ನನ್ನ ದೊಡ್ಡ ಮಗಳಿಗೆ ಅತ್ತೆ ಇಲ್ಲ. ನನ್ನ ಚಿಕ್ಕ ಮಗಳಿಗೂ ಇದೇ ತೆರನಾದ ಮನೆ ಹುಡುಕುತ್ತಿದ್ದೆ. ಏಕೆಂದರೆ ಅತ್ತೆಯ ಕಿರಿಕಿರಿ ಇರಬಾರದು ಎನ್ನುವುದು ನನ್ನ ವಿಚಾರವಾಗಿತ್ತು. ನಾನು ಇದೇ ಕಾರಣದಿಂದ ಒಂದು ಸಂಬಂಧವನ್ನು ನಿರಾಕರರಿಸಿದ್ದೆ. ಆ ಮನೆಯ ಅತ್ತೆ ಬಹಳ ಖಡಕ್ ಎಂದು ನನಗೆ ಅನ್ನಿಸುತ್ತಿತ್ತು.
ನನ್ನ ಗಂಡ ಕೂಡ ಇದನ್ನು ಬಹಳ ದಿನಗಳಿಂದ ನೋಡುತ್ತಾ ಬಂದಿದ್ದರು. ನಾನು ಒಂದು ಸಂಬಂಧವನ್ನು ನಿರಾಕರಿಸಿದಾಗ ಅವರು ನನ್ನ ಬಳಿ ಕುಳಿತು ಹೇಳಿದರು, “ನಾಳೆ ನಮ್ಮ ಮಗನ ಮದುವೆಯಲ್ಲೂ ಪ್ರತಿಯೊಬ್ಬ ಹುಡುಗಿಯ ತಾಯಿಯೂ ಹೀಗೆಯೇ ಯೋಚಿಸಿದರೆ?”
ಅವರು ಹೇಳಿದ ಮಾತು ನನ್ನ ಮನಸ್ಸಿಗೆ ನಾಟಿತು. ಆ ಬಳಿಕ ನಾನು ನನ್ನ ಮಗಳ ಸಂಬಂಧವನ್ನು ಯಾವುದೇ ಮೀನಾಮೇಷ ಎಣಿಸದೆ ನಿರ್ಧರಿಸಿಬಿಟ್ಟೆ. ಇವತ್ತು ಅವಳ ಅತ್ತೆ ನನ್ನೊಂದಿಗೆ ಬಹಳ ಒಳ್ಳೆಯ ಸಂಬಂಧ ಹೊಂದಿದ್ದಾರೆ.
– ತೃಪ್ತಿ ದೇಸಾಯಿ, ಹುಬ್ಬಳ್ಳಿ.
ಹಲವು ವರ್ಷಗಳ ಹಿಂದಿನ ಮಾತು. ನನ್ನ ಗೆಳೆಯನೊಬ್ಬನ ಮದುವೆಯಲ್ಲಿ ಊಟದ ಹೊರತಾಗಿ ಕುಡಿಯುವ ಅಂದರೆ ಮದ್ಯದ ವ್ಯವಸ್ಥೆ ಕೂಡ ಮಾಡಲಾಗಿತ್ತು. ನಾನು. ಯಾವಾಗಲಾದರೊಮ್ಮೆ ಒಂದಿಷ್ಟು ಕುಡಿಯುತ್ತಿದ್ದೆ. ಆದರೆ ಆ ಮದುವೆಯ ಸಮಾರಂಭದಲ್ಲಿ ನಾನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಕುಡಿದೆ. ರಾತ್ರಿ ಬಹಳ ಹೊತ್ತಿನವರೆಗೆ ನಾನು ಅಲ್ಲಿಯೇ ಉಳಿದ ಕಾರಣದಿಂದ ಮನೆಗೆ ಬರಲು ತಡವಾಯಿತು. ನನ್ನ ಕಾಲುಗಳು ಅತ್ತಿತ್ತ ಓಲಾಡುತ್ತಿದ್ದವು.
ನಾನು ಮನೆಗೆ ಹೋದಾಗ ನನ್ನ 7 ವರ್ಷದ ಮಗಳು ಇನ್ನು ಎಚ್ಚರದಿಂದಿದ್ದಳು. ನನ್ನ ಪರಿಸ್ಥಿತಿ ನೋಡಿ ಅವಳು ನನ್ನನ್ನು ಮೊದಲು ಕೂರಿಸಿ ನಂತರ ಹೇಳಿದಳು, “ಅಪ್ಪಾ, ನೀವು ಇಷ್ಟೊಂದು ಕುಡಿಯುವುದೇಕೆ? ನಿಮಗೆ ಏನಾದರೂ ಆಗಿಹೋದರೆ ನಮ್ಮ ಸ್ಥಿತಿ ಏನು?”
ಪುಟ್ಟ ಮಗಳ ಮಾತುಗಳು ನನ್ನ ಹೃದಯ ತಟ್ಟಿದವು…… ಆ ದಿನವೇ ನಾನು ಇಂದಿನಿಂದ ಮದ್ಯ ಸೇವಿಸುವುದಿಲ್ಲ ಎಂದು ನಿರ್ಧರಿಸಿದೆ.
ಈಗ ನಾನು ನನ್ನ ಕುಟುಂಬದ ಜೊತೆಗೆ ಬಹಳ ಖುಷಿಯಿಂದಿರುವೆ. ನನ್ನ ಮಗಳು ನನಗೆ ಸಕಾಲಕ್ಕೆ ಒಳ್ಳೆಯ ಪಾಠ ಕಲಿಸಿದಳು.
– ರಾಜೇಶ್, ಮೈಸೂರು.
ನನ್ನ ಮದುವೆಯಾಗಿ ಕೇವಲ 6 ತಿಂಗಳಾಗಿತ್ತು. ಆಗ ಆಕಸ್ಮಿಕವಾಗಿ ಪತಿಗೆ 10 ದಿನಗಳ ಮಟ್ಟಿಗೆ ಬೇರೊಂದು ಊರಿಗೆ ಹೋಗಬೇಕಾಗಿ ಬಂತು. ಆ ದಿನಗಳಲ್ಲಿ ನಾವು ಗಂಡ ಹೆಂಡತಿ ನೌಕರಿಯ ಕಾರಣದಿಂದ ಬೇರೆ ಬೇರೆ ಕಡೆ ಇದ್ದೆವು. ಅವರು ಹೋಗುವಾಗ ನನ್ನ ಬಳಿ ಒಂದಿಷ್ಟು ಹಣ ಕೊಟ್ಟು ಹೇಳಿದರು, “ನೋಡು, ಎಚ್ಚರಿಕೆಯಿಂದ ಖರ್ಚು ಮಾಡು.”
2 ದಿನ ನಾನು ಸುಮ್ಮನಿದ್ದೆ. 3ನೇ ದಿನ ಸಿಕ್ಕಾಪಟ್ಟೆ ಶಾಪಿಂಗ್ ಮಾಡಿಕೊಂಡು ಬಂದು ಬಹಳ ಖುಷಿಪಟ್ಟೆ. ಗಂಡ ಮನೆಗೆ ಮರಳುವ ಮೂರು ದಿನ ಮುಂಚೆಯೇ ನನ್ನ ಕೈಯಲ್ಲಿದ್ದ ಹಣವೆಲ್ಲ ಖರ್ಚಾಗಿ ಹೋಯಿತು. ಉಳಿದ ದಿನಗಳನ್ನು ಬಹಳ ಕಷ್ಟಪಟ್ಟು ಕಳೆದೆ. ಅವರು ಮನೆಗೆ ಬರುತ್ತಿದ್ದಂತೆ ಅವರನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತೆ. ನನ್ನ ಭಾವನೆಗಳನ್ನು ನಿಯಂತ್ರಣಕ್ಕೆ ತಂದ ಬಳಿಕ ಗಂಡ ನನ್ನ ಕೈಗೆ 20,000 ರೂ. ಕೊಡುತ್ತಾ ಹೇಳಿದರು. ನಾನು ನಿನ್ನ ಸ್ವಭಾವ ಅರಿತಿದ್ದೆ. ಇವು ನಿನಗಾಗಿಯೇ ಉಡುಗೊರೆಯಾಗಿ ಬಂದ ಹಣ. ಇವನ್ನು ನಾನು ಬ್ಯಾಂಕಿನಲ್ಲಿ ಜಮಾ ಮಾಡಿದ್ದೆ. ನೀನು ಇನ್ಮುಂದೆ ಗಮನಿಸಬೇಕಾದ ಸಂಗತಿಯೇನೆಂದರೆ, ಹಣ ಖರ್ಚು ಮಾಡು. ಆದರೆ ಅದರ ಜೊತೆಗೆ ಉಳಿತಾಯದ ಬಗೆಗೂ ಯೋಚಿಸು. ಕಷ್ಟದ ಸಮಯದಲ್ಲಿ ಈ ಉಳಿತಾಯದ ಹಣವೇ ನಮ್ಮ ನೆರವಿಗೆ ಬರುತ್ತದೆ.
– ಸುಲೋಚನಾ, ತುಮಕೂರು.