–ಶರತ್ ಚಂದ್ರ
ಸದ್ಯಕ್ಕೆ ಈಗ ವೆಬ್ ಸೀರಿಸ್ ಮತ್ತು ಒ. ಟಿ ಟಿ ಜಮಾನ ನಡೀತಾ ಇದೆ. ಥೀಯೇಟರ್ ಗಳಲ್ಲಿ ಒಳ್ಳೆ ಸಿನಿಮಾ ಬರೋದು ಕಡಿಮೆ ಆದಾಗ ಜನ ಅದರಲ್ಲೂ ಮಹಿಳೆಯರು ಸೀರಿಯಲ್ ಕಡೆ ವಾಲಿದ್ದರು. ಅದೇ ಬೋರಿಂಗ್ ಸೀರಿಯಲ್ ನೋಡಿ ಬೇಸರಗೊಳ್ಳುತ್ತಿರುವ ಪ್ರೇಕ್ಷಕರು ವೆಬ್ ಸೀರಿಸ್ ಜಾಸ್ತಿ ನೋಡಲು ಆರಂಭಿಸಿದ್ದಾರೆ. ವಿಭಿನ್ನ ಕಂಟೆಂಟ್ ಮತ್ತು ಮೇಕಿಂಗ್ ನಿಂದ ಈಗಾಗಲೇ ಬೇರೆ ಭಾಷೆಗಳಲ್ಲಿ ಸಾಕಷ್ಟು ವೆಬ್ ಸೀರೀಸ್ ಗಳು ಸ್ಟ್ರೀಮ್ ಆಗಿ ಯಶಸ್ವೀಯಾಗಿವೆ.
ಈಗ ಕನ್ನಡದಲ್ಲೂ ವೆಬ್ ಸೀರೀಸೊಂದು ಸದ್ದು ಮಾಡುತ್ತಿದೆ. ಜೀ 5 ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಅಯ್ಯನ ಮನೆ’ ವೆಬ್ ಸೀರೀಸ್, ,50 ಮಿಲಿಯನ್ ಗಿಂತಲೂ ಅಧಿಕ ನಿಮಿಷಗಳು ಸ್ಟ್ರೀಮ್ ಆಗಿದೆಯಂತೆ. ಅಲ್ಲಿಗೆ ಕನ್ನಡದಲ್ಲಿ ವೆಬ್ ಸೀರೀಸ್ ಗಳಿಗೆ ದೊಡ್ಡ ಮಟ್ಟದಲ್ಲಿ ಓಂಕಾರ ಹಾಕಿದೆ.
ಜೀ ಕನ್ನಡ ದಲ್ಲಿ ಸದ್ಯಕ್ಕೆ ಪ್ರಸಾರ ವಾಗುತ್ತಿರುವ ‘ಶ್ರೀರಸ್ತು ಶುಭಮಸ್ತು ‘ ಸೇರಿದಂತೆ ಅನೇಕ ಧಾರವಾಹಿಗಳನ್ನು ನಿರ್ಮಿಸಿರುವ ಶ್ರುತಿ ನಾಯ್ಡು ಇಲ್ಲಿ ಕೂಡ ಗೆದ್ದಿದ್ದಾರೆ.ಈ ಹಿಂದೆ’ ಪ್ರೀಮಿಯರ್ ಪದ್ಮಿನಿ ಎಂಬ ವಿಭಿನ್ನ ಕಥಾ ವಸ್ತು ಹೊಂದಿರುವ ಚಿತ್ರ ನೀಡಿರುವ ಈ ಕಾಂಬಿನೇಶನ್ ಮತ್ತೆ ಯಶಸ್ಸಿನ ರುಚಿ ನೋಡಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ ‘ ‘ಕೋಟಿ ‘ ಮುಂತಾದ ಚಿತ್ರಗಳಲ್ಲಿ ನಟನೆಯ ಮೂಲಕ ರಂಜಿಸಿದ್ದ ರಮೇಶ್ ಇಂದಿರಾ ಈ ವೆಬ್ ಸೀರೀಸ್ ನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದರ ಜೊತೆಗೆ, ನಿರ್ದೇಶಕರಾಗಿ ಕೂಡ ಗೆದ್ದಿದ್ದಾರೆ. ಸಿನಿಮಾ ರೇಂಜ್ ಗೆ ಮೇಕಿಂಗ್ ಮಾಡಿ ಎಲ್ಲರ ಮನ ಗೆದ್ದಿದ್ದಾರೆ.ಈ ಹಿಂದೆ ‘ಪ್ರಿಮಿಯರ್ ಪದ್ಮಿನಿ’ ನಿರ್ದೇಶನ ಮಾಡಿ ಭರವಸೆ ಮೂಡಿಸಿದ್ದ ರಮೇಶ್ ಇಂದಿರಾ ಅವರ ಮೇಲೆ ಭರವಸೆ ಇನ್ನೂ ಹೆಚ್ಚಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ನಾಯಕಿ ಖುಷಿ ರವಿಯವರ ಪಾತ್ರ ಮತ್ತು ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.’ದಿಯಾ ‘ ಚಿತ್ರದ ನಂತರ ಖುಷಿ ನಟಿಸಿರುವ ಯಾವ ಚಿತ್ರಗಲ್ಲಿ ಕೂಡ ಈಕೆಗೆ ಅಭಿನಯಕ್ಕೆ ಅವಕಾಶ ಇರುವ ಪಾತ್ರ ಗಳು ಸಿಕ್ಕಿರಲಿಲ್ಲ. ಜಾಜಿ ಪಾತ್ರದ ವಸ್ತ್ರ ವಿನ್ಯಾಸ, ಆಕೆಯ ಅಭಿನಯ ಈ ವೆಬ್ ಸೀರೀಸ್ ಜನಕ್ಕೆ ಇಷ್ಟವಾಗಲು ಪ್ರಮುಖ ಕಾರಣ. ಕಿರುತೆರೆ ಚಾಕ್ಲೆಟ್ ಹೀರೋ ಅಕ್ಷಯ್ ನಾಯಕ್, ಹಿತ ಚಂದ್ರಶೇಖರ್, ಮಾನಸಿ ಸುಧೀರ್ ಅಭಿನಯ ಕೂಡ ಜನಕ್ಕೆ ಇಷ್ಟ ಆಗಿದೆ.
ಅಯ್ಯನ ಮನೆಯಲ್ಲಿ ನಡೆಯುವ ಕುತೂಹಲ ಕಾರಿ ಘಟನೆಗಳನ್ನು ಜೀ 5 ಸಬ್ಸ್ಕ್ರೈಬ್ ಮಾಡುವದರ ಮೂಲಕ ವೀಕ್ಷಣೆ ಮಾಡಬಹುದು. ಒಟ್ಟಿನಲ್ಲಿ ಕನ್ನಡದಲ್ಲಿ ವೆಬ್ ಸೀರೀಸ್ ಮಾಡಲು ಇಚ್ಚಿಸುವ ಒಂದಷ್ಟು ಪ್ರತಿಭಾವಂತರಿಗೆ ಈ ವೆಬ್ ಸೀರೀಸ್ ಆಶಾಕಿರಣ ಮೂಡಿಸಿದೆ. ಎಲ್ಲ ಒ. ಟಿ. ಟಿ. ಆಪ್ ಗಳು ಕನ್ನಡದ ಇನ್ನಷ್ಟು ವೆಬ್ ಸೀರೀಸ್ ಗಳಿಗೆ ಫ್ಲಾಟ್ ಫಾರ್ಮ್ ಒದಗಿಸಲಿ ಎಂದು ನಮ್ಮ ಹಾರೈಕೆ.