ಅಂದು ಭೂಮಿಕಾಳ ಮದುವೆಯ ಮೊದಲ ವಾರ್ಷಿಕೋತ್ಸವ. ತನ್ನ ಪತಿ ಕಾರ್ತಿಕ್ ನ ಸೂಚನೆ ಮೇರೆಗೆ ಅವಳು ಮೊದಲ ಬಾರಿ ಬಿಯರ್ ರುಚಿ ಸವಿದಿದ್ದಳು. ಕಾರ್ತಿಕ್ ಗೆ ಕಂಪನಿ ಕೊಡಲು ಅವಳು ಆಗಾಗ ಸ್ವಲ್ಪ ಸ್ವಲ್ಪ ತೆಗೆದುಕೊಳ್ಳುತ್ತಿದ್ದಳು. ಅದೊಂದು ದಿನ ಕಾರ್ತಿಕ್ ಎಲ್ಲೋ ಹೋಗಿದ್ದಾಗ ಭೂಮಿಕಾ ತನ್ನ ಗೆಳತಿಯರ ಜೊತೆ ಪಾರ್ಟಿ ಮಾಡಿದಳು. ಆದರೆ ಆ ಬಳಿಕ ಅವಳು ತನ್ನನ್ನು ತಾನು ತಡೆಹಿಡಿಯಲಾಗಲಿಲ್ಲ. ಅಂದಿನ ದಿನದ ಬಳಿಕ ಅವರ ಮನೆಯಲ್ಲಿ ಮೇಲಿಂದ ಮೇಲೆ ಮದ್ಯದ ಪಾರ್ಟಿಗಳು ನಡೆಯುತ್ತಿರುತ್ತವೆ. ಭೂಮಿಕಾ ಮತ್ತು ಕಾರ್ತಿಕ್ ತಮ್ಮ ಈ ಹವ್ಯಾಸವನ್ನು ಹೈಕ್ಲಾಸ್ ಸೊಸೈಟಿಯಲ್ಲಿ ನಡೆಯುವ ನಿಯಮಿತ ಚಟುವಟಿಕೆ ಎಂದು ಭಾವಿಸುತ್ತಾರೆ. ಅತಿಯಾದ ಮದ್ಯ ಸೇವನೆಯ ಕಾರಣದಿಂದ ಕಾರ್ತಿಕ್ ಹೈ ಬ್ಲಡ್ ಶುಗರ್ ಸಮಸ್ಯೆಗೆ ಸಿಲುಕಿದ್ದ. ಇನ್ನೊಂದೆಡೆ ಭೂಮಿಕಾಳ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ತದ್ವಿರುದ್ಧ ಪರಿಣಾಮ ಉಂಟಾಗಿತ್ತು. ಆ ಕಾರಣದಿಂದ ಅವಳಿಗೆ ತಾಯಿಯಾಗಲು ಸಾಧ್ಯವಾಗುತ್ತಿರಲಿಲ್ಲ.
ರಾಜೇಶ್ ಅತ್ತಿಂದಿತ್ತ ಹೆಜ್ಜೆ ಹಾಕುತ್ತಿದ್ದರು. ಅವರ ಮಗಳು ತನುಜಾ ಈವರೆಗೆ ಮನೆಗೆ ಮರಳದೆ ಅವರಿಗೆ ಆತಂಕ ಉಂಟಾಗಿತ್ತು. ಅರ್ಧ ಗಂಟೆ ಕಳೆಯುತ್ತಿದ್ದಂತೆ ಕಾಲ್ ಬೆಲ್ ಸದ್ದಾಯಿತು. ಹೋಗಿ ತೆರೆದರೆ ಅಲ್ಲಿ ಮಗಳು ತೂರಾಡುತ್ತ ನಿಂತಿದ್ದಳು. ಮೇಲಿಂದ ಮೇಲೆ ಇದು ನಡೆಯುತ್ತಿತ್ತು. ಮುಂದಿನ ದಿನಗಳಲ್ಲಿ ತನುಜಾಳಿಗೆ ಕೋರ್ಟ್ ಮಾರ್ಶಲ್ ಆಯಿತು. ಈ ಸಂದರ್ಭದಲ್ಲಿ ಅವಳು ಅಪ್ಪನಿಗೆ ಹೇಳಿದಳು, ``ಅಪ್ಪಾ, ಆಫೀಸ್ ಪಾರ್ಟಿಗಳಲ್ಲಿ ಇದು ಸಾಮಾನ್ಯ. ಅಣ್ಣ ರೋಹಿತ್ ಕೂಡ ಕುಡಿಯುತ್ತಾನಲ್ಪಪ್ಪ.''
ಅಪ್ಪ ರಾಜೇಶ್ ಕೋಪದಿಂದ, ``ಅವನು ಬಾವಿಗೆ ಬೀಳುತ್ತಾನೆ. ನೀನೂ ಬಾವಿಗೆ ಬೀಳ್ತೀಯಾ? ಹುಡುಗರ ಜೊತೆ ಸರಿಸಮಾನ ಆಗಬೇಕಂದ್ರೆ ಒಳ್ಳೆಯ ಅಭ್ಯಾಸ ಹವ್ಯಾಸಗಳಿಂದ ಆಗಬೇಕು,' ಎಂದು ಹೇಳಿದರು.
ಇಂದಿನ ಧಾವಂತದ ಜೀವನದಲ್ಲಿ ಎಲ್ಲರಿಗೂ ಒತ್ತಡದ ಸ್ಥಿತಿ. ಆ ಒತ್ತಡದ ಸ್ಥಿತಿಯಿಂದ ಹೊರಬರಲು ಮೊದಲು ಪುರುಷರು ಮದ್ಯಕ್ಕೆ ಮೊರೆ ಹೋದರು. ಈಗ ಕೆಲವು ಮಹಿಳೆಯರು ಕೂಡ ಆ ಅಭ್ಯಾಸ ಮಾಡಿಕೊಂಡಿದ್ದಾರೆ. ಇದು 21ನೇ ಶತಮಾನ. ಪುರುಷರು ಹಾಗೂ ಮಹಿಳೆಯರು ಎಲ್ಲ ಕೆಲಸ ಕಾರ್ಯಗಳಲ್ಲಿ ಸಮಾನ ಪಾಲುದಾರರಾಗಿದ್ದಾರೆ. ಬಹುರಾಷ್ಟ್ರೀಯ ಹಾಗೂ ಕಾಲ್ ಸೆಂಟರ್ ಗಳು ಭಾರತದಲ್ಲಿ ಕಾಲಿಟ್ಟಾಗಿನಿಂದ ಮದ್ಯ ಹಾಗೂ ಸಿಗರೇಟಿನ ಚಟದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಹೆಚ್ಚಳ ಉಂಟಾಗಿದೆ. ಇಲ್ಲಿ ಕೆಲಸ ಮಾಡಲು ಯಾವುದೇ ಕಾಲಮಿತಿ ಇಲ್ಲ. ತಡ ರಾತ್ರಿಯವರೆಗೆ ನಡೆಯುವ ಪಾರ್ಟಿಗಳಿಂದಾಗಿ ಹಾಗೂ ಎಂದೂ ಮುಗಿಯದ ಕೆಲಸಗಳಿಂದಾಗಿ ಇಲ್ಲಿ ಕೆಲಸ ಮಾಡುವುದರಲ್ಲಿ ಒಂದು ತೆರನಾದ ವಿಚಿತ್ರ ಒತ್ತಡ ಆವರಿಸಿಕೊಂಡಿರುತ್ತದೆ. ಅದನ್ನು ಹೋಗಲಾಡಿಸಲು ಅವರು ಮದ್ಯಕ್ಕೆ ಮೊರೆ ಹೋಗುತ್ತಾರೆ.
ಹೆಚ್ಚುತ್ತಿರುವ ಆಧುನಿಕ ಪ್ರವೃತ್ತಿ
ಮೊದಲು ಜೀವನದಲ್ಲಿ ಒತ್ತಡ ಇರಲಿಲ್ಲವೆಂದಲ್ಲ. ಆದರೆ ಆಗ ಕುಟುಂಬದಲ್ಲಿ ಎಲ್ಲರೂ ಒಂದೆಡೆ ಕುಳಿತು ತಮ್ಮ ಸುಖದುಃಖ ಹಂಚಿಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕುಟುಂಬಗಳು ಚಿಕ್ಕದಾಗುತ್ತ ಹೊರಟಂತೆ ಬಹಳಷ್ಟು ಜನರಿಗೆ ಏಕಾಂಗಿತನ ಕಾಡುತ್ತದೆ. ಅದರಿಂದಾಗಿ ಮದ್ಯ ಅವರ ನಡುವೆ ಸ್ಥಿರ ಪಡೆದುಕೊಳ್ಳುತ್ತಿದೆ.