ನಿಮ್ಮ ಪ್ರೇಮಿ ಜೊತೆ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇದಕ್ಕಾಗಿ ಯಾವ ಸಲಹೆಗಳನ್ನು ಅನುಸರಿಸಿದರೆ ನಿಮ್ಮ ಹಿತದೃಷ್ಟಿಯಿಂದ ಪೂರಕ……?
ಹುಡುಗ ಹುಡುಗಿ ಪರಿಚಯದ ನಂತರ, ಗಾಢ ಸ್ನೇಹ ಬೆಳೆಸಿಕೊಳ್ಳುವುದು ಸಹಜ. ಇಬ್ಬರಲ್ಲೂ ಇವರು ಸಮಾನ ಗುಣಗಳನ್ನು ಗ್ರಹಿಸಿ, ಪರಸ್ಪರ ಆಕರ್ಷಿತರಾಗುತ್ತಾರೆ. ಈ ಪ್ರೇಮ ಬೆಳೆಯುತ್ತಿದ್ದಂತೆ ಇಬ್ಬರೂ ಡೇಟಿಂಗ್ ಹೊರಡಬೇಕೆಂಬ ಉತ್ಸಾಹ ಬೆಳೆಸಿಕೊಳ್ಳುತ್ತಾರೆ. ತಮ್ಮ ಒಲವಿನ ಬಾಂಧವ್ಯವನ್ನು ಈ ಮೂಲಕ ಸದೃಢಗೊಳಿಸಲು ಬಯಸುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಹುಡುಗ ಈ ಬೇಡಿಕೆಯನ್ನು ಪದೇ ಪದೇ ಮುಂದಿಡುತ್ತಾನೆ, ಆದರೆ ಹಲವಾರು ಅನಿವಾರ್ಯ ಕಾರಣಗಳಿಂದ ಹುಡುಗಿ ಅದನ್ನು ಮುಂದೂಡುತ್ತಾ ಇರುತ್ತಾಳೆ. ಹಾಗೆಂದು ಒಮ್ಮೆಲೇ ಹುಡುಗನ ಮನಸ್ಸು ಮುರಿಯಲು ಅವಳಿಗೂ ಹಿತ ಎನಿಸುವುದಿಲ್ಲ. ತನ್ನ ಕುರಿತಾದ ಆತಂಕ ಅಳಿಗೆ ಇದ್ದೇ ಇರುತ್ತದೆ. ಏನೇ ಆಗಲಿ, ಡೇಟಿಂಗ್ ಹೊರಡುವುದು ಅನಿವಾರ್ಯವಾದಾಗ ಹೆಣ್ಣು ವಹಿಸಬೇಕಾದ ಎಚ್ಚರಿಕೆಗಳ ಕುರಿತು ಗಮನಿಸೋಣವೇ?
ಮುಖಾಮುಖಿಯಾಗಿ ನೇರ ಮಾತನಾಡಿ : ಸಂಗಾತಿ ಜೊತೆ ನೀವು ಎದುರುಬದುರಾಗಿ ಕುಳಿತು, ನೇರವಾಗಿ ಮಾತನಾಡಿ, ಡೇಟಿಂಗ್ ನ ಸಾಧಕ ಬಾಧಕಗಳ ಕುರಿತು ಚರ್ಚಿಸಿ. ಇದರಿಂದಾಗಿ ಇಬ್ಬರಲ್ಲೂ ತಪ್ಪು ಗ್ರಹಿಕೆಗಳು ದೂರವಾಗುತ್ತವೆ. ಫೋನ್ ಮಾಡಿ ಅಥವಾ ಮೆಸೇಜ್ ಕಳುಹಿಸಿ, ಅನಿವಾರ್ಯ ಕಾರಣದಿಂದ ಅಂದು ಡೇಟಿಂಗ್ ಆಗುತ್ತಿಲ್ಲ ಎಂದು ಹೇಳುವ ಬದಲು, ಎದುರೆದುರಿಗೆ ಕ್ಲಿಯರ್ ಆಗಿ ಮಾತನಾಡಿ, ಆ ವಿಷಯದ ಇತ್ಯರ್ಥ ಮಾಡಿಕೊಳ್ಳಿ. ಯಾ ಅಸಲಿ ಕಾರಣದಿಂದ ಅಂದು ಡೇಟಿಂಗ್ ಮುಂದೂಡಲ್ಪಟ್ಟಿದೆ ಎಂಬುದನ್ನು ಪ್ರಾಮಾಣಿಕವಾಗಿ ಪ್ರಸ್ತಾಪಿಸಿ.
ನಿಂದನೆಯ ಮಾತು ಬೇಡ : ಈ ರೀತಿ ಡೇಟಿಂಗ್ ನಿಂದ ಹುಡುಗಿಯ ಮನೆಯಲ್ಲಿ ಅವಾಂತರವಾಗಿ, ಅನಿವಾರ್ಯವಾಗಿ ಬ್ರೇಕ್ ಅಪ್ ಮಾಡಿಕೊಳ್ಳಬೇಕಾದಾಗ, ನೀವು ಪ್ರೇಮಿಯ ಕುಂದುಕೊರತೆಗಳ ಪಟ್ಟಿ ಮಾಡುವ ಬದಲು, ನೀವು ಆತನ/ಆಕೆಯ ಭಾವನೆಗಳನ್ನು ಗೌರವಾದರಿಸುತ್ತಾ, ಆ ರಿಲೇಶನ್ ಮುಂದುವರಿಸಲಾಗದು ಎಂದು ಸೂಕ್ಷ್ಮವಾಗಿ ಸೂಚಿಸಿ.
ಗೆಳೆತನ ಮುಂದುವರಿಸುವ ಪ್ರಸ್ತಾಪ : ಅದೇ ರೀತಿ ಹುಡುಗಿಯರು ಡೇಟಿಂಗ್ ನೆಪದಲ್ಲಿ ಹುಡುಗರನ್ನು ಸುಲಿಯುವುದೂ ಬೇಡ. ಸಿಕ್ಕಿದ್ದೇ ಅವಕಾಶ ಎಂದು ಆ ದಿನ ಬೆಳಗ್ಗಿನಿಂದ ಸಂಜೆವರೆಗೂ ಖರ್ಚು ಮಾಡಿಸುವುದಲ್ಲದೆ, ಶಾಪಿಂಗ್ ನೆಪದಲ್ಲಿ ಸಿಕ್ಕಾಪಟ್ಟೆ ಬ್ಯಾಗ್ ತುಂಬಿಸಿಕೊಳ್ಳಬಾರದು. ಇದರಿಂದ ಮುಂದೆ ಹತಾಶನಾದ ಹುಡುಗ ಬ್ರೇಕ್ ಅಪ್ ಗೆ ಶರಣಾಗಬಹುದು. ಆಗ ಉತ್ತಮ ಗೆಳೆತನ ಮುಂದುವರಿಸುವ ಮಾತನಾಡಿ. ಹೀಗೆ ಮಾಡುವುದರಿಂದ ಅವನ ಭಾವನೆಗಳಿಗೂ ಪೆಟ್ಟಾಗದು. ನಿಮಗೆ ಒಬ್ಬ ಉತ್ತಮ ಗೆಳೆಯನ ಸಹವಾಸ ಮುಂದುವರಿಸಬಹುದಾಗಿದೆ. ಇಂಥ ಸಂಬಂಧ ಕೇವಲ ರೊಮ್ಯಾಂಟಿಕ್ ಆಗಿಯೇ ಇರಬೇಕು ಎಂದೇನಿಲ್ಲ, ಅದು ಭಾವನಾತ್ಮಕ ಆಗಬಹುದು.
ಮೂರನೆಯವರ ಮೂಗು ತೂರಿಸುವಿಕೆ ಬೇಡ : ಇಬ್ಬರು ಸಮಾನಮನಸ್ಕರ ಗುಣಗಳಿಂದಾಗಿ ಸ್ನೇಹ ಹೀಗೆ ಪ್ರೇಮವಾಗಿ ಮಾರ್ಪಟ್ಟ ನಂತರ, ಇದರಲ್ಲಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ಇಬ್ಬರಿಗೂ ಕಾಮನ್ ಫ್ರೆಂಡ್ ಕಾಯುತ್ತಿರುತ್ತಾರೆ. ನಿಮ್ಮಿಬ್ಬರ ಸಂಬಂಧದಲ್ಲಿ ಹುಳಿ ಹಿಂಡಲು ಅವರಿಗೆ ಅವಕಾಶ ಕೊಡಬೇಡಿ. ಅಂಥವರ ಕಾರಣ ನೀವು ಬ್ರೇಕ್ ಅಪ್ ಮಾಡಿಕೊಳ್ಳಬೇಕಾದಾಗ, ಅವರು ಬಂದು ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ. ಇದರಿಂದಾಗಿ ನಿಮ್ಮಿಬ್ಬರಲ್ಲಿ ಒಬ್ಬರಿಗೆ ತೀವ್ರ ದುಃಖ ಆಗುವುದಂತೂ ಖಂಡಿತ. ಈ ವಿಷಯ ಇಂದಿನ ಟೀನೇಜರ್ಸ್ ಗೆ ಬಹಳ ಹತ್ತಿರವಾಗಿದ್ದು, ಇದರಿಂದ ಹಲವು ಜೋಡಿಗಳು ಬೇರ್ಪಡುವ ಸಂಭವ ಇರುತ್ತದೆ.
ಹುಡುಗಾಟ ಸಲ್ಲದು : ಟೀನೇಜರ್ಸ್ ಗಮನಿಸಬೇಕಾದ ಮತ್ತೊಂದು ವಿಷಯ, ಯಾವುದೋ ಕಾರಣದಿಂದ ಪ್ರೀತಿಯಿಂದ ಬೇರ್ಪಡಬೇಕಾದಾಗ, ಆತನ/ಆಕೆಯ ಭಾವನೆಗಳೊಂದಿಗೆ ಹುಡುಗಾಟ ಬೇಡ. ಎಷ್ಟೋ ಸಲ ಇಬ್ಬರಲ್ಲಿ ಒಬ್ಬರಿಗೆ ಹೇಳಿದ ದಿನ ಡೇಟಿಂಗ್ ಹೊರಡಲಾಗದು ಅಥವಾ ಅವರಿಗೆ ಡೇಟಿಂಗ್ ಕಾನ್ಸೆಪ್ಟ್ ಇಷ್ಟವಿಲ್ಲ ಎಂದಾಗ, ಹಠ ಹಿಡಿದು ಒಪ್ಪಿಸಲು ಯತ್ನಿಸಬೇಡಿ. ಇದು ವ್ಯರ್ಥವಾಗಿ ಹಣ ಖರ್ಚು ಮಾಡಲು ಮಾರ್ಗ ಆಗಬಾರದು. ಹೀಗಾಗಿ ಯಾರೇ ಡೇಟಿಂಗ್ ನಿರಾಕರಿಸಿದರೂ ಅವನ/ಅವಳ ಸಂಗಾತಿ ಅದನ್ನು ಅರ್ಥ ಮಾಡಿಕೊಳ್ಳಬೇಕು. ಅದರ ಕೋಪತಾಪಗಳು ಬ್ರೇಕ್ ಅಪ್ ಗೆ ದಾರಿ ಆಗಬಾರದು.
– ಎನ್. ದೀಪಿಕಾ





