ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಬ್ಯಾಂಕಿನ ಸಾಲ ಸೌಲಭ್ಯಗಳು ಹಾಗೂ ಇತರ ಸೇವೆಗಳನ್ನು ಪಡೆದುಕೊಳ್ಳುವುದೆಂದರೆ ಕಬ್ಬಿಣದ ಕಡಲೆಯೇ ಸರಿ. ಇದನ್ನು ಸುಲಭವಾಗಿಸಿ, ಗ್ರಾಮೀಣ ಮಹಿಳೆಯರು ಇತರರಿಗೆ ಮಾದರಿಯಾಗುವಂತೆ ಅವರನ್ನು ರೂಪಿಸಿದ ಅರುಣಾ ಸಂಪಿಗೆಯವರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ......?
ನೀಳ ನಾಸಿಕ, ಸುಂದರ ಮುಖಾರವಿಂದ, ನೋಡಲು ಮಾಡೆಲ್ ಅಂತಿರುವ ಆಕರ್ಷಕ ವ್ಯಕ್ತಿತ್ವ, ಆ ಸುಂದರತೆಯ ಜೊತೆ ಅವರೊಳಗೆ ಅಡಗಿರುವ ಸೇವಾ ಮನೋಭಾವವನ್ನು ನೋಡಿದಾಗ ಅಚ್ಚರಿ ಎನಿಸದೆ ಇರದು. ದಾವಣಗೆರೆಯ ಹತ್ತಿರವಿರುವ ಕಂದಗಲ್ಲು ಎನ್ನುವ ಹಳ್ಳಿಯವರು ಅರುಣಾ ಸಂಪಿಗೆ. ಅವರ ತಾಯಿ ತಂದೆಗೆ ಮಗಳು ಓದಲಿ, ಬೇರೆಯವರಿಗೆ ಸಹಾಯಹಸ್ತ ನೀಡಲಿ ಎನ್ನುವ ಆಸೆ ಇತ್ತು. ಬಾಲ್ಯದ ಶಿಕ್ಷಣ ಹಳ್ಳಿಯಲ್ಲಿಯೇ ಆಯಿತು. ನಂತರದ ಹೆಚ್ಚಿನ ಶಿಕ್ಷಣ ಧಾರವಾಡ ಮತ್ತು ಮೈಸೂರಿನಲ್ಲಿ ಮಾಡಿದರು. ಇವರಿಗೆ ಒಬ್ಬ ಯಶಸ್ವೀ ಉದ್ಯಮಿಯಾಗುವ ಕನಸಿತ್ತು. ಆದ್ದರಿಂದಲೇ ಅವರು ಎಂ.ಬಿ.ಎ ಮಾಡಿದ್ದು, ಅದರಿಂದ ಬಹಳ ಅನುಕೂಲವಾಯಿತು. ಇವರ ಎಲ್ಲಾ ಕಾರ್ಯಗಳಿಗೆ ಮತ್ತು ಸಾಧನೆಗೆ ಕುಟುಂಬದ ಸಹಕಾರ ಸಂಪೂರ್ಣವಾಗಿತ್ತು ಎನ್ನುವುದು ಅರುಣಾರ ವಿನಯದ ಮಾತು.
ಬ್ಯಾಂಕಿಂಗ್ ಸೇವೆಗಳ ಬಗ್ಗೆ ತಿಳಿವಳಿಕೆ
ಅರುಣಾ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಏಳು ವರ್ಷ ಕೆಲಸ ಮಾಡಿ, ನಂತರ 2011ರಲ್ಲಿ ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಬಂದರೂ ಇವರ ಮನಸ್ಸು ಹಳ್ಳಿಗಳತ್ತಲೇ ಇತ್ತು. ಹಳ್ಳಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅವರು ಉಪಯೋಗಿಸಿಕೊಳ್ಳಬಹುದಾದ ಬ್ಯಾಂಕಿಂಗ್ ಸೇವೆಗಳ ಬಗ್ಗೆ ಬೆಳಕು ಚೆಲ್ಲಿ ಅದನ್ನು ಅವರು ಪಡೆಯಲು ಅನುಕೂಲ ಮಾಡಿ ಕೊಡುವುದು ಇವರ ಉದ್ದೇಶವಾಗಿತ್ತು.
ನಮ್ಮ ಹಳ್ಳಿಯ ಮಹಿಳೆಯರಿಗಾಗಿಯೇ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಆದರೆ ಬಹಳಷ್ಟು ಮಹಿಳೆಯರಿಗೆ ಅದರ ಬಗ್ಗೆ ಗೊತ್ತಿರುವುದಿಲ್ಲ. ಅಕಸ್ಮಾತ್ ಗೊತ್ತಿದ್ದರೂ ಅದನ್ನು ಉಪಯೋಗಿಸುವ ಬಗ್ಗೆ ಅರಿವಿರುವುದಿಲ್ಲ. 2018ರಲ್ಲಿ ಇವರು ಬ್ಯಾಂಕಿಂಗ್ ಮತ್ತು ಹಣಕಾಸಿನ ಸೇವೆಗಳನ್ನು ಹಳ್ಳಿಯರಿಗೆ ಸುಲಭವಾಗಿ ಮುಟ್ಟಿಸುವವ ಸಲುವಾಗಿ `ರೂಟ್ಸ್ ರಿಫಾರ್ಮ್ಸ್ ಇನಿಷಿಯೇಟಿವ್' ಎನ್ನುವ ಸಂಸ್ಥೆ ಪ್ರಾರಂಭಿಸಿದರು.

ಸವಾಲಾದ ಜೀವನೋಪಾಯ
ಈಗಲೂ ಬ್ಯಾಂಕಿನ ಸೇವೆಗಳನ್ನು ಪಡೆದುಕೊಳ್ಳುವುದು ಹಳ್ಳಿಯವರಿಗೆ ಅದರಲ್ಲೂ ಮಹಿಳೆಯರಿಗೆ ಒಂದು ಸವಾಲೇ ಆಗಿದೆ. ಈ ಸವಾಲನ್ನು ಅರುಣಾ ಒಂದು ಅವಕಾಶವಾಗಿ ಪರಿವರ್ತಿಸಿದರು. ಯಾವ ಯಾವ ಸ್ಥಳಗಳಿಗೆ ಬ್ಯಾಂಕಿಂಗ್ ಸೇವೆ ಲಭ್ಯವಾಗಿಲ್ಲವೇ ಅಲ್ಲಿಗೆ ಬ್ಯಾಂಕು ಮತ್ತು ಹಳ್ಳಿಯವರ ಮಧ್ಯೆ ಸೇತುವೆಯಂತೆ ಕೆಲಸ ಮಾಡಿ ಅವರಿಗೆ ತಿಳಿವಳಿಕೆ ನೀಡಿ, ಅವರಿಂದಲೇ ಈ ಕೆಲಸಗಳನ್ನು ಮಾಡಿಸಿದ್ದಲ್ಲದೆ, ಆ ಮಹಿಳೆ ತನ್ನ ಸಮುದಾಯದವರಿಗೆ ಸಹಾಯ ಮಾಡುವುದಲ್ಲದೆ, ಅವಳ ಜೀವನೋಪಾಯ ಆಗುವಂತೆ ಮಾಡಿದರು. ಮಹಿಳೆಯರು ನಿರ್ವಹಿಸುವ ಈ ಮಾದರಿಗೆ ಮರ್ಚೆಂಟ್ ಬ್ಯಾಂಕಿಂಗ್ ಕರೆಸ್ಪಾಂಡೆನ್ಸ್ ಎನ್ನಲಾಗುತ್ತದೆ.

ಅರುಣಾ ಬ್ಯಾಂಕುಗಳೊಂದಿಗೆ ಪಾಲುದಾರರಾಗಿ ಇರುವುದಲ್ಲದೆ, ಬ್ಯಾಂಕುಗಳ ಸೇವೆಯನ್ನು ಗ್ರಾಮೀಣ ಪ್ರದೇಶದವರಿಗೆ ತಲುಪಿಸಲು ಮತ್ತೊಂದು ಬದಿಯಲ್ಲಿ, ಹಳ್ಳಿಗಳಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳುತ್ತಾರೆ. ಅವುಗಳೆಂದರೆ ಬ್ಯಾಂಕ್ ಖಾತೆ ತೆರೆಯುವಿಕೆ ವಹಿವಾಟುಗಳು, ಸಣ್ಣ, ವೈಯಕ್ತಿಕ, ಗುಂಪು ಮತ್ತು ವ್ಯಾಪಾರ ಸವಾಲಗಳು ಹಾಗೂ ಹೆಚ್ಚು ಅಗತ್ಯವಿರುವ ವಿಮಾ ಉತ್ಪನ್ನಗಳನ್ನು ಆಂಡ್ರಾಯ್ಡ್ ಗಳ ಅರ್ಜಿಗಳನ್ನು ಬಳಸಿಕೊಂಡು ಒದಗಿಸಲಾಗುತ್ತದೆ.





