ಟಾಟಾ ಮುಂಬೈ ಮ್ಯಾರಥಾನ್ (TMM) 2026 ತನ್ನ ದಾನಾತ್ಮಕ ಪಾಲುದಾರರಾದ ಯುನೈಟೆಡ್ ವೇ ಮುಂಬೈ ಅವರ ಬೆಂಬಲದೊಂದಿಗೆ ಈಗಾಗಲೇ ₹53.7 ಕೋಟಿ ರೂಪಾಯಿಗೂ ಅಧಿಕ ನಿಧಿ ಸಂಗ್ರಹಿಸಿದೆ. ನಿಧಿ ಸಂಗ್ರಹಣೆಯು 2026ರ ಫೆಬ್ರವರಿ 5ರವರೆಗೆ ಮುಂದುವರಿಯಲಿದೆ.
ಈ ವೇದಿಕೆಯ ಮೂಲಕ ಸಂಗ್ರಹವಾಗುವ ನಿಧಿಗಳು ಮಕ್ಕಳ ಶಿಕ್ಷಣಕ್ಕೆ ಪ್ರವೇಶ, ಮಹಿಳಾ ಸಬಲೀಕರಣ, ಸಮುದಾಯಗಳ ಬಲವರ್ಧನೆ, ಆರೋಗ್ಯ ಫಲಿತಾಂಶಗಳ ಸುಧಾರಣೆ, ಪ್ರಾಣಿಗಳ ಆರೈಕೆ ಹಾಗೂ ಪರಿಸರ ಸಂರಕ್ಷಣೆಯಂತಹ ವಿವಿಧ ಕ್ಷೇತ್ರಗಳಿಗೆ ಬೆಂಬಲ ಒದಗಿಸಲಿವೆ.
2004ರಿಂದ ಇಂದಿನವರೆಗೆ, ಭಾರತದ ಅತಿದೊಡ್ಡ ಕ್ರೀಡಾ ವೇದಿಕೆಯಾದ ಟಾಟಾ ಮುಂಬೈ ಮ್ಯಾರಥಾನ್, ಎನ್‌ಜಿಒಗಳು, ಕಾರ್ಪೊರೇಟ್ ಸಂಸ್ಥೆಗಳು, ಓಟಗಾರರು ಹಾಗೂ ವೈಯಕ್ತಿಕ ನಿಧಿ ಸಂಗ್ರಾಹಕರ ಒಕ್ಕೂಟದ ಪ್ರಯತ್ನಗಳಿಂದ ಒಟ್ಟು ₹536 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.
ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಬದ್ಧತೆಗಳನ್ನು ಬಲಪಡಿಸಲು ಹಾಗೂ ನೌಕರರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಮ್ಯಾರಥಾನ್ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ. ಈ ವರ್ಷ ಭಾಗವಹಿಸಿರುವ 194 ಕಾರ್ಪೊರೇಟ್ ತಂಡಗಳಲ್ಲಿ 40 ಕಂಪನಿಗಳು ಮೊದಲ ಬಾರಿಗೆ ಮ್ಯಾರಥಾನ್‌ನ ದಾನಾತ್ಮಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿವೆ.
ಅದೇ ವೇಳೆ, ಎನ್‌ಜಿಒ ವಲಯವೂ ವಿಸ್ತಾರಗೊಳ್ಳುತ್ತಿದ್ದು, 2026ರಲ್ಲಿ 68 ಹೊಸ ಸಂಸ್ಥೆಗಳು ಸೇರ್ಪಡೆಯಾಗಿವೆ. ಇದರೊಂದಿಗೆ ಒಟ್ಟು ಎನ್‌ಜಿಒಗಳ ಸಂಖ್ಯೆ 305ಕ್ಕೆ ಏರಿಕೆಯಾಗಿದೆ. ಇದು ನಿಧಿ ಸಂಗ್ರಹ ಮತ್ತು ಜಾಗೃತಿ ನಿರ್ಮಾಣಕ್ಕೆ ಹೊಸ ವೇದಿಕೆಯನ್ನು ಒದಗಿಸುತ್ತಿದೆ.
ಈ ಅಭಿಯಾನವು ಮಹತ್ವದ ಸಾಮಾಜಿಕ ಬಂಡವಾಳವನ್ನು ನಿರ್ಮಿಸುವುದರ ಜೊತೆಗೆ, ಮುಂದಿನ ತಲೆಮಾರಿನ ದಾನಿಗಳು, ನಿಧಿ ಸಂಗ್ರಾಹಕರು ಮತ್ತು ಸಾಮಾಜಿಕವಾಗಿ ತೊಡಗಿಸಿಕೊಂಡ ಸಂಸ್ಥೆಗಳನ್ನು ರೂಪಿಸುತ್ತಿದೆ. ಇದರ ಮೂಲಕ ಟಿಎಂಎಂ ಭಾರತದ ಅತ್ಯಂತ ಶಕ್ತಿಶಾಲಿ ಮತ್ತು ದೀರ್ಘಕಾಲಿಕ ಸಾಮಾಜಿಕ ಪ್ರಭಾವ ಹೊಂದಿರುವ ಕ್ರೀಡಾ ವೇದಿಕೆಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.
ಈ ಬದಲಾವಣೆಯ ಕುರಿತು ಮಾತನಾಡಿದ ಯುನೈಟೆಡ್ ವೇ ಮುಂಬೈ ಸಿಇಒ ಜಾರ್ಜ್ ಐಕಾರಾ, “ಒಂದೇ ವರ್ಷದಲ್ಲಿ ಶೇ.70ಕ್ಕೂ ಹೆಚ್ಚು ನಿಧಿ ಸಂಗ್ರಾಹಕರು, 40 ಹೊಸ ಕಾರ್ಪೊರೇಟ್‌ಗಳು ಮತ್ತು 68 ಹೊಸ ಎನ್‌ಜಿಒಗಳು ಸೇರಿಕೊಂಡಿವೆ. ಟಾಟಾ ಮುಂಬೈ ಮ್ಯಾರಥಾನ್ ಈಗ ಕೇವಲ ಓಟವಲ್ಲ; ಹೊಸ ತಲೆಮಾರಿನವರು ದಾನವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಪಾಲ್ಗೊಳ್ಳುತ್ತಾರೆ ಎಂಬುದನ್ನು ರೂಪಿಸುವ ವೇದಿಕೆಯಾಗಿದೆ” ಎಂದು ಹೇಳಿದರು.
ಪ್ರೋಕ್ಯಾಮ್ ಇಂಟರ್‌ನ್ಯಾಷನಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ಮಾತನಾಡಿ, ಟಾಟಾ ಮುಂಬೈ ಮ್ಯಾರಥಾನ್ ಕಾರ್ಪೊರೇಟ್‌ಗಳು, ಎನ್‌ಜಿಒಗಳು, ಓಟಗಾರರು ಹಾಗೂ ವೈಯಕ್ತಿಕ ನಿಧಿ ಸಂಗ್ರಾಹಕರಿಗೆ ಸಾಮಾಜಿಕ ಹಿತಕ್ಕಾಗಿ ಶಕ್ತಿಶಾಲಿ ವೇದಿಕೆಯನ್ನು ಒದಗಿಸಿದೆ. ಇದು ನಾಗರಿಕ ಸಮಾಜದೊಂದಿಗೆ ನಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎನ್‌ಜಿಒ ಕ್ಷೇತ್ರದಲ್ಲಿ ನಿಧಿ ಸಂಗ್ರಹದ ವೆಚ್ಚವು ಸಾಮಾನ್ಯವಾಗಿ 50–60 ಶೇಕಡಾ ಇರುತ್ತದೆ. ಯುನೈಟೆಡ್ ವೇ ಮುಂಬೈ ಅವರ ಬೆಂಬಲದಿಂದ ಅದನ್ನು ಕೇವಲ 3.83 ಶೇಕಡಾಗೆ ಇಳಿಸಲು ಸಾಧ್ಯವಾಗಿದೆ. ಆದ್ದರಿಂದಲೇ ಇಂದು 305 ಎನ್‌ಜಿಒಗಳು ಮುಂಬೈ ಮ್ಯಾರಥಾನ್ ಮೂಲಕ ನಿಧಿ ಮತ್ತು ಜಾಗೃತಿ ಸಂಗ್ರಹಿಸುತ್ತಿವೆ” ಎಂದು ಹೇಳಿದರು.





