ನಟ, ನಿರ್ದೇಶಕ ಉಪೇಂದ್ರ ಅವರ ಆರೋಗ್ಯದಲ್ಲಿ ದಿಢೀರನೆ ಏರುಪೇರಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಸುದ್ದಿ ಹರಡಿದ್ದು, ಇದರಿಂದ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಉಪೇಂದ್ರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಡಿಸ್​ಚಾರ್ಜ್​ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಕೆಲವರು ಇನ್ನೂ ಉಪೇಂದ್ರ ಅವರು ಚೇತರಿಸಿಕೊಂಡಿಲ್ಲ. ಆಸ್ಪತ್ರೆಗೆ  ಕುಟುಂಬದವರು ದೌಡಾಯಿಸುತ್ತಿದ್ದಾರೆ ಎಂದೆಲ್ಲಾ ವರದಿಯಾಗುತ್ತಿತ್ತು.

ಇದೀಗ ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ನಟ ಉಪೇಂದ್ರ, ‘ಎಲ್ಲರಿಗೂ ನಮಸ್ಕಾರ.. ನಾನು ಆರೋಗ್ಯವಾಗಿದ್ದೇನೆ.. ರೆಗ್ಯುಲರ್ ಚೆಕ್ ಅಪ್ ಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ ಅಷ್ಟೇ.. ಯಾವುದೇ ಊಹಾಪೋಹಗಳಿಗೆ ಕಿವಿಕೊಟ್ಟು ಗೊಂದಲಕ್ಕಿಡಾಗಬೇಡಿ.. ನಿಮ್ಮ ಪ್ರೀತಿ ಕಾಳಜಿಗೆ ಅನಂತ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಈ ಮೂಲಕ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿರುವ ಉಪ್ಪಿ, ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಇರುವ ಕಾಳಜಿಯನ್ನು ಕಂಡು ಖುಷಿಯಾಗಿದ್ದಾರೆ.

ಉಪ್ಪಿಗೆ ಈಗ 56 ವರ್ಷ. ಬಹುಶಃ ಅವರಿಗೆ ಆ್ಯಸಿಡಿಟಿ ಸಮಸ್ಯೆ ಉಂಟಾಗಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಈ ಹಿಂದೆ ‘ಯುಐ’ ಸಿನಿಮಾದ ಶೂಟಿಂಗ್ ವೇಳೆ ಕೂಡ ಆ್ಯಸಿಡಿಟಿ ಸಮಸ್ಯೆಯಿಂದ ಬಳಲಿದ್ದ ಅವರು, ದೀರ್ಘ ಸಮಯದ ಚಿತ್ರೀಕರಣ, ಕೆಲಸದ ಒತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಎದುರಿಸಿದ್ದರು ಎನ್ನಲಾಗಿದೆ.  ಉಪ್ಪಿ  ಈ ಎಲ್ಲಾ ವಿಷಯಗಳಿಗೂ ಸ್ಪಷ್ಟನೆ ನೀಡಿದ್ದು, ಅಭಿಮಾನಿಗಳಲ್ಲಿ ನಿರಾತಂಕ ಮೂಡಿದೆ.

ಈ ಹಿಂದೆ ಕೂಡ ಉಪ್ಪಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಗಲೂ ಸಹ ಉಪೇಂದ್ರ ಅವರು ಇದೇ ರೀತಿ ಸ್ಪಷ್ಟನೆ ಕೊಟ್ಟಿದ್ದರು. ವಿಡಿಯೋ ಮೂಲಕ ಅವರು,  ”ನನಗೇನೂ ಆಗಿಲ್ಲ. ಆರಾಮವಾಗಿದ್ದೇನೆ. ನೋಡಿ ಶೂಟಿಂಗ್ ಸಹ ಮುಂದುವರೆಸುತ್ತಿದ್ದೇನೆ ಎಂದು ಶೂಟಿಂಗ್ ಸೆಟ್‌ ಅನ್ನು ತೋರಿಸಿದ್ದರು.  ಡಸ್ಟ್ ಅಲರ್ಜಿ ಆಗಿತ್ತು, ಕೆಮ್ಮು ಸ್ವಲ್ಪ ಬಂದಿತ್ತು ಅಷ್ಟೆ. ಆರಾಮವಾಗಿದ್ದೇನೆ, ಶೂಟಿಂಗ್ ಸಹ ಸ್ಟಾರ್ಟ್ ಮಾಡ್ತಾ ಇದ್ದೀನಿ. ಯಾರೂ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ