ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆನ್ಸ್ ಗ್ರೂಪ್ ಉದ್ಯಮಿ ಸಿ.ಜೆ.ರಾಯ್ (57) ಪಿಸ್ತೂಲಿನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ರಿಚ್ಮಂಡ್ ಸರ್ಕಲ್ ಬಳಿಯ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಈ ದುರಂತ ಸಂಭವಿಸಿದೆ.
ಸಾವಿರಾರು ಕೋಟಿ ರೂಪಾಯಿ ಆಸ್ತಿ ಒಡೆಯ, ಅರಮನೆಯಂಥಹ ಮನೆಗಳು, 12 ರೋಲ್ಸ್ ರಾಯ್ಸ್ ಕಾರುಗಳು, ದುಬೈ, ಭಾರತದ ಹಲವು ನಗರಗಳಲ್ಲಿ ಸಾಮ್ರಾಜ್ಯ ಕಟ್ಟಿದ್ದ ಕಾನ್ಫಿಡೆಂಟ್ ಗ್ರೂಫನ್ ಸಾಮ್ರಾಟ ಡಾ. ಸಿ.ಜೆ. ರಾಯ್ ಬೆಂಗಳೂರಿನ ಲ್ಯಾಂಗ್ಫೋರ್ಡ್ ರಸ್ತೆಯ ಕಂಪನಿಯ ಕಚೇರಿಯಲ್ಲಿ ಶುಕ್ರವಾರ ದುರಂತ ಅಂತ್ಯ ಕಂಡಿದ್ದಾರೆ.
ಭೋಗದ ಬದುಕಿಗೆ ಏನೆಲ್ಲಾ ಬೇಕಿತ್ತೋ ಅದೆಲ್ಲವೂ ಡಾ ಸಿಜೆ ರಾಯ್ ಅವರ ಕಾಲ ಬುಡದಲ್ಲಿತ್ತು. ಆದರೆ, ಸಿ. ಜೆ. ರಾಯ್ ತಮ್ಮ ಜೀವನದ ಅಧ್ಯಾಯ ಈ ರೀತಿ ಅಂತ್ಯ ಕಂಡಿದ್ದು ಉದ್ಯಮ ವಲಯದಲ್ಲಿ ಕಂಪನ ಮೂಡಿಸಿದೆ.
ಆಫೀಸ್ನಲ್ಲಿ ಸೆಲ್ಫ್ ಶೂಟ್!
ಆದಾಯ ತೆರಿಗೆ ಇಲಾಖೆ ಕೇರಳ ಘಟಕದ ಅಧಿಕಾರಿಗಳು ಮೂರು ದಿನಗಳಿಂದ ಕಾನ್ಫಿಡೆಂಟ್ ಗ್ರೂಪ್‌ನ ಆರ್ಥಿಕ ವಹಿವಾಟಿನ ಸಂಬಂಧ ದಾಳಿ ನಡೆಸಿದ್ದರು. ಶುಕ್ರವಾರ ಸಹ ಲ್ಯಾಂಗ್ಫೋರ್ಡ್ ರಸ್ತೆಯ ಕಚೇರಿಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದರು. ರಾಯ್ ಅವರನ್ನು ತೀವ್ರ ವಿಚಾರಣೆ ನಡೆಸಿದ್ದರು.
ಕಾನ್ಫಿಡೆನ್ಸ್ ಗ್ರೂಪ್ ಇರುವ ಕಟ್ಟಡದ ಮೊದಲನೇ ಮಹಿಡಿಯಲ್ಲಿ ಸ್ಲೋವೊಕಿಯಾ ದೇಶದ ರಾಯಭಾರ ಕಚೇರಿ ಇದ್ದು, ಅದರಲ್ಲಿ ರಾಯ್ ಗೌರವ ಕಾನ್ಸುಲೇಟ್ ಆಗಿದ್ದರು. ಹೀಗಾಗಿ, ಅಲ್ಲಿಯೂ ಒಂದು ಪ್ರತ್ಯೇಕ ಕೊಠಡಿ ರಾಯ್ ಅವರಿಗೆ ಮೀಸಲಿತ್ತು. ಆ ಕೊಠಡಿಗೆ ತೆರಳಿದ್ದ ರಾಯ್ ಪಿಸ್ತೂಲ್ನಿಂದ ತಾವೇ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ.
ಗುಂಡಿನ ಶಬ್ದ ಕೇಳಿ ಕಚೇರಿಯ ಸಿಬ್ಬಂದಿ, ಐಟಿ ಅಧಿಕಾರಿಗಳು ಹೋಗಿ ನೋಡುವಷ್ಟರಲ್ಲಿ ರಾಯ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ.
ತಕ್ಷಣವೇ ಅವರನ್ನುಸಮೀಪದ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಯಿತು. ರಾಯ್ ಅವರನ್ನು ಪರೀಕ್ಷಿಸಿದ ವೈದ್ಯರು ಸಿ.ಜೆ. ರಾಯ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮೃತರಿಗೆ ಪತ್ನಿ ಲಿನಿ ರಾಯ್, ರೋಹಿತ್ ಮತ್ತು ರಿಯಾ ಎಂಬ ಇಬ್ಬರು ಮಕ್ಕಳು ಇದ್ದಾರೆ. ಮಗ ರೋಹಿತ್, ಕಾನ್ಫಿಡೆಂಟ್ ಗ್ರೂಪ್‌ನ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಿನ್ಯಾಸ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಜಿರೋ ಡೆಬ್ಟ್ ಕಂಪನಿಯನ್ನು ಕಟ್ಟಿದ್ದ ಈ ದಿಗ್ಗಜನ ಸಾವು ಈಗ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಮಿಷನರ್ ಭೇಟಿ: ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ (ಎಫ್ ಎಸ್ಎಲ್), ಸೀನ್ ಆಫ್ ಕ್ರೈಂ (ಸುಕೊ), ಬ್ಯಾಲೆಸ್ಟಿಕ್ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಈ ಕುರಿತು ಮಾತನಾಡಿದ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪ್ರಾಥಮಿಕ ಮಾಹಿತಿ ಪ್ರಕಾರ 2-3 ದಿನಗಳಿಂದ ಕೇರಳದಿಂದ ಬಂದಿರುವ ಐಟಿ ಅಧಿಕಾರಿಗಳ ತಂಡ ಕಾನ್ಫಿಡೆಂಟ್ ಗ್ರೂಪ್ನಲ್ಲಿ ಪರಿಶೀಲನೆ ನಡೆಸುತ್ತಿತ್ತು. ಈ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.





