ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಹಣದ ಕೊರತೆಯೇನಿಲ್ಲ. ಇದೀಗ ಅವರು ಬರೋಬ್ಬರಿ 21 ಕೋಟಿ ರೂಪಾಯಿ ಬೆಲೆ ಬಾಳುವ ವಾಚ್ ಧರಿಸಿ ಪೋಸ್ ನೀಡಿದ್ದಾರೆ. ‘ಮೆಟ್ ಗಾಲಾ’ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಹಾಜರಾಗಿದ್ದ ಅವರು ಎಲ್ಲರ ಗಮನ ಸೆಳೆದಿದ್ದು, ಅವರ ಫೋಟೋಗಳು ವೈರಲ್ ಆಗಿವೆ.
ಜಗತ್ತಿನ ಶ್ರೀಮಂತ ನಟರಲ್ಲಿ ಶಾರುಖ್ ಖಾನ್ ಕೂಡ ಒಬ್ಬರು. ಹಲವಾರು ಐಷಾರಾಮಿ ವಸ್ತುಗಳು ಅವರ ಬಳಿ ಇದ್ದು, ಜಗತ್ತಿನ ಹಲವು ಕಡೆ ಆಸ್ತಿಯನ್ನೂ ಹೊಂದಿದ್ದಾರೆ. ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಅವರು ಮೆಟ್ ಗಾಲಾ ಇವೆಂಟ್ನಲ್ಲಿ ಭಾಗಿಯಾಗಿದ್ದಾರೆ.
ಅಮೆರಿಕದಲ್ಲಿ ವರ್ಷಕ್ಕೊಮ್ಮೆ ನಡೆಯುವ ಈ ಫ್ಯಾಷನ್ ಹಬ್ಬದಲ್ಲಿ ಶಾರುಖ್ ಪಾಲ್ಗೊಂಡಿದ್ದು, ಭಾರತದಿಂದ ಮೆಟ್ ಗಾಲಾದಲ್ಲಿ ಭಾಗಿಯಾದ ಮೊದಲ ನಟ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಇವೆಂಟ್ನಲ್ಲಿ ಶಾರುಖ್ ಖಾನ್ ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆದಿದೆ.
ಮೊದಲ ಬಾರಿಗೆ ಮೆಟ್ ಗಾಲಾಗೆ ಹೋಗುತ್ತಿರುವುದು ಎಂದರೆ ಶಾರುಖ್ ಖಾನ್ ಅವರ ಲುಕ್ ವಿಶೇಷವಾಗಿರಲೇಬೇಕು. ಅದಕ್ಕಾಗಿ ಅವರು ಸಭ್ಯಸಾಚಿ ವಿನ್ಯಾಸ ಮಾಡಿದ ಕಾಸ್ಟ್ಯೂಮ್ ಧರಿಸಿ, ಕೊರಳಿನಲ್ಲಿ ‘ಕೆ’ ಅಕ್ಷರ ಹೈಲೈಟ್ ಆಗುವಂತಹ ಲಾಕೆಟ್ ಧರಿಸಿದ್ದಾರೆ. ಆದರೆ ಇದೆಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಶಾರುಖ್ ಖಾನ್ ಧರಿಸಿದ್ದ ಲಕ್ಷುರಿ ವಾಚ್.
ಹೌದು, ಶಾರುಖ್ ಖಾನ್ ಅವರು ಪ್ರತಿಷ್ಠಿತ ‘ಪಟೇಕ್ ಫಿಲಿಪ್’ ಕಂಪನಿಯ ಅತಿ ದುಬಾರಿ ವಾಚ್ ಧರಿಸಿದ್ದಾರೆ. ‘ಪಟೇಕ್ ಫಿಲಿಪ್ ಗ್ರ್ಯಾಂಡ್ ಕಾಂಪ್ಲಿಕೇಷನ್ 6300ಜಿ’ ಹೆಸರಿನ ಈ ವಾಚ್ ಬೆಲೆ ಬರೋಬ್ಬರಿ 21 ಕೋಟಿ ರೂಪಾಯಿ! ಶಾರುಖ್ ಖಾನ್ ಅವರು ಈ ವಾಚ್ ಧರಿಸಿ ಬಂದಿದ್ದನ್ನು ಕಂಡು ವಿದೇಶಿ ಮಂದಿ ಕೂಡ ಹೌಹಾರಿದ್ದಾರೆ.
ಇಷ್ಟೆಲ್ಲ ಅದ್ದೂರಿತನ ತೋರಿಸಿದರೂ ಕೂಡ ವಿದೇಶದ ಮಾಧ್ಯಮಗಳಿಗೆ ಶಾರುಖ್ ಖಾನ್ ಯಾರು ಎಂಬುದು ತಿಳಿದಿಲ್ಲ. ಮೆಟ್ ಗಾಲಾದ ಬ್ಲ್ಯೂ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿದ ಬಳಿಕ ಶಾರುಖ್ ಖಾನ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆಗ ‘ನೀವು ಯಾರು’ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದ್ದಾರೆ! ಅದಕ್ಕೆ ಶಾರುಖ್ ಸಿಟ್ಟು ಮಾಡಿಕೊಳ್ಳದೆ, ‘ನಾನು ಶಾರುಖ್ ಖಾನ್’ ಎಂದು ಅವರು ಪರಿಚಯ ಮಾಡಿಕೊಂಡಿದ್ದಾರೆ.
ಶಾರುಖ್ ಮಾತ್ರವಲ್ಲದೇ ಗಾಯಕ ದಿಲ್ಜಿತ್ ದೊಸಾಂಜ್, ನಟಿ ಕಿಯಾರಾ ಅಡ್ವಾಣಿ, ಫ್ಯಾಷನ್ ಡಿಸೈನರ್ ಸಭ್ಯಸಾಚಿ, ಪ್ರಿಯಾಂಕಾ ಚೋಪ್ರಾ, ಇಶಾ ಅಂಬಾನಿ ಮುಂತಾದವರು ‘ಮೆಟ್ ಗಾಲಾ 2025’ ಇವೆಂಟ್ನಲ್ಲಿ ಪಾಲ್ಗೊಂಡಿದ್ದಾರೆ.