ಅಂದು ಭೂಮಿಕಾಳ ಮದುವೆಯ ಮೊದಲ ವಾರ್ಷಿಕೋತ್ಸವ. ತನ್ನ ಪತಿ ಕಾರ್ತಿಕ್‌ ನ ಸೂಚನೆ ಮೇರೆಗೆ ಅವಳು ಮೊದಲ ಬಾರಿ ಬಿಯರ್‌ ರುಚಿ ಸವಿದಿದ್ದಳು. ಕಾರ್ತಿಕ್‌ ಗೆ ಕಂಪನಿ ಕೊಡಲು ಅವಳು ಆಗಾಗ ಸ್ವಲ್ಪ ಸ್ವಲ್ಪ ತೆಗೆದುಕೊಳ್ಳುತ್ತಿದ್ದಳು. ಅದೊಂದು ದಿನ ಕಾರ್ತಿಕ್‌ ಎಲ್ಲೋ ಹೋಗಿದ್ದಾಗ ಭೂಮಿಕಾ ತನ್ನ ಗೆಳತಿಯರ ಜೊತೆ ಪಾರ್ಟಿ ಮಾಡಿದಳು. ಆದರೆ ಆ ಬಳಿಕ ಅವಳು ತನ್ನನ್ನು ತಾನು ತಡೆಹಿಡಿಯಲಾಗಲಿಲ್ಲ. ಅಂದಿನ ದಿನದ ಬಳಿಕ ಅವರ ಮನೆಯಲ್ಲಿ ಮೇಲಿಂದ ಮೇಲೆ ಮದ್ಯದ ಪಾರ್ಟಿಗಳು ನಡೆಯುತ್ತಿರುತ್ತವೆ. ಭೂಮಿಕಾ ಮತ್ತು ಕಾರ್ತಿಕ್‌ ತಮ್ಮ ಈ ಹವ್ಯಾಸವನ್ನು ಹೈಕ್ಲಾಸ್‌ ಸೊಸೈಟಿಯಲ್ಲಿ ನಡೆಯುವ ನಿಯಮಿತ ಚಟುವಟಿಕೆ ಎಂದು ಭಾವಿಸುತ್ತಾರೆ. ಅತಿಯಾದ ಮದ್ಯ ಸೇವನೆಯ ಕಾರಣದಿಂದ ಕಾರ್ತಿಕ್‌ ಹೈ ಬ್ಲಡ್‌ ಶುಗರ್‌ ಸಮಸ್ಯೆಗೆ ಸಿಲುಕಿದ್ದ. ಇನ್ನೊಂದೆಡೆ ಭೂಮಿಕಾಳ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ತದ್ವಿರುದ್ಧ ಪರಿಣಾಮ ಉಂಟಾಗಿತ್ತು. ಆ ಕಾರಣದಿಂದ ಅವಳಿಗೆ ತಾಯಿಯಾಗಲು ಸಾಧ್ಯವಾಗುತ್ತಿರಲಿಲ್ಲ.

ರಾಜೇಶ್‌ ಅತ್ತಿಂದಿತ್ತ ಹೆಜ್ಜೆ ಹಾಕುತ್ತಿದ್ದರು. ಅವರ ಮಗಳು ತನುಜಾ ಈವರೆಗೆ ಮನೆಗೆ ಮರಳದೆ ಅವರಿಗೆ ಆತಂಕ ಉಂಟಾಗಿತ್ತು. ಅರ್ಧ ಗಂಟೆ ಕಳೆಯುತ್ತಿದ್ದಂತೆ ಕಾಲ್ ಬೆಲ್ ಸದ್ದಾಯಿತು. ಹೋಗಿ ತೆರೆದರೆ ಅಲ್ಲಿ ಮಗಳು ತೂರಾಡುತ್ತ ನಿಂತಿದ್ದಳು. ಮೇಲಿಂದ ಮೇಲೆ ಇದು ನಡೆಯುತ್ತಿತ್ತು. ಮುಂದಿನ ದಿನಗಳಲ್ಲಿ ತನುಜಾಳಿಗೆ ಕೋರ್ಟ್‌ ಮಾರ್ಶಲ್ ಆಯಿತು. ಈ ಸಂದರ್ಭದಲ್ಲಿ ಅವಳು ಅಪ್ಪನಿಗೆ ಹೇಳಿದಳು, “ಅಪ್ಪಾ, ಆಫೀಸ್‌ ಪಾರ್ಟಿಗಳಲ್ಲಿ ಇದು ಸಾಮಾನ್ಯ. ಅಣ್ಣ ರೋಹಿತ್‌ ಕೂಡ ಕುಡಿಯುತ್ತಾನಲ್ಪಪ್ಪ.”

ಅಪ್ಪ ರಾಜೇಶ್‌ ಕೋಪದಿಂದ, “ಅವನು ಬಾವಿಗೆ ಬೀಳುತ್ತಾನೆ. ನೀನೂ ಬಾವಿಗೆ ಬೀಳ್ತೀಯಾ? ಹುಡುಗರ ಜೊತೆ ಸರಿಸಮಾನ ಆಗಬೇಕಂದ್ರೆ ಒಳ್ಳೆಯ ಅಭ್ಯಾಸ ಹವ್ಯಾಸಗಳಿಂದ ಆಗಬೇಕು,’ ಎಂದು ಹೇಳಿದರು.

ಇಂದಿನ ಧಾವಂತದ ಜೀವನದಲ್ಲಿ ಎಲ್ಲರಿಗೂ ಒತ್ತಡದ ಸ್ಥಿತಿ. ಆ ಒತ್ತಡದ ಸ್ಥಿತಿಯಿಂದ ಹೊರಬರಲು ಮೊದಲು ಪುರುಷರು ಮದ್ಯಕ್ಕೆ ಮೊರೆ ಹೋದರು. ಈಗ ಕೆಲವು ಮಹಿಳೆಯರು ಕೂಡ ಆ ಅಭ್ಯಾಸ ಮಾಡಿಕೊಂಡಿದ್ದಾರೆ. ಇದು 21ನೇ ಶತಮಾನ. ಪುರುಷರು ಹಾಗೂ ಮಹಿಳೆಯರು ಎಲ್ಲ ಕೆಲಸ ಕಾರ್ಯಗಳಲ್ಲಿ ಸಮಾನ ಪಾಲುದಾರರಾಗಿದ್ದಾರೆ. ಬಹುರಾಷ್ಟ್ರೀಯ ಹಾಗೂ ಕಾಲ್ ಸೆಂಟರ್‌ ಗಳು ಭಾರತದಲ್ಲಿ ಕಾಲಿಟ್ಟಾಗಿನಿಂದ ಮದ್ಯ ಹಾಗೂ ಸಿಗರೇಟಿನ ಚಟದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಹೆಚ್ಚಳ ಉಂಟಾಗಿದೆ. ಇಲ್ಲಿ ಕೆಲಸ ಮಾಡಲು ಯಾವುದೇ ಕಾಲಮಿತಿ ಇಲ್ಲ. ತಡ ರಾತ್ರಿಯವರೆಗೆ ನಡೆಯುವ ಪಾರ್ಟಿಗಳಿಂದಾಗಿ ಹಾಗೂ ಎಂದೂ ಮುಗಿಯದ ಕೆಲಸಗಳಿಂದಾಗಿ ಇಲ್ಲಿ ಕೆಲಸ ಮಾಡುವುದರಲ್ಲಿ ಒಂದು ತೆರನಾದ ವಿಚಿತ್ರ ಒತ್ತಡ ಆವರಿಸಿಕೊಂಡಿರುತ್ತದೆ. ಅದನ್ನು ಹೋಗಲಾಡಿಸಲು ಅವರು ಮದ್ಯಕ್ಕೆ ಮೊರೆ ಹೋಗುತ್ತಾರೆ.

ಹೆಚ್ಚುತ್ತಿರುವ ಆಧುನಿಕ ಪ್ರವೃತ್ತಿ

ಮೊದಲು ಜೀವನದಲ್ಲಿ ಒತ್ತಡ ಇರಲಿಲ್ಲವೆಂದಲ್ಲ. ಆದರೆ ಆಗ ಕುಟುಂಬದಲ್ಲಿ ಎಲ್ಲರೂ ಒಂದೆಡೆ ಕುಳಿತು ತಮ್ಮ ಸುಖದುಃಖ ಹಂಚಿಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕುಟುಂಬಗಳು ಚಿಕ್ಕದಾಗುತ್ತ ಹೊರಟಂತೆ ಬಹಳಷ್ಟು ಜನರಿಗೆ ಏಕಾಂಗಿತನ ಕಾಡುತ್ತದೆ. ಅದರಿಂದಾಗಿ ಮದ್ಯ ಅವರ ನಡುವೆ ಸ್ಥಿರ ಪಡೆದುಕೊಳ್ಳುತ್ತಿದೆ.

ಆಶ್ಚರ್ಯದ ಸಂಗತಿಯೆಂದರೆ, ಮೊದಲು ಹೆಂಡತಿಯರು ತಮ್ಮ ಗಂಡಂದಿರ ಮದ್ಯ ಸೇವನೆಯ ಬಗ್ಗೆ ಆಕ್ಷೇಪ ಎತ್ತುತ್ತಿದ್ದರು. ಈಗ ಪತಿ ಒತ್ತಡ ನಿವಾರಣೆಗಾಗಿ ಒಂದಿಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದರೆ ಅದಕ್ಕೆ ತಕರಾರು ತೆಗೆಯುವುದಿಲ್ಲ. ಅದನ್ನು ಅವಳು ಔಷಧಿ ಎಂಬಂತೆ ಭಾವಿಸುತ್ತಾಳೆ. ಕೆಲವು ಮನೆಗಳಲ್ಲಿ ಹೆಂಡತಿಯರು ತಮ್ಮ ಗಂಡಂದಿರಿಗೆ ಸಾಥ್‌ ಕೊಡುತ್ತಾರೆ. ಅದೇ ಮುಂದೆ ಅವರಿಗೆ ಚಟವಾಗಿ ಪರಿಣಮಿಸುತ್ತದೆ.

ಮುಂಬೈನ ಅಖಿಲ್ ಹಾಗೂ ಪ್ರಜ್ಞಾಗೆ ಹಣದ್ದೇನೂ ಕೊರತೆಯಿಲ್ಲ. ಜೊತೆಗೆ ಆಧುನಿಕ ಸಂಸ್ಕಾರದ ಕೊರತೆಯೂ ಇಲ್ಲ. ಇಬ್ಬರೂ ಸೇರಿ ಮಗಳ ಎದುರೇ ಡ್ರಿಂಕ್ಸ್ ಮಾಡುತ್ತಾರೆ. ತಮ್ಮ ಈ ಕೃತ್ಯ ಮಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದರ ಕಲ್ಪನೆ ಅವರಿಗೆ ಇಲ್ಲ. ಅದೊಂದು ದಿನ ಅವರ ಮಗಳನ್ನು ಶಾಲೆಯಿಂದ ಉಚ್ಛಾಟಿಸಲಾಯಿತು. ಅವಳು ಮಾಡಿದ ತಪ್ಪು ಏನು ಗೊತ್ತೆ? ಕಳೆದ ಕೆಲವು ದಿನಗಳಿಂದ ಅವಳು ನೀರಿನ ಬಾಟಲ್ ನಲ್ಲಿ ಮದ್ಯ ತೆಗೆದುಕೊಂಡು ಹೋಗುತ್ತಿದ್ದಳು. ಅವಳಿಗೆ ಏನು ಹೇಳಬೇಕೆಂದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಗಂಡಹೆಂಡತಿ ಪರಸ್ಪರ ದೋಷಾರೋಪ ಮಾಡುತ್ತ ಕಾಲಕಳೆಯುತ್ತಿದ್ದಾರೆ.

ಇನ್ಸ್ಟಂಟ್ಯುಗ

ಇದು ಇನ್‌ ಸ್ಟಂಟ್‌ ಯುಗ. ಯಾವುದೇ ಪರಿಶ್ರಮವಿಲ್ಲದೆ, ಬಹುಬೇಗ ಎಲ್ಲ ಬೇಕೇಬೇಕು ಅನಿಸುತ್ತದೆ. ಒಂದಿಷ್ಟು ಒತ್ತಡ ಉಂಟಾದರೂ ಮದ್ಯ ಸೇವನೆ ಮಾಡಬೇಕು ಎಂದು ಅವರು ನಂಬಿದ್ದಾರೆ. ಅದರಿಂದ ಒತ್ತಡ ಮುಕ್ತರಾಗುವುದಷ್ಟೇ ಅಲ್ಲ, ಮಾಡರ್ನ್‌ ಎಂದು ಕರೆಸಿಕೊಳ್ಳುವ ಹೆಮ್ಮೆ ಅವರಿಗಿರುತ್ತದೆ.

ಮನೆಯ ಹಿರಿಯರಿಗೆ ಮಕ್ಕಳ ಈ ಅಭ್ಯಾಸ ಗೊತ್ತಾದಾಗ ಅವರು ಇವರನ್ನು ತರಾಟೆಗೆ ತೆಗೆದುಕೊಂಡು ತಮ್ಮ ಕರ್ತವ್ಯ ಮುಗಿಸಿ ಸುಮ್ಮನಾಗಿಬಿಡುತ್ತಿದ್ದರು.

ಎಂತಹ ಕಾಲ ಬಂದುಬಿಟ್ಟಿತಪ್ಪ, ಪುರುಷರ ಬಗ್ಗೆ ಬಿಡಿ. ಇಂದಿನ ಯುವತಿಯರೂ ಮದ್ಯಕ್ಕೆ ದಾಸರಾಗುತ್ತಿರುವುದು ಖೇದದ ಸಂಗತಿ.

ಹೊಗೆಸೊಪ್ಪು, ಸಿಗರೇಟು, ಮದ್ಯ ಇವನ್ನು ಸೇವಿಸುವುದು ಮಹಿಳೆಯರಲ್ಲಿ ಸಾಮಾನ್ಯ ಎಂಬಂತಾಗಿದೆ. ಮೊದಲು ಮಹಿಳೆಯರು ಅವನ್ನು ಮೋಜಿಗಾಗಿ ಆರಂಭಿಸುತ್ತಾರೆ. ಬಳಿಕ ಅದೇ ಅವರಿಗೆ ಚಟವಾಗಿ ಪರಿಣಮಿಸುತ್ತದೆ. ನಂತರ  ಸಜೆಯಾಗುತ್ತದೆ. ಮದ್ಯ ಹಾಗೂ ಸಿಗರೇಟು ಅಂಗಡಿಯಲ್ಲಿ ಪುರುಷರಷ್ಟೇ ಜಮಾಯಿಸುತ್ತಿದ್ದರು. ಆದರೆ ಈಗ ಕೆಲವು ಕಡೆ ಮಹಿಳೆಯರು ಗುಂಪು ಗುಂಪಾಗಿ ಸೇರುತ್ತಿದ್ದಾರೆ.

ಗೀತಾ 28 ವರ್ಷದ ಯುವತಿ. ಅವಳು ಆಧುನಿಕ ಆಫೀಸೊಂದರಲ್ಲಿ ಕೆಲಸ ಮಾಡುತ್ತಾಳೆ. ಅವಳ ಜೊತೆ ಮಾತನಾಡಿದಾಗ ಅವಳು ಹೀಗೆ ಹೇಳುತ್ತಾಳೆ. ಆಫೀಸ್‌ ಪಾರ್ಟಿಗಳಲ್ಲಿ ಮದ್ಯ ಸೇವನೆ ಅನಿವಾರ್ಯ ಆಗಿಬಿಟ್ಟಿದೆ. ನೌಕರಿ ಮಾಡಲೇಬೇಕಿದ್ದರೆ ಮದ್ಯವನ್ನು ಹೇಗೆ ನಿರಾಕರಿಸಲಾಗುತ್ತದೆ ಎಂದು ಅವಳು ಪ್ರತಿಯಾಗಿ ಪ್ರಶ್ನೆ ಮಾಡುತ್ತಾಳೆ.

ಮಹಿಳೆಯರಲ್ಲಿ ಯಾವ ಕಾರಣಗಳಿಂದ ಮದ್ಯ ಸೇವನೆಯ ಚಟ ಹೆಚ್ಚುತ್ತಾ ಹೊರಟಿದೆ ಎಂಬುದರ ಮೇಲೊಮ್ಮೆ ಗಮನಿಸಿ ನೋಡೋಣ:

ಫ್ಯಾಷನ್ಸ್ಟೇಟ್ಮೆಂಟ್‌ : ಇತ್ತೀಚಿನ ದಿನಗಳಲ್ಲಿ ಮದ್ಯ ಅಥವಾ ಸಿಗರೇಟು ಸೇವನೆ ಒಂದು ರೀತಿಯ ಫ್ಯಾಷನ್‌ ಸ್ಟೇಟ್‌ ಮೆಂಟ್ ಆಗಿಬಿಟ್ಟಿದೆ. ನೀವು ಮದ್ಯ ಸೇವನೆ ಮಾಡದೇ ಇದ್ದರೆ ನಿಮ್ಮನ್ನು ಹಳೆಯ ಕಾಲದವರೆಂದು ಪರಿಗಣಿಸಿಬಿಡುತ್ತಾರೆ. ನೀವು ನಿಮ್ಮ ಕೆರಿಯರ್‌ ನಲ್ಲಿ ಹೇಗೆ ಮುಂದುವರಿಯುತ್ತೀರಿ? ನಿಮಗೆ ಇಂದಿನ ರೀತಿ ನೀತಿಗಳೇನಾದರೂ ಗೊತ್ತೆ ಎಂದು ಪ್ರಶ್ನಿಸುತ್ತಾರೆ.

ಸಮಾನತೆಯ ಅಪೇಕ್ಷೆ : ಇಂದಿನ ಮಹಿಳೆ ಪ್ರತಿಯೊಂದು ನಿಟ್ಟಿನಲ್ಲೂ ಪುರುಷನಿಗೆ ಸರಿಸಮಾನವಾಗಿ ಹೆಜ್ಜೆ ಹಾಕುತ್ತಿದ್ದಾಳೆ. ಒಂದು ವೇಳೆ ಪುರುಷರು ಮದ್ಯಪಾನ ಮಾಡುತ್ತಿದ್ದರೆ, ತಾನೇಕೆ ಹಿಂದುಳಿಯಬೇಕು ಎಂದು ಅವಳು ಯೋಚಿಸುತ್ತಾಳೆ. ಬಹಳಷ್ಟು ಮಹಿಳೆಯರು ಅದರ ಪರಿಣಾಮಗಳ ಬಗ್ಗೆ ಅರಿವಿದ್ದೂ ಅದರತ್ತ ವಾಲುತ್ತಿದ್ದಾರೆ.

ಒಂದೆಡೆ ಕೆರಿಯರ್‌ ನ ಒತ್ತಡ, ಇನ್ನೊಂದೆಡೆ ವಯಸ್ಸಾದ ತಂದೆ ತಾಯಿ, ಬೆಳೆಯುತ್ತಿರುವ ಮಕ್ಕಳ ಅವಶ್ಯಕತೆಗಳು, ಎಂದೂ ಕೊನೆಗೊಳ್ಳದ ಕೆಲಸಗಳು, ಈ ಎಲ್ಲದರಿಂದ ಮುಕ್ತಿ ಕಂಡುಕೊಳ್ಳಲು ಕೆಲವು ಮಹಿಳೆಯರು ಮದ್ಯದ ಆಸರೆ ಪಡೆಯುತ್ತಿದ್ದಾರೆ. ಸ್ವಲ್ಪ ಮಟ್ಟಿಗಾದರೂ ಸರಿ ಅದು ತಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ ಎಂದು ಅವರು ಭಾವಿಸುತ್ತಾರೆ.

ಸ್ವೀಕೃತಿಯ ಅಪೇಕ್ಷೆ : ಇಂದಿನ ಬಹಳಷ್ಟು ಮಹಿಳೆಯರು ನೌಕರಿಗೆಂದು ಬೇರೆ ನಗರಗಳಿಗೆ ತೆರಳಿ, ಅಲ್ಲಿ ಏಕಾಂಗಿಯಾಗಿ ವಾಸಿಸುತ್ತಾರೆ. ಹೊಸ ನಗರ, ಹೊಸ ಸ್ನೇಹಿತರು, ಅವರಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಇಷ್ಟವಿಲ್ಲದಿದ್ದರೂ ಕೂಡ ಮದ್ಯ ಸೇವನೆ ಮಾಡುತ್ತಾರೆ. ಹೊಸ ಸಂಬಂಧಗಳು ಉಂಟಾದಾಗ ಸೆಲೆಬ್ರೇಶನ್‌ ಗಾಗಿ ಮದ್ಯ ಸೇವನೆ ಮಾಡಲಾಗುತ್ತದೆ. ಆಕಸ್ಮಿಕವಾಗಿ ಆ ಸಂಬಂಧವೇನಾದರೂ ಕಡಿದು ಹೋದರೆ ಆಗ ಆ ನೋವು ಮರೆಯಲು ಪುನಃ ಮದ್ಯಕ್ಕೆ ಮೊರೆ ಹೋಗುತ್ತಾರೆ.

ಮದ್ಯದ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ನಾವು ಚಿರಪರಿಚಿತರಾಗಿದ್ದೇವೆ. ಆದರೆ ಇತ್ತೀಚೆಗೆ ನಡೆಸಿದ ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೆಂದರೆ, ಮದ್ಯ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುತ್ತದೆ.

ಮದ್ಯವನ್ನು ಪಚನಗೊಳಿಸಲು ಕರುಳಿನಲ್ಲಿ ಒಂದು ಬಗೆಯ ಎನ್‌ ಜೈಮ್ ಸ್ರಾವವಾಗುತ್ತದೆ. ಮಹಿಳೆಯರಲ್ಲಿ ಅದರ ಸ್ರಾವ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಹೀಗಾಗಿ ಮಹಿಳೆಯರ ಕರುಳು ಪುರುಷರಿಗಿಂತ ಹೆಚ್ಚು ಶ್ರಮ ಪಡಬೇಕಾಗುತ್ತದೆ.

ಮದ್ಯ ಸೇವನೆಯಿಂದ ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಒಂದು ವೇಳೆ ಗರ್ಭಿಣಿಯು ಮದ್ಯ ಸೇವನೆಯನ್ನು ಹಾಗೆಯೇ ಮುಂದುವರಿಸಿದರೆ ಅದು ಹುಟ್ಟಲಿರುವ ಮಗುವಿನ ಮೇಲೆ ದುಷ್ಪರಿಣಾಮ ಮಾಡುತ್ತದೆ.

ಮನೆಯ ಹಿರಿಯರಾಗಿರುವ ಕಾರಣದಿಂದ ನೀವು ನಿಮ್ಮ ಮಕ್ಕಳ ಮದ್ಯ ಸೇವನೆಯ ಅಭ್ಯಾಸದಿಂದ ಆತಂಕಗೊಂಡಿದ್ದರೆ, ನೀವು ಅವರಿಗೆ ಅವಶ್ಯವಾಗಿ ತಿಳಿಸಿ ಹೇಳಿ. ಮದ್ಯ ಸೇವನೆಯಿಂದ ಏನೇನು ತೊಂದರೆಯಿದೆ ಎಂಬುದರ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಿ. ಮಗಳಾಗಿರಬಹುದು, ಮಗನಾಗಿರಬಹುದು ಅಥವಾ ಸೊಸೆ, ಇವರೆಲ್ಲರಿಗೂ ಸಮಾನ ರೀತಿಯಲ್ಲಿ ಸಲಹೆ ನೀಡಿ. ಮದ್ಯ ಸೇವನೆ ಕೆಟ್ಟ ಚಟ. ಆದರೆ ಮದ್ಯ ಸೇವನೆ ಮಾಡುವ ಮಹಿಳೆಯ ಚಾರಿತ್ರ್ಯ ಸರಿಯಲ್ಲ ಎಂದು ಭಾವಿಸಬಾರದು. ಯಾವುದು ಕೆಟ್ಟದ್ದೋ, ಅದು ಎಲ್ಲದಕ್ಕಿಂತ ಕೆಟ್ಟದ್ದು. ಮಹಿಳೆಯೇ ಆಗಿರಬಹುದು ಅಥವಾ ಪುರುಷ ಇಬ್ಬರಿಗೂ ಸಲಹೆ ಕೊಡುವಾಗ ಏಕ ರೀತಿಯ ಸಲಹೆ ಕೊಡಿ, ಮಗಳಿಗೊಂದು, ಸೊಸೆಗೊಂದು ಮಾನದಂಡ ಅನುಸರಿಸಬೇಡಿ.

ಮಾನಸಿಕವಾಗಿ ದುರ್ಬಲರಾದ ಮಹಿಳೆಯರು ತದ್ವಿರುದ್ಧ ಸ್ಥಿತಿಯಲ್ಲಿ ಮದ್ಯದ ಅಮಲಿಗೆ ಶರಣಾಗಿಬಿಡುತ್ತಾರೆ. ನಿಮ್ಮೊಳಗೆ ಉತ್ಸಾಹದ ಕೊರತೆ ಉಂಟಾದರೆ ಅದನ್ನು ಮರೆಯಲು ಮದ್ಯದ ಮೊರೆ ಹೋಗುವುದಕ್ಕಿಂತ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿ ನಿಮ್ಮ ನೋವು ಮರೆಯಿರಿ.

ಅನಿತಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ