– ರಾಘವೇಂದ್ರ ಅಡಿಗ ಎಚ್ಚೆನ್.
ಧನಂಜಯ್ ಅವರು ಈ ತಿಂಗಳು ಡಾಕ್ಟರ್ ಧನ್ಯತಾ ಅವರನ್ನು ವರಿಸುತ್ತಿದ್ದಾರೆ. ಮೈಸೂರಿನಲ್ಲಿ ಫೆಬ್ರವರಿ 15 ಮತ್ತು 16ರಂದು ಅವರ ಮದುವೆ ನಡೆಯಲಿದೆ. ಆ ಕುರಿತು ಮಾಹಿತಿ ಹಂಚಿಕೊಳ್ಳಲು ಇಂದು (ಫೆ.5) ಬೆಂಗಳೂರಿನಲ್ಲಿ ಅವರು ಭಾವಿ ಪತ್ನಿ ಜೊತೆ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಇಬ್ಬರ ಪ್ರೀತಿ, ಪ್ರೇಮ ಹಾಗೂ ವಿವಾಹ ಸಮಾರಂಭದ ಬಗ್ಗೆ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಗ ಹಳೆಯ ಲವ್ಸ್ಟೋರಿಗಳ ಬಗ್ಗೆ ಪ್ರಶ್ನೆ ಎದುರಾಯಿತು. ‘ನಾನು ಎಲ್ಲವನ್ನು ಹೇಳಿಯೇ ಮದುವೆ ಆಗುತ್ತಿದ್ದೇನೆ. ಎಲ್ಲರಿಗೂ ಲವ್ಸ್ಟೋರಿ ಇರುತ್ತದೆ. ಸಿನಿಮಾದವರು ಎಂದಾಗ ಅದು ಪ್ರಚಾರ ಆಗಿರುತ್ತದೆ ಅಷ್ಟೇ’ ಎಂದಿದ್ದಾರೆ ಧನಂಜಯ್.
ಇದೇ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮದುವೆ ಸಮಾರಂಭ ಆಯೋಜಿಸಲಾಗಿದೆ.
ಕಳೆದೊಂದು ವರ್ಷದಿಂದ ಧನ್ಯತಾ ನನಗೆ ಪರಿಚಯವಿದ್ದು, ಅವರು ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಳವಾಗಿ ಮದುವೆ ಆಗಬೇಕು ಅನ್ನೋ ಆಸೆ ನನಗಿತ್ತು. ರಿಜಿಸ್ಟರ್ ಮ್ಯಾರೇಜ್ ಆಗಬೇಕು ಅಂದುಕೊಂಡಿದ್ದೆ. ಆದರೆ ಮನೆಯವರ ಒತ್ತಡ, ಊರಿಗೆಲ್ಲಾ ಊಟ ಹಾಕಿಸಬೇಕು ಅನ್ನೋದು ನನ್ನ ತಂದೆಯ ಆಸೆ. ನನಗೆ ಗೆಳೆಯರ ಬಳಗ ದೊಡ್ಡದು. ಇಂಡಸ್ಟ್ರಿಯ ಗೆಳೆಯರು ಜಾಸ್ತಿ ಹೀಗಾಗಿ ಮೈಸೂರು ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಮದುವೆ ಆಗ್ತಿದ್ದೀನಿ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
ಇದೇ ಸಮಯದಲ್ಲಿ ಡಾಕ್ಟರ್ ಧನ್ಯತಾ ಮಾತನಾಡಿ ಡಾಲಿಯ ಸರಳ ಗುಣ ನನಗೆ ಇಷ್ಟ ಆಯಿತು. ನಮ್ಮಿಬ್ಬರದ್ದು ಒಂದೇ ರೀತಿಯ ಮನಸ್ಥಿತಿ. ನಾವು ಫ್ರೆಂಡ್ಸ್ ಥರಾನೇ ಇದ್ವಿ. ಡಾಲಿ ಧನಂಜಯ ನನ್ನ ಥರಾ, ನನ್ನ ಫ್ಯಾಮಿಲಿಗೂ ಹತ್ತಿರ ಆದರು. ಡಾಲಿಯಿಂದ ನಾನು ಸಿನಿಮಾಗಳನ್ನು ನೋಡೋಕೆ ಶುರು ಮಾಡಿದೆ. ಡಾಲಿಯ ರತ್ನನ್ ಪ್ರಪಂಚ ಸಿನಿಮಾ ನನ್ನ ಫೇವರಿಟ್ ಎಂದು ಹೇಳಿದರು. ತಮ್ಮ ಪರಿಚಯ ಹೇಳಿಕೊಂಡ ಧನ್ಯತಾ ತಾವು ಮೂಲತ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಮಲ್ಲಾಡಿಹಳ್ಳಿಯಲ್ಲಿರುವ ಶಿವಪುರ ಅನ್ನು ಚಿಕ್ಕ ಗ್ರಾಮದವರು, ವೈದ್ಯಕೀಯ ಶಿಕ್ಷಣವನ್ನೆಲ್ಲ ಪಡೆದಿದ್ದು ಚಿತ್ರದುರ್ಗದಲ್ಲಿ, ಅಲ್ಲಿನ ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ್ದಾಗಿ ಹೇಳಿದ್ದಾರೆ. ಪ್ರಸ್ತುತ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞರಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ ಧನ್ಯತಾ ಅವರೇ ಹೇಳಿಕೊಂಡಂತೆ ಇದೂವರೆಗೂ ಸುಮಾರು 500ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ.
“ನನ್ನದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಮಲ್ಲಾಡಿಹಳ್ಳಿಯಲ್ಲಿರುವ ಶಿವಪುರ ಅಂತ ಚಿಕ್ಕ ಊರು. ಎಂಬಿಬಿಎಸ್ ಮಾಡಿದ್ದು ಚಿತ್ರದುರ್ಗ, ಬಸವೇಶ್ವರ ಮೆಡಿಕಲ್ ಕಾಲೇಜ್‌ನಲ್ಲಿ. ಇಲ್ಲಿವರೆಗೂ ಸುಮಾರು 500ಕ್ಕೂ ಅಧಿಕ ಡಿಲೆವರಿ ಮಾಡಿಸಿರಬಹುದು. ನಾನು ಧನಂಜಯ್ ಅವರನ್ನು ಮದುವೆ ಆಗುತ್ತಿರುವುದು ನಮ್ಮ ಊರಿನವರಿಗೂ ಖುಷಿ ಕೊಟ್ಟಿದೆ” ಎಂದು ಧನಂಜಯ್ ಭಾವಿ ಪತ್ನಿ ಧನ್ಯತಾ ಮಾಧ್ಯಮಗಳಿಗೆ ತಮ್ಮ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಡಾಲಿ ಧನಂಜಯ್‌ಗೆ ಸರಳವಾಗಿ ವಿವಾಹ ಆಗಬೇಕು ಅನ್ನೋ ಆಸೆ ಇತ್ತಂತೆ. ಆದರೆ ನಾನು ಸರಳ ವಿವಾಹ ಅಂದ್ರು 2000 ಜನ ಸೇರ್ತಾರೆ. ಹೀಗಾಗಿ ನಾನು ಜನರ ಸಮ್ಮುಖದಲ್ಲಿ ಮದುವೆ ಆಗ್ತಿದ್ದೀನಿ. ಮದುವೆಗೆ ಬಂದು ಹೋಗುವ ಅಭಿಮಾನಿಗಳಿಗೆ ಸುಲಭ ಆಗಲಿ ಅಂತ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಅಭಿಮಾನಿಗಳಿಗೆ ವಿದ್ಯಾಪತಿ ದ್ವಾರ ಇರಲಿದೆ. ವಿದ್ಯಾಪತಿ ದ್ವಾರದಿಂದ ಫ್ಯಾನ್ಸ್ ಬಂದ್ರೆ ಆರಾಮಾಗಿ ಸ್ಟೇಜ್ ಹತ್ತಿರ ಬಂದು ಮದುವೆ ಸಂಭ್ರಮ ನೋಡಿ ನಮ್ಮನ್ನು ನೋಡಿ ಶುಭ ಹಾರೈಸಬಹುದು. ಎಲ್ಲರ ಜೊತೆ ಅಭಿಮಾನಿಗಳನ್ನು ಸೇರಿಸಲ್ಲ. ಎಲ್ಲರನ್ನು ಸ್ಟೇಜ್ ಮೇಲೆ ಕರೆಸಬೇಕು ಅಂದ್ರೆ ಕಷ್ಟ ಆಗುತ್ತೆ. ಅಭಿಮಾನಿಗಳು ವಿದ್ಯಾಪತಿ ದ್ವಾರದ ಸಾಲಿನಲ್ಲಿ ಬಂದರೆ ಸಾಕು ಕುಳಿತು ಮದುವೆ ಸಂಭ್ರಮವನ್ನು ನೋಡಬಹುದು. ಊಟ ಮಾಡಿಕೊಂಡು ಹೋಗಲು ವ್ಯವಸ್ಥೆ ಮಾಡಲಾಗುವುದು ಎಂದು ನಟ ಡಾಲಿ ಧನಂಜಯ್ ತಿಳಿಸಿದ್ದಾರೆ.