗನಿಗೆ ಅಂತಾರೆ!

ಮರಿ ಗುಂಡ : ಯಾಕಪ್ಪ ನಿನ್ನ ತಲೆಗೂದಲ ಎಷ್ಟೋ ಕಡೆ ಬೆಳ್ಳಗಾಗಿದೆ…..?

ಗುಂಡ : ನೀನು ಸುಳ್ಳು ಹೇಳಿದಾಗ, ತಪ್ಪು ಮಾಡಿದಾಗೆಲ್ಲ ಅಪ್ಪನ ತಲೆಗೂದಲು ಹೀಗೆ ಒಂದೊಂದಾಗಿ ಬೆಳ್ಳಗಾಗುತ್ತಿರುತ್ತದೆ….

ಮರಿ ಗುಂಡ : ಓಹೋ…. ಈಗ ಗೊತ್ತಾಯ್ತು…. ತಾತನ ತಲೆ ಯಾಕೆ ಬೋಳಾಗಿದೆ ಅಂತ!

ನೀತಿ : ಮಕ್ಕಳ ಮುಂದೆ ಸ್ಮಾರ್ಟ್‌ ನೆಸ್‌ ಬೇಡ!

ಲೀಲಾ : ಒಬ್ಬರನ್ನು ನೋಡಿ ನಕ್ಕರೆ ಅವರ ಗತೀನೇ ನಮಗೂ ಬರುತ್ತೆ ಅಂತಾರೆ…. ಆದರೆ ಇದು ನಿಜ ಅಲ್ಲ.

ಲೀಮಾ : ಹೇಗೆ ಹೇಳ್ತೀಯಾ?

ಲೀಲಾ : ನಾನು ದಿನಾ ಆಲಿಯಾ ಭಟ್‌, ದೀಪಿಕಾರ ಫೋಟೋ ನೋಡಿ ನಗ್ತೀನಿ, ಅವರ ತರಹ ಹಿರೋಯಿನ್‌ ಆಗ್ತಿಲ್ವೇ……?

ನಾಗೇಶ್‌ : ಅಲ್ಲ, ದೇವರು ಪ್ರತ್ಯಕ್ಷನಾಗಿ ನಿನ್ನ ಮುಂದೆ ಬಂದು ನಿಂತು, ಏನು ವರ ಬೇಕಾದರೂ ಕೋರಿಕೋ ಅಂತಂದರೆ, ಏನು ಕೇಳಿಕೊಳ್ತೀಯಾ?

ಮಹೇಶ್‌ : ಇರು, ಇರು…. ಮೊದಲಿಗೆ ದೇವರು ನಾವು ಇರುವ ಕಡೆಗೆ ಬಂದು ವರ ಕೊಡ್ತಿದ್ದಾನೋ ಅಥವಾ ನಾವೇ ದೇವರು ಇರುವ ಕಡೆಗೆ ಹೋಗಿದ್ದೇವೋ ಅಂತ ಖಚಿತಪಡಿಸಿಕೊಳ್ಳಬೇಕು.

ಮಗು : ಅಮ್ಮ ಗಾಂಧಿ ತಾತನ ತಲೆ ಯಾಕೆ ಬೋಳಾಗಿದೆ?

ತಾಯಿ : ಯಾಕಂದ್ರೆ ತಾತಾ ಸದಾ ಸತ್ಯವನ್ನೇ ಹೇಳ್ತಿದ್ದರು…..

ಮಗು : ಓಹೋ…. ಈಗ ಗೊತ್ತಾಯ್ತು…. ಯಾಕೆ ಹೆಂಗಸರಿಗೆಲ್ಲ ಅಷ್ಟು ಉದ್ದದ ಕೂದಲು ಇರುತ್ತೆ ಅಂತ…..

ಟೀಚರ್‌ : ಸೀನ, ನಿನ್ನ ವಯಸ್ಸೆಷ್ಟು?

ಸೀನ : ನನಗೆ ಈಗ 10 ವರ್ಷ.

ಟೀಚರ್‌ : ಮತ್ತೆ ನಿನ್ನ ಅಪ್ಪನ ವಯಸ್ಸು ಎಷ್ಟು?

ಸೀನ : ಅವರಿಗೂ 10 ವರ್ಷ ಅಷ್ಟೇ!

ಟೀಚರ್‌ : ಏನೋ ಇದು? ಇದು ಹೇಗೆ ಸಾಧ್ಯ?

ಸೀನ : ಅವರು ಅಪ್ಪ ಆಗಿದ್ದೇ ನಾನು ಹುಟ್ಟಿದ ಮೇಲೆ ತಾನೇ…..?

ಸುರೇಶ್‌ : ಅಲ್ಲ…. ಸೌದಿ ಅರೇಬಿಯಾ ಮತ್ತು ಇನ್ನಿತರ ಕೊಲ್ಲಿ ರಾಷ್ಟ್ರಗಳಲ್ಲಿ ಚದುರಂಗ (ಚೆಸ್‌) ಆಟವನ್ನು ದೊಡ್ಡ ಮಟ್ಟದಲ್ಲಿ ಬ್ಯಾನ್‌ ಮಾಡುತ್ತಾರೆಂಬ ವದಂತಿ ಇದೆ. ಹೌದಾ….?

ಮಹೇಶ್‌ : ಇರಬಹುದೇನೋ…. ಏಕೆಂದರೆ ಚದುರಂಗದಾಟದಲ್ಲಿ ರಾಣಿ ಬುರ್ಖಾ ಧರಿಸುವುದಿಲ್ಲ, ಹಿಜಾಬ್‌ ಇಲ್ಲವೇ ಇಲ್ಲ. ರಾಣಿ ಇಡೀ ಹಾಸಿನಲ್ಲಿ ಎಲ್ಲೆಂದರಲ್ಲಿ ಫ್ರೀಯಾಗಿ ಸುತ್ತಾಡಬಹುದು. ರಾಣಿ ರಾಜನಿಗಿಂತಲೂ ಬಲು ಶಕ್ತಿಶಾಲಿ! ಒಬ್ಬಳೇ ಶತ್ರು ಪಕ್ಷಕ್ಕೂ ನುಗ್ಗಬಹುದು, ಎಲ್ಲಕ್ಕೂ ಮುಖ್ಯ ಅಂದ್ರೆ…. ರಾಜನಿಗೆ ಇಲ್ಲಿ ಒಬ್ಬಳೇ ರಾಣಿ!

ಗುಂಡ : ಯಾಕೋ ಸೀನ….? ಯಾಕೆ ನೀನು ನನ್ನ ಫೋನ್‌ ತಗೊಳ್ತಾನೇ ಇಲ್ಲ? ನನಗೂ ಕಾಲ್ ‌ಮಾಡಿ ಮಾಡಿ ಸಾಕಾಯ್ತು.

ಸೀನ : ನಾನು ಲೆಕ್ಚರ್‌ ಕೇಳ್ತಾ ಇದ್ದೀನಿ.

ಗುಂಡ : ಎಲ್ಲಿದ್ದೀಯಾ? ಏನದು ಟಾಪಿಕ್‌?

ಸೀನ : ಇನ್ನೆಲ್ಲಿ….? ಮನೆಯಲ್ಲೇ! ಟಾಪಿಕ್‌ಹೆಂಡತಿಯ ಕಿವಿಮಾತು.

ನಾಣಿ : ನಿನಗೆ ಗೊತ್ತೇ? ಬೆಲೆ ಏರಿಕೆ, ದುಬಾರಿ ದರ ಇತ್ಯಾದಿಗಳ ಕೂಗು ಕೇವಲ ತರಕಾರಿ ಮಾರುಕಟ್ಟೆ, ಪೆಟ್ರೋಲ್ ‌ಪಂಪ್‌, ಗ್ಯಾಸ್‌ ಸಿಲಿಂಡರ್‌ ವರೆಗೂ ಮಾತ್ರ ಸೀಮಿತ.

ವೆಂಕ : ಅದು ಹೇಗೆ ಹೇಳ್ತೀಯಾ? ವಿವರಿಸು ನೋಡೋಣ.

ನಾಣಿ : ಇದು ಪಿಜ್ಜಾ ಹಟ್‌, ಕಾಫಿ ಡೇ ಕೆಫೆ, ಶಾಪಿಂಗ್‌ ಮಾಲ್‌, ಸಿನಿಮಾ ಹಾಲ್ ‌ಗಳಲ್ಲಿ ಎಂದೂ ಕೇಳಿ ಬರುವುದೇ ಇಲ್ಲ.

ವೆಂಕ : ಹೌದಾ ಹಾಗಂತೀಯಾ….. ಆಮೇಲೆ?

ನಾಣಿ : ಈ ಘೋಷಣೆಯ ವೈರಸ್‌ ಹೆಂಡದಂಗಡಿಗೆ, ಪಬ್‌, ಬಾರ್‌, ಸಿಗರೇಟ್‌, ರೇಸುಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತದೆ!

ಒಂದು ಪ್ರೈಮರಿ ಶಾಲೆಯ ವಾರ್ಷಿಕೋತ್ಸವ ದಿನ ಎಲ್ಲರೂ ಸಂಭ್ರಮದಿಂದ ಓಡಾಡುತ್ತಿದ್ದರು. ವೇದಿಕೆ ಬಳಿ ಹಂಚಲು ಭಾರಿ ಬುಟ್ಟಿ ತುಂಬಾ ಸೇಬು ಇರಿಸಲಾಗಿತ್ತು. ಮಕ್ಕಳು ತಾವಾಗಿ ಹೋಗಿ ತೆಗೆದುಕೊಳ್ಳಲಿ ಎಂದು ಪ್ರಿನ್ಸಿಪಾಲರು ಹೇಳಿದರು.

ಒಬ್ಬ ಜಾಣ ಟೀಚರ್‌ ಅಲ್ಲೊಂದು ಸೂಚನೆ ತಗುಲಿ ಹಾಕಿದರು. “ಹುಷ್‌! ಯಾರೂ ಒಂದಕ್ಕಿಂತ ಹೆಚ್ಚು ತೆಗೆದುಕೊಳ್ಳಬಾರದು. ದೇವರು ಇಲ್ಲೇ ನಿಮ್ಮನ್ನು ಗಮನಿಸುತ್ತಿದ್ದಾನೆ!”

ವೇದಿಕೆಯ ಇನ್ನೊಂದು ಬದಿಗೆ ಬಾಕ್ಸ್ ತುಂಬಾ ಚಾಕ್ಲೇಟ್‌ ಇರಿಸಿ, ಅದನ್ನು ಪಡೆದು ಮೆಯ್ನ್ ಗೇಟ್‌ ನಿಂದ ಮನೆಗೆ ಹೊರಡಬಹುದಾಗಿತ್ತು. ಅದನ್ನು ಗಮನಿಸಿ ಒಬ್ಬ ಮಗು ಚಾಕ್ಲೇಟ್‌ ಬಾಕ್ಸ್ ಮೇಲೆ ಹೀಗೆ ಬರೆಯಿತು. `ಧಾರಾಳವಾಗಿ 3-4 ಚಾಕ್ಲೇಟ್‌ ತೊಗೊಳ್ಳಿ. ದೇವರು ಸೇಬಿನ ಬುಟ್ಟಿ ಬಳಿ ಬ್ಯುಸಿ ಆಗಿದ್ದಾನೆ!`ಈಗಿನ ಮಕ್ಕಳು ಖಂಡಿತಾ ದಡ್ಡರಲ್ಲ……!’

ಒಂದು ಸಲ ಟ್ರಾಫಿಕ್‌ ಸಿಗ್ನಲ್ ನಲ್ಲಿ ಕೆಂಪು ದೀಪ ಬೆಳಗುತ್ತಿದ್ದರೂ ಯಾರೋ ಒಬ್ಬ ಬೇಕೆಂದೆ ರಸ್ತೆ ದಾಟಿ ಹೋದ. ಅದನ್ನು ನೋಡಿ ಉಳಿದ 5-6 ಮಂದಿ ಸಹ ಹಾಗೇ ಮಾಡಿ ತರಾತುರಿಯಲ್ಲಿ ರಸ್ತೆ ದಾಟಿದರು.

ತಕ್ಷಣ ಪೊಲೀಸರು ಮೊದಲನೆಯನನ್ನು ಬಿಟ್ಟು, ಈ 5-6 ಮಂದಿಗೆ ದಂಡ ವಿಧಿಸಿದರು.

ಇವರೆಲ್ಲ ತಿರುಗಿಬಿದ್ದು ಅವನನ್ನೇಕೆ ಶಿಕ್ಷಿಸಲಿಲ್ಲ ಎಂದು ವಾದ ಮಾಡಿದರು. ಅದಕ್ಕೆ ಪೊಲೀಸರು ಅವರು ಮಫ್ತಿಯಲ್ಲಿರುವ ನಮ್ಮ ಸಿಬ್ಬಂದಿ ಎಂದರು.

“ಅರ್ಧ ಗಂಟೆ ಬಿಟ್ಟು ಆತ ಹೀಗೆ ಬಂದು ಮತ್ತೆ ಇದೇ ರಸ್ತೆಯನ್ನು ಹೀಗೇ ದಾಟುತ್ತಾನೆ. ನಮಗೆ ಆಗಾಗ ಹೀಗೆ 4-5 ಮಂದಿ ಸಿಗ್ತಾ ಇರ್ತಾರೆ, ದಂಡದ ಹಣ ವಸೂಲಿ ಆಗುತ್ತೆ. ಮುಖ್ಯವಾಗಿ ನಾವು ಈ ಸಲದ 2021-22 ಟಾರ್ಗೆಟ್‌ ಅಚೀವ್ ‌ಮಾಡ್ಬೇಕು, ಇಲ್ಲದಿದ್ದರೆ ಸಂಬಳದಲ್ಲಿ ಹಿಡೀತೀವಿ ಅಂತ ಆದೇಶ ಬಂದಿದೆ!” ಅಧಿಕಾರಿ ಹೇಳಿದಾಗ ಅವರೆಲ್ಲ ತಲೆ ತಿರುಗಿಬಿದ್ದರು.

ಒಬ್ಬ ಅರಬ್ಬಿ ಶ್ರೀಮಂತ ಯುವಕ ನಮ್ಮ ಗುಜರಾತಿ ಮಾರ್ವಾಡಿ ಹುಡುಗಿಯ ಅಂದ ಚೆಂದಕ್ಕೆ ಮರುಳಾಗಿ ಅವಳನ್ನೇ ಮದುವೆಯಾಗಬೇಕು ಅಂತ ಅವರಪ್ಪನನ್ನು ಬಂದು ವಿನಂತಿಸಿಕೊಂಡ.

ಯುವಕ : ಸಾರ್‌, ನಿಮ್ಮ ಮಗಳನ್ನು ನಾನು ಸಿನ್ಸಿಯರ್‌ ಆಗಿ ಲವ್ ಮಾಡ್ತಿದ್ದೀನಿ. ದಯವಿಟ್ಟು ಅವಳನ್ನು ನನಗೇ ಮದುವೆ ಮಾಡಿಕೊಡಿ. ಬೇಕಾದರೆ… ವಧುದಕ್ಷಿಣೆಯಾಗಿ ಅವಳ ತೂಕದಷ್ಟು ಬಂಗಾರ ಈಗಲೇ ಸೌದಿಯಿಂದ ತರಿಸಿ ಕೊಡ್ತೀನಿ…. ಪ್ಲೀಸ್‌, ಇಲ್ಲ ಅನ್ಬೇಡಿ!

ತಂದೆ : ಇರು, ಇರು ನನಗೆ ಸ್ವಲ್ಪ ಸಮಯ ಬೇಕು.

ಯುವಕ : ಅಂದ್ರೆ… ಬಹಳ ಚಿಂತಿಸಿ ತೀರ್ಮಾನ ತಗೋತೀರಾ?

ತಂದೆ : ಹಾಗಲ್ಲ… ಅವಳೀಗ 60 ಕಿಲೋ… ಇನ್ನಷ್ಟು ದಿನ ಕಳೆಯಲಿ,  100 ಕಿಲೋ ಆಗಲಿ ಅಂತ ಕಾಯ್ತೀನಿ!

ಆ ಯುವಕ ಅರಬ್ಬಿ ಸಮುದ್ರಕ್ಕೆ ಹಾರುದೊಂದು ಬಾಕಿ.

ವೆಂಕ : ಆ ಜೆರಾಕ್ಸ್ ಅಂಗಡಿ ಹುಡುಗಿಗೆ ಲವ್ ಲೆಟರ್‌ ಕೊಟ್ಟಿದ್ದೇ ತಪ್ಪಾಯ್ತು ನೋಡು.

ನಾಣಿ : ಯಾಕೆ ಏನಾಯ್ತು?

ವೆಂಕ : ಅದನ್ನು ಓದೋದು ಬಿಟ್ಟು ತಕ್ಷಣ 10 ಕಾಪಿ ಜೆರಾಕ್ಸ್ ಮಾಡಿ ಕೊಟ್ಟುಬಿಡೋದೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ