–ಶರತ್ ಚಂದ್ರ
ಕನ್ನಡದ ‘ಫಾರೆಸ್ಟ್ ‘ಚಿತ್ರ ಎರಡನೇ ವಾರಕ್ಕೆ ಕಾಲಿಟ್ಟಿದೆ. ಹಾಸ್ಯದ ಜೊತೆ ಶುದ್ಧ ಮನೋರಂಜನೆಯನ್ನು ಬಯಸುವ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಿದೆ. ಈ ಚಿತ್ರದಲ್ಲಿ ನಟಿಸಿರುವ ಚಿಕ್ಕಣ್ಣ ರಂಗಾಯಣ ರಘು,ಗುರುನಂದನ್ ಮತ್ತು ಅನೀಶ್ ಅವರಿಗೆ ಸಮಾನವಾಗಿ ನಟಿಸಿರುವ ಅರ್ಚನ ಕೊಟ್ಟಿಗೆಯ ಅಭಿನಯದ ಬಗ್ಗೆ ಕೂಡ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.
2018 ರಲ್ಲಿ ಬಿಡುಗಡೆಯಾದ’ ಅರಣ್ಯ ಕಾಂಡ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅರ್ಚನ ಕೊಟ್ಟಿಗೆ ‘ಡಿಯರ್ ಸತ್ಯ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರೂ ಕೂಡ ನಂತರ ಈಕೆಗೆ ತೆರೆಯ ಮೇಲೆ ಪೂರ್ಣ ಪ್ರಮಾಣ ದಲ್ಲಿ ಮಿಂಚುವ ಅವಕಾಶಗಳು ಸಿಕ್ಕಿರಲಿಲ್ಲ . ಹೊಂದಿಸಿ ಬರೆಯಿರಿ,ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರೂ ಎಲ್ಲರ ಗಮನ ಸೆಳೆದಿದ್ದ ಕನ್ನಡದ ಅಪ್ಪಟ ಪ್ರತಿಭೆ ಅರ್ಚನ ಕೊಟ್ಟಿಗೆಗೆ ನಿರ್ದೇಶಕ ಚಂದ್ರ ಮೋಹನ್ ತಮ್ಮ ಫಾರೆಸ್ಟ್ ಚಿತ್ರದಲ್ಲಿ ಒಳ್ಳೆ ಪಾತ್ರ ನೀಡಿದ್ದಾರೆ.
ಮೀನಾಕ್ಷಿ ಎಂಬ ಹಳ್ಳಿ ಹುಡುಗಿ ಮತ್ತು ಗಟ್ಟಿಗಿತ್ತಿ ಪಾತ್ರ ಮಾಡಿರುವ ಅರ್ಚನಾ ಅಭಿನಯ ಎಲ್ಲರಿಗೂ ಇಷ್ಟವಾಗಿದೆ. ಕಾಡಿನಲ್ಲಿ ಹುದುಗಿರುವ ನಿಧಿಯನ್ನು ಹುಡುಕಿಕೊಂಡು ಹೋಗುವ ಚಿಕ್ಕಣ್ಣ,ರಂಗಾಯಣ ರಘು,ಗುರುನಂದನ್ ಮತ್ತು ಅನೀಶ್ ಜೊತೆ ಕಾಡು ಸುತ್ತುವ ಏಕೈಕ ಮಹಿಳೆ ಯಾಗಿ ಅತ್ಯುತ್ತಮವಾಗಿ ನಟಿಸಿದ್ದಾರೆ.
ಅದರಲ್ಲೂ ಕ್ಲೈಮ್ಯಾಕ್ಸ್ ನಲ್ಲಿ ಬರುವ ದೆವ್ವ ಆಹ್ವಾನೆ ಯಾಗುವ ದೃಶ್ಯಗಳಲ್ಲಿ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ.
ಈ ಹಿಂದೆ ನಿವೇದಿತಾ ಶಿವರಾಜಕುಮಾರ್ ನಿರ್ಮಾಣ ಸಂಸ್ಥೆಯಲ್ಲಿ ಬಂದಂತಹ ‘ಹನಿಮೂನ್’ ವೆಬ್ ಸೀರೀಸ್ ನಲ್ಲಿ ಕೂಡ ಅಭಿನಯಿಸಿರುವ ಅರ್ಚನ, ಈಗಾಗಲೇ ಮಲಯಾಳಂ ಚಿತ್ರರಂಗಕ್ಕೆ ಕೂಡ ಕಾಲಿಟ್ಟಿದ್ದಾರೆ.
ಅರ್ಚನಾ ಕೊಟ್ಟಿಗೆ ಎಂಬ ಸ್ಥಳೀಯ ಪ್ರತಿಭೆಯನ್ನು ನಮ್ಮ ಕನ್ನಡದಲ್ಲೇ ಉಳಿಸಿಕೊಂಡು ನಿರ್ದೇಶಕರು ಆಕೆಯ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಿ.