ಜ್ಯೋತಿಬಾ ಫುಲೆ.. 19ನೇ ಶತಮಾನದಲ್ಲಿ ಆಧುನಿಕ ಮಹಾರಾಷ್ಟ್ರದ ಸಾಮಾಜಿಕ ಕ್ರಾಂತಿಯ ಮೂಲಪುರುಷ. ಸಾಮಾಜಿಕ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ, ಧೀನ, ದಲಿತ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವಿರತವಾಗಿ ದುಡಿದ ಮಹಾನ್ ಚೇತನ. ಸಾಮಾನ್ಯ ಜನ ಢಾಂಬಿಕ ಧರ್ಮ, ಪಂಥ, ಸಂಪ್ರದಾಯಗಳಿಗೆ ಮರುಳಾಗದೆ, ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಅಪೇಕ್ಷಿಸಿದವರು. ಸದ್ಯ ಬಾಲಿವುಡ್ ಅಂಗಳದಲ್ಲಿ ಇವರ ಕುರಿತ ಬಯೋಪಿಕ್ ಒಂದು ತಯಾರಾಗಿದೆ. ಅದೇ ಫುಲೆ.

ಫುಲೆ ಅವರ 197ನೇ ಜನ್ಮ ವರ್ಷಾಚರಣೆ ಹಿನ್ನೆಲೆ ಈ ಸಿನಿಮಾ ರಿಲೀಸ್ ಮಾಡಬೇಕು ಅಂತ ಅನಂತ್ ಮಹಾದೇವನ್ ಈ ಸಿನಿಮಾ ನಿರ್ದೇಶಿಸಿದ್ದರು. ಸೆನ್ಸಾರ್​ನಿಂದ ಯು ಸರ್ಟಿಫಿಕೇಟ್ ಕೂಡ ದೊರೆತಿತ್ತು. ಆದರೀಗ ಬ್ರಾಹ್ಮಣ ಸಮುದಾಯದಿಂದ ಈ ಸಿನಿಮಾದ ರಿಲೀಸ್​​ಗೆ ಅಡಚಣೆ ಆಗುತ್ತಿದೆ. ಕೆಲವೊಂದು ಬದಲಾವಣೆಗಳನ್ನ ಮಾಡದ ಹೊರತು ಸಿನಿಮಾ ರಿಲೀಸ್ ಮಾಡುವಂತಿಲ್ಲ ಎನ್ನಲಾಗಿದೆ. ಹೀಗಾಗಿ ಏಪ್ರಿಲ್ 11ಕ್ಕೆ ತೆರೆ ಕಾಣಬೇಕಿದ್ದ ಈ ಸಿನಿಮಾ ಏಪ್ರಿಲ್ 25ಕ್ಕೆ ಪೋಸ್ಟ್​ಪೋನ್ ಆಗಿದೆ.

ಬ್ರಾಹ್ಮಣ ಸಮುದಾಯದ ಮುಖಂಡರು, ಮಾಂಗ್, ಮಹರ್, ಪೇಶ್ವೆ, ಮೂರು ಸಾವಿರ ವರ್ಷಗಳ ಗುಲಾಮಿ ಅನ್ನೋ ವಾಕ್ಯ ಹಲವು ವರ್ಷಗಳ ಗುಲಾಮಿ ಎಂದು ಬದಲಿಸಲು ಸೂಚಿಸಿದ್ದರು. ಸ್ಕ್ಯಾಮ್ 1992 ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರೋ ಪ್ರತೀಕ್ ಗಾಂಧಿ ಅವರು ಫುಲೆ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಟ್ರೈಲರ್ ನೋಡಿ ಸಿನಿಮಾನ ಡಿಸೈಡ್ ಮಾಡಬೇಡಿ. ನೀವು ನೋಡಿದ ವಿಷಯಗಳು ಚಿತ್ರದಲ್ಲಿ ಈಗ ಇಲ್ಲ, ರಿಲೀಸ್​​ಗೆ  ಅನುವು ಮಾಡಿಕೊಡಿ ಅಂತ ಬ್ರಾಹ್ಮಣ ಸಮುದಾಯದ ಮುಖಂಡರ ಬಳಿ ಕೋರಿದ್ದಾರೆ ಪ್ರತೀಕ್ ಗಾಂಧಿ.

ಈ ವಿಷಯ ಇದೀಗ ಬಾಲಿವುಡ್ ಅಂಗಳದಲ್ಲಿ ತೀವ್ರ ಚರ್ಚೆಗಳಾಗುತ್ತಿದ್ದು, ಖ್ಯಾತ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಸೆನ್ಸಾರ್ ಶಿಪ್​ನಿಂದ ಇನ್ನೂ ಎಷ್ಟು ಸಿನಿಮಾಗಳನ್ನ ಬಾಯಿ ಮುಚ್ಚಿಸಬೇಕೆಂದಿದ್ದೀರಿ ಅಂತ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಿನಿಮಾಗಳು ಸಮಾಜದ ಕನ್ನಡಿ, ಅಲ್ಲಿನ ಸತ್ಯಗಳು ಹೊರಬರಬೇಕು ಅಂದ್ರೆ ಸಿನಿಮಾಗಳಿಂದ ಮಾತ್ರ ಸಾಧ್ಯ. ಆದ್ರೆ ಅವುಗಳಿಗೆ ಕಡಿವಾಣ ಹಾಕ್ತಿರೋ ನಿಮ್ಮಗಳಿಗೆ ನಾಚಿಕೆ ಆಗ್ಬೇಕು ಅಂತ ಸೋಶಿಯಲ್ ಮೀಡಿಯಾ ಮೂಲಕ ಜಾಡಿಸಿದ್ದಾರೆ.

ಪಂಜಾಬ್ 95, ಟೀಸ್, ಧಡಕ್-2 ಸಾಲಿಗೆ ಫುಲೆ ಕೂಡ ಸೇರಿಕೊಳ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿರೋ ಅನುರಾಗ್ ಕಶ್ಯಪ್, ಚಿತ್ರತಂಡದ ಪರ ನಿಂತಿದ್ದಾರೆ. ಅಂದಹಾಗೆ ಬಾಲಿವುಡ್ ಮೇಲೆ ಅಸಾಮಾಧನಗೊಂಡಿರೋ ಅನುರಾಗ್ ಕಶ್ಯಪ್, ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಕನ್ನಡದಲ್ಲೂ ಸಿನಿಮಾ ಮಾಡ್ತಿರೋ ಕಶ್ಯಪ್, ಸೌತ್ ಸಿನಿಮಾಗಳ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ತಮಿಳು, ತೆಲುಗಿನಲ್ಲೂ ಕೂಡ ಅವರು ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇನೇ ಇರಲಿ, ಫುಲೆ ಸಿನಿಮಾ ಎಲ್ಲಾ ಅಡೆತಡೆಗಳನ್ನ ಮೆಟ್ಟಿ ರಿಲೀಸ್ ಆದಲ್ಲಿ ಆ ಚಿತ್ರದ ಮೂಲ ಉದ್ದೇಶ ಸಾರ್ಥಕವಾದಂತಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ