ಹಳೆಯ ಕಾಲದ ಕಂದಾಚಾರದಂತೆ, ಮಗಳಿಗಿಂತ ಮಗನೇ ಬಲು ಮುಖ್ಯ ಎಂದು ಸುಜಾತಾ ವಿನೋದ್ ತಮ್ಮ ಮಕ್ಕಳಲ್ಲಿ ಭೇದ ಭಾವ ತೋರಿದ್ದರು. ಮುಂದೆ ವಯಸ್ಸಾದ ಕಾಲಕ್ಕೆ ಇವರಿಗೆ ನಿಜವಾಗಿಯೂ ಆಸರೆಯಾಗಿ ನಿಂತವರು ಯಾರು.....?
ವಿನೋದ್ ದೊಡ್ಡ ಸಿಟಿಯಲ್ಲಿ ದೊಡ್ಡ ಬಿಸ್ ನೆಸ್ ಮ್ಯಾನ್. ವಿನೋದ್ ರ ಮಡದಿ ಸುಜಾತಾ ಗೃಹಿಣಿ. ವಿನೋದ್ ದಂಪತಿಗೆ ಆಯುಷ್ ಮತ್ತು ಅನೂಷಾ ಇಬ್ಬರು ಮಕ್ಕಳು.
ಆಯುಷ್ ಗಂಡು ಮಗ ಎಂಬ ಕಾರಣಕ್ಕಾಗಿ, ವಿನೋದ್ ಮತ್ತು ಸುಜಾತಾ ದಂಪತಿಗೆ ಅವನೆಂದರೆ ಅಚ್ಚುಮುಚ್ಚು. ಅವನು ಕೇಳುವ ಬಟ್ಟೆ, ಆಟಿಕೆಗಳನ್ನು ಅವನು ಕೇಳಿದ ಒಂದು ದಿನದೊಳಗೆ ಕೊಡಿಸುತ್ತಿದ್ದನು. ಇತ್ತೀಚೆಗೆ ಸ್ಕೂಟಿ ಬೇಕೆಂದು ಕೇಳಿದ್ದೇ ತಡ ಅದನ್ನೂ ಕೊಡಿಸಿದ್ದರು. ಆಯುಷ್ ಓದಿನಲ್ಲಿ ಸಾಧಾರಣ ಬುದ್ಧಿವಂತನಾಗಿದ್ದ ಅಷ್ಟೇ! ಮೊಬೈಲ್ ಮತ್ತು ಸ್ನೇಹಿತರ ಜೊತೆ ಮೋಜು, ಮಸ್ತಿ. ಹಾಗಾಗಿ ಇತರ ವಿಷಯಗಳ ಬಗ್ಗೆ ಅವನಿಗೆ ಹೆಚ್ಚು ಆಸಕ್ತಿ ಇತ್ತು. ಆದರೆ ಮಗಳು ಅನೂಷಾ ವಿಷಯದಲ್ಲಿ ತಾಯಿ ತಂದೆ ಹೆಚ್ಚಿನ ಶಿಸ್ತು ಹೇರುತ್ತಿದ್ದರು. ಎಲ್ಲಾ ವಿಷಯಗಳ ಬಗ್ಗೆಯೂ ಅವಳಿಗೆ ನಿರ್ಬಂಧ, ಕಟ್ಟುಪಾಡುಗಳು. ಅವಳು ಜೀನ್ಸ್ ಪ್ಯಾಂಟ್, ಸ್ಲೀವ್ ಲೆಸ್ ತೊಡುವ ಹಾಗಿಲ್ಲ, ಸಂಜೆ 6 ಗಂಟೆಯ ನಂತರ ಸ್ನೇಹಿತರ ಮನೆಗಾಗಲಿ, ಹೊರಗೆ ಸುತ್ತಾಡಲಾಗಲಿ ಹೋಗುವಂತಿರಲಿಲ್ಲ. ಹೆಣ್ಣು ಮಗಳು ಮುಂದೆ ತಮ್ಮನ್ನು ಸಾಕುವುದಿಲ್ಲ, ಮದುವೆಯಾಗಿ ಯಾರದೋ ಮನೆ ಸೇರುವವಳು ಎಂಬ ಕಾರಣಕ್ಕಾಗಿ ತಾಯಿ ತಂದೆ ಅವಳಿಗೆ ಕೆಲವೇ ಕೆಲವು ಬಟ್ಟೆಗಳನ್ನು ಕೊಡಿಸುತ್ತಿದ್ದರು. ಅವಳ ಅಣ್ಣ ಉಪಯೋಗಿಸಿದ ಪಠ್ಯ ಪುಸ್ತಕಗಳು, ಪೆನ್ನು, ರಬ್ಬರ್, ಮೆಂಡರ್, ಆಟಿಕೆಗಳನ್ನೇ ಅನೂಷಾ ಉಪಯೋಗಿಸಬೇಕಿತ್ತು. ಪಠ್ಯಕ್ಕೆ ಸಂಬಂಧಿಸಿದ ಹೊಸ ವಸ್ತುಗಳು, ಆಟಿಕೆಗಳು ಅವಳ ಪಾಲಿಗೆ ಕನಸಷ್ಟೆ. ಮನೆಗೆ ತರುತ್ತಿದ್ದ ತಿಂಡಿ, ಹಣ್ಣು ಹಂಪಲುಗಳಲ್ಲಿ ಮಗ ಆಯುಷ್ ಗೆ ಸಿಂಹಪಾಲು. ಅನೂಷಾಳಿಗೆ ಸಣ್ಣ ಪಾಲು ಸಿಗುತ್ತಿತ್ತು. ಅವಳು ಹೆಣ್ಣೆಂಬ ಕಾರಣಕ್ಕೆ ಈ ತಾರತಮ್ಯ.
ಆಯುಷ್ ಪಿಯುಸಿಯಲ್ಲಿ ವಿಜ್ಞಾನ ಆಯ್ದುಕೊಂಡು, ದೊಡ್ಡ ಎಂಜಿನಿಯರ್ ಆಗಬೇಕು ಎನ್ನುವುದು ಅವನ ತಾಯಿ ತಂದೆಯ ಕನಸಾಗಿತ್ತು. ಹಾಗಾಗಿ ಹತ್ತನೇ ತರಗತಿಯ ನಂತರ, ಅವನನ್ನು ಕಾಲೇಜಿಗೆ ಸೇರಿಸುವಾಗ ವಿಜ್ಞಾನ ವಿಭಾಗಕ್ಕೆ ಸೇರಿಸಿದರು. ಆಯುಷ್ ಮೋಜು, ಮಜಾ, ಮಸ್ತಿ ಮಾಡುತ್ತಾ ದ್ವಿತೀಯ ಪಿಯುಸಿಯಲ್ಲಿ ಎರಡನೇ ದರ್ಜೆಯಲ್ಲಿ ಪಾಸು ಮಾಡಿದ. ವಿನೋದ್ ದಂಪತಿ ಮಗನನ್ನು ಪೇಮೆಂಟ್ ಸೀಟ್ ನಲ್ಲಿ ಎಂಜಿನಿಯರಿಂಗ್ ಗೆ ಸೇರಿಸಿದರು.
ಆಯುಷ್ ಗಿಂತ ಎರಡು ವರ್ಷ ಚಿಕ್ಕವಳಾದ ಅನೂಷಾ, ಕಾಲೇಜಿಗೆ ಸೇರುವಾಗ ವಿಜ್ಞಾನ ವಿಭಾಗಕ್ಕೆ ಸೇರಿ ಮುಂದೆ ಡಾಕ್ಟರ್ ಆಗಲು ಬಯಸಿದಳು. ಆದರೆ ತಾಯಿ ತಂದೆ ಅವಳನ್ನು ಕಾಮರ್ಸ್ ಗೆ ಸೇರಿಸಿದರು. ದ್ವಿತೀಯ ಪಿಯುಸಿಯಲ್ಲಿ ಅನೂಷಾ ಕಾಲೇಜಿಗೆ ಮೊದಲಿಗಳಾಗಿ ತೇರ್ಗಡೆ ಹೊಂದಿದಳು. ಬಿ.ಕಾಂ. ಅಂತಿಮ ವರ್ಷದಲ್ಲಿ ಕಾಲೇಜಿಗೆ ಎರಡನೆಯವಳಾಗಿ ಒಳ್ಳೆಯ ಅಂಕಗಳೊಂದಿಗೆ ಡಿಗ್ರಿ ಮುಗಿಸಿದಳು. ನಂತರ ಅವಳು ಸಿ.ಎ ಮಾಡಲು ಬಹಳ ಇಷ್ಟಪಟ್ಟಳು. ಆದರೆ ತಾಯಿ ತಂದೆಗೆ ಅನೂಷಾ ಹೆಣ್ಣು ಮಗಳು ಸುಮ್ಮನೆ ತಮ್ಮ ದುಡ್ಡು ಖರ್ಚಾಗುತ್ತದೆ ಎಂಬ ಕಾರಣಕ್ಕೆ ಅವಳನ್ನು ಸಿ.ಎ. ಓದಿಸಲು ಒಪ್ಪಲೇ ಇಲ್ಲ. ತನ್ನ ತಾಯಿ, ತಂದೆ ತನ್ನನ್ನು ಸಿ.ಎ ಓದಿಸಲು ಒಪ್ಪಿಸುವಂತೆ ಅನೂಷಾ, ಕಾಲೇಜಿನ ತನ್ನ ನೆಚ್ಚಿನ ಉಪಾಧ್ಯಾಯಿನಿಯಾದ ಉಮಾರನ್ನು ಕೇಳಿಕೊಂಡಳು.





