ಕರೂರು ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರಿಗೆ ಕೇಂದ್ರ ತನಿಖಾ ದಳ (CBI) ಸಮನ್ಸ್ ಜಾರಿ ಮಾಡಿದೆ. ಜನವರಿ 12 ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
2025ರ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರು ಜಿಲ್ಲೆಯ ವೇಲುಸ್ವಾಮಿಪುರಂನಲ್ಲಿ ಟಿವಿಕೆ ಪಕ್ಷ ಆಯೋಜಿಸಿದ್ದ rally ಸಮಯದಲ್ಲಿ ಕಾಲ್ತುಳಿತ ಸಂಭವಿಸಿತ್ತು. ನಟ ವಿಜಯ್ ಅವರ ಭಾಷಣವನ್ನು ಕೇಳಲು ಲಕ್ಷಾಂತರ ಬೆಂಬಲಿಗರು ಸೇರಿದ್ದರು. ನಿರೀಕ್ಷೆಗೂ ಮೀರಿ ಜನಸಂದಣಿ ಸೇರಿದ್ದ ಕಾರಣ, ವೇದಿಕೆ ಬಳಿ ಉಂಟಾದ ಗೊಂದಲದಿಂದ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 41 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಘಟನೆ ಬಳಿಕ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. Rally ಆಯೋಜನೆಯಲ್ಲಿ ಲೋಪಗಳಾಗಿವೆ, ಸುರಕ್ಷತೆ, ಪೊಲೀಸ್ ವ್ಯವಸ್ಥೆ, ಸಂಚಾರ ನಿಯಂತ್ರಣ ಮತ್ತು ಜನಸಂದಣಿ ನಿರ್ವಹಣೆಯಲ್ಲಿ ವೈಫಲ್ಯವಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಆರಂಭದಲ್ಲಿ ತಮಿಳುನಾಡು ಸರ್ಕಾರ ಸಿಬಿಐ ತನಿಖೆಗೆ ವಿರೋಧ ವ್ಯಕ್ತಪಡಿಸಿತ್ತು. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿರುವುದರಿಂದ ರಾಜ್ಯ ಸರ್ಕಾರವೇ ತನಿಖೆ ನಡೆಸಲು ಸಮರ್ಥವಾಗಿದೆ ಎಂದು ವಾದಿಸಿತ್ತು. ಈ ಉದ್ದೇಶದಿಂದ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ಆರಂಭಿಸಿತ್ತು. ರಾಜ್ಯ ಸರ್ಕಾರ, ನ್ಯಾಯಾಲಯದ ಮುಂದೆ SIT ಸಮರ್ಥವಾಗಿದ್ದು, ಘಟನೆಯ ಎಲ್ಲಾ ಆಯಾಮಗಳನ್ನು ಪರಿಶೀಲಿಸಲು ಸಾಧ್ಯವಿದೆ ಎಂದು ಸ್ಪಷ್ಟಪಡಿಸಿತ್ತು.
ಇದಾದ ಬಳಿಕ ಮೃತರ ಕುಟುಂಬಗಳಿಂದ ಹೆಚ್ಚಿದ ಒತ್ತಡದ ಹಿನ್ನೆಲೆಯಲ್ಲಿ, ತನಿಖೆ ಸಿಬಿಐ ಕೈಗೆ ಹೋಗಿತ್ತು. ಸಿಬಿಐ ತನಿಖಾಧಿಕಾರಿಗಳು ಈಗಾಗಲೇ ಟಿವಿಕೆ ಪಕ್ಷದ ಉನ್ನತ ಕಾರ್ಯಕರ್ತರು, rally ಆಯೋಜಕರು ಮತ್ತು ಸ್ಥಳೀಯ ಅಧಿಕಾರಿಗಳನ್ನು ಪ್ರಶ್ನಿಸಿ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಈ ತನಿಖೆಯ ಭಾಗವಾಗಿ ಇದೀಗ ವಿಜಯ್ ಅವರಿಗೆ ನೇರವಾಗಿ ಸಮನ್ಸ್ ಜಾರಿ ಮಾಡಲಾಗಿದೆ.
ದುರಂತದ ನಂತರ ವಿಜಯ್ ಸಂತಾಪ ಸೂಚಿಸಿ, ಮೃತಪಟ್ಟವರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ 2 ಲಕ್ಷ ರೂ ಪರಿಹಾರ, ಅಲ್ಲದೆ, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಪಕ್ಷವೇ ಭರಿಸುವುದಾಗಿ ಘೋಷಿಸಿದ್ದರು.





