ದುರಂತ ಅಂತ್ಯ ಕಂಡಿರುವ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ಡಾ ಸಿ.ಜೆ. ರಾಯ್ ಹುಟ್ಟಿದ್ದು ಕೇರಳದಲ್ಲಿ. ಆದರೆ, ಬೆಳೆದಿದ್ದು ಬೆಂಗಳೂರಿನಲ್ಲಿ.
ಚಿಕ್ಕ ವಯಸ್ಸಿನಲ್ಲೇ ವಿದೇಶಕ್ಕೆ ಹಾರಿದ ರಾಯ್ ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ತಮ್ಮ ಶಿಕ್ಷಣ ಪೂರೈಸಿದರು. ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಲ್ಲಿ ಡಾಕ್ಟರೇಟ್ ಪಡೆದವರು. ಆರಂಭದಲ್ಲಿ ಎಚ್ಪಿ ಅಂತಹ ಫಾರ್ಚೂನ್ 500 ಕಂಪನಿಯಲ್ಲಿ ಕೆಲಸ ಮಾಡಿ ಕಾರ್ಪೊರೇಟ್ ಅನುಭವ ಪಡೆದಿದ್ದರು.
2006ರಲ್ಲಿ ಬೆಂಗಳೂರಿನಲ್ಲಿ ಕಾನ್ಫಿಡೆಂಟ್ ಗ್ರೂಪ್ ಹುಟ್ಟುಹಾಕಿದ ರಾಯ್, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಜಿರೋ ಡೆಬ್ಟ್ ಅಂದರೆ ಸಾಲ ರಹಿತ ಮಾಡೆಲ್ ಅನ್ನು ಪರಿಚಯಿಸಿ ಸಕ್ಸಸ್ ಆಗಿದ್ದರು. ಅವರ ಸಾಮ್ರಾಜ್ಯ ಕೇರಳ, ಬೆಂಗಳೂರು ಮತ್ತು ದುಬೈ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿಕೊಂಡಿದೆ. ಬರೋಬ್ಬರಿ 165ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳು, 43 ಮಿಲಿಯನ್ ಸ್ಕೈಯರ್ ಫೀಟ್‌ಗಳಷ್ಟು ವಿಸ್ತಾರವಾದ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ 28 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದರು. ಒಂದು ಕಡೆ 9 ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
ರಾಯ್ ಬಳಿ ಇತ್ತು 12 ರೋಲ್ಸ್ ರಾಯ್ಸ್, 1 ಬುಗಾಟ್ಟಿ ವೇರಾನ್!
ಸಿ.ಜೆ. ರಾಯ್ ಅಂದರೆ ನೆನಪಾಗುವುದು ಅವರ ಐಷಾರಾಮಿ ಕಾರುಗಳ ಕ್ರೇಜ್. ಭಾರತದಲ್ಲೇ ಅತ್ಯಂತ ದುಬಾರಿ ಮತ್ತು ಎಕ್ಸ್ಪೆನ್ಸಿವ್ ಗ್ಯಾರೇಜ್ ಹೊಂದಿರುವ ವ್ಯಕ್ತಿಗಳಲ್ಲಿ ಇವರು ಒಬ್ಬರು. ಬರೋಬ್ಬರಿ 200ಕ್ಕೂ ಹೆಚ್ಚು ಐಷಾರಾಮಿ ವಾಹನಗಳು ಇವರ ಬಳಿ ಇದ್ದವು. ಇವರ ಗ್ಯಾರೇಜ್ನಲ್ಲಿ ಇಲ್ಲದ ಕಾರುಗಳೇ ಇಲ್ಲ. ರಾಯ್ ಅವರ ಬಳಿ ಬರೋಬ್ಬರಿ 12 ರೋಲ್ಸ್ ರಾಯ್ಸ್ ಕಾರುಗಳಿವೆ! ಹೌದು, ಇತ್ತೀಚೆಗಷ್ಟೇ ಬಿಗ್ ಬಾಯ್ ಟಾಯ್ಸ್ ನಿಂದ ತಮ್ಮ 12ನೇ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಕಾರನ್ನು ಖರೀದಿಸಿದ್ದರು. ಇದರ ಬೆಲೆ ಸುಮಾರು 10 ಕೋಟಿ ರೂಪಾಯಿ ಎನ್ನಲಾಗಿದೆ.
ಇವರ ಕಲೆಕ್ಷನ್‌ನಲ್ಲಿ 15 ಕೋಟಿ ರೂಪಾಯಿ ಬೆಲೆ ಬಾಳುವ ಎಲೆಕ್ಟ್ರಿಕ್ ಬ್ಲೂ ಬಣ್ಣದ ಬುಗಾಟ್ಟಿ ವೇರಾನ್ ಇದೆ. ಇದು ಮಾತ್ರವಲ್ಲ, ಕೊಯೆನಿಗ್‌ಸೆಗ್ ಅಗೆರಾ, ಪಗಾನಿ ಹುವಾಯ್ರಾ, ಪೋರ್ಷೆ 918 ಸ್ಪೈಡರ್, ಮೆಕ್ಲಾರೆನ್ 720S ನಂತಹ ಹೈಪರ್ ಕಾರುಗಳ ಒಡೆಯರಾಗಿದ್ದರು. ಅವರ ಗ್ಯಾರೇಜ್ ಮೌಲ್ಯವೇ ಕೋಟ್ಯಂತರ ರೂಪಾಯಿ ಅಥವಾ ಮಿಲಿಯನ್ ಡಾಲರ್‌ಗಳಷ್ಟಿದೆ. ಇವರ ಮಗ ರೋಹಿತ್ ರಾಯ್ ಜೊತೆ ಸೇರಿ ದುಬೈನಲ್ಲಿ ಇವರು ಕಾರುಗಳ ಸಾಮ್ರಾಜ್ಯವನ್ನೇ ಸೃಷ್ಟಿಸಿದ್ದರು.
ಹಳೇ ಕಾರಿಗೆ 10 ಲಕ್ಷ ಕೊಟ್ಟ ಒಡೆಯ!
ಇಷ್ಟೆಲ್ಲಾ ಕೋಟಿ ಕೋಟಿ ಬೆಲೆಬಾಳುವ ಕಾರುಗಳಿರುವ ಸಿ.ಜೆ. ರಾಯ್ ಅವರ ಒಂದು ಹಳೇ ಕಾರಿನ ಎಮೋಷನಲ್ ಸ್ಟೋರಿ ಕೂಡ ಜನರ ಗಮನ ಸೆಳೆದಿದೆ. 1994ರಲ್ಲಿ, ಅಂದರೆ ತಮ್ಮ 25ನೇ ವಯಸ್ಸಿನಲ್ಲಿ ಅವರು 1.10 ಲಕ್ಷ ರೂಪಾಯಿ ಕೊಟ್ಟು ಮಾರುತಿ 800 ಕಾರನ್ನು ಖರೀದಿಸಿದ್ದರು. ಅದೇ ಅವರ ಮೊದಲ ಕಾರು. ಕಾಲಕ್ರಮೇಣ ಶ್ರೀಮಂತರಾದ ಮೇಲೆ ಆ ಕಾರನ್ನು ಮಾರಾಟ ಮಾಡಿದ್ದರು.





