ಸ್ಟಾರ್ ಡೈರೆಕ್ಟರ್ ಎಸ್. ಎಸ್ ರಾಜಮೌಳಿ ಸಿನಿಮಾಗಳು ಎಂದರೆ ಸಕ್ಸಸ್ ಪಕ್ಕಾ. ಯಾವುದೇ ಹೀರೋ ಜೊತೆ ಸಿನಿಮಾ ಮಾಡಿದರೂ 100ಕ್ಕೆ ನೂರರಷ್ಟು ಫಲಿತಾಂಶ ಪಡೆಯುತ್ತಾರೆ. ಯಶಸ್ಸು, ಭರ್ಜರಿ ಕಲೆಕ್ಷನ್, ನಟಿಸಿದ ಎಲ್ಲರಿಗೂ ಉತ್ತಮ ಅವಕಾಶಗಳು ಸಿಗುತ್ತವೆ.
ಈಗ ರಾಜಮೌಳಿ ತಮ್ಮ ಹೊಸ ಸಿನಿಮಾದ ಎರಡನೇ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮೊದಲ ಪೋಸ್ಟರ್ನಲ್ಲಿ ಶಿವ ಮತ್ತು ನಂದಿಯ ಡಾಲರ್ ಬಿಟ್ಟು ಬೇರೇನೂ ಇರಲಿಲ್ಲ. ಆದರೆ ಈ ಬಾರಿ ತಮ್ಮ ಸಿನಿಮಾದ ಪವರ್ಫುಲ್ ವಿಲನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ಸಿನಿಮಾವನ್ನು ನಿರ್ದೇಶಿಸುತ್ತಿರುವ ರಾಜಮೌಳಿ, ಸಿನಿಮಾದ ಬಗ್ಗೆ ಯಾವುದೇ ಗುಟ್ಟುಗಳನ್ನೂ ಬಿಟ್ಟುಕೊಟ್ಟಿರಲಿಲ್ಲ. ಇಂದು ಸಿನಿಮಾದ ವಿಲನ್ ಪೋಸ್ಟರ್ ಅನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದ್ದಾರೆ.
ರಾಜಮೌಳಿಯ ಚಿತ್ರಗಳಲ್ಲಿ ಹೀರೋಗಳಷ್ಟೇ ವಿಲನ್ಗಳಿಗೂ ಪ್ರಾಧಾನ್ಯತೆ. ತಮ್ಮ ಮುಂದಿನ ಸಿನಿಮಾನಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ಅವರನ್ನು ವಿಲನ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಸಿನಿಮಾನಲ್ಲಿ ಪೃಥ್ವಿರಾಜ್ ಸುಕುಮಾರನ್ ಅಂಗವಿಕಲನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಪ್ರಮುಖ ವಿಲನ್ ಆಗಿದ್ದರೂ ಸಹ ಅವರದ್ದು ಅಂಗವಿಕಲನ ಪಾತ್ರ.
ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಪೃಥ್ವಿರಾಜ್ ಸುಕುಮಾರ್ ವೀಲ್ಚೇರ್ನಲ್ಲಿ ಕುಳಿತು ಕೋಪದಿಂದ ಮುನ್ನುಗ್ಗುತ್ತಿದ್ದಾರೆ. ಅವರ ಎರಡು ಕಾಲುಗಳು, ಒಂದು ಕೈ ಸ್ವಾಧೀನ ಇಲ್ಲದಿರುವುದು ಕಂಡುಬರುತ್ತಿದೆ. ಅವರು ಕುಳಿತಿರುವ ವ್ಹೀಲ್ಚೇರ್ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದೆ. ವ್ಹೀಲ್ ಚೇರ್ಗೆ ನಾಲ್ಕು ಕೈಗಳಿವೆ. ದೊಡ್ಡ ಕುರ್ಚಿ ಇದೆ. ದೊಡ್ಡ ಚಕ್ರಗಳು ಇವೆ. ಒಟ್ಟಾರೆ ಪೃಥ್ವಿರಾಜ್ ಬಹಳ ಬುದ್ಧಿವಂತ, ತಂತ್ರಜ್ಞಾನ ಪರಿಣಿತ ವಿಲನ್ ರೀತಿ ರಗಡ್ ಲುಕ್ನಲ್ಲಿ ಕಾಣುತ್ತಿದ್ದಾರೆ. ಸಿನಿಮಾನಲ್ಲಿ ಅವರ ಪಾತ್ರದ ಹೆಸರು ‘ಕುಂಭ’.
ಈ ಪೋಸ್ಟರ್ ಹಂಚಿಕೊಂಡಿರುವ ರಾಜಮೌಳಿ, ಪೃಥ್ವಿರಾಜ್ ಬಗ್ಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಪೃಥ್ವಿರಾಜ್ ಸುಕುಮಾರ್ ಅವರ ಮೊದಲ ಶಾಟ್ ತೆಗೆದ ಕೂಡಲೇ ಅವರ ಬಳಿಗೆ ಹೋಗಿ, ‘ನನಗೆ ಪರಿಚಯವಿರುವ ನಟರಲ್ಲೇ ಅತ್ಯುತ್ತಮ ನಟ ನೀವು” ಎಂದು ಹೇಳಿದೆ. ‘ಈ ದುಷ್ಟ, ನಿರ್ದಯಿ, ಪ್ರಭಾವಶಾಲಿ ವಿಲನ್ ಕುಂಭಾ ಪಾತ್ರಕ್ಕೆ ಜೀವ ತುಂಬಿದ್ದು ನಿರ್ದೇಶಕನಾಗಿ ತುಂಬಾ ತೃಪ್ತಿಕರವಾಗಿತ್ತು. ಈ ಪಾತ್ರಕ್ಕೆ ಜೀವ ತುಂಬಲು ಒಪ್ಪಿಕೊಂಡಿದ್ದಕ್ಕೆ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.





