ಆಕಸ್ಮಿಕವಾಗಿ ಶಾಪಿಂಗ್ ಮಾಲ್ ನಲ್ಲಿ ಒಬ್ಬ ಆಕರ್ಷಕ ತರುಣನಿಗೆ ತನ್ನ ಮನ ತೆತ್ತ ಮನ್ವಿತಾ, ಎಷ್ಟು ದಿನಗಳಾದರೂ ಅವನನ್ನು ಮರೆಯಲಾರದೆ ಹೋದಳು. ಅವನದೇ ಗುಂಗಿನಲ್ಲಿ ಬೇಸರದಲ್ಲಿದ್ದ ಇವಳನ್ನು, ಅತ್ತೆ ರಾಜಶ್ರೀ ವಿಚಾರಿಸಿದಾಗ, ಹೆಚ್ಚಿಗೆ ಏನೂ ಹೇಳದಾದಳು. ಆಗ ಅತ್ತೆ ತಾನೇಕೆ ಒಂಟಿಯಾಗಿ ಉಳಿದಿದ್ದೇನೆ ಎಂಬ ದುಃಖವನ್ನು ವಿವರಿಸಿ ಅವಳೂ ತನ್ನಂತೆ ಆಗಬಾರದೆಂದು ಆಶಿಸಿದರು. ಮುಂದೆ ಮನ್ವಿತಾಳ ಭವಿಷ್ಯ ಯಾವ ಕಡೆ ತಿರುಗಿತು......?
ನನ್ನ ಅಜ್ಜಿ ಹೇಳುತ್ತಿದ್ದ ಏಳು ಸುತ್ತಿನ ಕೋಟೆಯೊಳಗಣ ರಾಜಕುಮಾರಿ, ಅವಳನ್ನು ವರಿಸಲು ಬರುವ ರಾಜಕುಮಾರ, ಆಂಗ್ಲರ ಸ್ನೋ ಲೈಟ್, ಸಿಂಡ್ರೆಲ್ಲಾ ಅಲ್ಲದೆ ನಾನು ನನ್ನ ಹರೆಯದಲ್ಲಿ ಓದಿದ್ದ ಆರ್ಚಿಸ್ ಬೆಟರ್ ದ್ಯಾನ್ ಮೂವೀಸ್ ವೀಕ್ಷಿಸುತ್ತಿದ್ದ ಹದಿ ಹರೆಯದರ ಶೋಗಳು ನನ್ನ ಮನದಾಳದಲ್ಲಿ ಇನ್ನೂ ಜೀವಂತವಾಗಿರುವುದಂತೂ ಸತ್ಯ.
ಅಂದಿನ ಆ ಮಧುರ ಸ್ಮೃತಿ ನನ್ನ ಅಂತರಾಳದಲ್ಲಿ ಹುದುಗಿದೆ. ಇದುವರೆವಿಗೂ ನನ್ನ ನೋಡಲು ಬಂದಿದ್ದ ಆ ಹುಡುಗರು ಯಾರೂ ನನ್ನ ಅಂತರಂಗವನ್ನು ಬಗೆದು ನೋಡುವ ಪ್ರಯತ್ನ ಮಾಡಿರಲೇ ಇಲ್ಲ. ಅವರೆಲ್ಲ ವಿಚಾರಿಸಿದ್ದು ಬರೇ ನನ್ನ ವಿದ್ಯಾಭ್ಯಾಸ. ನಾನು ಮಾಡುತ್ತಿರುವ ಕೆಲಸ, ಮುಂದಿನ ಗುರಿ. ಅವರೇನಾದರೂ ವಿದೇಶಕ್ಕೆ ಹೋದ ಪಕ್ಷದಲ್ಲಿ ನಾನು ಅಲ್ಲಿ ದುಡಿಯಬೇಕೆಂಬ ಕರಾರು. ಅಲ್ಲಿನ ಸಿಟಿಝನ್ ಶಿಪ್, ಅಲ್ಲಿ ಲಿವಿಂಗ್ ಸೆಲ್, ನನ್ನ ಹಾಬೀಸ್. ಬರೇ ಅಸಂಬದ್ಧ ಪ್ರಶ್ನೆಗಳು. ಒಂದು ಕ್ಷಣ ಥತ್ ಎನಿಸಿದ್ದರೂ ನಗುವಿನ ಮುಖವಾಡ ಧರಿಸಿ ಸುಮ್ಮನಿರಬೇಕಾದ್ದು ನನಗೆ ಅನಿವಾರ್ಯವೇ ಆಗಿತ್ತು. ನಾನೀಗ ಇಪ್ಪತ್ತೈದರ ತರುಣಿ. ಇದುವರೆವಿಗೂ ಪುಸ್ತಕ ಹಿಡಿದು ಬರೇ ಓದು.... ಓದು.... ಎಂದು ಎಲ್ಲರಿಂದ ಬುಕ್ ವರ್ವ್ ಎಂದು ಕರೆಯಿಸಿಕೊಂಡು ಕ್ಯಾಂಪಸ್ ಸೆಲಕ್ಷನ್ನಿನಲ್ಲಿ ಒಳ್ಳೆಯ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿರುವುದೂ ಸತ್ಯವೇ. ಆದರೆ ಹಾಗೆಂದು ನನ್ನಲ್ಲಿ ಪ್ರೇಮದ ಭಾವನೆಗಳು ಇಲ್ಲಿಂದು ಅರ್ಥವಲ್ಲ. ನಾನೂ ಅನೇಕ ಕಾದಂಬರಿಗಳನ್ನೂ ಓದಿದ್ದೇನೆ. ರಾಧೆಯ ಪ್ರೀತಿ, ಕೃಷ್ಣನ ಪ್ರೇಮ, ರೋಮಿೂಯೋ ಜೂಲಿಯೇಟ್, ಹೀರ್ ರಾಂಜರಂತಹ ಅದೆಷ್ಟೋ ಪ್ರೇಮಕಥೆಗಳಲ್ಲಿ ನಾನೇ ನಾಯಕಿಯಾಗಿ ನನ್ನ ಕಲ್ಪನಾ ಲೋಕದಲ್ಲಿ ವಿಹರಿಸಿದ್ದುಂಟು.
ಆದರೆ ಇದನ್ನೆಲ್ಲ ನನ್ನ ಹೆತ್ತರಿಗೆ ಹೇಗೆ ತಿಳಿಸಲಿ? ಅವರ ದೃಷ್ಟಿಯಲ್ಲಿ ಬಂದಿದ್ದವರೆಲ್ಲರೂ ನನಗೆ ಸರಿ ಜೋಡಿ ಆಗುವಂಥವರೇ. ಆದರೇನು ಮಾಡಲಿ? ಇದೆಲ್ಲವನ್ನೂ ಬಿಟ್ಟು ಇನ್ನೊಂದು ಲೋಕವಿದೆ. ಅಲ್ಲಿ ನನ್ನ ನಾಯಕನಾಗಿ ವಿಹರಿಸಬಲ್ಲ ಯಾವ ಹುಡುಗನೂ ಸಿಕ್ಕಿಲ್ಲ. ಇದು ನನ್ನ ತಪ್ಪಲ್ಲವೆಂದು ಯಾರೂ ತಿಳಿಯುವುದೇ ಇಲ್ಲ. ಈ ನನ್ನ ಮನದ ಭಾವನೆಯನ್ನು ನನ್ನ ಗೆಳೆತಿಯರೊಡನೆ ಹಂಚಿಕೊಳ್ಳಲೂ ಯಾಕೋ ಮನಸ್ಸಾಗುತ್ತಿಲ್ಲ. ಅವರೆಲ್ಲಿ ನನ್ನನ್ನು ಗೇಲಿ ಮಾಡಿ ನಗುತ್ತಾರೋ ಎಂಬ ಭಯ. ಎಲ್ಲೋ ನನ್ನೊಳಗಿನಿಂದ ಕೇಳಿ ಬರುತ್ತಿರುವ ಆ ಧ್ವನಿ, ಅದು ಇತ್ತೀಚೆಗೆ ನನ್ನನ್ನು ಬಹಳವಾಗಿ ಕಾಡುತ್ತಿದೆ. ಹೌದು ಇದು ಅವನದೇ ಧ್ವನಿ.
ಓಹ್.... ನನ್ನ ಅವನ ಪರಿಚಯ, ಹೌದು ಅದು ಬರೇ ಐದು ಗಂಟೆಗಳ ಕಾಲದ್ದು. ಅವನಾರೋ ಏನೋ.... ಆದರೆ ಅವನು ಬಲು ಜಾಣ ಎನ್ನುವುದಂತೂ ಸತ್ಯ. ಅವನೊಂದಿಗೆ ಕಳೆದ ಐದು ಗಂಟೆಗಳ ಕಾಲದ ಭೇಟಿಯಲ್ಲಿ ತನ್ನ ಬಗ್ಗೆ ಏನೊಂದೂ ಹೇಳಿಕೊಂಡಿರಲಿಲ್ಲ. ನಮ್ಮ ನಂಬರ್ ಗಳ ವಿನಿಮಯವಾಗಲೀ ಯಾವುದೂ ಆಗಿರಲಿಲ್ಲ. ನಾನಾದರೂ ಏನು ಕಮ್ಮಿ? ನಾನೂ ನನ್ನ ಬಗ್ಗೆ ಏನೂ ಹೇಳಿರಲಿಲ್ಲ. ಹೌದು ಈಗ ಅನಿಸುತ್ತಿದೆ, ಕೊನೆಯ ಪಕ್ಷ ಅವನ ಮೊಬೈಲ್ ನಂಬರನ್ನಾದರೂ ಕೇಳಿ ತಿಳಿದುಕೊಳ್ಳಬಹುದಿತ್ತು. ಇದು ನನ್ನೊಬ್ಬಳ ಅನಿಸಿಕೆಯೋ ಅಥವಾ ಅವನಿಗೂ ಹಾಗೇ ಅನಿಸಿರಬರಹುದೇ? ಅದೆಷ್ಟು ಅನಿರೀಕ್ಷಿತ ನನ್ನ ಅವನ ಭೇಟಿ. ನಾನಂದು ಶಾಪಿಂಗೆಂದು ಮೀನಾಕ್ಷಿ ಮಾಲ್ ಗೆ ಹೋಗಬೇಕಿತ್ತು. ಜೊತೆಗೆ ಬರುತ್ತೇನೆ ಎಂದಿದ್ದ ರಜನಿ, ಅವಳಮ್ಮನಿಗೆ ಹುಷಾರು ತಪ್ಪಿದೆ ಎಂದು ಬರಲಾಗಿರಲಿಲ್ಲ.





