ಕರ್ನಾಟಕದ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ ಕತ್ರೀನಾ ಕೈಫ್ ಭೇಟಿ ನೀಡಿ ವಿಶೇಷ ಪೂಜೆ ಕೈಗೊಂಡಿದ್ದಾರೆ. ಕುಕ್ಕೆಯಲ್ಲಿ ಮುಖಕ್ಕೆ ಮಾಸ್ಕ್, ತಲೆಗೆ ದುಪ್ಪಟ್ಟಾ ಧರಿಸಿಯೇ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಸಂತಾನಭಾಗ್ಯ ಪ್ರಾಪ್ತಿಗಾಗಿ ಶ್ರೀಕ್ಷೇತ್ರದಲ್ಲಿ ಆಶ್ಲೇಷಾ ಬಲಿ, ಸರ್ಪಸಂಸ್ಕಾರ ಪೂಜೆಯಲ್ಲಿ ಕತ್ರೀನಾ ಕೈಫ್ ಭಾಗಿಯಾಗಿದ್ದಾರೆ. ಸರ್ಪಸಂಸ್ಕಾರ ಮೊದಲ ದಿನದ ಪೂಜೆಯ ಮೊದಲು ಕತ್ರಿನಾ ಕೈಫ್ ಸಂತಾನ ಪ್ರಾಪ್ತಿ, ವೃತ್ತಿಜೀವನದ ಅಭಿವೃದ್ಧಿ ಸೇರಿದಂತೆ ಕುಟುಂಬಕ್ಕೆ ಒಳ್ಳೆಯದಾಗಲಿ ಅಂತಾ ಅರ್ಚಕರ ಮುಖೇನ ಸಂಕಲ್ಪ ನೆರವೇರಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದ ಖಾಸಗಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿರುವ ಕತ್ರಿನಾ ಕೈಫ್ ಬುಧವಾರ ಎರಡನೇ ದಿನದ ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನದ ಮಹಾಪೂಜೆಯ ನಂತರ ಅವರು ನಾಗಪ್ರತಿಷ್ಠೆ ಸೇವೆ ಸಲ್ಲಿಸಲಿದ್ದಾರೆ. ಮೊದಲ ಮುಂಜಾನೆ ಆದಿ ಸುಬ್ರಹ್ಮಣ್ಯದ ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಸರ್ಪಸಂಸ್ಕಾರದ ಪ್ರಧಾನ ಅರ್ಚಕ ನಂದಕಿಶೋರ್ ಹಾಗೂ ಕ್ರಿಯಾಕರ್ತ ಸುಧೀರ್ ಭಟ್ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ತಮಿಳು ಚಿತ್ರರಂಗದ ನಿರ್ದೇಶಕರೊಬ್ಬರ ಸಲಹೆಯಂತೆ ಕತ್ರಿನಾ ಕೈಫ್ ಕುಕ್ಕೆಗೆ ಭೇಟಿ ನೀಡಿದ್ದು, ಸಂತಾನಭಾಗ್ಯಕ್ಕಾಗಿ ಪೂಜೆ ಮಾಡಿಸಿದ್ದಾರೆ.
ನಾಗ ದೋಷ ಸಂಬಂಧಿ ಪೂಜೆಗಳು ಅದರಲ್ಲೂ ಆಶ್ಲೇಷ ಬಲಿ ಹಾಗೂ ಸರ್ಪ ಸಂಸ್ಕಾರ ಯಾಗವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಸಿದರೆ ನಿಜವಾದ ಫಲ ಸಿಗುವುದು ಎಂಬ ನಂಬಿಕೆ ಹೆಚ್ಚಾಗಿದೆ. ಅನೇಕ ಬಾಲಿವುಡ್ ನಟ, ನಟಿಯರು, ಕ್ರಿಕೆಟ್ ತಾರೆಯರು ಹೆಚ್ಚಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ನಡೆಸಿ ಫಲಗಳನ್ನು ಪಡೆದುಕೊಂಡಿದ್ದಾರೆ.