ನೇಹಾ ಸರಗಮ್ ಹಿಂದಿ ಧಾರಾವಾಹಿಗಳಿಂದ ದೇಶಾದ್ಯಂತ ಮನೆ ಮಾತಾಗಿದ್ದಾಳೆ. ಈಕೆ ಕಿರುತೆರೆಯ ಜನಪ್ರಿಯ ನಟಿ. ಬಿಹಾರ್ ರಾಜ್ಯದ ಪಾಟ್ನಾ ನಗರ ಈಕೆಯ ತವರು. ಈಕೆ ತನ್ನ ಕೆರಿಯರ್ ಶುರು ಮಾಡಿದ್ದು ಗಾಯಕಿಯ ರೂಪದಲ್ಲಿ. ಸೋನಿ ಟಿವಿಯ ಇಂಡಿಯನ್ ಐಡಲ್ ನಿಂದ ಐಡೆಂಟಿಟಿ ಪಡೆದ ಈಕೆ, `ಚಾಂದ್ ಛುಪಾ ಬಾದ್ ಮೇ’ ಕಿರುತೆರೆಯ ಧಾರಾವಾಹಿಯಿಂದ ದೇಶಾದ್ಯಂತ ಮನೆಮಗಳಾಗಿ ಗುರುತಿಸಿಕೊಂಡಿದ್ದಾಳೆ.
ನೇಹಾ `ಇಂಡಿಯನ್ ಐಡಲ್’ ಹಾಡುಗಾರಿಕೆಯ ಸ್ಪರ್ಧೆಯಲ್ಲಿ ಮಿಂಚಿ ಎಲ್ಲರ ಗಮನ ಸೆಳೆದಳು. ಈಕೆ 2 ಸಲ ಈ ಶೋನಲ್ಲಿ ಭಾಗವಹಿಸಿದ್ದಳು. ಹಾಡುಗಾರಿಕೆಯಲ್ಲಿ ಕೆರಿಯರ್ ಅರಸುತ್ತಾ ಬಂದಾಗ, ಸೋನಾಲಿ ಬೇಂದ್ರೆಯ ದೃಷ್ಟಿಗೆ ಬಿದ್ದಳು. ಹೀಗಾಗಿ ಕಿರುತೆರೆಯ ಧಾರಾವಾಹಿಗಳಲ್ಲಿ ಕ್ರಮೇಣ ಪಾತ್ರಗಳನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಯಿತು. `ಹಾರ್‌ಜೀತ್, ಸಾವ್ ಧಾನ್ ಇಂಡಿಯಾ, ಏ ಹೈ ಆಶಿಕಿ, ರಾಮಯಣ್, ಏ ರಿಶ್ತಾ ಕ್ಯಾ ಕೆಹ್ಲಾತಾ ಹೈ,’ ಇತ್ಯಾದಿ ಧಾರಾವಾಹಿಗಳಲ್ಲಿ ಸಾಲು ಸಾಲಾಗಿ ನಟಿಸಿದಳು.
ಸರಳ ಸುಂದರಿ, ಶಾಂತ ಸ್ವಭಾವದ, ಸದಾ ಹಸನ್ಮುಖಿ ನೇಹಾಳ `ಯಶೋಮತಿ ಮೈಯಾ ಕಿ ನಂದಲಾಲ’ ಸೋನಿ ಟಿವಿಯಲ್ಲಿ ಪ್ರಸಾರಗೊಳ್ಳುತ್ತಿದೆ. ಇದರಲ್ಲಿ ಈಕೆ ಯಶೋದೆಯ ಪಾತ್ರ ನಿರ್ವಹಿಸಿ, ಕೃಷ್ಣನ ಬಾಲಲೀಲೆಗಳನ್ನು ಆನಂದಿಸುತ್ತಾಳೆ. ಇವಳ ಈ ಪಾತ್ರವನ್ನು ವೀಕ್ಷಕರು ಬಹಳ ಮೆಚ್ಚಿಕೊಂಡಿದ್ದಾರೆ. ಮುಂದೆ ಕೃಷ್ಣ ಬೆಳೆದು ಯುವಕನಾದಾಗ ಪ್ರೌಢ ಯಶೋದೆಯಾಗಿ ಪ್ರಬುದ್ಧ ಅಭಿನಯ ನೀಡಿದ್ದಾಳೆ. ಈ ಪಾತ್ರದಿಂದ, ಹೆಣ್ಣು ಒಬ್ಬ ತಾಯಿಯಾಗಿ ಮಗುವನ್ನು ಬೆಳೆಸಿ ದೊಡ್ಡವರನ್ನಾಗಿಸಲು ಎಷ್ಟೆಲ್ಲ ಪ್ರಯಾಸಪಡುತ್ತಾಳೆ ಎಂದು ಗುರುತಿಸಿಕೊಂಡಳಂತೆ. ವೀಕ್ಷಕರಿಗಂತೂ ಇವಳ ನಟನೆ ಬಹಳ ನ್ಯಾಚುರಲ್ ಎನಿಸಿದೆ. ಕೃತಕತೆ ಇಲ್ಲದ ಗ್ರಾಮೀಣ ಹೆಣ್ಣು ಯಶೋದೆಯಾಗಿ, ನೇಹಾ ಗೆದ್ದಿದ್ದಾಳೆ ಎಂದೇ ಹೇಳಬಹುದು. ಆಕೆಯ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ :
ಈ ನಟನೆ ಕ್ಷೇತ್ರಕ್ಕೆ ಬಂದದ್ದು ಹೇಗೆ?
ಒಬ್ಬ ನಟಿಯಾಗಿ ಮುಂದುವರಿಯುತ್ತೇನೆ ಎಂಬ ಯಾವ ಪ್ಲಾನೂ ಇರಲಿಲ್ಲ. ನಾನು ನನ್ನ ಶಿಕ್ಷಣ ಮತ್ತು ಹಾಡುಗಾರಿಕೆಯಲ್ಲೇ ಫೋಕಸ್ಡ್ ಆಗಿದ್ದೆ. ನಾನು ಮೊದಲಿನಿಂದಲೂ ಶಾಸ್ತ್ರೀಯ ಸಂಗೀತ ಕಲಿತಿದ್ದೆ. ನಾನು ಟಿವಿಗೆ ಡೆಬ್ಯೂ ಆಗಿದ್ದೆ ಸೋನಿಯ `ಇಂಡಿಯನ್ ಐಡಲ್’ ಹಾಡುಗಾರಿಕೆಯ ಶೋನಿಂದ. ನನ್ನ ಆಡಿಶನ್ ಗಮನಿಸಿದ ನಿರ್ಮಾಪಕ, ನಿರ್ದೇಶಕರು ನಾನು ಉತ್ತಮ ನಟನೆ ಮಾಡಬಲ್ಲೆ ಎಂದು ನಿರ್ಧರಿಸಿದರು. ಹೀಗೆ ನಾನು ಕೆಲಸ ಪ್ರಾರಂಭಿಸಿದೆ.
ನಾನು ಸದಾ ಕುಟುಂಬದವರ ಜೊತೆಗಿದ್ದುಕೊಂಡೇ ಈ ಕೆಲಸ ನಿಭಾಯಿಸಿದೆ. ಎಷ್ಟೋ ಸಲ ಅವರನ್ನು ಶೂಟಿಂಗ್ ನೋಡಲೆಂದು ಕರೆ ತಂದಿದ್ದೇನೆ. ನನ್ನ ಮೊದಲ ನಿರ್ಮಾಪಕರು ನನ್ನ ತಾಯಿ ತಂದೆಯವರನ್ನು ಕಂಡು, ಪ್ರತಿದಿನ ಇಬ್ಬರಲ್ಲಿ ಒಬ್ಬರು ಅಗತ್ಯವಾಗಿ ದಿನಾ ಶೂಟಿಂಗ್ ಸ್ಪಾಟ್ ಗೆ ಬರಬೇಕೆಂದು ಆಗ್ರಹಿಸಿದರು. ದಿನದ ಅಂತ್ಯದ ಹೊತ್ತಿಗೆ ಮನೆಯವರ ಮುಖ ಕಂಡು ಅವರ ಸಪೋರ್ಟ್ ಸಿಗುತ್ತದೆ ಎಂಬ ಆತ್ಮವಿಶ್ವಾಸ ಮೂಡುತ್ತದೆ ಎನ್ನುತ್ತಿದ್ದರು. ನಿಧಾನವಾಗಿ ನನ್ನ ಮನೆಯವರು ಸಂಪೂರ್ಣ ಮುಂಬೈಗೆ ಶಿಫ್ಟ್ ಆದರು.
ಮೊದಲ ಬ್ರೇಕ್ ಹೇಗೆ, ಯಾವಾಗ ಸಿಕ್ಕಿತು?
ಇಂಡಿಯನ್ ಐಡಲ್ ಗೆ ಆಡಿಶನ್ ನೀಡಿದ ನಂತರ ಟಿವಿಯಲ್ಲಿ ಮೊದಲ ಬ್ರೇಕ್ ಸಿಕ್ಕಿತು. ಇದಾದ ಮೇಲೆ ನಿರ್ಮಾಪಕ, ನಿರ್ದೇಶಕರು ನನ್ನ ಮುಖ ಫೋಟೋಜೆನಿಕ್ ಆಗಿದೆ ಎಂದು ನಟನೆಯ ಆಫರ್ಸ್ ನೀಡತೊಡಗಿದರು. ಇದಾದ ಮೇಲೆ ನಾನು `ಚಾಂದ್ ಛುಪಾ ಬಾದ್ ಮೇ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದಾಗ ಎಲ್ಲರ ಮನೆಮಾತಾದೆ!
`ನಂದಾಲ‘ ಧಾರಾವಾಹಿಗಾಗಿ ತಾಯಿಯ ಪಾತ್ರಕ್ಕಾಗಿ ಹೇಗೆ ತಯಾರಾದೆ?
ಮೊದಲು ಸಣ್ಣ ಮಗುವಿನ ತಾಯಿ, ನಂತರ ಹೈಸ್ಕೂಲ್ ಮಕ್ಕಳ ವಯಸ್ಸಿನ ತಾಯಿಯಾಗಿ.
ನಟಿಸುವಲ್ಲಿ ಏನಾದರೂ ಅಂತರ ಅನುಭವಕ್ಕೆ ಬಂದಿತೇ?
ನನ್ನ ದೃಷ್ಟಿಯಲ್ಲಿ ತಾಯಿಯ ಪಾತ್ರ ನಿರ್ವಹಿಸಲು ಭಾರತೀಯ ಹೆಣ್ಣಿಗೆ ವಿಶೇಷ ತರಬೇತಿ ಏನೂ ಬೇಕಿಲ್ಲ. ಏಕೆಂದರೆ ದಯೆ, ಮಮತೆ, ವಾತ್ಸಲ್ಯಗಳೆಲ್ಲ ಅವಳಲ್ಲಿ ಮೊದಲಿನಿಂದಲೇ ತುಂಬಿರುತ್ತವೆ. ಮಗುವಿನ ಜೊತೆ ನಟಿಸುವಾಗ ಇದು ತಂತಾನೇ ಸಹಜವಾಗಿ ಹೊರಹೊಮ್ಮುತ್ತದೆ. ನಾನು ನನ್ನ ತಾಯಿ, ಇಬ್ಬರು ಅಜ್ಜಿಯರ ವ್ಯವಹಾರ ಗಮನಿಸಿದ್ದೇನೆ. ಈ ಧಾರಾವಾಹಿಗಾಗಿ ಕೃಷ್ಣನ ತವರೂರಾದ ಮಥುರಾದ ಬ್ರಜ್ ಭಾಷೆಯನ್ನೂ ಹಿಂದಿ ಬೆರೆಸಿ ಮಾತನಾಡಲು ಪ್ರಯತ್ನಿಸಿದ್ದೇನೆ. ಇದರಿಂದ ವೀಕ್ಷಕರಿಗೆ ನನ್ನ ಪ್ರಾಮಾಣಿಕತೆಯ ಸ್ಪಷ್ಟ ಅರಿವು ಮೂಡುತ್ತದೆ. ಜೊತೆಗೆ ಇದು ಪ್ಯಾನ್ ಇಂಡಿಯಾ ಶೋ ಆದ್ದರಿಂದ, ಎಲ್ಲಾ ಜನರೂ ಸುಲಭವಾಗಿ ಗ್ರಹಿಸಲಿ ಎಂಬುದು ನನ್ನ ಉದ್ದೇಶ. ಮಗು ಸಣ್ಣದಿರುವಾಗ ಪೇರೆಂಟ್ಸ್ ಬಹುತೇಕ ಅದರ ಇಚ್ಛೆಗಳ ಪ್ರಕಾರವೇ ನಡೆದುಕೊಳ್ಳುತ್ತಾರೆ, ಮಗು ಸದಾ ಸಂತೋಷವಾಗಿರಲಿ, ಹೊತ್ತು ಹೊತ್ತಿಗೆ ಆಹಾರ ಸೇವಿಸಿ ಮಲಗಲಿ, ಆರೋಗ್ಯವಾಗಿರಲಿ ಅಂತ. ಅದೇ ಮಗು 6-7 ವರ್ಷದಷ್ಟು ದೊಡ್ಡದಾದಾಗ, ಪೋಷಕರು ನಿಧಾನವಾಗಿ ಮಕ್ಕಳು ತಮ್ಮ ಮಾತು ಕೇಳುವಂತೆ ಮಾಡುತ್ತಾರೆ, ಅದಕ್ಕಾಗಿ ಸೂಕ್ತ ತರಬೇತಿ ನೀಡುತ್ತಾರೆ. ಮಗುವಿಗೆ ಅದು ಕನ್ವಿನ್ಸ್ ಆಗದಿದ್ದರೆ, ಕೂರಿಸಿಕೊಂಡು ನಿಧಾನವಾಗಿ ತಿಳಿ ಹೇಳಬೇಕಾಗುತ್ತದೆ.
`ನಂದಾಲ‘ ಧಾರಾವಾಹಿ ಅಂತೂ ಕೃಷ್ಣನ ಬಾಲಲೀಲೆಗಳೇ ಪ್ರಧಾನ ಆಗಿರುವಂಥವು?
ಶೋ. ಇದಂತೂ ಈಗ ಬಹಳ ಜನಪ್ರಿಯ ಆಗುತ್ತಿದೆ. ಇಲ್ಲಿ ನಾನು ಕೂಸು ಕೃಷ್ಣನನ್ನು ಪಳಗಿಸುತ್ತಾ, ಅವನನ್ನು ಸ್ಟ್ರಾಂಗ್ ಆಗಿಸುತ್ತಿದ್ದೇನೆ. ಮಗುವಿನ ಲಾಲನೆ ಪಾಲನೆಯಲ್ಲಿ ಯಶೋದೆ ಎಷ್ಟು ಧನ್ಯಳು ಎಂದು ಈ ಪಾತ್ರ ದೃಢಪಡಿಸಿದೆ. ಹೆತ್ತ ತಾಯಿಗಿಂತ ಸಾಕುತಾಯಿ ಎಷ್ಟು ಪ್ರಧಾನ ಪಾತ್ರ ವಹಿಸುತ್ತಾಳೆ ಎಂಬುದನ್ನು ಈ ಧಾರಾವಾಹಿ ಸ್ಪಷ್ಟಪಡಿಸುತ್ತದೆ. ಕೃಷ್ಣನ ಬಾಲಲೀಲೆಗಳಿರಲಿ, ಅವನ ಕಿಶೋರಾವಸ್ಥೆಯನ್ನು ಕಾಣದೆ, ಕಂಸ ವಧೆ ನಂತರವೇ ನೇರವಾಗಿ ಮಗನನ್ನು ನೋಡುವ ದೇವಕಿಯ ಮನಃಸ್ಥಿತಿ ಒಂದೆಡೆಯಾದರೆ, ಕೂಸಿನಿಂದ ಅವನನ್ನು ಹಿರಿಯ ಯುವಕನಾಗಿಸುವ ಯಶೋದೆಯ ಪಾತ್ರ ಬಹಳ ಗಟ್ಟಿ ಎನಿಸುತ್ತದೆ.
ಅಮ್ಮನ ಜೊತೆ ಕಳೆದ ಯಾವ ಕ್ಷಣಗಳನ್ನು ಹೆಚ್ಚಾಗಿ ಮಿಸ್ ಮಾಡಿಕೊಳ್ತೀಯಾ?
ಅಮ್ಮನ ಪ್ರೀತಿ ವಾತ್ಸಲ್ಯಗಳು ಪ್ರತಿ ಮಗುವಿಗೂ ವಿಶೇಷ ಅನ್ಸುತ್ತೆ. ಇದನ್ನು ಪ್ರತಿ ಕ್ಷಣ ನಾನು ಸ್ಮರಿಸುತ್ತಲೇ ಇರುತ್ತೇನೆ. ಅಮ್ಮ ಏನಾದರೂ ಬೈದಾಗ, ನಾನು ಏನೋ ತಪ್ಪು ಮಾಡಿದ್ದೇನೆ ಅಂತ ಅರ್ಥ ಮಾಡಿಕೊಳ್ಳುತ್ತೇನೆ. ಅಮ್ಮನ ಜೊತೆ ಕಳೆದ ಒಂದೊಂದು ಕ್ಷಣ ಅತ್ಯಮೂಲ್ಯ! ನಮ್ಮಮ್ಮ ಕೇವಲ ಕುರುಡು ವ್ಯಾಮೋಹ ಹೊಂದಿರದೆ, ಕಟ್ಟುನಿಟ್ಟಾಗಿ ಶಿಸ್ತು ರೂಢಿಸಿದ್ದರು. ಆ ಕಾರಣದಿಂದಲೇ ನಾನು ಇಂದು ಈ ಮಟ್ಟ ತಲುಪಿದ್ದೇನೆ. ಪ್ರತಿ ತಾಯಿ ತನ್ನ ಮಕ್ಕಳು ಮಾಡುವ ತಪ್ಪನ್ನು ತಿದ್ದಿ, ಖಂಡಿಸಿ, ಅವರನ್ನು ಸರಿದಾರಿಗೆ ತರುವಂತೆಯೇ ಇಲ್ಲಿ ನಾನು ಯಶೋದಾಳ ಪಾತ್ರ ನಿರ್ವಹಿಸಿದ್ದೇನೆ.
ಸಿಂಗಿಂಗ್ ನ್ನು ಈಗ ಮಿಸ್ ಮಾಡಿಕೊಳ್ತೀಯಾ?
ಇಲ್ಲ, ಸಿಂಗಿಂಗ್ ನಾನು ಎಂದೂ ಮಿಸ್ ಮಾಡಲಾರೆ! `ಮುಘಲ್ ಎ ಆಝಂ’ ಶೋನಲ್ಲಿ ನಾನು ಹಾಡುಗಾರಿಕೆ ಮುಂದುವರಿಸಿದ್ದೇನೆ. ಇದರಲ್ಲಿ ನಾನು ನಾಯಕಿ ಅನಾರ್ಕಲಿ ಪಾತ್ರ ನಿರ್ವಹಿಸುವುದರ ಜೊತೆ ಹಾಡುಗಾರಿಕೆ ಮುಂದುವರಿಸುತ್ತೇನೆ. ಎಲ್ಲಾ ಹಾಡುಗಳನ್ನೂ ನಾನು ಲೈವ್ ಆಗಿ ಹಾಡಿದ್ದೇನೆ.
ನೀನು ಇಲ್ಲಿಯವರೆಗೂ ತಲುಪಲು ಏನೆಲ್ಲ ಸಂಘರ್ಷ ನಡೆಸಬೇಕಾಯಿತು? ನಿಮ್ಮ ಕುಟುಂಬದರು ಇದಕ್ಕೆ ಎಷ್ಟು ಸಹಕಾರ ನೀಡಿದ್ದಾರೆ?
ಯಾವುದೇ ಗುರಿ ತಲುಪುವುದಕ್ಕೂ ಸಂಘರ್ಷ ಎಂದೂ ತಪ್ಪುವುದಿಲ್ಲ. ಅದು ತುಸು ಹೆಚ್ಚು ಕಡಿಮೆ ಆಗುವುದರಲ್ಲಿ ಸಂದೇಹವಿಲ್ಲ. ಎಷ್ಟೋ ಸಲ ಆಗಬೇಕಿದ್ದ ಕೆಲಸ ನಾನಾ ಕಾರಣಗಳಿಂದಾಗಿ ನಿಂತುಹೋದರೆ, ಈ ಕೆಲಸ ನನಗೆ ಆಗಿ ಬರುವುದಿಲ್ಲ ಎಂದು ಬಿಟ್ಟುಬಿಡುವುದೇ ಲೇಸು. ಅದೇ ಪ್ರಯತ್ನವನ್ನು ಬೇರೆ ಕಡೆ ಮಾಡುವುದು ಲೇಸು.
ಅದರಲ್ಲೂ 2020ರಲ್ಲಿ ಕೊರೋನಾ ಶುರುವಾದಾಗ ಈ ಕಷ್ಟನಷ್ಟಗಳ ಸರಮಾಲೆ ಯಾವ ಕಲಾವಿದರನ್ನೂ ಬಿಡಲಿಲ್ಲ. ಅಂತೂ ಇಂತೂ ಆ ಸಂಕಷ್ಟಗಳ ಸುರಿಮಳೆ ಈಗ ಎಷ್ಟೋ ಕಡಿಮೆ ಆಗಿದೆ ಎನ್ನಬಹುದು. ಅದಾದ ನಂತರ ಕ್ರಮೇಣ ನನಗೂ ಹೆಚ್ಚಿನ ಪಾತ್ರಗಳು ದೊರಕತೊಡಗಿದವು.
ನನ್ನ ಕುಟುಂಬದವರ ಸಹಕಾರದಿಂದಲೇ ಇಂದು ನಾನು ಈ ಮಟ್ಟ ತಲುಪಲು ಸಾಧ್ಯವಾಗಿದೆ. ಎಲ್ಲರೂ ನನಗೆ ಬಹಳ ಸಪೋರ್ಟಿವ್ ಆಗಿದ್ದಾರೆ. ಪ್ರತಿ ದಿನ, ಪ್ರತಿ ಕ್ಷಣ ಅವರ ಸಹಕಾರ ಸಿಕ್ಕಿದೆ ಎಂದೇ ಹೇಳಬೇಕು. ಅವರುಗಳ ಈ ಸಪೋರ್ಟ್ ನಿಂದಲೇ ನಾನು ಕಿರುತೆರೆ ಇಂಡಸ್ಟ್ರಿಯ ಹಲವಾರು ಛಾಲೆಂಜ್ ಎದುರಿಸುವಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ತಾಯಿ ಮೂಲತಃ ಶಾಸ್ತ್ರೀಯ ಸಂಗೀತಗಾರ್ತಿ, ಹೀಗಾಗಿ ಹಾಡುಗಾರಿಕೆ ನನಗೆ ಸುಲಭವಾಯಿತು. ತಂದೆ, ತಂಗಿಯರ ಸಹಕಾರ ಕಡಿಮೆ ಅಲ್ಲ.
– ಪ್ರತಿಭಾ