ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆಗೆ ಅದ್ಧೂರಿ ಚಾಲನೆ ದೊರೆತಿದೆ. 15 ದಿನಗಳ ಕಾಲ ನಡೆಯುವ ಮಹಾ ಜಾತ್ರಾಮಹೋತ್ಸವಕ್ಕೆ ಅಸಂಖ್ಯಾತ ಭಕ್ತ ಸಾಗರ ಹರಿದು ಬರುತ್ತಿದೆ.
ಕೊಪ್ಪಳದ ಆರಾಧ್ಯದೈವ ಗವಿಸಿದ್ದೇಶ್ವರ ಮಠದ ಜಾತ್ರೆಯ ಮಹಾರಥೋತ್ಸದಲ್ಲಿ ಜಾತಿ-ಭೇದವಿಲ್ಲದೇ ಲಕ್ಷಾಂತರ ಭಕ್ತರು ಭಾಗಿಯಾಗಿದ್ದಾರೆ.
ಗವಿಮಠದ ಗವಿಸಿದ್ಧೇಶ್ವರ 210ನೇ ವರ್ಷದ ಮಹಾ ರಥೋತ್ಸವಕ್ಕೆ ಮೇಘಾಲಯ ರಾಜ್ಯಪಾಲ ಸಿ. ಹೆಚ್. ವಿಜಯಶಂಕರ್ ಅವರು ಬಸವ ಪಟ ಆರೋಹಣ ಮಾಡುವ ಮೂಲಕ ಚಾಲನೆ ನೀಡಿದರು.
ಭಕ್ತರಿಂದ ಮುಗಿಲು ಮುಟ್ಟುವ ಜಯಘೋಷಗಳು ಮೊಳಗಿದವು. ಬಾಳೆಹಣ್ಣಿನ ಬದಲು ಉತ್ತತ್ತಿಯನ್ನು ಭಕ್ತರು ಎಸೆದರು. ಪಾದಗಟ್ಟೆ ತಲುಪಿದ ರಥ, ಅಲ್ಲಿಂದ ಮೂಲ ಸ್ಥಾನ ತಲುಪಿತು. ಐದು ಲಕ್ಷಕ್ಕೂ ಹೆಚ್ಚು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಮೇಘಾಲಯ ರಾಜ್ಯಪಾಲ ಸಿ. ಹೆಚ್. ವಿಜಯಶಂಕರ್, ಗವಿಮಠದ ರಥೋತ್ಸವಕ್ಕೆ ಚಾಲನೆ ನೀಡಲು ಅವಕಾಶ ದೊರೆತಿರುವುದು ಜೀವನದ ದೊಡ್ಡ ಭಾಗ್ಯ. ಬಹಳ ಅಭಿಮಾನದಿಂದ ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ದಸರಾ ವೈಭವ ನೋಡಲು ಮೈಸೂರಿಗೆ ಹೋಗಬೇಕು. ಆದರೆ ಜಾತ್ರಾ ಮಹೋತ್ಸವ ನೋಡಬೇಕೆಂದರೆ ಕೊಪ್ಪಳಕ್ಕೆ ಬರಬೇಕು ಎಂದರು.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಕೈಯಲ್ಲಿ ಸತ್ಕಾರ, ತಲೆಯಲ್ಲಿ ಸದ್ವಿಚಾರ, ಹೃದಯದಲ್ಲಿ ಪ್ರೇಮ, ನಾಲಿಗೆಯಲ್ಲಿ ಉತ್ತಮ ಮಾತುಗಳಿದ್ದರೆ ಅದುವೇ ಜೀವನದ ಸಾರ್ಥಕತೆ ಎಂದರು.





