ಕರುನಾಡು ಕಂಡ ನಗುವಿನ ಒಡೆಯ.. ಕನ್ನಡದ ರಾಯಭಾರಿ.. ಅಭಿಮಾನಿಗಳ ಆರಾಧ್ಯದೈವ.. ಸಹೃದಯಿ ನಟ ಅಂದ್ರೆ ಪುನೀತ್ ರಾಜ್ಕುಮಾರ್ ಒಬ್ಬರೇ ಅಂದ್ರೂ ತಪ್ಪಾಗ್ಲಿಕ್ಕಿಲ್ಲ. ಅಂತಹ ಅಪ್ಪು ಇವತ್ತು ನಮ್ಮೊಟ್ಟಿಗೆ ಇಲ್ಲಾಂದ್ರೂ ಕೂಡ ಅವರು ನಟಿಸಿರೋ ಅದೆಷ್ಟೋ ಸಿನಿಮಾಗಳನ್ನ ನೋಡಿ ಅಪ್ಪು ಇನ್ನೂ ನಮ್ಮ ಜೊತೆಗೇ ಇದ್ದಾರೆ ಅನ್ನೋ ಅನುಭವ ಆಗ್ತಿರೋದಂತೂ ಸುಳ್ಳಲ್ಲ. ಕರುನಾಡಿನ ಕೋಟಿ ಅಭಿಮಾನಿಗಳು ಇವತ್ತಿಗೂ ಕೂಡ ತಮ್ಮ ಹೃದಯದಲ್ಲಿಟ್ಟು ಅಪ್ಪುವನ್ನ ಪೂಜೆ ಮಾಡ್ತಿದ್ದಾರೆ. ಇಂಥಾ ಹೊತ್ತಿನಲ್ಲಿ ಅಪ್ಪು ಕೊಟ್ಟ ಜಬರ್ದಸ್ತ್ ಸಿನಿಮಾ ಅಪ್ಪು ಮತ್ತೆ ರಿಲೀಸ್ ಆಗ್ತಿರೋದು ಅಭಿಮಾನಿಗಳಿಗೆ ಸಖತ್ ಖುಷಿ ಕೊಡ್ತಿದೆ.
23 ವರ್ಷಗಳ ನಂತರ ಅದೇ ಅಪ್ಪು, ಅದೇ ಖದರ್ ನಲ್ಲಿ, ಅದೇ ಪವರ್ ಫುಲ್ ಎಂಟ್ರಿ ಕೊಡ್ತಿದ್ದಾರೆ ಅದೂ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಪುನೀತ್ ರಾಜ್ಕುಮಾರ್ ಬೆಳ್ಳಿತೆರೆ ಬೆಳಗೋಕೆ ಕಾತರರಾಗಿದ್ದಾರೆ. ಪಿಆರ್ ಕೆ ಪ್ರೊಡಕ್ಷನ್ಸ್ ಅಪ್ಪು ಸಿನಿಮಾನ ಇದೇ ಮಾರ್ಚ್ 14ರಂದು ಪುನೀತ್ ರಾಜ್ಕುಮಾರ್ ಅವರ 50ನೇ ಬರ್ತ್ ಡೇ ಹಿನ್ನೆಲೆಯಲ್ಲಿ ರೀ-ರಿಲೀಸ್ ಮಾಡೋಕೆ ಸಜ್ಜಾಗಿದೆ. ಬಾಲನಟನಾಗಿ ಕನ್ನಡ ಚಿತ್ರರಂಗವನ್ನು ರೂಲ್ ಮಾಡಿ, ನ್ಯಾಷನಲ್ ಅವಾರ್ಡ್ ಪಡೆದ ಮಾಸ್ಟರ್ ಲೋಹಿತ್ ಅಪ್ಪು ಆಗಿ.. ಹೀರೋ ಆಗಿ ಲಾಂಚ್ ಆದ ಸಿನಿಮಾ ಇದಾಗಿದೆ.
ಪುನೀತ್ ರಾಜ್ ಕುಮಾರ್ ಅವರನ್ನ ದೊಡ್ಮನೆ ಜೊತೆಗೆ ಅವರ ಆಪ್ತ ವಲಯ, ನೆಂಟರೆಲ್ಲಾ ಅಪ್ಪು ಅಂತಲೇ ಕರೆಯುತ್ತಿದ್ರು. ಹಾಗಾಗಿಯೇ ಅದೇ ಟೈಟಲ್ ನ ಸಿನಿಮಾಗಿಟ್ಟು, ಅಪ್ಪು ಅಂತಲೇ ಸಿನಿಮಾ ಮಾಡಿದ್ರು ಪಾರ್ವತಮ್ಮ ರಾಜ್ ಕುಮಾರ್. ಯೂತ್ ಫುಲ್ ಸಬ್ಜೆಕ್ಟ್, ಕಾಲೇಜ್ ಸ್ಟೋರಿ, ಹೆಂಗೆಳೆಯರ ಅಚ್ಚುಮೆಚ್ಚಿನ ಕಥೆಯಾಗಿ ಎಲ್ಲರ ಮನಸ್ಸಿಗೆ ಇಳಿದಿತ್ತು ಅಪ್ಪು. ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ರಕ್ಷಿತಾ ಗ್ಲಾಮರ್ ಕೂಡ ಸಾಥ್ ಕೊಟ್ಟಿತ್ತು. ಎಂ ಎಸ್ ರಮೇಶ್ ಹಾಗೂ ಆರ್ ರಾಜಶೇಖರ್ ಡೈಲಾಗ್ಸ್ ಸಿನಿಮಾದ ತೂಕ ಹೆಚ್ಚಿಸಿತ್ತು. ಬೆಂಗಳೂರು ಸಿಟಿ ಕಮಿಷನರ್ ಆಗಿ ಅವಿನಾಶ್ ಮನೋಜ್ಞ ಅಭಿನಯ ಮಾಡಿದ್ದರು.
ಗುರುಕಿರಣ್ ಸಂಗೀತ, ಎಸ್ ಮನೋಹರ್ ಸಂಕಲನ ವ್ಹಾವ್ ಫೀಲ್ ತರಿಸಿತ್ತು. ಅದ್ರಲ್ಲೂ ಸದಾ ಲವಲವಿಕೆಯಿಂದ ಇರೋ ಅಪ್ಪು, ಅವ್ರ ಫ್ರೆಂಡ್ಸ್ ಗ್ಯಾಂಗ್, ರಕ್ಷಿತಾ ಜೊತೆಗಿನ ಇಂಟೆನ್ಸ್ ಲವ್, ಅಪ್ಪು ನಾನು ಪಕ್ಕಾ ಲೋಕಲ್ ಅನ್ನೋ ಡೈಲಾಗ್ ಹೀಗೆ ಎಲ್ಲವೂ ಅಪ್ಪು ಸಿನಿಮಾ ದೊಡ್ಡ ಮಟ್ಟದ ಗೆಲುವಿಗೆ ಕಾರಣವಾಗಿತ್ತು. ಉಪೇಂದ್ರ ಬರೆದ ತಾಲಿಬಾನ್ ಅಲ್ಲ ಅಲ್ಲ ಹಾಡನ್ನ ಸ್ವತಃ ಪುನೀತ್ ಅವರೇ ಹಾಡಿದ್ರು. ಹಂಸಲೇಖ, ಶ್ರೀರಂಗ, ಕೆ ಕಲ್ಯಾಣ್ ರ ಸಾಹಿತ್ಯದ ಹಾಡುಗಳು ಎಲ್ಲವೂ ಸೂಪರ್ ಹಿಟ್. ಅದರಲ್ಲೂ ಅಣ್ಣಾವ್ರು ಹಾಡಿದ ಪಣವಿಡು ಪಣವಿಡು, ಆ ದೇವರ ಹಾಡಿದು ಸಾಂಗ್ಸ್ ಅಪ್ಪು ಸಿನಿಮಾಗೆ ಮತ್ತಷ್ಟು ಪುಷ್ಠಿ ನೀಡಿತ್ತು.
ಇನ್ನು ಸಿನಿಮಾ ಹಿಟ್ ಆದ ಪರಿಗೆ ಇಡೀ ಕರುನಾಡೇ ದಂಗಾಗಿ ಹೋಗಿತ್ತು. ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟಿಸಿತ್ತು. ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟಕ್ಕೆ ಪೈಸಾ ವಸೂಲ್ ಮಾಡಿತು. ಇದರ ಶತದಿನೋತ್ಸವ ಫಂಕ್ಷನ್ ಗೆ ಸ್ವತಃ ರಜನೀಕಾಂತ್ ಅವರೇ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ರು. ತಲೈವಾ ರಜನೀಕಾಂತ್, ಡಾ ರಾಜ್ ಕುಮಾರ್ ದಂಪತಿಯ ಮುಂದೆ ಶಿವಣ್ಣ-ರಾಘಣ್ಣ-ಅಪ್ಪು ಸ್ಟೇಜ್ ಪರ್ಫಾಮೆನ್ಸ್ ಸಹ ನೀಡಿದ್ರು. ಅಲ್ಲಿ ಮಾತನಾಡುತ್ತಾ ಅಪ್ಪು ನಟನೆಯನ್ನ ಕೊಂಡಾಡಿದ್ದ ಸೂಪರ್ ಸ್ಟಾರ್ ರಜನಿ, ಅಪ್ಪು ಮುಂದೊಂದು ದಿನ ದೊಡ್ಡ ಸ್ಟಾರ್ ಆಗ್ತಾರೆ ಅಂತ ಭವಿಷ್ಯ ಕೂಡ ನುಡಿದಿದ್ರು. ಅದು ನಿಜವೂ ಆಗಿತ್ತು.
ಅಂದಹಾಗೆ ಇದೇ ಮಾರ್ಚ್ 17ರಂದು ಅಪ್ಪು ಅವರ 50ನೇ ಜನುಮ ದಿನವನ್ನು ಅಭಿಮಾನಿ ದೇವರುಗಳು ಬಹಳ ವಿಜೃಂಭಣೆಯಿಂದ ಆಚರಿಸಲಿದ್ದಾರೆ. ಅದಕ್ಕೂ ಮುನ್ನ ಮಾರ್ಚ್ 14ರಂದೇ ಅಪ್ಪು ಸಿನಿಮಾ ರೀ-ರಿಲೀಸ್ ಆಗ್ತಿರೋದು ವಿಶೇಷ.