ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೀತಿರೋ ಮಹಾ ಕುಂಭಮೇಳ ಧಾರ್ಮಿಕ ಕಾರಣಕ್ಕೆ ಎಷ್ಟು ಸದ್ದು ಮಾಡ್ತಿದ್ಯೋ.. ಅದಕ್ಕಿಂತಾ ಜಾಸ್ತಿ ಬೇರೆ ಬೇರೆ ಕಾರಣಕ್ಕೆ ಸದ್ದು ಮಾಡ್ತಿದೆ. ಇದರ ನಡುವೆ ರಾಜಕಾರಣಿಗಳು ನೀಡ್ತಿರೋ ಹೇಳಿಕೆಗಳು ಚರ್ಚೆಗೆ ಕಾರಣವಾಗಿವೆ. ಆದ್ರೆ, ಇವೆಲ್ಲಕ್ಕಿಂತಾ ಮುಖ್ಯವಾಗಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹಾಕಿರೋ ತಪರಾಕಿ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ಯಾಕೆ ಅಂತಾ ನೋಡೋಣ ಬನ್ನಿ.
ದೇಶದಲ್ಲಿ ಸದ್ಯಕ್ಕೆ ಹೆಚ್ಚು ಸುದ್ದಿಯಾಗ್ತಿರೋದು ಅಂದ್ರೆ ಅದು ಮಹಾ ಕುಂಭಮೇಳ. ಬೇಕಾದ ಕಾರಣಕ್ಕೋ.. ಬೇಡವಾದ ಕಾರಣಕ್ಕೋ ಸುದ್ದಿಯಾಗ್ತಲೇ ಇದೆ. ಇದರ ನಡುವೆ ರಾಜಕೀಯ ನಾಯಕರು ನೀಡ್ತಿರೋ ಹೇಳಿಕೆಗಳಿಂದ ಮಹಾಕುಂಭಮೇಳ ವಿವಾದಿತ ವಿಷಯವಾಗಿದೆ. ಅದ್ರಲ್ಲೂ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ, ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮುಳುಗಿದ್ರೆ ಬಡತನ ನಿವಾರಣೆಯಾಗುತ್ತಾ ಅಂತಾ ಪ್ರಶ್ನಿಸಿದ್ರು. ಇದು ಅತ್ಯಂತ ಚರ್ಚಿತ ವಿಷಯವಾಗಿತ್ತು.
ಇಷ್ಟೆಲ್ಲಾ ಚರ್ಚೆಗಳು ನಡೀತಿರೋ ಹೊತ್ತಲ್ಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರೋ ವರದಿ ಕುರಿತು ಫುಲ್ ಗರಂ ಆಗಿದೆ. ಡಿಸೆಂಬರ್ 2024ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ NGT, ಮಹಾ ಕುಂಭಮೇಳದ ಸಮಯದಲ್ಲಿ ಗಂಗಾ ಮತ್ತು ಯಮುನಾ ನದಿಗಳ ನೀರು ಕುಡಿಯಲು ಮತ್ತು ಸ್ನಾನ ಮಾಡಲು ಸೂಕ್ತವಾಗಿರುವಂತೆ ನೋಡಿಕೊಳ್ಳಬೇಕು ಅಂತಾ ತಾಕೀತು ಮಾಡಿತ್ತು. ಇದಕ್ಕೆ ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಸಮ್ಮತಿ ಸೂಚಿಸಿತ್ತು. ಅದರ ಪ್ರಕಾರ ಯುಪಿಪಿಸಿಬಿ ಎನ್‌ಜಿಟಿಗೆ ನೀರಿನ ಪರೀಕ್ಷೆಯ ವರದಿ ನೀಡಿತ್ತು.
ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ವರದಿಗೂ.. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರೋ ವರದಿಗೂ ಅಜಗಜಾಂತರ ವ್ಯತ್ಯಾಸವಿದೆ. ಯುಪಿಪಿಸಿಬಿ ನೀಡಿರೋ ವರದಿಯಲ್ಲಿ ಗಂಗಾ ಮತ್ತು ಯಮುನಾ ನದಿಗಳ ನೀರು ಸ್ನಾನಕ್ಕೂ.. ಪಾನಕ್ಕೂ ಯೋಗ್ಯವಿದೆ ಅಂತಾ ವರದಿ ನೀಡಿದೆ. ಆದ್ರೆ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರೋ ವರದಿಯಲ್ಲಿ ಎರಡೂ ನದಿಗಳಲ್ಲಿ 1400 ಪಟ್ಟು ಮಾಲಿನ್ಯಕಾರಕ ಅಂಶಗಳು ಪತ್ತೆಯಾಗಿವೆ ಅಂತಾ ಹೇಳಿದೆ. ಎರಡು ಮಂಡಳಿಗಳು ನೀಡಿರೋ ವರದಿಯನ್ನ ಪರೀಕ್ಷಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ತ್ರಿಸದಸ್ಯ ಪೀಠ ಯುಪಿಪಿಸಿಬಿಗೆ ಚಾಟಿ ಬೀಸಿದೆ.
ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರೋ ವರದಿಯಲ್ಲಿ ಗಂಗಾ ಮತ್ತು ಯುಮುನಾ ನದಿಗಳಲ್ಲಿ ಜೀವರಾಸಾಯನಿಕ ಆಮ್ಲಜನಕ, ರಾಸಾಯನಿಕ ಆಮ್ಲಜನಕ ಮತ್ತು ಫೇಕಲ್ ಕೋಲಿಫಾರ್ಮ್ ಕಣಗಳು ಎಷ್ಟಿವೆ ಅನ್ನೋ ಕುರಿತು ನಮೂದಿಸಿಲ್ಲ. ಈ ಕುರಿತು ಯಾಕೆ ನಮೂದಿಸಿಲ್ಲ ಅಂತಾ ಎನ್‌ಜಿಟಿಯ ತ್ರಿಸದಸ್ಯ ಪೀಠ ಪ್ರಶ್ನೆ ಮಾಡಿದೆ. ಫೇಕಲ್ ಕೋಲಿಫಾರ್ಮ್ ಒಂದು ರೀತಿಯ ಬ್ಯಾಕ್ಟೀರಿಯಾ ಆಗಿದೆ. ಬಿಸಿ ರಕ್ತದ ಜೀವಿಗಳು ವಿಸರ್ಜಿಸುವ ಮಲ-ಮೂತ್ರಗಳು ನದಿಗಳನ್ನ ಸೇರಿದ್ರೆ, ಫೇಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳುತ್ತದೆ. ಇದು ಬಹಳ ಅಪಾಯಕಾರಿ ಬ್ಯಾಕ್ಟೀರಿಯಾ ಆಗಿದ್ದು, ಮನುಷ್ಯರಲ್ಲಿ ಹಲವಾರು ರೀತಿಯ ಕಾಯಿಲೆಗಳಿಗೆ ಮೂಲ ಕಾರಣವಾಗಿದೆ.
100 ಮಿಲಿ ಲೀಟರ್ ನೀರಿನಲ್ಲಿ 500ರಷ್ಟು ಫೇಕಲ್ ಕೋಲಿಫಾರ್ಮ್ ಕಣಗಳಿದ್ರೆ ಯಾವುದೇ ತೊಂದರೆ ಇಲ್ಲ. ಹರಿಯುವ ನದಿಗಳಲ್ಲಿ 100 ಮಿಲಿ ಲೀಟರ್ ನೀರಿನಲ್ಲಿ 2500ರಷ್ಟು ಫೇಕಲ್ ಕೋಲಿಫಾರ್ಮ್ ಕಣಗಳಿದ್ರೂ ತೊಂದರೆ ಇಲ್ಲ ಅಂತಾ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಸಿಪಿಸಿಬಿ ವರದಿಯಲ್ಲಿ ಗಂಗಾ ಮತ್ತು ಯಮುನಾ ನದಿಗಳ 100 ಮಿಲಿ ಲೀಟರ್ ನೀರಿನಲ್ಲಿ ಸುಮಾರು 11 ಸಾವಿರ ಕಣಗಳಷ್ಟು ಫೇಕಲ್ ಕೋಲಿಫಾರ್ಮ್ ಕಣಗಳಿವೆ ಅಂತಾ ಹೇಳಿದೆ. ಗಂಗಾ ನದಿಯ ನೀರು ಕುಡಿಯುವುದಿರಲಿ ಸ್ನಾನಕ್ಕೂ ಯೋಗ್ಯವಲ್ಲ ಅಂತಾ ಸಿಪಿಸಿಬಿ ವರದಿ ಹೇಳಿದೆ.
ಎನ್‌ಜಿಟಿಗೆ ಸಿಪಿಸಿಬಿ ಸಲ್ಲಿಸಿರೋ ವರದಿಯ ಪ್ರಕಾರ ನದಿಯ ನೀರು ಸ್ನಾನಕ್ಕೂ ಯೋಗ್ಯವಲ್ಲ ಅಂತಾ ಹೇಳಿದ್ದು, ನಾವು ಪರೀಕ್ಷೆಗೆ ವಿವಿಧ ಸ್ಥಳಗಳಲ್ಲಿ ನೀರನ್ನು ಸಂಗ್ರಹಿಸಿದ್ದೇವೆ. ನಾವು ಎಲ್ಲ ಕಡೆ ಸಂಗ್ರಹಿಸಿದ ನೀರನ್ನು ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲ ಸ್ಥಳಗಳ ನೀರಿನಲ್ಲೂ ಹೊಟ್ಟೆಯುರಿತ ಮತ್ತು ಟೈಫಾಯ್ಡ್‌ಗೆ ಕಾರಣವಾಗೋ ಫೇಕಲ್ ಕೋಲಿಫಾರ್ಮ್ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ ಅಂತಾ ಹೇಳಿದೆ. ಕೋಟ್ಯಂತರ ಜನ ಗಂಗಾನದಿಯಲ್ಲಿ ಮೀಯುತ್ತಿರೋದ್ರಿಂದ ಫೇಕಲ್ ಕೋಲಿಫಾರ್ಮ್ ಗಣನೀಯ ಪ್ರಮಾಣದಲ್ಲಿ ಸಂಗ್ರಹವಾಗ್ತಿದೆ ಅಂತಾ ಹೇಳಿದೆ.
ಆದ್ರೆ, ಸಿಪಿಸಿಬಿ ವರದಿಯನ್ನ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಳ್ಳಿ ಹಾಕಿದ್ದಾರೆ. ಮಹಾ ಕುಂಭಮೇಳದ ಕುರಿತು ಪದೇಪದೆ ತಪ್ಪು ಮಾಹಿತಿ ನೀಡಲಾಗ್ತಿದೆ. ಮಹಾಕುಂಭಮೇಳದ ವಿರುದ್ಧ ಇಲ್ಲಸಲ್ಲದ ಆಪಾದನೆಗಳನ್ನ ಮಾಡೋ ಮೂಲಕ ಸನಾತನ ಧರ್ಮಕ್ಕೆ ಅಪಚಾರ ಎಸಗಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ನೀರು ಸ್ನಾನಕ್ಕೆ ಯೋಗ್ಯವಲ್ಲದೇ ಇದ್ರೆ, ಕೋಟ್ಯಂತರ ಜನ ಕುಂಭಮೇಳಕ್ಕೆ ಯಾಕೆ ಆಗಮಿಸ್ತಿದ್ರು ಅಂತಾ ಪ್ರಶ್ನಿಸಿದ್ದಾರೆ. ಒಟ್ಟಾರೆಯಾಗಿ ನೋಡೋದಾದ್ರೆ, ಇನ್ನೇನು ಮಹಾ ಕುಂಭಮೇಳಕ್ಕೆ ತೆರೆ ಬೀಳಲು ಕ್ಷಣಗಣನೆ ಪ್ರಾರಂಭವಾಗಿದ್ರೂ ಕುಂಭಮೇಳದ ಸುತ್ತ ಎದ್ದಿರೋ ವಿವಾದಗಳಿಗೆ ತೆರೆ ಬೀಳೋ ಲಕ್ಷಣಗಳು ಮಾತ್ರ ಕಂಡುಬರ್ತಿಲ್ಲ.