ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾಗಿರುವ ಯುದ್ಧದ ಪರಿಸ್ಥಿತಿ ಈಗ ಜಾಗತಿಕ ಸಂಚಾರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಇದರ ನೇರ ಪರಿಣಾಮ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಾಗಿದ್ದು, ಇಂದು ಹಲವು ಪ್ರಮುಖ ಅಂತರಾಷ್ಟ್ರೀಯ ವಿಮಾನಗಳ ಸಂಚಾರ ರದ್ದುಗೊಂಡಿದೆ.

ಪರದಾಟ: ಯುದ್ಧದ ತೀವ್ರತೆಯಿಂದಾಗಿ ಇರಾನ್ ತನ್ನ ವಾಯುಪ್ರದೇಶವನ್ನು ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಮುಚ್ಚಿದೆ. ರಾತ್ರಿ ವೇಳೆ ಕೆಲವೇ ಗಂಟೆಗಳ ಕಾಲ ದುಬೈ ಮತ್ತು ಇರಾನ್ ಏರ್‌ಬೇಸ್‌ಗಳನ್ನು ತೆರೆಯಲಾಗಿತ್ತಾದರೂ, ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಮತ್ತೆ ಬಂದ್ ಮಾಡಲಾಗಿದೆ. ಈ ಅನಿಶ್ಚಿತತೆಯಿಂದ ದುಬೈ, ಅಬುಧಾಬಿ ಮತ್ತು ಜಿದ್ದಾ ನಗರಗಳಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳು ರದ್ದಾಗಿವೆ.

ಗೊಂದಲದ ವಾತಾವರಣ:  ಇಂದು (ಮಾರ್ಚ್ 03) ಬೆಳಗ್ಗೆಯಿಂದಲೇ ವಿಮಾನ ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ 8:50ಕ್ಕೆ ದುಬೈನಿಂದ ಬರಬೇಕಿದ್ದ ಎಮಿರೇಟ್ಸ್, 9:30ಕ್ಕೆ ಅಬುಧಾಬಿಯಿಂದ ಬರಬೇಕಿದ್ದ ಇಂಡಿಗೋ ಮತ್ತು 10:45ಕ್ಕೆ ಜಿದ್ದಾದಿಂದ ಬರಬೇಕಿದ್ದ ಇಂಡಿಗೋ ವಿಮಾನಗಳು ರದ್ದಾಗಿವೆ. ಬೆಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಇಂಡಿಗೋ (ಬೆಳಿಗ್ಗೆ 8:00) ಮತ್ತು ಎಮಿರೇಟ್ಸ್ (ಬೆಳಿಗ್ಗೆ 10:25) ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.ವಾಪಸ್ ಬಂದ ವಿಮಾನ: ಮುಂಜಾನೆ 4:30ಕ್ಕೆ ಬೆಂಗಳೂರಿನಿಂದ ದುಬೈಗೆ ಹೊರಟಿದ್ದ ಎಮಿರೇಟ್ಸ್ ವಿಮಾನವು ಅರ್ಧ ದಾರಿಯಿಂದಲೇ ವಾಪಸ್ ಬಂದಿದೆ. ಭಾರತದ ಗಡಿ ದಾಟುವಷ್ಟರಲ್ಲಿ ದುಬೈ ವಾಯುನೆಲೆ ಬಂದ್ ಆಗಿರುವ ಮಾಹಿತಿ ಲಭಿಸಿದೆ. ತಕ್ಷಣವೇ ಪೈಲಟ್ ವಿಮಾನವನ್ನು ಕೆಂಪೇಗೌಡ ನಿಲ್ದಾಣಕ್ಕೆ ಮರಳಿಸಿದ್ದಾರೆ. ಈ ವಿಮಾನದಲ್ಲಿದ್ದ 113 ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.

ಯುದ್ಧದ ಭೀತಿಯ ನಡುವೆ ತಾಯ್ನಾಡಿಗೆ ಮರಳಿದ ಕನ್ನಡಿಗರನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು. ತಡರಾತ್ರಿ ಮತ್ತು ಮುಂಜಾನೆ ಬಂದ ಪ್ರಯಾಣಿಕರಿಗೆ ಹಸಿವು ನೀಗಿಸಲು ತಿಂಡಿ ಮತ್ತು ಸ್ನಾಕ್ಸ್ ವಿತರಿಸಲಾಯಿತು. ಅನಿರೀಕ್ಷಿತವಾಗಿ ವಿಮಾನ ರದ್ದತಿಯಿಂದ ಕಂಗಾಲಾಗಿದ್ದ ಪ್ರಯಾಣಿಕರಿಗೆ ಸಿಬ್ಬಂದಿಗಳು ಸಾಂತ್ವನ ನೀಡುತ್ತಿದ್ದಾರೆ.

ಅಧಿಕಾರಿಗಳ ಸೂಚನೆ: ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ವಿಮಾನಗಳ ವೇಳಾಪಟ್ಟಿಯಲ್ಲಿ ಏರುಪೇರಾಗುವುದು ಅನಿವಾರ್ಯ ಎಂದು ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಕ್ಕೆ ಪ್ರಯಾಣ ಬೆಳೆಸುವವರು ಅಥವಾ ಸಂಬಂಧಿಕರನ್ನು ಬರಮಾಡಿಕೊಳ್ಳುವವರು ತಮ್ಮ ಏರ್‌ಲೈನ್ ಸಂಸ್ಥೆಗಳ ಅಧಿಕೃತ ವೆಬ್‌ಸೈಟ್ ಅಥವಾ ಸಹಾಯವಾಣಿಯ ಮೂಲಕ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ