– ರಾಘವೇಂದ್ರ ಅಡಿಗ ಎಚ್ಚೆನ್.
”ಅಪ್ಪಾಜಿ ಅವರು ತಮ್ಮ ಬಯಕೆಯಂತೆ ಸಾಕಷ್ಟು ಸದೃಢರಾಗಿದ್ದ ಸಮಯದಲ್ಲಿಯೇ ನಮ್ಮನ್ನೆಲ್ಲ ಅಗಲಿದರು. ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ಅವರು ತಮ್ಮನ್ನು ವಯೋವೃದ್ಧರಾಗಿ, ಗಾಲಿ ಖುರ್ಚಿಯಲ್ಲಿ ನೋಡುವ ಪರಿಸ್ಥಿತಿ ಬರಬಾರದು ಎಂದುಕೊಂಡಿದ್ದರು. ತಮ್ಮ ಇಚ್ಛೆಯಂತೆ ಸಾಕಷ್ಟು ಆರೋಗ್ಯವಂತರಾಗಿದ್ದಾಗಲೇ ನಮ್ಮನ್ನು ಅಗಲಿದರು. ಆದರೆ ಅವರ ವಿಚಾರಗಳು ಇಂದಿಗೂ ಜೀವಂತ” ಎಂದು ಹಿರಿಯ ನಟ, ರಾಜ್​​ ಪುತ್ರ ರಾಘವೇಂದ್ರ ರಾಜ್​​​ಕುಮಾರ್ ತಂದೆಯನ್ನು ಸ್ಮರಿಸಿದರು. ಎಲ್ಲಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ರಾಜ್​​ಕುಮಾರ್ ಅವರ 96ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕನ್ನಡ ಸಂಸ್ಕತಿಯ ಪ್ರತೀಕವಾಗಿದ್ದರು: ”ಈ ಸಿನಿರಂಗದಲ್ಲಿ ನೂರಾರು ನಟರು, ಸೂಪರ್ ಸ್ಟಾರ್ಸ್​​ ಆಗಮನವಾಗಿದೆ. ಆದರೆ, ಡಾ.ರಾಜ್​​​ಕುಮಾರ್ ಏರಿದ ಎತ್ತರ ತಲುಪೋದು ಕಷ್ಟಸಾಧ್ಯ. ಕನ್ನಡಿಗರಾಗಿ ರಾಜ್​​ ಜನಿಸಿದ್ದು ನಮ್ಮ ನಾಡಿನ ಹೆಮ್ಮೆ ಹಾಗೂ ಪುಣ್ಯ. ಅವರು ಕನ್ನಡ ಸಂಸ್ಕತಿಯ ಪ್ರತೀಕವಾಗಿದ್ದರು” ಎಂದು ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದರು.

1200-675-24031326-thumbnail-16x9-newssss
ರಾಜ್​ ಆದರ್ಶ ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಮಾದರಿಯಾಗಬೇಕು‘: ”ನಟರು ಬದುಕಿದ್ದಾಗ ಅಭಿಮಾನಿಗಳಿರುವುದು ಸಹಜ. ಆದ್ರೆ ರಾಜ್​​ ಮರಣದ ನಂತರವೂ, ಇಂದಿಗೂ ಅಪಾರ ಅಭಿಮಾನಿ ಬಳಗವನ್ನು ಉಳಿಸಿಕೊಂಡಿರುವುದನ್ನು ನೋಡಿದರೆ ಅದೊಂದು ದೇವರು ಕೊಟ್ಟ ವರವೇ ಸರಿ. ಯಾವುದೇ ಜಾತಿ, ಯಾವುದೇ ಧರ್ಮ ಎನ್ನುವುದು ಇಲ್ಲಿ ಇಲ್ಲ. ಎಲ್ಲರೂ ರಾಜ್‍ ಅಭಿಮಾನಿಗಳೇ. ಅವರು ಸರಳ ಸಜ್ಜನಿಕೆ, ವಿನಯವಂತಿಕೆಯ ಆದರ್ಶ ವ್ಯಕ್ತಿಯಾಗಿದ್ದರು. ಅವರ ಆದರ್ಶ ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಮಾದರಿಯಾಗಬೇಕು” ಎಂದು ತಿಳಿಸಿದರು.
ಯಶಸ್ಸಿನ ಅಮಲನ್ನು ತಲೆಗೇರಿಸಿಕೊಳ್ಳಲಿಲ್ಲಎಸ್.ನಾರಾಯಣ್: ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್​​​ ಮಾತನಾಡಿ, ”ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೂ ಆ ಯಶಸ್ಸಿನ ಅಮಲನ್ನು ತಲೆಗೆ ಏರಿಸಿಕೊಳ್ಳದೇ ಅತ್ಯಂತ ಸರಳವಾಗಿ ಬದುಕಿದವರು ಡಾ.ರಾಜ್​​ಕುಮಾರ್. ಬೇಡರ ಕಣ್ಣಪ್ಪ, ಕವಿರತ್ನ ಕಾಳಿದಾಸ, ಭಕ್ತ ಕುಂಬಾರ ಸೇರಿದಂತೆ ನಾವು ನೋಡಿರದ ಅನೇಕ ಐತಿಹಾಸಿಕ, ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ ಅಂತಹ ವ್ಯಕ್ತಿತ್ವಗಳನ್ನು ಕನ್ನಡಿಗರಿಗೆ ಕಟ್ಟಿಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ” ಎಂದರು.
ವಿಶಿಷ್ಟ ಛಾಪು ಮೂಡಿಸಿರುವ ತಾರೆ: ”ದೇಶದ ಇತಿಹಾಸದಲ್ಲೇ ಕೆಲವರು ಛಾಪು ಮೂಡಿಸಿರುವಂತೆ ಡಾ.ರಾಜ್​ಕುಮಾರ್ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಜನಸಾಮಾನ್ಯರ ನೋವು ನಲಿವುಗಳಿಗೆ ರಾಜ್ ಸ್ಪಂದಿಸಿದ ಮಾದರಿಯಲ್ಲಿ ಮತ್ತೊಂದು ಉದಾಹರಣೆ ಇಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಇಡೀ ಜಗತ್ತು ಗುರುತಿಸುವಂತೆ ಬೆಳೆದ ಪರಿ ಸಾಮಾನ್ಯವಾದುದ್ದಲ್ಲ. ಇಂದಿಗೂ ಅವರ ನಟನೆಗೆ, ಗಾಯನಕ್ಕೆ ಮನಸೋಲದವರೇ ಇಲ್ಲ. ನಾಡು, ನುಡಿ, ನೆಲ, ಜಲದ ವಿಷಯ ಬಂದಾಗ ಕನ್ನಡದ ಕಾರ್ಯಕರ್ತನಾಗಿ ಮೊದಲು ಧ್ವನಿ ಎತ್ತಿ, ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು” ಎಂದು ಹೇಳಿದರು.
ಜನರು ಚಿತ್ರಮಂದಿರಕ್ಕೆ ಬರುವುದು ಕಡಿಮೆ ಆಗಿದೆ. ಉತ್ತಮವಾದ ಸಿನಿಮಾಗಳು ರಿಲೀಸ್ ಆದಾಗಲೂ ಜನರು ಥಿಯೇಟರ್​ ಕಡೆಗೆ ಮುಖ ಮಾಡುತ್ತಿಲ್ಲ. ಇದರಿಂದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಬೇಸರ ಆಗುತ್ತದೆ. ಇಂಥ ಪರಿಸ್ಥಿತಿ ಬಂದಿದ್ದರ ಬಗ್ಗೆ ರಾಘವೇಂದ್ರ ರಾಜ್​ಕುಮಾರ್ ಅವರಿಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ. ‘ಒಮ್ಮೊಮ್ಮೆ ಈ ರೀತಿ ಆಗುತ್ತದೆ. ಆ ಕಾಲದಿಂದಲೂ ಹಾಗೆ ಆಗುತ್ತಿದೆ. ಅದು ಸಡನ್ ಆಗಿ ಸರಿ ಆಗುತ್ತದೆ. ಒಳ್ಳೆಯ ಸಿನಿಮಾಗಳು ಬರುತ್ತವೆ. ಚೆನ್ನಾಗಿ ಪ್ರದರ್ಶನ ಕಾಣುತ್ತವೆ’ ಎಂದು ರಾಘವೇಂದ್ರ ರಾಜ್​ಕುಮಾರ್ ಅವರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

182 ಚಿತ್ರಮಂದಿರಗಳು 1,800 ಆದವು: ”ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬಾರದಂತೆ ನಿಷೇಧ ತರುವಲ್ಲಿ ಡಾ.ರಾಜ್ ಅವರ ಪಾತ್ರ ಮಹತ್ವದ್ದಾಗಿತ್ತು. ಅವರ ಈ ನಿಲುವಿನಿಂದಾಗಿಯೇ ಕನ್ನಡ ಚಿತ್ರೋದ್ಯಮ ಉಳಿದು ಅನೇಕ ಕಲಾವಿದರು ಮತ್ತು ತಂತ್ರಜ್ಞರು ಬೆಳೆಯಲು, ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ಅವರು ಇರದಿದ್ದರೆ ಚಿತ್ರೋದ್ಯಮ ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಿರುತ್ತಿರಲಿಲ್ಲ. ಅಂದು ರಾಜ್ಯದಲ್ಲಿ ಇದ್ದ 182 ಚಿತ್ರಮಂದಿರಗಳು, ಅವರ ಪರಿಶ್ರಮದಿಂದಾಗಿ ಸುಮಾರು 1,800 ಚಿತ್ರ ಮಂದಿರಗಳಾಗಿ, ಎಲ್ಲಾ ಸಿನಿಮಾ ಹಾಲ್​ಗಳು ಹೌಸ್‍ಫುಲ್ ಪ್ರದರ್ಶನ ನೀಡಿ, ಚಿತ್ರೋದ್ಯಮ ಲಾಭದಾಯಕವಾಗಿ ಬೆಳೆಯುವಂತಾಯಿತು. ಸಣ್ಣ ಸಣ್ಣ ಹಳ್ಳಿಗಳಲ್ಲಿ ಟೆಂಟ್‍ಗಳು ತಲೆ ಎತ್ತಿದವು. ಇಂದು ಉತ್ತಮ ಚಿತ್ರಗಳ ಕೊರತೆಯಿಂದಾಗಿ ಚಿತ್ರಮಂದಿರಗಳು ಮುಚ್ಚುತ್ತಾ ಸಾಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಚಿತ್ರೋದ್ಯಮದ ಭವಿಷ್ಯ ಆತಂಕ ಹುಟ್ಟಿಸುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.

kn-bng-05-kannada-samskruthiya-prathika-drrajkumar-mla-rizwanarshad-7204735_24042025204648_2404f_1745507808_716
ಎಲ್ಲಾ ಚಿತ್ರಗಳು ಯುಸರ್ಟಿಫಿಕೇಟ್ ಪಡೆದಿವೆ: ರಾಜ್ ಅಭಿನಯದ ಚಿತ್ರಗಳು ಕನ್ನಡಿಗರನ್ನಷ್ಟೇ ಅಲ್ಲ, ಎಲ್ಲಾ ಭಾರತೀಯರನ್ನು ಸಹ ಸೆಳೆದವು. ಶಂಕರ್ ಗುರು ಸೇರಿ ಅನೇಕ ಚಿತ್ರಗಳು ಇತರೆ ಭಾಷೆಗಳಿಗೆ ರಿಮೇಕ್ ಆಗಿ ತಲುಪಿವೆ. ಪ್ರಾರಂಭದಿಂದ ಹಿಡಿದು ಕೊನೆಯವರೆಗೂ ಅವರು ನಟಿಸಿದ ಎಲ್ಲಾ 205 ಚಿತ್ರಗಳು ‘ಯು’ ಸರ್ಟಿಫಿಕೇಟ್ ಪಡೆದದ್ದು ಇತಿಹಾಸ. ಅವರ ಸಮಕಾಲೀನರಾಗಿ ನಾವೆಲ್ಲ ಜೀವಿಸಿದ್ದು ಹೆಮ್ಮೆ ಹಾಗೂ ಸಾರ್ಥಕ ಸಂಗತಿ” ಎಂದರು.
ಕನ್ನಡಕ್ಕಾಗಿ ದುಡಿದ ಮೇರು ಚೇತನ: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಸಾಧುಕೋಕಿಲ ಮಾತನಾಡಿ, ”ಕನ್ನಡ ಭಾಷೆ, ಸಂಸ್ಕತಿ, ನೆಲ-ಜಲಕ್ಕಾಗಿ ದುಡಿದ ಮೇರು ಚೇತನ ಡಾ.ರಾಜ್​​ಕುಮಾರ್. ಅವರ ಬೆನ್ನ ಹಿಂದಿನ ಶಕ್ತಿಯಾಗಿ ಅವರ ಸಹೋದರ ಎಸ್.ಪಿ.ವರದರಾಜ್ ನಿರ್ವಹಿಸಿದ ಕಾರ್ಯವೂ ಸ್ಮರಣೀಯ” ಎಂದು ನೆನೆದರು.
ಕನ್ನಡ ಕಲಿಯಲು ರಾಜ್​ ಚಿತ್ರಗಳೇ ಗುರು: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಮಾತನಾಡಿ, ”ಡಾ.ರಾಜ್, ಅಮಿತಾಭ್ ಬಚ್ಚನ್, ಶಿವಾಜಿ ಗಣೇಶನ್ ಮೊದಲಾದ ಹಿರಿಯ ನಟರು ಪ್ರೇಕ್ಷಕರೊಂದಿಗೆ ನೇರ ಸಂಬಂಧ, ಸಂಪರ್ಕ ಸಾಧಿಸಿಕೊಳ್ಳುತ್ತಿದ್ದರು. ಆ ಕಾರಣಕ್ಕಾಗಿ ದೊಡ್ಡ ಹೆಸರು, ಜನಪ್ರಿಯತೆ ಗಳಿಸಲು ಸಾಧ್ಯವಾಯಿತು. ಮರಾಠಿ ಮಾಧ್ಯಮದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆದ ತಾವು ಕರ್ನಾಟಕ ಕೆಡರ್​ಗೆ ಐಪಿಎಸ್ ಅಧಿಕಾರಿಯಾಗಿ ಬಂದಾಗ ಕನ್ನಡ ಕಲಿಯಲು ಡಾ.ರಾಜ್​ಕುಮಾರ್ ಚಲನಚಿತ್ರಗಳೇ ತಮಗೆ ಗುರುವಾದವು. ಅವರ ಸಂಭಾಷಣೆಗಳು ಪ್ರೇರಣೆಯಾದವು” ಎಂದು ತಿಳಿಸಿದರು.
ಸಮಾರಂಭಕ್ಕೂ ಮುನ್ನ ರಾಮಚಂದ್ರ ಹಡಪದ, ಸ್ಪರ್ಶ ಹಾಗೂ ತಂಡದವರಿಂದ ಡಾ.ರಾಜ್​ಕುಮಾರ್ ಅಭಿನಯದ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ ಸ್ವಾಗತಿಸಿ ಮಾತನಾಡುತ್ತಾ, ”2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ.ರಾಜ್​ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ಮಾಡಿದರು. ಅಂದಿನಿಂದ ರಾಜ್​ಕುಮಾರ್ ಜನ್ಮದಿನಾಚರಣೆಯನ್ನು ರಾಜ್ಯಾದ್ಯಂತ ಸರ್ಕಾರಿ ಕಾರ್ಯಕ್ರಮವಾಗಿ ಪ್ರತೀ ಜಿಲ್ಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಆಚರಿಸಲಾಗುತ್ತಿದೆ” ಎಂದು ತಿಳಿಸಿದರು.
ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಷಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಮತ್ತಿತರರು ಉಪಸ್ಥಿತರಿದ್ದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ